Tuesday, May 21, 2013

ಕಿರುತೊರೆ

ಮೂಲವೆಂಬೊ ತಾಯಮಡಿಲ ಜಿಗಿದು
ಅಂಬೆಗಾಲಲ್ಲರಿದು ಜುಳುಜುಳು ಕವಿತೆ
ಅಣುಅಣು ನೀರಾಗುವ ಮಾಯೆ
ಕಿರುತೊರೆಯ ಜೀವದೊರತೆ

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ನಡೆಯಲೇ ಬೇಕು ಇನ್ನು ತೊರೆ
ತೊರೆದಾಗಿದೆ ತಾಯತೊಡೆ
ಆವುದೋ ಊರ ತಿರುವಲಿ ಸೊಂಟ ಬಳುಕಿ
ಬೃಹತ್ ಬಂಡೆಯ ತಲೆಯಿಂದ ಧುಮುಕಿ
ಹರಿದರಿದು ತಿಳಿಯಾಗಿ ನದಿಯಾಗಿ
ಬಣ್ಣದ ಮೀನು, ಸೀಗಡಿ ಮತ್ತು ಕಲ್ಲುಏಡಿಗೂ ತಾಯಾಗಿ
ಜೀವಜೀವದ ದಾಹವಾರಿಸೊ ಗಂಗೆ
ಕೆಲವೊಮ್ಮೆ ಪ್ರೇಮಿಗಳ ಪಾದಕೆ ತಂಪು
ಅವಕಾಶವಿದ್ದಂತೆ ಆಕಾರ ಅದಲುಬದಲು
ತೆಳ್ಳನೆಯ ಸ್ಫಟಿಕದಂತೆ ಒಮ್ಮೆಮ್ಮೆ
ವಜ್ರದಂತೆ ಗಡಸು
ಮರದ ನೆರಳಿದ್ದರೂ ದಂಡೆಯಲಿ
ವಿಶ್ರಮಿಸದಂತೆ
ಕೃಶವಾಗಿ ಸುಡುಬೇಸಿಗೆಗೆ ಮತ್ತೆ
ಮುಖವೊಡ್ಡಿ ಮಳೆಗೆ ಖುಷಿಯಾಗಿ

ನಾನೆಂಬೊ ಪದಕಳೆದು
ಕಡಲ ಗರ್ಭದೊಳ ನಡೆದು
ತೊರೆಯೀಗ ಪರಿಪೂರ್ಣ ಮತ್ತು
ಸ್ಪಷ್ಟ ಹರಿವುದರ ಕಾರಣ

(ಶ್ರೀಪುರುಷೋತ್ತಮ ಬಿಳಿಮಲೆಯವರ ’ಬಂಟಮಲೆಯ ಕಿರುತೊರೆ’ ಓದಿ...)

ಒಂಟಿಮರ..ಬುದ್ಧ ಮತ್ತು ನಾವು

ವಿಶಾಲದೊಳಗೊಂದು ಒಂಟಿ ಮರ
ಬಯಲು ಆಲಯವೆರಡು ತನ್ನೊಳಗೆ ಎನುವಂತೆ

ಹಠಯೋಗಿ ಅನ್ನಿಸೊಲ್ಲ ಕಾರಣ ಮರ
ಮಧ್ಯಾಹ್ನದ ಬಿಡುವಿನಲ್ಲಿ ಧ್ಯಾನಿಸುತ್ತೆ
ಸಂಭ್ರಮಿಸುತ್ತೆ ಕೊಳಲ ಹುಡುಗನ ತುಂಟಾಟಕೆ
ಮತ್ತು ಮಿಡಿಯುತ್ತೆ ಋತುಚಕ್ರದಾಟಕ್ಕೂ...

ಮತ್ತದರಡಿಯಲ್ಲಿ ಆರೋ ನಡೆದುಹೋದ ಪಾದದೆಳೆ
ಶುದ್ಧನಾದ ಬುದ್ಧನವೇ.. ಮರ ಮೌನ ಮತ್ತು ನೆರಳು
ದೂರದಲ್ಲಿ ಕಿತ್ತ ಸಂಕೋಲೆಗೆ ಯಶೋಧರೆಯ ಅಳು

ಸಂಜೆ ಮರದೆದೆಗೆ ಹಿಂತಿರುಗೆ ಹಕ್ಕಿ-ಪಕ್ಕಿ ಮಿಲನ
ಮಾತುಕತೆ ಮಿಥುನ ಮರಿ ಚಿಗುರಿ ಯಾ ಗರಿಯುದುರಿ

ಧ್ಯಾನದಿಂದೆದ್ದು ಮರ ಕಣ್ಣರಳಿಸುತ್ತೆ
ಸಂಜೆ ಸೂರ್ಯನ ಬಣ್ಣಕ್ಕೆ ಮೈಮರೆಯುತ್ತೆ
ಎದೆಗೂಡಿನೊಳಗೆ ಎಷ್ಟೊಂದು ಜೀವಕ್ಕೆ ತಾಯಿಯಾಗುತ್ತೆ
ತನ್ನೊಳಗೆ ತಾನೇ ಅಚ್ಚರಿಯಂಬಂತೆ...

ಮರಕ್ಕೀಗ ಜ್ಞಾನೋದಯ

ಯಾರೋ ಅದರೆಡೆಗೆ ಬರುತ್ತಿರುವಂತೆ
ಬುದ್ಧನೇ...ಇರಬಹುದು ಮರ ಜೀವನ್ಮುಖಿ
ಯಶೋಧರೆ ಶಾಪವಳಿದು ಸುಖಿ...!

Shri Krishna Vachangalu

ನಾಲಗೆಯೊಳನ್ಯವದು ಕುಣಿದಾಡೆ ಕರ್ಣವವು ಕೃಷ್ಣನಿಗೆ ಕಿವುಡಾಗೆ
ನಾಸಿಕವು ಪುಣ್ಯಗಂಧನ ಸೇವಿಸದೆ ಪೋಗೆ ಕಂಗಳವು ಕಣಕಣದೊಳವನ
ಕಾಣದೆ ಕುರುಡಾಗೆ ದೇಹವದು ಆತ್ಮವಿಲ್ಲದ ಗುಡಿಯಾಗೆ ಅಂದಿಗಲ್ಲಿ
ಧರ್ಮವದಳಿದಧರ್ಮದ ರವರವ ಪ್ರಳಯ ನೋಡೆಂದ ಶ್ರೀನಿವಾಸ ವಿಠಲ (021)

ಚಿತ್ತ ಅವನೊಳಗಿಟ್ಟು ಬಿತ್ತು ಬಕುತಿಯ ಬೀಜ
ಬಾಳ ಬೇವಕಹಿಯನು ಕಳೆದು ಮಾವಸಿಹಿಯದನೀವ
ಎನ್ನಾಣೆ ಎನ್ನ ಹರಿದಾಸರಾಣೆ ಶ್ರೀನಿವಾಸ ವಿಠಲ (022)

ಹಸಿವೆಂದು ಬಂದವಗೆ ಅಗುಳ ಮುರಿದುಣಿಸು
ಬಾಯಾರಿದವನ ಬೊಗಸೆ ನೀರಲಿ ತಣಿಸು
ನೋವುಂಡ ನರನವನ ಕಣ್ಣೀರನಳಿಸು
ಜಗಕೆ ನೀನಿಕ್ಕಿದೊಡೆ ನಿನ್ಹನ್ನೆರಡು
ತಲೆಮಾರ ಜಗಕಾವುದು ಶ್ರೀನಿವಾಸ ವಿಠಲ (023)

ಜಗವುಣ್ಣುವನ್ನವನು ಕುಡಿಕೆಯೊಳಡಗಿಸುವನ
ನಡುರಾತ್ರಿಯೊಳೆದ್ದು ಧನವದನು ಎಣಿಸುವನ
ಕುಡಿನೀರಬಾವಿಗೆ ಬೇಲಿಯನು ಕಟ್ಟುವನ
ಹರಿಪಾದವದೂ ಕಾಯದೆಂದ ಶ್ರೀನಿವಾಸ ವಿಠಲ (024)

ಆತ್ಮದೊಳು ನೀನಿರದವನ ಮನೆಯ ಅನ್ನವದು ವಿಷವಯ್ಯ
ನಿನ್ನಿರುವ ಅರಿಯದಂತಾಡುವನ ಮನವೇ ವಿಷವಯ್ಯ
ನೀ ಕೊಡುವ ಮುಕುತಿಯಲ್ಲದೆ ಭವವೇ ಭವಿತವ್ಯ
ವೆನುವನ ನೀನಲ್ಲದೆ ಮತ್ಯಾರು ಕಾವರೊ ಶ್ರೀನಿವಾಸ ವಿಠಲ (025)

ಜಾನಕಿಯ ರೂಪದೊಳು ರಾವಣನ ಕೇಡ ಕಂಡೆಯಾ
ಪಾಂಚಾಲಿ ಕುರುಳಿನೊಳು ಕುರುಜರ ಕೇಡ ಕಂಡೆಯಾ
ಕೃಷ್ಣನ ಕೊಲುವೆನೆಂದ ಕಂಸನ ಕೇಡ ಕಂಡೆಯಾ
ಆರನು ಗೆದ್ದು ಹರಿ ನೀನೇ ಎನುವನ ಅನುಗಾಲ
ಕಾವನೆಮ್ಮ ಶ್ರೀನಿವಾಸ ವಿಠಲ (026)

Shri Krishna Vachanagalu

ತೆಂಗಿನ ತಲೆಯೊಡೆದು ಬಾಳೆತುದಿಯನು ಚಿವುಟಿ ಕಪ್ಪುರ
ಗಿರಿಯುರಿದು ಧಗಧಗ ಧೂಪಹೊಗೆ ಮನವದು ಮುಗಿಯ
ದಿದ್ದೊಡೆ ಹರಿಗೆ ಫಲವೇನೆಂದ ಶ್ರೀನಿವಾಸ ವಿಠಲ (011)

ಮತಿಯ ಮಸುಕಿದೀ ನಿಶೆಯ ಬಡಿದಟ್ಟು ದಿಸೆದಿಸೆಯೊಳು
ಹೊಸ ಅರಿವಿನುಶೆ ಹರಿಬಿಟ್ಟು ಸಹಜದೀ ಕತ್ತಲಮಾಯೆ
ಗೆ ನಂಬುಗೆಯ ಹಣತೆ ಹಚ್ಚಿಟ್ಟೆಂದನೆಮ್ಮ ಶ್ರೀನಿವಾಸ ವಿಠಲ (012)

ಸಂಭವವು ಅಸುರನಬ್ಬರವವನಿಯೊಳು ಸುರತನವದು
ಸುಮ್ಮನಿರೆ ಮತ್ತಾರರಾರ್ಭಟದಾ ಬಲಿಕೇಕೆ ನಿನ್ನೊಳು
ನಂಬಿದೊಡೆ ಕಾವನವ ದಶದೊಳೆಂದ ಶ್ರೀನಿವಾಸ ವಿಠಲ (013)

ಪಕಳೆಗಳರಳಿಸುವವು ಮೊಗ್ಗು ಹಾಡುವವು ಹಕ್ಕಿ ಕೊರಳ
ಕೊಳಲುಲಿದು ತಮ್ಮಾತ್ಮದಾನಂದಕೆ ನೋಡ್ವರ ಕೇಳ್ವರ
ಮನೋಲ್ಲಾಸಪಡುವಚ್ಚರಿಗೆ ಬೆರಗಾದ ಶ್ರೀನಿವಾಸ ವಿಠಲ (014)

ಕೂಸ ಬಸಿರಿನೊಳಗೊಂದು ಕೂಸುದುಸುವಚ್ಚರಿ
ಆಡದ ಬಾಯೊಳಗದುವು ಅಬ್ಬರಿಸಿದಾಕ್ಷಣದಿ
ಕೂಸದರಕೂಸಿನವಸಾನವೆಂದ ಶ್ರೀನಿವಾಸ ವಿಠಲ (015)

ಇಳಿ ಮೊದಲು ನಿನ್ನಾಳಕೆ ಅದರಾಳಕೆ ಅತಳ ಸುತಳ ಪಾತಳಕೆ
ಕದಡು ಹಾಲಾಹಲ ಮುರಿದದರೊಳಗಾರರಸುರರ ಕೋಲಾಹಲ
ನಿಶ್ಚಯವು ಜಯವೆಂದು ನಿನಗಮೃತಬಿಂದು ಶ್ರೀನಿವಾಸ ವಿಠಲ (016)

ಬೇವಸವೇಕೆ ಅಸುವಿಗೆ ವ್ಯಸನವೇಕೆ ವಸುವಿಗೆ ಮಣ್ಣಾಗುವ ಕಸು
ವಿಗೆ ಶತಕೋಟಿಶಿರಗಳಾಳ್ದ ಅವನಿಗೆ ಉತ್ತಮರುಸಿರದಳಿದರೂ
ಯುಗಯುಗದಲಿ ಪುಣ್ಯದೆಸರುಳಿವುದೆಂದ ಶ್ರೀನಿವಾಸ ವಿಠಲ (017)

ಅಷ್ಟದಿಕ್ಕುಗಳಿರ್ಪ ಅವನಿಯನೊಲ್ಲೆನು ಐರಾವತ ಕುಮುದಾಂಜನಾದಿ ಅಷ್ಟದಿಗ್ಗಜಗಳ
ಅಷ್ಟಭೋಗಗಳೆಂಬೊ ನಿಧಿ ನಿಕ್ಷೇಪ ಮತ್ತಲವನು ಒಲ್ಲೆನಯ್ಯ ಅಷ್ಟೈಶ್ವರ್ಯ ಮಂಗಲವ
ಎನ್ನೊಳಡಗಿದ ಅಷ್ಟಮದಗಳ ನೀ ಮುರಿದೊಡೆ ಮತ್ತೆಲ್ಲವುಗಳ ದೊರೆ ನಾನು ಶ್ರೀನಿವಾಸ ವಿಠಲ (018)

ಛಲದೊಳು ಕುರುಜನಾಗು ಬಲದೊಳು ಮಧ್ವ ಪೂರ್ವಾವತಾರಿ
ನಯದೊಳು ದ್ವಾರಕಾಧೀಶನಾಗು ಎಲ್ಲಕು ಮೊದಲು ಕೊಡು
ವಿಕೆಯಲಿ ಕುಂತಿಯ ಹಿರಿಬಸಿರು ನೀನಾಗೆಂದ ಶ್ರೀನಿವಾಸ ವಿಠಲ (019)

ರುಚಿಬಾಳೆ ಉಂಡಂತಿರಲಿ ನೀ ಬರೆದಿದ್ದೊದುಗನಿಗೆ ಕುಡಿದಂತೆ
ಸವಿಕಾವೇರಿಯನು ಅಲ್ಲದ ಬರಹವದು ತೊಳೆಬಿಡಿಸದ್ಹಲಸ
ನೆಂಟರ ಗಂಟಲೊಳಿಸಿದಂತೆಂದನೆಮ್ಮ ಶ್ರೀನಿವಾಸ ವಿಠಲ (020)

Shri Krishna Vachanagalu

ತಿರಿದುಂಬುವುದಕ್ಕಿಂತ ಹಂಗಿರದ ಹಸಿವೇ ಲೇಸು
ಇಕ್ಕುವನ ಮನಹಸ್ತವವು ಅಶುದ್ಧವೆನುವೊಡೆ
ಅಮೃತವು ಪಾಷಾಣವೆಂದನೆಮ್ಮ ಶ್ರೀನಿವಾಸ ವಿಠಲ (001)

ಮತಿಯದು ಮೌನಕೆ ಶರಣಾದೊಡೆ ಅರೆಮತಿಯ
ದಬ್ಬರಿಸುವುದನರ್ಥಕೆ ಮೊದಲಕ್ಷರನೆ ನೀಡು ಆ
ಮೂಢಮತಿಗೆ ಸುಮತಿಯನೆಂದ ಶ್ರೀನಿವಾಸ ವಿಠಲ (002)


ಕಿವುಡಾಗಿ ಕರತಾಡನಕೆ ಕಾಯದೆ ಬೆನ್ನತಟ್ಟಲವರಿವರ
ರವಿಶಶಿಯಂದದೊಳು ದಣಿವರಿಯದೆ ದುಡಿವನ ಮಾನ
ಸಮ್ಮಾನಗಳು ಬೆನ್ನಟ್ಟಿ ಬಹವೆಂದ ಶ್ರೀನಿವಾಸ ವಿಠಲ (003)


ಹರಿವುದು ನದಿ ಕಡಲೆಡೆಗೆ ಅರಿತೂ ತನ್ನಂತ್ಯವದೆಂದು
ನಡುವೆ ನೀಗಿಸಿಯೆಷ್ಟೊ ಜೀವದಾಹ ಮನೆ ಮಣ್ಣು ಮೋಹ
ದ ಮನುಜ ನೀನೊಂದು ಕ್ಷಣ ನದಿಯಾಗೆಂದ ಶ್ರೀನಿವಾಸ ವಿಠಲ (004)

ತಾಳಿ ಬಾಳಲು ಬೇಕು ತಾಳಿಗೆ ತಲೆ ಬಾಗಿದೋಳು
ಬಲಗಾಲಿಟ್ಟಲ್ಲಿ ಸೊಸೆ ತಾ ಮಗಳಾಗಿ ಆ ತವರ
ಮರೆವಂತೆ ಇದೇ ಅದೆನುವಂತೆ ಶ್ರೀನಿವಾಸ ವಿಠಲ (005)

ಸಹನೆಯವಶ್ಯವು ಬದುಕ ಬೇಸಿಗೆಯಲಿ ನೆರಳೂ ವಿರಳ
ಬಯಲಹಾದಿಯಲಿ ಹೆಜ್ಜೆಯಾದೊಡೆ ತಾಳ್ಮೆ ನದಿತೊಡೆ
ಯ ಹಸಿರಿನೆದೆಯಲಿ ಹಕ್ಕಿಹಾಡೆಂದ ಶ್ರೀನಿವಾಸ ವಿಠಲ (006)

ನಿದ್ದೆಗೊಡದು ಕುಡಿಕೆಯೊಳಿಟ್ಟ ಹೊನ್ನು ಗುಡ್ಡೆಗಟ್ಟಿ
ದ ಧಾನ್ಯ ಹುಳುಹುಪ್ಪಟೆಯುದರಕೆ ದುರಾಸೆ ದೂರ
ದೊಳಿಟ್ಟು ದಾನಕ್ಕೆ ಕೈಯಾಗೆಂದ ಶ್ರೀನಿವಾಸ ವಿಠಲ (007)


ತೂಕವಿರದ ಮಾತು ತುಪ್ಪದ ಕುಡಿಕೆಯ ತೂತು ಕೇಳ್ವ
ಮಾನವಂತರಿಗದುವೆ ಹಗುರ ಅಪಹಾಸ್ಯ ಪದಾರ್ಥ
ನುಡಿನುಡಿ ಬಿಡಿಬಿಡಿ ಹಾಡಿನಂತಿರಲೆಂದ ಶ್ರೀನಿವಾಸ ವಿಠಲ (008)


ನೊಸಲಪಟ್ಟೆಯ ಮೆಚ್ಚ ಉಟ್ಟ ದಟ್ಟಿಯ ಮೆಚ್ಚ
ಒಳಸ್ವಚ್ಛವಿರದಶುದ್ಧನ ಅವ ಶತಸಿದ್ಧ ಮೆಚ್ಚ
ಅಂಗ ಮೀರಿ ಆತ್ಮಸಂಗದಿ ತೋರ್ವ ಶ್ರೀನಿವಾಸ ವಿಠಲ (009)

ಕಣ್ಣು ಕಂಡುದ್ದಕ್ಕೆಲ್ಲ ಮನವ ಜಾರಿಸಬೇಡ
ಮೈಯ್ಯ ಜೊಲ್ಲಿಗೆ ಮಾನ ಮರೆಯಲು ಬೇಡ
ಕುರುಳು ಕುರುಜನುರುಳಾಯ್ತೆಂದ ಶ್ರೀನಿವಾಸ ವಿಠಲ (010)









Sunday, April 7, 2013

Shri Krishnana Nooraru Geethegalu - 339

ಕಂದನ ಕಂಡಿರಾ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ಕಮಲ ನಯನನ ಕಸ್ತೂರಿ ತಿಲಕನ
ರಂಗಿನ ಗಲ್ಲದ ಚೆಂದದ ತುಟಿಯೊಳು ಮೆಲ್ಲನೆ ನಗುವನ

ಗರಿಯ ಮುಡಿದನ ಮುರನ ಹರಿದನ
ಪೂತನೆಯ ವಿಷಮೊಲೆಯನುಂಡು ಮಾತೆ ಎಂದವನ

ಪಾಮರ ಸ್ನೇಹನ ರಾಧೆಯ ಪ್ರೇಮನ
ನರನ ಭವವನಳಿದು ಶುಭವ ಕೊಡುವನುಭವನ

ತ್ರೇತೆಯ ರಾಮನ ದ್ವಾಪರ ಶ್ಯಾಮನ
ರಾಯರೂಪದಿ ಧರೆಯ ಕಾಯ್ವ ಶ್ರೀನಿವಾಸ ವಿಠಲನ

ಕಂದನ ಕಂಡಿರಾ ಶ್ರೀಕೃಷ್ಣನ ಕಂಡಿರಾ
ಗೆಜ್ಜೆ ಕಾಲ್ಗಳ ಗೋಕುಲದೊಡೆಯ ಶ್ರೀಗೋವಿಂದನ ಕಂಡಿರಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೪.೨೦೧೩

Saturday, April 6, 2013

Shri Krishnana Nooraru Geethegalu - 338

ಮೋಹಿ ಎನ್ನದಿರೊ ಶ್ರೀಹರಿಯೆನ್ನ

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ಚಿನ್ನವ ಕೇಳೆನೊ ರನ್ನವ ಕೇಳೆನೊ
ಸಕಲ ಸುಖಭೋಗ ಆಯುಷ್ಯವ
ಕೇಡನೆ ಉಂಡುಟ್ಟ ಕುರುಸುತರಂದದೊಳು
ಚರವದು ಸ್ಥಿರವೆನುವ ಅತಿಸ್ವಾರ್ಥವ (೧)

ಅರಸು ತಾವೆಂದು ಅರೆಕ್ಷಣವಿರಲಿಲ್ಲ
ಕಾಸಿನ ಕಿರೀಟ ಮಣ್ಣಾದೊ
ಮೂಜಗ ತಮದೆಂದು ಮೂರುಕ್ಷಣವಿರಲಿಲ್ಲ
ಮುನ್ನೂರು ಶತಕೋಟಿ ಶಿರವಳಿದೊ (೨)

ನಾನು ನಾನೆಂಬುದೆಲ್ಲ ನಿನ್ನ ನಾಮದ ಧೂಳು
ನಾನು ನಾನೆಂಬುವನ ನಾಮವಳಿಯಿತು ನೋಡು
ಧರೆಯೊಳು ನೀ ದೊರೆಯೊ ಶ್ರೀನಿವಾಸ ವಿಠಲಯ್ಯ
ನಿನ್ನ ಶ್ರೀಚರಣದೊಳು ಎನಗೆ ನೆರಳನು ನೀಡು (೩)

ಮೋಹಿ ಎನ್ನದಿರೊ ಶ್ರೀಹರಿಯೆನ್ನ ವ್ಯಾಮೋಹಿ ಎನ್ನದಿರೊ
ನಿನ್ನ ಶ್ರೀಚರಣದಾ ಸೇವೆ ಬೇಡುವೀ ನರನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೪.೨೦೧೩