Tuesday, May 21, 2013

Shri Krishna Vachanagalu

ತಿರಿದುಂಬುವುದಕ್ಕಿಂತ ಹಂಗಿರದ ಹಸಿವೇ ಲೇಸು
ಇಕ್ಕುವನ ಮನಹಸ್ತವವು ಅಶುದ್ಧವೆನುವೊಡೆ
ಅಮೃತವು ಪಾಷಾಣವೆಂದನೆಮ್ಮ ಶ್ರೀನಿವಾಸ ವಿಠಲ (001)

ಮತಿಯದು ಮೌನಕೆ ಶರಣಾದೊಡೆ ಅರೆಮತಿಯ
ದಬ್ಬರಿಸುವುದನರ್ಥಕೆ ಮೊದಲಕ್ಷರನೆ ನೀಡು ಆ
ಮೂಢಮತಿಗೆ ಸುಮತಿಯನೆಂದ ಶ್ರೀನಿವಾಸ ವಿಠಲ (002)


ಕಿವುಡಾಗಿ ಕರತಾಡನಕೆ ಕಾಯದೆ ಬೆನ್ನತಟ್ಟಲವರಿವರ
ರವಿಶಶಿಯಂದದೊಳು ದಣಿವರಿಯದೆ ದುಡಿವನ ಮಾನ
ಸಮ್ಮಾನಗಳು ಬೆನ್ನಟ್ಟಿ ಬಹವೆಂದ ಶ್ರೀನಿವಾಸ ವಿಠಲ (003)


ಹರಿವುದು ನದಿ ಕಡಲೆಡೆಗೆ ಅರಿತೂ ತನ್ನಂತ್ಯವದೆಂದು
ನಡುವೆ ನೀಗಿಸಿಯೆಷ್ಟೊ ಜೀವದಾಹ ಮನೆ ಮಣ್ಣು ಮೋಹ
ದ ಮನುಜ ನೀನೊಂದು ಕ್ಷಣ ನದಿಯಾಗೆಂದ ಶ್ರೀನಿವಾಸ ವಿಠಲ (004)

ತಾಳಿ ಬಾಳಲು ಬೇಕು ತಾಳಿಗೆ ತಲೆ ಬಾಗಿದೋಳು
ಬಲಗಾಲಿಟ್ಟಲ್ಲಿ ಸೊಸೆ ತಾ ಮಗಳಾಗಿ ಆ ತವರ
ಮರೆವಂತೆ ಇದೇ ಅದೆನುವಂತೆ ಶ್ರೀನಿವಾಸ ವಿಠಲ (005)

ಸಹನೆಯವಶ್ಯವು ಬದುಕ ಬೇಸಿಗೆಯಲಿ ನೆರಳೂ ವಿರಳ
ಬಯಲಹಾದಿಯಲಿ ಹೆಜ್ಜೆಯಾದೊಡೆ ತಾಳ್ಮೆ ನದಿತೊಡೆ
ಯ ಹಸಿರಿನೆದೆಯಲಿ ಹಕ್ಕಿಹಾಡೆಂದ ಶ್ರೀನಿವಾಸ ವಿಠಲ (006)

ನಿದ್ದೆಗೊಡದು ಕುಡಿಕೆಯೊಳಿಟ್ಟ ಹೊನ್ನು ಗುಡ್ಡೆಗಟ್ಟಿ
ದ ಧಾನ್ಯ ಹುಳುಹುಪ್ಪಟೆಯುದರಕೆ ದುರಾಸೆ ದೂರ
ದೊಳಿಟ್ಟು ದಾನಕ್ಕೆ ಕೈಯಾಗೆಂದ ಶ್ರೀನಿವಾಸ ವಿಠಲ (007)


ತೂಕವಿರದ ಮಾತು ತುಪ್ಪದ ಕುಡಿಕೆಯ ತೂತು ಕೇಳ್ವ
ಮಾನವಂತರಿಗದುವೆ ಹಗುರ ಅಪಹಾಸ್ಯ ಪದಾರ್ಥ
ನುಡಿನುಡಿ ಬಿಡಿಬಿಡಿ ಹಾಡಿನಂತಿರಲೆಂದ ಶ್ರೀನಿವಾಸ ವಿಠಲ (008)


ನೊಸಲಪಟ್ಟೆಯ ಮೆಚ್ಚ ಉಟ್ಟ ದಟ್ಟಿಯ ಮೆಚ್ಚ
ಒಳಸ್ವಚ್ಛವಿರದಶುದ್ಧನ ಅವ ಶತಸಿದ್ಧ ಮೆಚ್ಚ
ಅಂಗ ಮೀರಿ ಆತ್ಮಸಂಗದಿ ತೋರ್ವ ಶ್ರೀನಿವಾಸ ವಿಠಲ (009)

ಕಣ್ಣು ಕಂಡುದ್ದಕ್ಕೆಲ್ಲ ಮನವ ಜಾರಿಸಬೇಡ
ಮೈಯ್ಯ ಜೊಲ್ಲಿಗೆ ಮಾನ ಮರೆಯಲು ಬೇಡ
ಕುರುಳು ಕುರುಜನುರುಳಾಯ್ತೆಂದ ಶ್ರೀನಿವಾಸ ವಿಠಲ (010)









Sunday, April 7, 2013

Shri Krishnana Nooraru Geethegalu - 339

ಕಂದನ ಕಂಡಿರಾ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ಕಮಲ ನಯನನ ಕಸ್ತೂರಿ ತಿಲಕನ
ರಂಗಿನ ಗಲ್ಲದ ಚೆಂದದ ತುಟಿಯೊಳು ಮೆಲ್ಲನೆ ನಗುವನ

ಗರಿಯ ಮುಡಿದನ ಮುರನ ಹರಿದನ
ಪೂತನೆಯ ವಿಷಮೊಲೆಯನುಂಡು ಮಾತೆ ಎಂದವನ

ಪಾಮರ ಸ್ನೇಹನ ರಾಧೆಯ ಪ್ರೇಮನ
ನರನ ಭವವನಳಿದು ಶುಭವ ಕೊಡುವನುಭವನ

ತ್ರೇತೆಯ ರಾಮನ ದ್ವಾಪರ ಶ್ಯಾಮನ
ರಾಯರೂಪದಿ ಧರೆಯ ಕಾಯ್ವ ಶ್ರೀನಿವಾಸ ವಿಠಲನ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೪.೨೦೧೩

Saturday, April 6, 2013

Shri Krishnana Nooraru Geethegalu - 338

ಮೋಹಿ ಎನ್ನದಿರೊ ಶ್ರೀಹರಿಯೆನ್ನ

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ಚಿನ್ನವ ಕೇಳೆನೊ ರನ್ನವ ಕೇಳೆನೊ
ಸಕಲ ಸುಖಭೋಗ ಆಯುಷ್ಯವ
ಕೇಡನೆ ಉಂಡುಟ್ಟ ಕುರುಸುತರಂದದೊಳು
ಚರವದು ಸ್ಥಿರವೆನುವ ಅತಿಸ್ವಾರ್ಥವ (೧)

ಅರಸು ತಾವೆಂದು ಅರೆಕ್ಷಣವಿರಲಿಲ್ಲ
ಕಾಸಿನ ಕಿರೀಟ ಮಣ್ಣಾದೊ
ಮೂಜಗ ತಮದೆಂದು ಮೂರುಕ್ಷಣವಿರಲಿಲ್ಲ
ಮುನ್ನೂರು ಶತಕೋಟಿ ಶಿರವಳಿದೊ (೨)

ನಾನು ನಾನೆಂಬುದೆಲ್ಲ ನಿನ್ನ ನಾಮದ ಧೂಳು
ನಾನು ನಾನೆಂಬುವನ ನಾಮವಳಿಯಿತು ನೋಡು
ಧರೆಯೊಳು ನೀ ದೊರೆಯೊ ಶ್ರೀನಿವಾಸ ವಿಠಲಯ್ಯ
ನಿನ್ನ ಶ್ರೀಚರಣದೊಳು ಎನಗೆ ನೆರಳನು ನೀಡು (೩)

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೪.೨೦೧೩

Sunday, March 17, 2013

Shri Krishnana Nooraru Geethegalu - 337

ಹರಿಯ ತೋರಿಸೊ

ಹರಿಯ ತೋರಿಸೊ ಹನುಮ ಹರಿಯ ತೋರಿಸೊ
ಹರಿಯ ತೋರಿಸೆನ್ನ ಮುಕುತಿಯ ಗುರಿಯ ತೋರಿಸೊ

ಉತ್ತಮೋತ್ತಮ ರಾಮ ತ್ರೇತೆಯೋತ್ತಮನ
ರಘುವಂಶತಿಲಕ ಶ್ರೀಪುರುಷೋತ್ತಮನ
ಜಾನಕಿ ಪ್ರಾಣ ನಿನ್ನ ಶ್ರೀಚರಣ ದೇವನ
ಧರೆಯೊಳಗೆ ಧರ್ಮವನು ಕಾವನ ಶ್ರೀರಾಮನ (೧)

ಹರಿಯೆನಲಾ ಅಜಮಿಳನು ಅರೆಚಣದಿ ಮೂಡಿದನ
ನಾರಾಯಣ ಎನಲು ಕಂಬವನೆ ಸೀಳಿದನ
ಕೃಷ್ಣ ಕಾಯೋ ಎನಲು ಮಾನವಸ್ತ್ರವಾದವನ
ಧರ್ಮದಾ ಐವರಿಗೆ ನೀತಿಶಸ್ತ್ರವಾದವನ (೨)

ಕಲಿಯೊಳಗೆ ರಾಯರಾಯ ರೂಪದಿಂ ಪೊರೆವವನ
ಹಲಜನುಮದ ಕರುಮ ಕಶ್ಮಲವ ತೊಳೆವವನ
ಶುದ್ಧಾತ್ಮ ಸಜ್ಜನರಿಗೊಲಿದು ಒಳ ನೆಲೆಸುವನ
ಕಿಂಡುಡುಪಿಯೊಡೆಯ ಶ್ರೀ ಶ್ರೀನಿವಾಸ ವಿಠಲನ (೩)

ಹರಿಯ ತೋರಿಸೊ ಹನುಮ ಹರಿಯ ತೋರಿಸೊ
ಹರಿಯ ತೋರಿಸೆನ್ನ ಮುಕುತಿಯ ಗುರಿಯ ತೋರಿಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೩.೨೦೧೩

Tuesday, February 19, 2013

Shri Krishnana Nooraru Geethegalu - 336

ಮಧುರ ನುಡಿಸೊ ಮನದ ಮುರಳಿ

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ಬದುಕೆಂಬೀ ಮಾಯಾಮೃಗವ ಕಣ್ಣಮುಂದೆಯೆ ಬಿಟ್ಟಿಹೆ
ಬೇಟೆಯಾಡೆ ಆರು ಬಣ್ಣದ ವಿಷಬಾಣವ ಕೊಟ್ಟಿಹೆ
ಮಣ್ಣುಹೊನ್ನು ಎಮ್ಮದಲ್ಲವೊ ಎಮ್ಮದೆನ್ನುವ ಮಾಯೆಯ
ಎಮ್ಮೊಳಿಟ್ಟು ಆಟಕಟ್ಟಿದ ಕೃಷ್ಣ ಎಮ್ಮನು ಕಾಯ್ವೆಯಾ (೧)

ಮಾತೆಯೆಂದಾ ಪೂತನೆಯೊಳು ವಿಷಪಾನವನಿಟ್ಟನೆ
ದಾನಪದದಾ ಸೂರ್ಯಪುತ್ರನ ಕೈಯ್ಯ ಕಟ್ಟಿಬಿಟ್ಟನೆ
ಧರ್ಮಾಧರ್ಮದ ಅಂಬುಧಿಯೊಳು ನಿಜದ ಸತ್ಯಸುಧೆಯನು
ಮಥಿಸಿ ಸುಜನಗೆ ಸವಿಯೆ ನೀಡುವ ಶ್ರೀನಿವಾಸ ವಿಠಲನೆ (೨)

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೨.೨೦೧೩

Tuesday, February 12, 2013

Shri Krishnana Nooraru Geethegalu - 335

ಶ್ರೀರಾಮ ವಂದೆ

ರಾಮ ವಂದೆ ಶ್ರೀರಾಮ ವಂದೆ
ಅಗಣಿತಾಕ್ಷಯ ಸುಗುಣಧಾಮ ವಂದೆ

ರಘುಕುಲ ಸಿರಿಸೋಮ ಶ್ರೀರಾಮ ವಂದೆ
ರಾಜೀವಲೋಚನ ಜಯರಾಮ ವಂದೆ
ದಶರಥ ಕೌಸಲ್ಯೆ ಪ್ರಿಯರಾಮ ವಂದೆ
ಭವಕಾಮಹರ ರಾಮ ನಿಷ್ಕಾಮ ತಂದೆ (೧)

ಜಯಜಯರಾಮ ವಂದೆ ಜಾನಕಿಪ್ರಾಣ ವಂದೆ
ದಶಶಿರಹರ ರಾಮ ಜಟಾಯುದೇವ ವಂದೆ
ಹನುಮನ ಪಾಲ ವಂದೆ ಮುನಿಜನಲೋಲ ವಂದೆ
ದಶದೊಳು ಧರೆಕಾವ ಶ್ರೀನಿವಾಸ ವಿಠಲ ತಂದೆ (೨)

ರಾಮ ವಂದೆ ಶ್ರೀರಾಮ ವಂದೆ
ಅಗಣಿತಾಕ್ಷಯ ಸುಗುಣಧಾಮ ವಂದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೨.೨೦೧೩

Friday, February 8, 2013

Shri Krishnana Nooraru Geethegalu - 334

ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ಚೆಂದ ಚಂದನ ತಿಲಕವಿಟ್ಟನ ಪುಟ್ಟನ ಕಂಡಿರೆ
ಕದ್ದು ಬೆಣ್ಣೆಯ ಮೆದ್ದು ಒಪ್ಪದ ತುಂಟನ ಕಂಡಿರೆ
ಜಗದ ಕತ್ತಲ ಹೆಡೆಯ ಮೆಟ್ಟಿದ ದಿಟ್ಟನ ಕಂಡಿರೆ
ಜರಾಸಂಧನ ಅಹಂ ಅದನು ತರಿದಿಟ್ಟನ ಕಂಡಿರೆ (೧)

ರಾಧೆಯ ಲೋಲನ ಜಗದಿಕ್ಪಾಲನ ನೀವು ಕಂಡಿರೆ
ಗೋವ್ಗಳ ಕಾಯುತ ಗಾನವಗೈಯ್ಯುವ ಗೊಲ್ಲನ ಕಂಡಿರೆ
ಭವಗೋವರ್ಧನ ಬೆರಳೊಳಗೆತ್ತಿದ ಭವ್ಯನ ಕಂಡಿರೆ
ಇಂದಿರಾಪತಿಯೆಮ್ಮ ಶ್ರೀನಿವಾಸ ವಿಠಲನ ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೨.೨೦೧೩