Sunday, May 8, 2011

Shri Krishnana Nooraru Geethegalu - 096

ಲಕುಮಿರಮಣ

ನಾರಾಯಣ ನಮೋ ನಾರಾಯಣ
ಲಕುಮಿರಮಣ ಶ್ರೀ ಶುಭಕಲ್ಯಾಣ

ತ್ರಿಜಗ ಸೂತ್ರಶ್ರೀ ರವಿಶಶಿ ನೇತ್ರನೆ
ಪಂಚಭೂತಾದಿ ಸೃಷ್ಟಿ ಸಾಕಾರನೆ
ಆದಿ ಅದ್ಭುತ ಅಚಲ ಅನಂತದೇವನೆ
ದೇವಕೀ ಕಂದ ಶ್ರೀ ಜಗಕಾರಣನೆ (೧)

ಗೋಕುಲಪುರವಾಸ ಗೋಪಾಲಕೃಷ್ಣನೆ
ಕರುಣಾನಿಧಿ ಶ್ರೀ ಕಂಜಲೋಚನನೆ
ಜತನದೊಳು ಸುಜನರ ಸುಖ ಕಾಯ್ದವನೆ
ಯಶೋದೆನಂದನ ಶ್ರೀಗೋವಿಂದನೆ (೨)

ಕಲಿಯೊಳು ಧರೆಕಾಯ್ವ ವೈಕುಂಠವಾಸನೆ
ಸಪ್ತಗಿರೀಶ ಸಿರಿನಿಧಿಯೊಡಯನೆ
ಗತಿ ನೀನೆ ತಿರುಮಲೆಯ ತಿಮ್ಮಪ್ಪನೆನ್ನಲು
ತಲೆಕಾಯ್ವ ನಮ್ಮಪ್ಪ ಶ್ರೀನಿವಾಸ ವಿಠಲನೆ (೩)

ನಾರಾಯಣ ನಮೋ ನಾರಾಯಣ
ಲಕುಮಿರಮಣ ಶ್ರೀ ಶುಭಕಲ್ಯಾಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೫.೨೦೧೧

Saturday, May 7, 2011

Shri Krishnana Nooraru Geethegalu - 095

ಗುಣನಿಧಿ ಗೋವಿಂದ

ಮಾಧವ ವೇಣುಗೋಪಾಲ ಪಾಲ
ಶ್ರೀಕರ ಶುಭಕರ ಕರುಣಾಸಾಗರ

ಬೃಂದಾವನ ಸಂಚಾರಿ ಶ್ರೀಹರಿ
ಪ್ರಿಯಸಖಿ ರಾಧಾ ಮನಚೋರಿ
ಗಿರಿಧಾರಿ ಕೃಷ್ಣ ತ್ರಿಜಗವಿಹಾರಿ
ಮದನಮೋಹನ ಗೋಕುಲಶೌರಿ (೧)

ನಾರಾಯಣ ನಮೋ ನಿರಂಜನ
ಪದುಮನಾಭ ಶ್ರೀ ಸನಾತನ
ನರಕುಲಕಾವ ನಿರ್ಗುಣ ಪಾವನ
ಆದಿದೇವ ಶ್ರೀಹರಿ ಚಿರನೂತನ (೨)

ದಯಾನಿಧಿ ಸಿರಿ ಸುಖಾಂಬುಧಿ
ಗುಣನಿಧಿ ಸಹಜ ಶ್ರೀಪಾದಿ
ಶ್ರೀನಿವಾಸ ವಿಠಲನೆ ಜಗದಾದಿ
ಸಕಲವ ಸಲಹೊ ಕರುಣದಿ (೩)

ಮಾಧವ ವೇಣುಗೋಪಾಲ ಪಾಲ
ಶ್ರೀಕರ ಶುಭಕರ ಕರುಣಾಸಾಗರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೫.೨೦೧೧

Thursday, May 5, 2011

Shri Krishnana Nooraru Geethegalu - 094

ದೇವದೇವಂ

ದೇವದೇವಂ ವಾಸುದೇವಂ
ಸಕಲಶುಭ ಪ್ರದಾಯಕಂ

ದೇವಕಿಸುತಂ ಗೋಪನಂದಂ
ಯಾದವಕುಲ ತಿಲಕಂ

ಆದಿಪುರುಷಂ ಅಂತ್ಯರಹಿತಂ
ಅನೇಕ ವರದಾಯಕಂ

ಸುಜನವರಂ ದುರಿತಹರಂ
ತ್ರಿಕಾಲ ಲೋಕಪಾಲಂ

ಕಲಿವರದಂ ನಾರಾಯಣಂ
ನರಕುಲ ಕಲ್ಯಾಣಂ

ವಂದೇ ರಾಮಂ ವಂದೇ ಶ್ಯಾಮಂ
ಶ್ರೀನಿವಾಸ ವಿಠಲಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೫.೨೦೧೧

Wednesday, May 4, 2011

Shri Krishnana Nooraru Geethegalu - 093

ಕೊಳಲಾಗಿಸೊ ಕೃಷ್ಣ

ಕೊಳಲಾಗಿಸೊ ಕೃಷ್ಣ ನಿನ್ನ ಕೈಯೊಳು ಎನ್ನ
ನುಡಿಸು ನಿಲಿಸದೆ ಹರಿಯೆ ಜೀವನಾದ

ಕಾಡ ಕಾಂಡದ ಕೊಳವೆ ನಿರ್ಜೀವ ನಾನಯ್ಯ
ಒದಗೊ ಎನ್ನೊಲವ ಜೀವಸಂಗೀತ
ಉಣಿಸೊ ರಾಗದ ಸುಧೆಯ ಸಪ್ತಸರಿಗಮದಲ್ಲಿ
ಹರಿಸಿ ಜೀವದವುಸಿರ ಪ್ರೇಮನಾಥ (೧)

ನುಡಿಸಿದೊಳು ನೀನೆನ್ನ ನಲಿವೆನೊ ಕೃಷ್ಣಯ್ಯ
ನಿನ್ನಧರ ದಡೆ ಮೀರಿ ನಾದಯಮುನೆ
ತಣಿಸೊ ವಿರಹಿರಾಧೆ ಕಾದು ಗೋಕುಲದಲ್ಲಿ
ನಿನ್ನ ಮೋಹದ ಕರೆಗೆ ಒಂದೆ ಸಮನೆ (೨)

ನಿನ್ನ ಸನಿಹದೊಳಿರುವ ಮಹದಾಸೆ ಎನದಯ್ಯ
ಎನ್ನಗಲಿ ಪೋಗದಿರೊ ದೇವದೇವ
ಕೊನರದ ಕೊರಡಿನ ಕೊಳಲೆಂದು ಬಿಸುಡದಿರೊ
ಶ್ರೀನಿವಾಸ ವಿಠಲನೆ ಎನ್ನ ಜೀವ (೩)

ಕೊಳಲಾಗಿಸೊ ಕೃಷ್ಣ ನಿನ್ನ ಕೈಯೊಳು ಎನ್ನ
ನುಡಿಸು ನಿಲಿಸದೆ ಹರಿಯೆ ಜೀವನಾದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೫.೨೦೧೧

Tuesday, May 3, 2011

Shri Krishnana Nooraru Geethegalu - 092

ಎನ್ನ ಹೃದಯದಿ

ಎನ್ನ ಹೃದಯದಿ ನಿನ್ನುದಯವೊ ಹರಿಯೆ
ನಿನ್ನ ಜಗದುದರದೊಳ ಜೀವಾಣು ನಾ

ನಯನ ನಿನ್ನವು ಹರಿಯೆ ನೋಡ್ವ ನೋಟವು
ಕರ್ಣದೊಳ ಶ್ರವಣವದು ನಿನ್ನದಯ್ಯ
ನಾಸಿಕದ ವಾಯುವೊಳ ಸರ್ವಗಂಧನು ನೀನೆ
ನಾಲಗೆಯದು ನುಡಿವ ನಾರಾಯಣ (೧)

ದೇಹ ನಿನ್ನದು ಹರಿಯೆ ನಿನ್ನದೀ ಗುಡಿಯು
ಒಳಮನೆಯ ಆತ್ಮವದು ನಿನ್ನದಯ್ಯ
ಶುದ್ಧಿಯೊಳು ಬೇಡುವೆನೊ ಶ್ರೀನಿವಾಸ ವಿಠಲನೆ
ಸುಖದೊಳಗೆ ನೆಲೆಸಲ್ಲಿ ನಾರಾಯಣ (೨)

ಎನ್ನ ಹೃದಯದಿ ನಿನ್ನುದಯವೊ ಹರಿಯೆ
ನಿನ್ನ ಜಗದುದರದೊಳ ಜೀವಾಣು ನಾ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೫.೨೦೧೧

Monday, May 2, 2011

Shri Krishnana Nooraru Geethegalu - 091

ಬೇಡವೊ ನಿನ್ನ ಸಂಗ

ಬೇಡಯ್ಯ ಬೇಡ ರಂಗ ಬೇಡವೊ ನಿನ್ನ ಸಂಗ
ನೀನೆಮ್ಮವನೆನಲು ಅಭಿಮಾನ ಭಂಗ

ಸೆರೆಯೊಳು ಜನಿಸಿದನೆ ಮಾಯದಿ ನೆಲೆಸಿದನೆ
ನವನೀತಚೋರನೆಂ ಗೋಪಕುಲ ದೂರುವನೆ
ಪುಂಡಪೋರರ ಕೂಡಿ ಕಂಡೋರ ಮನೆಸೇರಿ
ಕೆನೆಹಾಲುಮೊಸರ ಮೆದ್ದೆದ್ದು ಓಡುವನೆ (೧)

ಕಾಡುಹೂಗಳನಾಯ್ದು ವನಮಾಲೆ ಧರಿಸುವನೆ
ಬಿದಿರಕಾಂಡದ ಕೊಳಲ ರಾಗವ ಪಾಡುವನೆ
ಸಿಕ್ಕ ಬಿಕ್ಕೆಯ ಹಣ್ಣು ಜೇನ್ಹಿಂಡಿ ಉಣುವವನೆ
ಗೋಕುಲದ ದನಗಾಹಿ ಗೋಪಾಲ ಗೊಲ್ಲನೆ (೨)

ನಿತ್ಯವಸುರರ ಮಡುಹಿ ರಕುತ ಚೆಲ್ಲಾಡುವನೆ
ಮಾತೆಯೆಂ ಪೂತನೆ ವಿಷಮೊಲೆಯನುಣುವನೆ
ಆವುದೊ ಮಾಯದೊಳು ಗೋವರ್ಧನವೆತ್ತಿದನೆ
ಅಣುರೇಣು ನೀನೆನುವ ಶ್ರೀನಿವಾಸ ವಿಠಲನೆ (೩)

ಬೇಡಯ್ಯ ಬೇಡ ರಂಗ ಬೇಡವೊ ನಿನ್ನ ಸಂಗ
ನೀನೆಮ್ಮವನೆನಲು ಅಭಿಮಾನ ಭಂಗ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೫.೨೦೧೧

Sunday, May 1, 2011

Shri Krishnana Nooraru Geethegalu - 090

ಭಜಿಸಿರೊ ಶ್ರೀಹರಿಯ

ಭಜಿಸಿರೊ ಶ್ರೀಹರಿಯ ನಮಿಸಿರೊ ನರಹರಿಯ
ನಮ್ಮಮ್ಮ ಸಿರಿಲಕುಮಿ ಸೇವಿಪ ದೊರೆಯ

ಸಪ್ತಗಿರಿಯೆತ್ತರದಿ ಪಂಚಭೂತಾಬ್ಧಿಯೊಳು
ವೈಭವದಿ ವಿರಮಿಸಿಹ ವೈಕುಂಠನ
ಮೂಜಗದಿ ಮುಕ್ಕೋಟಿಜೀವರನು ನೂರ್ಕಾಲ
ಉದರದೊಳುದ್ಧರಿಪ ನಿಜನೆಂಟನ (೧)

ದಿಕ್ಕೆಟ್ಟು ಜೀವನದಿ ಹರಿ ನೀನೆ ಗತಿಯೆನಲು
ಸರಿದಾರಿ ಸರಿಗಮದ ಸಂಗೀತನ
ನಾರಾಯಣನೆನುವ ನರಜನುಮ ನಾಲಗೆಗೆ
ನಾಕ ನವಕೋಟಿ ಸುಖವರದನ (೨)

ಮನಬಾಗಿ ಮದದ ಶಿರಬಾಗಿ ಶರಣೆನಲು
ಅನಿತು ಕರ್ಮಾಂಧದ ಕೊಳೆ ಕಳೆವನ
ಕ್ಷಮಿಸಿ ಕಾಯೊ ಎನಲು ಶ್ರೀನಿವಾಸ ವಿಠಲಯ್ಯ
ಎದೆಯೆಂಬೊ ಗುಡಿಯೊಳು ನೆಲೆನಿಲುವನ (೩)

ಭಜಿಸಿರೊ ಶ್ರೀಹರಿಯ ನಮಿಸಿರೊ ನರಹರಿಯ
ನಮ್ಮಮ್ಮ ಸಿರಿಲಕುಮಿ ಸೇವಿಪ ದೊರೆಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೧