Tuesday, February 19, 2013

Shri Krishnana Nooraru Geethegalu - 336

ಮಧುರ ನುಡಿಸೊ ಮನದ ಮುರಳಿ

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ಬದುಕೆಂಬೀ ಮಾಯಾಮೃಗವ ಕಣ್ಣಮುಂದೆಯೆ ಬಿಟ್ಟಿಹೆ
ಬೇಟೆಯಾಡೆ ಆರು ಬಣ್ಣದ ವಿಷಬಾಣವ ಕೊಟ್ಟಿಹೆ
ಮಣ್ಣುಹೊನ್ನು ಎಮ್ಮದಲ್ಲವೊ ಎಮ್ಮದೆನ್ನುವ ಮಾಯೆಯ
ಎಮ್ಮೊಳಿಟ್ಟು ಆಟಕಟ್ಟಿದ ಕೃಷ್ಣ ಎಮ್ಮನು ಕಾಯ್ವೆಯಾ (೧)

ಮಾತೆಯೆಂದಾ ಪೂತನೆಯೊಳು ವಿಷಪಾನವನಿಟ್ಟನೆ
ದಾನಪದದಾ ಸೂರ್ಯಪುತ್ರನ ಕೈಯ್ಯ ಕಟ್ಟಿಬಿಟ್ಟನೆ
ಧರ್ಮಾಧರ್ಮದ ಅಂಬುಧಿಯೊಳು ನಿಜದ ಸತ್ಯಸುಧೆಯನು
ಮಥಿಸಿ ಸುಜನಗೆ ಸವಿಯೆ ನೀಡುವ ಶ್ರೀನಿವಾಸ ವಿಠಲನೆ (೨)

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೨.೨೦೧೩

Tuesday, February 12, 2013

Shri Krishnana Nooraru Geethegalu - 335

ಶ್ರೀರಾಮ ವಂದೆ

ರಾಮ ವಂದೆ ಶ್ರೀರಾಮ ವಂದೆ
ಅಗಣಿತಾಕ್ಷಯ ಸುಗುಣಧಾಮ ವಂದೆ

ರಘುಕುಲ ಸಿರಿಸೋಮ ಶ್ರೀರಾಮ ವಂದೆ
ರಾಜೀವಲೋಚನ ಜಯರಾಮ ವಂದೆ
ದಶರಥ ಕೌಸಲ್ಯೆ ಪ್ರಿಯರಾಮ ವಂದೆ
ಭವಕಾಮಹರ ರಾಮ ನಿಷ್ಕಾಮ ತಂದೆ (೧)

ಜಯಜಯರಾಮ ವಂದೆ ಜಾನಕಿಪ್ರಾಣ ವಂದೆ
ದಶಶಿರಹರ ರಾಮ ಜಟಾಯುದೇವ ವಂದೆ
ಹನುಮನ ಪಾಲ ವಂದೆ ಮುನಿಜನಲೋಲ ವಂದೆ
ದಶದೊಳು ಧರೆಕಾವ ಶ್ರೀನಿವಾಸ ವಿಠಲ ತಂದೆ (೨)

ರಾಮ ವಂದೆ ಶ್ರೀರಾಮ ವಂದೆ
ಅಗಣಿತಾಕ್ಷಯ ಸುಗುಣಧಾಮ ವಂದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೨.೨೦೧೩

Friday, February 8, 2013

Shri Krishnana Nooraru Geethegalu - 334

ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ಚೆಂದ ಚಂದನ ತಿಲಕವಿಟ್ಟನ ಪುಟ್ಟನ ಕಂಡಿರೆ
ಕದ್ದು ಬೆಣ್ಣೆಯ ಮೆದ್ದು ಒಪ್ಪದ ತುಂಟನ ಕಂಡಿರೆ
ಜಗದ ಕತ್ತಲ ಹೆಡೆಯ ಮೆಟ್ಟಿದ ದಿಟ್ಟನ ಕಂಡಿರೆ
ಜರಾಸಂಧನ ಅಹಂ ಅದನು ತರಿದಿಟ್ಟನ ಕಂಡಿರೆ (೧)

ರಾಧೆಯ ಲೋಲನ ಜಗದಿಕ್ಪಾಲನ ನೀವು ಕಂಡಿರೆ
ಗೋವ್ಗಳ ಕಾಯುತ ಗಾನವಗೈಯ್ಯುವ ಗೊಲ್ಲನ ಕಂಡಿರೆ
ಭವಗೋವರ್ಧನ ಬೆರಳೊಳಗೆತ್ತಿದ ಭವ್ಯನ ಕಂಡಿರೆ
ಇಂದಿರಾಪತಿಯೆಮ್ಮ ಶ್ರೀನಿವಾಸ ವಿಠಲನ ನೀವು ಕಂಡಿರೆ

ಇಂದುವದನ ಕಮಲನಯನ ಚೆಲ್ವನ ಕಂಡಿರೆ ನೀವು
ಯದುನಂದನ ದೇವಕಿಕಂದನ ಕೃಷ್ಣನ ಕಂಡಿರೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೨.೨೦೧೩

Friday, January 18, 2013

Shri Krishnana Nooraru Geethegalu - 333

ಭವದ ಕಡಲ ದಾಟಿಸೊ

ಭವದ ಕಡಲ ದಾಟಿಸೊ ಅಭವ ಕೃಷ್ಣ
ಹರಿಯ ನೆನೆಯದೀ ನರನ ಮುರಾರಿಯೆ

ಎನ್ನ ಕಂಗಳ ಕೊಳೆ ತೊಳೆಯೊ ಕೃಷ್ಣ
ಕರ್ಣಗಳಲಿ ಶುದ್ಧ ಕೊಳಲುಲಿಯೊ
ಚರಣಕೆ ಮುಗಿಯುವೆ ಎನಗೊಲಿಯೊ ಕೃಷ್ಣ
ಅನ್ಯಗಳಳಿದು ನೀ ಎನ್ನೊಳ ನಲಿಯೊ (೧)

ಯಾರಿಲ್ಲವೆನಗೆ ನೀ ದೊರೆಯೊ ಕೃಷ್ಣ
ದುರಿತವ ಕಳೆ ದೇವ ಇದು ಮೊರೆಯೊ
ಬಿಂದುಬಿಂದುಗಳಲ್ಲಿ ಆನಂದ ರೂಪನೆ
ಶ್ರೀನಿವಾಸ ವಿಠಲನೆ ಜಗ ಪೊರೆಯೊ (೨)

ಭವದ ಕಡಲ ದಾಟಿಸೊ ಅಭವ ಕೃಷ್ಣ
ಹರಿಯ ನೆನೆಯದೀ ನರನ ಮುರಾರಿಯೆ

ರಚನೆ: ಎನ್ಕೆ, ಭದ್ರಾವತಿ / ೧೮.೦೧.೨೦೧೩

Friday, January 11, 2013

Shri Krishnana Nooraru Geethegalu - 332

ಎನ್ಯಾಕೊ ಮರೆತುಬಿಟ್ಟೆ

ಯಾಕೊ ನರಜನ್ಮ ಕೊಟ್ಟೆ ಭವದೊಳು ಬದುಕ ಬಿಟ್ಟೆ
ಹುಟ್ಟಿಸಿದ ಹರಿ ನೀನು ಎನ್ಯಾಕೊ ಮರೆತುಬಿಟ್ಟೆ

ಬೇಡಲಿಲ್ಲವೊ ನಾನು ಕೊಡುಯೆಂದು ಜನುಮವ
ಕರುಮವ ಕಳೆಯೆಂದು ಕರೆತಂದವ ನೀನೊ
ಕರೆದವ ಪೊರೆವುದು ತಾಯಿಯಂದದಿ ನಿಜವು
ಶ್ರೀನಿವಾಸ ವಿಠಲಯ್ಯ ಸಲಹೆನ್ನ ತಂದೆ

ಯಾಕೊ ನರಜನ್ಮ ಕೊಟ್ಟೆ ಭವದೊಳು ಬದುಕ ಬಿಟ್ಟೆ
ಹುಟ್ಟಿಸಿದ ಹರಿ ನೀನು ಎನ್ಯಾಕೊ ಮರೆತುಬಿಟ್ಟೆ

ರಚನೆ: ಎನ್ಕೆ, ಭದ್ರಾವತಿ / ೧೨.೦೧.೨೦೧೩

Wednesday, January 9, 2013

Shri Krishnana Nooraru Geethegalu - 331

ನೀನಿರದೆ ನಾನೇನೊ

ನೀನಿರದೆ ನಾನೇನೊ ಒಲವಿನೊಡಯನೆ ಕೃಷ್ಣ
ನೀನಿರದೆ ಈ ಹೃದಯ ಬರಿದು ಬರಿದೊ

ಕಂಗಳಲಿ ಕಾತರದ ಚಿಗರೆಗಳು ಓಡುತಿವೆ
ಎನ್ನೆದೆಯ ಬನದೊಳಗೆ ಅತ್ತಿತ್ತ ಸುತ್ತ
ಒಳಗೊಳಗೆ ನೋಯುತಿವೆ ಬರುವನಿರೆ ಎನುತಲಿವೆ
ಕಾಯಿಸದಿರೊ ದೊರೆಯೆ ನಿನ್ನೊಳಗೆ ಚಿತ್ತ (೧)

ನಾನು ಬಿದರಿನ ಕೊಳಲೊ ನೀನೆನ್ನ ಒಳಉಸಿರು
ಕೊರಡೆನ್ನ ಕೊನರಿಸೊ ಹೇ ಜೀವರಾಗ
ಒಲುಮೆ ಸರಿಗಮ ನುಡಿಸೊ ಶ್ರೀನಿವಾಸ ವಿಠಲನೆ
ಒಂಟಿತನ ಸುಡುತಲಿದೆ ಬಾರೊ ನೀ ಬೇಗ (೨)

ನೀನಿರದೆ ನಾನೇನೊ ಒಲವಿನೊಡಯನೆ ಕೃಷ್ಣ
ನೀನಿರದೆ ಈ ಹೃದಯ ಬರಿದು ಬರಿದೊ

ರಚನೆ: ಎನ್ಕೆ, ಭದ್ರಾವತಿ / ೧೦.೦೧.೨೦೧೩

Tuesday, January 8, 2013

Shri Krishnana Nooraru Geethegalu - 330

ಕುಣಿದು ಬಾರೊ

ಕುಣಿದು ಬಾರೊ ರಂಗ ನೀನು ನಲಿದು ಬಾರೊ
ಪುಟ್ಟಕಾಲ್ಗಳ ಗೆಜ್ಜೆನಾದದಿಂ ತುಂಬಿಸೆನ್ನೊಳು ಕರ್ಣಾನಂದವ

ಬಾರೊ ಬಾರೊ ಬೃಂದಾವನದ ಚೆಲುವ ಕೃಷ್ಣನೆ ಬಾರೊ
ಅಂದಗಾರನೆ ನಂದಗೋಪನ ಕಂದ ಗೋವಿಂದ ಬಾರೊ
ಹೆಡೆಯ ಮೆಟ್ಟಿದ ದಿಟ್ಟ ಪುಟ್ಟನೆ ಮುದ್ದುಮುಕುಂದನೆ ಬಾರೊ
ದೇವದೇವನೆ ದೈತ್ಯಸಂಹಾರನೆ ಶ್ರೀವಾಸುದೇವನೆ ಬಾರೊ (೧)

ಹಾಲಹಲವ ಉಂಡು ಗೆದ್ದನೆ ನೊರೆಹಾಲನೀವೆ ಬಾರೊ
ಭವದ ಕೆಸರ ಕಳೆವ ಸಿದ್ಧನೆ ಸಿಹಿಮೊಸರನೀವೆ ಬಾರೊ
ನವನೀತವ ಕದಿವ ಚೋರನೆ ಎನ್ನೊಲವ ಕೊಡುವೆ ಬಾರೊ
ಜಗವ ಪೊರೆವ ಶ್ರೀನಿವಾಸ ವಿಠಲನೆ ಕರವ ಮುಗಿವೆ ಬಾರೊ (೨)

ಕುಣಿದು ಬಾರೊ ರಂಗ ನೀನು ನಲಿದು ಬಾರೊ
ಪುಟ್ಟಕಾಲ್ಗಳ ಗೆಜ್ಜೆನಾದದಿಂ ತುಂಬಿಸೆನ್ನೊಳು ಕರ್ಣಾನಂದವ

ರಚನೆ: ಎನ್ಕೆ, ಭದ್ರಾವತಿ / ೦೯.೦೧.೨೦೧೩