Saturday, October 26, 2013

Shri Krishna Nooraru Geethegalu - 352

ನಿನ್ನ ದಿವ್ಯ ಚರಣತಲದಿ

ನಿನ್ನ ದಿವ್ಯ ಚರಣತಲದಿ ಶಿರವ ಬಾಗುವೆ ಹರಿಯೆ
ಸಕಲ ಜೀವ ಚರಾಚರವ ಪೊರೆಯೊ ಬೇಡುವೆ

ಪುಟ್ಟಪಾದದ ದಿಟ್ಟದೊರೆಯೆ ಬಲಿಯ ಇಳೆಗೆ ಮೆಟ್ಟಿದಂದದಿ
ಕಲಿಯೊಳಡಗಿಹ ಅಹಂನಸುರನ ಶಿರವ ಕೆಡವಿ ನಿಶೆಯ ಕಳೆಯೊ (೧)

ಕಂದಗೊಲಿದನೆ ನಾರಸಿಂಹನೆ ನರನ ದೇಹದೀ ಕಂಭ ಸೀಳಿ
ಅಬ್ಬರಿಸಿಹ ಆರರಸುರರ ಕರುಳ ಕಡಿದು ದೂರಕಟ್ಟೋ (೨)

ಶಬರಿಗೊಲಿದನೆ ಸೀತಾರಾಮನೆ ರಾವಣನ ದುರುಮುರಿದನೆ
ಧರಣಿಯೊಳಗೆ ಕಾಮಕಪಟವ ಕಳೆದು ಸಲಹೊ ನಿಷ್ಕಾಮನೆ (೩)

ಮತ್ಸ್ಯನಾದನೆ ಕೂರ್ಮರೂಪನೆ ಪರುಶುರಾಮ ವರಾಹನೆ
ದ್ವಾಪರದೊಳು ಸುಜನಗೊಲಿದನೆ ಶ್ರೀನಿವಾಸ ವಿಠಲನೆ (೪)

ನಿನ್ನ ದಿವ್ಯ ಚರಣತಲದಿ ಶಿರವ ಬಾಗುವೆ ಹರಿಯೆ
ಸಕಲ ಜೀವ ಚರಾಚರವ ಪೊರೆಯೊ ಬೇಡುವೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೧೦.೨೦೧೩

Wednesday, October 2, 2013

Shri Krishnana Nooraru Geethegalu - 351

ಹರಿಸ್ಮರಣೆ

ಸರಳ ಅತಿಸರಳ ನಿರಾಳ
ಅಂತಿಮವರಿಯದ ಅನಂತ ಹರಿಸ್ಮರಣೆ

ಶುದ್ಧನಾಗಿರಬೇಕು ಪರಿಶುದ್ಧನೊಲಿಯಲು
ಅಶುದ್ಧರಾರರ ಪೊರೆ ಕಳೆದು
ನಾನು ನಾನೆನುವ ಇಹದೀ ಮೋಹದ
ಭ್ರಮೆಯೊಳಗಾಡುವ ನರಮನುಜನೆ ಕೇಳು (೧)

ಇಟ್ಟಂತಿರಬೇಕು ಇಲ್ಲದಂತಿರಬೇಕು
ಬಾಡಿಗೆಮನೆಯಿದು ತಿಳಿಬೇಕು
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲ
ಚರಣದಿ ನೊಸಲಿಟ್ಟು ಸ್ಮರಿಸೋ ನೀ ಮನುಜ (೨)

ಸರಳ ಅತಿಸರಳ ನಿರಾಳ
ಅಂತಿಮವರಿಯದ ಅನಂತ ಹರಿಸ್ಮರಣೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೧೦.೨೦೧೩