Thursday, July 24, 2014

Shri Krishnana Nooraru Geethegalu - 356

ಹರಿಯೆನ್ನಿರೊ ನರರು

ಭಜನೆಯೊಳು ಸುಜನಂಗೆ ಹರಿ ಕಾಣುವ
ಹರಿಯೆನ್ನಿರೊ ನರರು ಹರಿಯೆನ್ನಿರೊ

ಗಿರಿಯ ನೀ ಏರದಿರು ಗುಹೆಯಂಧ ಸೇರದಿರು
ಜಟೆಯೆತ್ತಿ ಮುಡಿಕಟ್ಟಿ ಭೈರಾಗಿಯಾಗದಿರು
ಸತಿಸುತರ ಸುಖ ನಡುವೆ ಬಿಡುವಿನೊಂದರೆಕ್ಷಣದಿ
ಹರಿಯೆನ್ನೊ ಅಜಮಿಳನ ಪೊರೆದಂತೆ ಕಾವ (೧)

ಕಣ್ಣ ದಿಟ್ಟಿಯು ಹರಿಯು ಕರ್ಣಗಳ ದನಿ ಹರಿಯು
ಜೀವಜೀವದ ಮಿಡಿತ ತುಡಿತ ಹರಿಯು
ಆರರಾಟಕೆ ಕುಣಿವ ಸೂತ್ರವರಿದಿಹ ಮನುಜ
ನಾರಾಯಣನೆನ್ನೊ ನಿಲದೆ ತಾ ಬರುವ (೨)

ಹರಿಯೆನ್ನೊ ಹರಿಯೆನ್ನೊ ಹರಿಯೆ ನೀ ಸರಿಯೆನ್ನೊ
ಹರಿಯೆನ್ನೊ ಹರಿಯೆನ್ನೊ ನೀ ಮುಕುತಿಗುರಿಯೆನ್ನೊ
ಮೇಲುಕೋಟೆಯ ವಾಸ ಶ್ರೀನಿವಾಸ ವಿಠಲನ್ನ
ಬಿಡದೆ ಭಜಸಲು ನೀನು ಸಕಲ ಸಂಪದವೀವ (೩)

ಭಜನೆಯೊಳು ಸುಜನಂಗೆ ಹರಿ ಕಾಣುವ
ಹರಿಯೆನ್ನಿರೊ ನರರು ಹರಿಯೆನ್ನಿರೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೭.೨೦೧೪

Friday, February 28, 2014

Shri Krishnana Nooraru Geethegalu - 355

ಶಿವನೆನ್ನಿರೋ

ಶಿವನೆನ್ನಿರೋ ಇಹದೊಳು ನೀವು
ಶಿವಶಿವಶಿವನೆನಲು ಭವದ ಮೋಹವ ಕಳೆವ

ಪಾರ್ವತಿಪ್ರಿಯನೆನ್ನಿ ಗೌರಿಹೃದಯನೆ ಎನ್ನಿ
ಗಂಗೆಯ ಜಟೆಯೊಳು ಧರಿಸಿದನೆ ಎನ್ನಿ
ಆದಿಪೂಜಿತನ ಶ್ರೀಸುಬ್ರಹ್ಮಣ್ಯನ
ಪ್ರಿಯಪಿತನೆಮ್ಮ ನಿಟಿಲಾಕ್ಷನೆ ಎನ್ನಿ (೧)

ಮೈಯ್ಯ ಶುದ್ಧಿಯನೊಲ್ಲ ಮನದಶುದ್ಧಿಯ ಬಲ್ಲ
ಶಿವನೆಂಬೊ ಸುಜನಂಗೆ ಇವನೇ ಎಲ್ಲ
ಕಲಿಯೊಳು ಧರೆಕಾವ ಶ್ರೀನಿವಾಸ ವಿಠಲನ
ಪ್ರಿಯದೇವ ಲಯದೇವ ಶ್ರೀಹರನೆನ್ನಿ (೨)

ಶಿವನೆನ್ನಿರೋ ಇಹದೊಳು ನೀವು
ಶಿವಶಿವಶಿವನೆನಲು ಭವದ ಮೋಹವ ಕಳೆವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೨.೨೦೧೪

Wednesday, January 29, 2014

Shri Krishnana Nooraru Geethegalu - 354

ಹರಿ ಧ್ಯಾನ ಮಾನ

ಹರಿ ಧ್ಯಾನ ಮಾನ ಶ್ರೀಹರಿ ಧ್ಯಾನ ಮಾನ
ಇಹದ ಗದ್ದಲದಿ ಪರ ಮರೆತ ನರಮನುಜ

ಪರಸತಿಯ ಕಾಮಿಸಲು ಅಸುರನವ ತ್ರೇತೆಯೊಳು
ಶಿರವರಿದ ಶ್ರೀಹರಿಯ ಧ್ಯಾನವದು ಮಾನ
ಚರಣಸೇವಕನವನ ಎದೆಯೊಳಗೆ ತಾ ನಿಂತು
ಧರ್ಮವದ ಗೆಲ್ಲಿಸಿದ ಶ್ರೀಹರಿಯ ಧ್ಯಾನ (೧)

ಪರರವನಿ ಐಸಿರಿಗೆ ಕುರುಳಿಡಿದ ಕೌರವನ
ತೊಡೆಮುರಿದ ಶ್ರೀಹರಿಯ ಧ್ಯಾನವದು ಮಾನ
ಮಾನದೈವರ ಬಿಡದೆ ಮಡಿಲಕುಡಿಯಂದದೊಳು
ದ್ವಾಪರದೆ ಸಲುಹಿದ ಶ್ರೀಹರಿಯ ಧ್ಯಾನ (೨)

ಮೀನಾಗಿ ಆದಿಯೊಳು ದಶದಿ ನಾರಾಯಣನು
ದುರುಹರಿದ ಶ್ರೀಹರಿಯ ಧ್ಯಾನವದು ಮಾನ
ಕಲಿಯೊಳಗೆ ತೃಣನರನ ಕೋಟಿಕರ್ಮವ ಕಳೆವ
ಶ್ರೀರಾಯ ಶ್ರೀನಿವಾಸ ವಿಠಲನ ಧ್ಯಾನ (೩)

ಹರಿ ಧ್ಯಾನ ಮಾನ ಶ್ರೀಹರಿ ಧ್ಯಾನ ಮಾನ
ಇಹದ ಗದ್ದಲದಿ ಪರ ಮರೆತ ನರಮನುಜ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೧.೨೦೧೩

Monday, November 11, 2013

Shri Krishnana Nooraru Geethegalu - 353

ನೀನಲ್ಲದಿನ್ನಾರು

ನೀನಲ್ಲದಿನ್ನಾರು ಗತಿಯೆನಗೆ ಹನುಮ
ನೀನೊಲಿದರವನೊಲಿವ ಶ್ರೀರಾಮ ರಾಮ

ತ್ರೇತೆಯೊಳು ಆ ದಿವ್ಯ ಚರಣಸೇವಕನಾಗಿ
ಮಾತೆ ಸೀತೆಯ ಶೋಕ ಕಳೆದ ಗುಣವಂತ
ನುಡಿದಂತೆ ನಡೆದವನ ನುಡಿಯಂತೆ ನಡೆದು ನಿ
ನ್ನೊಳಗವನ ಇರಗೊಂಡೆ ಹೇ ಪುಣ್ಯವಂತ (೧)

ನೀ ಅವಗೆ ದಾಸನು ನಾ ನಿನಗೆ ದಾಸನು
ದಾಸಾದಿದಾಸರೊಳು ನೀನೇ ವಿಶೇಷನು
ದ್ವಾಪರದೆ ಬಲನಾಗಿ ಕಲಿಯೊಳಗೆ ಮಧ್ವನಾಗಿ
ಶ್ರೀನಿವಾಸ ವಿಠಲನ್ನ ಸೇವೆಗೈದನೆ ತಂದೆ (೨)

ನೀನಲ್ಲದಿನ್ನಾರು ಗತಿಯೆನಗೆ ಹನುಮ
ನೀನೊಲಿದರವನೊಲಿವ ಶ್ರೀರಾಮ ರಾಮ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೧.೨೦೧೩

Saturday, October 26, 2013

Shri Krishna Nooraru Geethegalu - 352

ನಿನ್ನ ದಿವ್ಯ ಚರಣತಲದಿ

ನಿನ್ನ ದಿವ್ಯ ಚರಣತಲದಿ ಶಿರವ ಬಾಗುವೆ ಹರಿಯೆ
ಸಕಲ ಜೀವ ಚರಾಚರವ ಪೊರೆಯೊ ಬೇಡುವೆ

ಪುಟ್ಟಪಾದದ ದಿಟ್ಟದೊರೆಯೆ ಬಲಿಯ ಇಳೆಗೆ ಮೆಟ್ಟಿದಂದದಿ
ಕಲಿಯೊಳಡಗಿಹ ಅಹಂನಸುರನ ಶಿರವ ಕೆಡವಿ ನಿಶೆಯ ಕಳೆಯೊ (೧)

ಕಂದಗೊಲಿದನೆ ನಾರಸಿಂಹನೆ ನರನ ದೇಹದೀ ಕಂಭ ಸೀಳಿ
ಅಬ್ಬರಿಸಿಹ ಆರರಸುರರ ಕರುಳ ಕಡಿದು ದೂರಕಟ್ಟೋ (೨)

ಶಬರಿಗೊಲಿದನೆ ಸೀತಾರಾಮನೆ ರಾವಣನ ದುರುಮುರಿದನೆ
ಧರಣಿಯೊಳಗೆ ಕಾಮಕಪಟವ ಕಳೆದು ಸಲಹೊ ನಿಷ್ಕಾಮನೆ (೩)

ಮತ್ಸ್ಯನಾದನೆ ಕೂರ್ಮರೂಪನೆ ಪರುಶುರಾಮ ವರಾಹನೆ
ದ್ವಾಪರದೊಳು ಸುಜನಗೊಲಿದನೆ ಶ್ರೀನಿವಾಸ ವಿಠಲನೆ (೪)

ನಿನ್ನ ದಿವ್ಯ ಚರಣತಲದಿ ಶಿರವ ಬಾಗುವೆ ಹರಿಯೆ
ಸಕಲ ಜೀವ ಚರಾಚರವ ಪೊರೆಯೊ ಬೇಡುವೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೧೦.೨೦೧೩

Wednesday, October 2, 2013

Shri Krishnana Nooraru Geethegalu - 351

ಹರಿಸ್ಮರಣೆ

ಸರಳ ಅತಿಸರಳ ನಿರಾಳ
ಅಂತಿಮವರಿಯದ ಅನಂತ ಹರಿಸ್ಮರಣೆ

ಶುದ್ಧನಾಗಿರಬೇಕು ಪರಿಶುದ್ಧನೊಲಿಯಲು
ಅಶುದ್ಧರಾರರ ಪೊರೆ ಕಳೆದು
ನಾನು ನಾನೆನುವ ಇಹದೀ ಮೋಹದ
ಭ್ರಮೆಯೊಳಗಾಡುವ ನರಮನುಜನೆ ಕೇಳು (೧)

ಇಟ್ಟಂತಿರಬೇಕು ಇಲ್ಲದಂತಿರಬೇಕು
ಬಾಡಿಗೆಮನೆಯಿದು ತಿಳಿಬೇಕು
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲನ
ಚರಣದಿ ನೊಸಲಿಟ್ಟು ಸ್ಮರಿಸೋ ನೀ ಮನುಜ (೨)

ಸರಳ ಅತಿಸರಳ ನಿರಾಳ
ಅಂತಿಮವರಿಯದ ಅನಂತ ಹರಿಸ್ಮರಣೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೧೦.೨೦೧೩

Friday, August 30, 2013

Shri Krishnana Nooraru Geethegalu - 350

ಹೇ ಮುದ್ದುರಂಗ

ಇರಲೆನಗೆ ಅನುದಿನವು ಹರಿ ನಿನ್ನ ಸಂಗ
ಭವದ ಬಂಧವ ಕಳೆಯೊ ಹೇ ಮುದ್ದುರಂಗ

ಮಾನದೊಳು ಬಹುಮಾನ ಮೇಘಶ್ಯಾಮನ ಧ್ಯಾನ
ಮಾಳ್ಪರಿಗೆ ಧರಣಿಯೊಳು ಸಕಲ ಸಮ್ಮಾನ
ಕಲಿನರನ ನಾಲಗೆಯ ನುಡಿನುಡಿಯು ಹರಿಯೆನಲು
ಇಹದೆ ದುರ್ಗತಿಯಳಿದು ಮುಕುತಿ ಸೋಪಾನ (೧)

ತ್ರೇತೆಯೊಳು ಪವಮಾನ ದ್ವಾಪರದಿ ಬಲವಾನ
ನಂಬಿ ನೆಚ್ಚಲು ಶಬರಿ ಪಡೆದ ಮಾನ
ನಾನೆಂಬೊ ನಶ್ವರದಿ ಶ್ರೀಹರಿಯೆ ಗತಿಯೆನಲು
ಕಾಯುವುದು ಶ್ರೀನಿವಾಸ ವಿಠಲ ಚರಣ (೨)

ಇರಲೆನಗೆ ಅನುದಿನವು ಹರಿ ನಿನ್ನ ಸಂಗ
ಭವದ ಬಂಧವ ಕಳೆಯೊ ಹೇ ಮುದ್ದುರಂಗ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೮.೨೦೧೩