Friday, September 30, 2011

Shri Krishnana Nooraru Geethegalu - 165

ದುರ್ಗಾ-ವಾಣಿ-ವರ್ಷಿಣಿ

ಸಕಲ ಸುಶೋಭಿತೆ ಸುರವಂದ್ಯೆ ವಿನುತೆ
ಶಂಕರಿ ಶಾಂಭವಿ ಸಿರಿವರದಾತೆ
ಶ್ರೀರುದ್ರಾತ್ಮಿಕೆ ಶ್ರೀಹರಿಯನುಜೆ
ಕರುಣದಿಂ ಪಾಲಿಸೆ ಶ್ರೀದುರ್ಗೆ ಮಾತೆ (೧)

ವಂದೇ ವಾಗ್ದೇವಿ ಶೃಂಗೇರಿಪುರವಾಸಿ
ವೀಣಾಪಾಣಿಯೆ ವೈಷ್ಣವಿಯೆ
ಮಯೂರವಾಹಿನಿ ಸುಜ್ಞಾನದಾಯಿನಿ
ಸುಜನರ ಪೊರೆಯೆ ಸರಸ್ವತಿಯೆ (೨)

ಶಂಖಚಕ್ರಗದಾ ಶಕ್ತಿಸ್ವರೂಪಿಣಿ
ದುರಿತಸಂಹಾರಿ ಸಂಪದವರ್ಷಿಣಿ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲ
ಶ್ರೀಪಾದಸೇವಿತೆ ಸಲಹಮ್ಮ ಲಕುಮಿ (೩)

     ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೯.೨೦೧೧

Wednesday, September 28, 2011

Shri Krishnana Nooraru Geethegalu - 164

ಮಾನಜನ ಮನದೇವ

ಸಲಹೊ ಸುಖದೊಳಗೆನ್ನ ಶ್ರೀಹರಿಯೆ
ಸಲಹಯ್ಯ ಸಲಹೆನ್ನ ಶುಭನಿಧಿಯೆ

ಕರೆತಂದವ ನೀನೊ ನೆಚ್ಚಿಬಂದವ ನಾನೊ
ಪೊರೆವುದೆನ್ನನು ದೇವ ನಿನ್ನ ಧರ್ಮ
ಜಗನೇಮಕ ನೀನೊ ತ್ರಿಜಗದೇವನೆ ಕೃಷ್ಣ
ಎನಗಾರೊ ನಿನ್ನನ್ಯವೆನುವ ಮರ್ಮ (೧)

ಮಾತೆ ಕೌಸಲ್ಯೆಯ ಮಡಿಲ ಮಮತೆಯ ಸುಖವ
ದ್ವಾಪರದೆ ದೇವಕಿಯ ಗರ್ಭದಾ ಸುಖವ
ನಂದಗೋಪಿಯ ತೋಳ ತೊಟ್ಟಿಲೊಳ ಅತಿಸುಖವ
ಉಂಡವನೆ ಸಲಹೆನ್ನ ಸೌಖ್ಯದೊಳು ಕೇಶವ (೨)

ತ್ರೇತೆಯೊಳು ಸುಜನರನು ಸಲಹಿದನೆ ರಾಮಯ್ಯ
ಗೋಕುಲದ ಮಾನಜನ ಮನದೇವ ಶ್ಯಾಮಯ್ಯ
ನರಕುಲವ ಧರಣಿಯೊಳು ಕರುಣದೊಳು ಕಾಯಯ್ಯ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲಯ್ಯ (೩)

ಸಲಹೊ ಸುಖದೊಳಗೆನ್ನ ಶ್ರೀಹರಿಯೆ
ಸಲಹಯ್ಯ ಸಲಹೆನ್ನ ಶುಭನಿಧಿಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೯.೨೦೧೧

Saturday, September 24, 2011

Shri Krishnana Nooraru Geethegalu - 163

ಕಾಯುವುದೊ ಕರುಣದೊಳು

ಕಾಯುವುದೊ ಕರುಣದೊಳು ಕಾಮನಯ್ಯನೆ ಎಮ್ಮ
ದಶದೊಳಗೆ ಧರಣಿಯನು ಸಲಹಿದನೆ ಕೃಷ್ಣ

ಕರಿಯದುವು ಆದಿಯೊಳು ಹರಿ ನೀನೆ ಗತಿಯೆನಲು
ಅರಿಯದೆ ಅಜಮಿಳನು ಹರಿ ಹರಿ ಹರಿಯೆನಲು
ಅಸುರಸುತ ಹರಿಯೆಂದು ಬಕುತಿಯೊಳು ಧ್ಯಾನಿಸಲು
ಆ ಕ್ಷಣವೇ ಅವತರಿಸಿ ಹರಿಸಿದನೆ ಕೃಷ್ಣ (೧)

ಪಾಂಡವರು ಧರ್ಮವನು ಗೆಲಿಸೊ ಶ್ರೀಹರಿಯೆನಲು
ದ್ರೌಪದಿಯು ಮಾನವದ ಕಾಯೊ ಕೃಷ್ಣಯೆನಲು
ಮಥುರೆಯೊಳು ಮಾನಜನ ಹರಿಯೆಂದು ಮೊರೆಯಿಡಲು
ಅವಸರಿಸಿ ಅವತರಿಸಿ ಹರಿಸಿದನೆ ಕೃಷ್ಣ (೨)

ತ್ರೇತೆಯೊಳು ಹನುಮಯ್ಯ ದ್ವಾಪರದೆ ಭೀಮಯ್ಯ
ನೆಚ್ಚಿದೊಳು ಕಲಿಯೊಳಗೆ ಶ್ರೀಮಧ್ವರಾಯ
ಪೊರೆದವನೆ ಜಗದೊಡೆಯ ಶ್ರೀನಿವಾಸ ವಿಠಲಯ್ಯ
ಮೊರೆಬಂದೆ ಶ್ರೀಪಾದ ಕಾಯೊ ಮಹನೀಯ (೩)

ಕಾಯುವುದೊ ಕರುಣದೊಳು ಕಾಮನಯ್ಯನೆ ಎಮ್ಮ
ದಶದೊಳಗೆ ಧರಣಿಯನು ಸಲಹಿದನೆ ಕೃಷ್ಣ

       ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ದಿನಾಂಕ ೨೪.೦೯.೨೦೧೧

Friday, September 23, 2011

Shri Krishnana Nooraru Geethegalu - 162

ರಂಗ ವಿಠಲ

ರಂಗ ರಂಗ ರಂಗ ವಿಠಲ
ಪಾಂಡುರಂಗ ರಂಗ ವಿಠಲ

ಎನ್ನಂತರಂಗ ಜೀವತರಂಗ
ಪಾಂಡುರಂಗ ರಂಗ ವಿಠಲ
ವೇದಾಂಗಾಂಗ ಸುಜನಸಂಗ
ಪಾಂಡುರಂಗ ರಂಗ ವಿಠಲ (೧)

ತ್ರೇತೆಯೊಳು ರಾಮರಂಗ
ದ್ವಾಪರದೆ ಶ್ಯಾಮರಂಗ
ಶ್ರೀನಿವಾಸ ವಿಠಲ ದಶದೊಳು
ಎಮ್ಮ ಕಾವ ಪಾಂಡುರಂಗ (೨)

ರಂಗ ರಂಗ ರಂಗ ವಿಠಲ
ಪಾಂಡುರಂಗ ರಂಗ ವಿಠಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೯.೨೦೧೧

Thursday, September 22, 2011

Shri Krishnana Nooraru Geethegalu - 161

ಗಜವದನಂ ವಂದೇ

ಗಜವದನಂ ವಂದೇ ಗೌರಿತನಯಂ
ಸುರಗುಣವಂದಿತ ನಿಟಿಲಾಕ್ಷನಂದಂ

ಮೊರಕರ್ಣಂ ವಂದೇ ಮೂಷಕವಾಹನಂ
ಮಂಗಳಮೂರುತಿ ಮುಕ್ತಿಪ್ರದಾಯಕಂ
ಭಾರತಲಿಪಿಕಾರಂ ಮುನಿವ್ಯಾಸಪ್ರೇಮಂ
ಪಾರ್ವತಿಸುತ ವಂದೇ ಓಂಕಾರರೂಪಂ (೧)

ಗಜವಕ್ರಂ ವಂದೇ ಗಾನವಿನೋದಂ
ಬಾಲಚಂದ್ರ ಶ್ರೀಸಿದ್ಧಿ ಪ್ರಮೋದಂ
ಶ್ರೀಶಿವ ಪುತ್ರಂ ಸ್ಕಂದಾಪೂರ್ವಜಂ
ಶುಭಗುಣ ವಂದೇ ಶ್ರೀಆದಿದೇವಂ (೨)

ವಿಶ್ವಮುಖಂ ವಂದೇ ವಿಘ್ನನಿವಾರಕಂ
ವಿದ್ಯಾವಾರಿಧಿ ಸಿರಿವರದಾಯಕಂ
ಶ್ರೀನಿವಾಸ ವಿಠಲಾದಿ ದೇವಗಣಪೂಜಿತಂ
ಮೋದಕಪ್ರಿಯ ವಂದೇ ಸಲಹೋ ಸುಮುಖಂ (೩)

ಗಜವದನಂ ವಂದೇ ಗೌರಿತನಯಂ
ಸುರಗುಣವಂದಿತ ನಿಟಿಲಾಕ್ಷನಂದಂ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೯.೨೦೧೧

Shri Krishnana Nooraru Geethegalu - 160

ಶ್ರೀಸಿಗಂದೂರೇಶ್ವರಿ

ವಂದೇ ಶುಭದಾಯಿನಿ ದೇವಿ
ಶ್ರೀಸಿಗಂದೂರೇಶ್ವರಿ ಶಂಕರಿ

ಸುಂದರವದನೆ ಕುಂಕುಮಚಂದನೆ
ಸ್ಥಿರಮಾಂಗಲ್ಯೆ ಮಂಗಳವರ್ಷಿಣಿ
ಭವಭಯಹರೆ ಶ್ರೀದುರಿತಸಂಹಾರಿಣಿ
ಆದಿಶಕ್ತಿಯೆ ಮೂಜಗಪಾಲಿನಿ (೧)

ಸಸ್ಯಶ್ಯಾಮಲೆ ಸಹ್ಯಾದ್ರಿಸ್ಥಿತೆ ದೇವಿ
ತುಂಗಾತಟ ಪುಣ್ಯೆ ಶೃಂಗನಿವಾಸಿನಿ
ಶರಣರ ಸುಜನರ ಸುಖದೊಳು ಪೊರೆಯಮ್ಮ
ಶ್ರೀನಿವಾಸ ವಿಠಲನ ವೈಕುಂಠವಾಸಿನಿ (೨)

ವಂದೇ ಶುಭದಾಯಿನಿ ದೇವಿ
ಶ್ರೀಸಿಗಂದೂರೇಶ್ವರಿ ಶಂಕರಿ

(ದಿನಾಂಕ ೨೧.೦೯.೨೦೧೧ರಂದು ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ, ಸಿಗಂದೂರು ಶ್ರೀಕ್ಷೇತ್ರದಲ್ಲಿ ರಚಿಸಿದ್ದು.)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ.

Saturday, September 17, 2011

Shri Krishnana Nooraru Geethegalu - 159


ಮೊರೆ ಕೇಳೊ ಮಾಧವ

ಮೊರೆ ಕೇಳೊ ಮಾಧವ ಈ ರಾಧೆ ವಿರಹದಾ

ಸುಡುವೆನ್ನ ಎದೆಗೊಲವ ಮುರಳಿಯನು ಕೃಷ್ಣ

ತನುಮನಧನ ನೀನೊ ಮದನಮೋಹನ ಕೃಷ್ಣ

ಶ್ರೀನಿವಾಸ ವಿಠಲನೆ ಪ್ರೇಮಪಾಲಕ ಕೃಷ್ಣ

(ಶ್ರೀಮತಿ ಸುಲೇಖಾಭಟ್ ಹಾಡಿದ ರಾಗ ಪುರಿಯಾ ಕಲ್ಯಾಣ್ ಸ್ಫೂರ್ತಿಯಿಂದ)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೯.೨೦೧೧

Shri Krishnana Nooraru Geethegalu - 158


ಧರಣಿ ಧರ್ಮಸಾರಥಿ

ರಾಮರಾಮರಾಮನೆನಿರೊ ರಾಮನಾಮವ ಪಾಡಿರೊ
ಅಳಿದು ಇಹದ ಕ್ಷಾಮ ಪೊರೆವ ಸುಗುಣ ಪ್ರೇಮಧಾಮ

ಕೌಸಲ್ಯೆಯ ಕಂದನಿವನೊ ಕರುಣಾಂಬುಧಿ ಮೂರುತಿ
ರಘುವಂಶಜ ರಾಮಚಂದಿರ ಧರಣಿ ಧರ್ಮಸಾರಥಿ
ಉತ್ತಮರೊಳು ಪುರುಷೋತ್ತಮ ರಾಮನಿವನ ಕಿರುತಿ
ಹಾಡಿಪೊಗಳಿರೊ ಆದಿದೇವನ ಒಲಿವನೆಮ್ಮ ಮಾರುತಿ (೧)

ದ್ವಾಪರದೊಳು ಗೋಪಾಲನು ಗೋಕುಲವನು ಕಾದನು
ಯದುವಂಶಜ ವಾಸುದೇವ ನಂದಗೋಪಿಯ ಕಂದನು
ದುರಿತ ಸಂಹಾರ ಕೃಷ್ಣ ಶರಣ ಸುಜನರ ಕಾವನು
ಹಾಡಿಪೊಗಳಿರೊ ರಾಧೆಶ್ಯಾಮನ ಒಲಿವ ಭೀಮರಾಯನು (೨)

ಕಲಿಯೊಳಗೆ ನಾರಾಯಣ ನರರ ಪೊರೆವ ದೇವನು
ವ್ಯಾಸವಾದಿರಾಯ ರೂಪದಿ ಧರೆಯ ಸಲಹುತಿರುವನು
ಹರಿ-ವಾಯು-ಗುರುವೆಮಗೆ ಶ್ರೀನಿವಾಸ ವಿಠಲನು
ಹಾಡಿಪೊಗಳಿರೊ ದಶದದೇವನ ಒಲಿವ ಮಧ್ವರಾಯನು (೩)

ರಾಮರಾಮರಾಮನೆನಿರೊ ರಾಮನಾಮವ ಪಾಡಿರೊ
ಅಳಿದು ಇಹದ ಕ್ಷಾಮ ಪೊರೆವ ಸುಗುಣ ಪ್ರೇಮಧಾಮ

     ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೯.೨೦೧೧

Thursday, September 15, 2011

Shri Krishnana Nooraru Geethegalu - 157

ನಾ ನೀನಾಗುವ

ನೀ ಎಮ್ಮವನೊ ನಾ ನಿನ್ನವನೊ
ನಾ ನೀನಾಗುವ ಪರಿಯೆನಿತೊ ಕೃಷ್ಣ

ಎನ್ನೊಳ ನಾನು ನಿನ್ನೊಳು ಬಾಗುವ
ನಾ ನೀನಾಗುವ ಪರಿಯೆನಿತೊ ಕೃಷ್ಣ

ನಾನು ನಗಣ್ಯನಾಗಿ ನೀನಾಗ್ರಗುಣನಾಗಿ
ನಾ ನೀನಾಗುವ ಪರಿಯೆನಿತೊ ಕೃಷ್ಣ

ನಾನು ನಶ್ವರವಾಗಿ ನೀ ಈಶ್ವರನಾಗಿ
ನಾ ನೀನಾಗುವ ಪರಿಯೆನಿತೊ ಕೃಷ್ಣ

ಶ್ರೀನಿವಾಸ ವಿಠಲನೆ ನೀ ನಾ ಎಲ್ಲವಾಗಿ
ಶ್ರೀಪಾದಸೇವೆಯ ಬಗೆಯೆನಿತೊ ಕೃಷ್ಣ

ನೀ ಎಮ್ಮವನೊ ನಾ ನಿನ್ನವನೊ
ನಾ ನೀನಾಗುವ ಪರಿಯೆನಿತೊ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೯.೨೦೧೧

Sunday, September 11, 2011

Shri Krishnana Nooraru Geethegalu - 156

ಜಗಕಾರುಣ ಕರುಣ

ಕಂಡಿರೇನಯ್ಯ ಎಮ್ಮ ಜಗವಂದ್ಯನ
ಜಗಕಾರಣ ಕರುಣ ಶ್ರೀಕೃಷ್ಣನ

ಜಗರೂಪನ ಜಗದಾದಿ ರೂಪನ
ರೂಪರೂಪದಿ ಧರೆಯ ಪೊರೆದವನ
ಮತ್ಸ್ಯವರಾಹಕೂರ್ಮಾದಿ ದಶದೊಲು
ಶರಣಾರ್ಥಿ ಸುಜನರ ತಲೆಕಾದನ (೧)

ರಾಮನಾದನ ಶ್ರೀ ಶ್ಯಾಮನಾದನ
ತ್ರೇತೆದ್ವಾಪರದೊಳು ಕ್ಷೇಮನಾದನ
ನರಕೇಸರಿಯಾಗಿ ದುರುಳನ ಬಗೆದನ
ಗೋವಿಂದ ಕಾದನ ಪ್ರಹ್ಲಾದನ (೨)

ವಾಮನನ ಶ್ರೀಬಲಿ ಸಂಹಾರನ
ಕ್ಷತ್ರಿಯಕುಲಹರ ಪರಶುಧರನ
ಹಯಮುಖರಾಯ ಎಮ್ಮ ಶ್ರೀನಿವಾಸ ವಿಠಲ
ಕಲಿಯೊಳು ಸಲಹೊ ನಾರಾಯಣ (೩)

ಕಂಡಿರೇನಯ್ಯ ಎಮ್ಮ ಜಗವಂದ್ಯನ
ಜಗಕಾರಣ ಕರುಣ ಶ್ರೀಕೃಷ್ಣನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೯.೨೦೧೧

Thursday, September 8, 2011

Shri Krishnana Nooraru Geethegalu - 155

ಪಾಡುವೆನೊ ಪವನಸುತ

ಪಾಡುವೆನೊ ಪವನಸುತ ಪಾಲಿಪುದು ಅನವರತ
ಹರಿವಾಯುಗುರುವೆನಗೆ ನೀನೆ ದೇವ

ಎನಿತು ಜನುಮಗಳರಿಯೆ ಎನಿತು ಯೋನಿಗಳರಿಯೆ
ನೀ ಜೀವದೊಡೆಯನು ಬೊಂಬೆ ನಾನು
ಅರಿಯದೆ ಎನ್ನೆಡೆಯ ಅನ್ಯಾಂಧವನಳಿದು
ಸುಖದಿ ಪೊರೆಯುವುದೆನ್ನ ತಂದೆ ನೀನು (೧)

ತ್ರೇತೆಯೊಳು ಜನಕಸುತೆ ಶೋಕ ಪರಿಹರಿಸೆ
ದಶಶಿರನ ದುರುಮುರಿದ ಹನುಮದೇವ
ದ್ವಾಪರದೆ ಕುರುಸುತನ ಅಸುರತೊಡೆ ಹರಿದನೆ
ಶ್ರೀಧರ್ಮನನುಜ ನಮೋ ಭೀಮದೇವ (೨)

ಕಲಿಯೊಳಗೆ ಶ್ರೀಮಧ್ವ ರಾಯರೂಪದೊಲು
ಧರಣಿ ಧರ್ಮವ ಪೊರೆದ ರಾಯರಾಯ
ಶ್ರೀನಿವಾಸ ವಿಠಲನ ಶ್ರೀಪಾದ ಸೇವೆಯನು
ಪಾಲಿಪನೆ ಕರುಣದೊಳು ಸಲಹೊ ಜೀಯ (೩)

ಪಾಡುವೆನೊ ಪವನಸುತ ಪಾಲಿಪುದು ಅನವರತ
ಹರಿವಾಯುಗುರುವೆನಗೆ ನೀನೆ ದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೯.೨೦೧೧

Wednesday, September 7, 2011

Shri Krishnana Nooraru Geethegalu - 154

ಕಾಯುವುದು ಕರುಣದೊಳು

ಕಾಯುವುದು ಕರುಣದೊಳು ಕೇಸರಿಸುತನೆಮ್ಮ
ಅಂಜನಾಸಂಭೂತ ಶ್ರೀಆಂಜನೇಯ

ರಾಘವ ದೂತನೆ ಶ್ರೀರಾಮ ಬಕುತ
ಧೀಮಂತ ಗುಣವಂತ ಶ್ರೀಹನುಮಂತ
ಸಿರಿಹೃದಯಸೇವೆಯಿಂ ಪುಣ್ಯ ಶ್ರೀಚರಣಕೆ
ಸೇತುಬಂಧವ ಬೆಸೆದ ಪಾವನ ಬಲವಂತ (೧)

ಜಾಂಬವಪ್ರೀತನೆ ಜಾನಕೀ ಶೋಕಹರ
ವಾನರ ಕುಲದೀಪ ದಶಶಿರ ಸಂಹಾರ
ಸಂಕಟಮೋಚಕನೆ ಸುಚರಿತ ಸಂಜೀವ
ಪವನಪುತ್ರನೆ ಶ್ರೀಮಾರುತಿ ದೇವದೇವ (೨)

ಪಂಚವದನನೆ ಅರ್ಜುನ ಧ್ವಜವಾಸ
ದ್ವಾಪರ ಭೀಮಯ್ಯ ಕೃಷ್ಣವಿಶೇಷ
ಎಮ್ಮಮ್ಮ ಲಕುಮಿಯ ತ್ರೇತಾ ಅಭಯನೆ
ಶ್ರೀನಿವಾಸ ವಿಠಲನ ರಾಮರೂಪದಿ ಭಜಿಪ (೩)

ಕಾಯುವುದು ಕರುಣದೊಳು ಕೇಸರಿಸುತನೆಮ್ಮ
ಅಂಜನಾಸಂಭೂತ ಶ್ರೀಆಂಜನೇಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೧

Thursday, September 1, 2011

Shri Krishnana Nooraru Geethegalu - 153

ಜೀವ ಸಂಜೀವ

ಅಂಜನಾಸುತ ವಂದೇ ಆಂಜನೇಯ
ರಾಮಸೇವಕ ಶರಣು ಕಾಯೋ ಮಹನೀಯ

ಬಕುತಾಭರಣನೊ ಶ್ರೀರಾಮ ಮುಖ್ಯಪ್ರಾಣ
ರಘುಕುಲಜ ಲಕ್ಷ್ಮಣಗೆ ಜೀವ ಸಂಜೀವ
ವೀರಕೇಸರಿಪುತ್ರ ವಿಭೀಷಣ ಮಿತ್ರ
ಲೋಕಪೂಜಿತ ಹನುಮ ಶ್ರೀರಾಮದೂತ (೧)

ಆ ಶೋಕೆ ಜಾನಕಿಗೆ ಅಭಯಮುದ್ರೆಯನಿತ್ತು
ಅಸುರನಾ ಲಂಕೆಯನು ದಹಿಸಿದವನೆ
ಪಾಪಹಾರಕದೇವ ಪವನಪುತ್ರನೆ ಹನುಮ
ಭಕ್ತವತ್ಸಲ ಕಾಯೋ ದಶಬಾಹವೆ (೨)

ರತ್ನಕುಂಡಲಧರಿತ ರುದ್ರವೀರ್ಯನೆ ದೇವ
ದೀನಬಂಧವೆ ಶರಣು ದುರಿತಾಂತಕ
ಶ್ರೀನಿವಾಸ ವಿಠಲನ್ನ ಆದಿರೂಪದೊಳುಂಡ
ರಾಮಪಾದನೆ ಸಲಹೊ ವರದಾಯಕ (೩)

ಅಂಜನಾಸುತ ವಂದೇ ಆಂಜನೇಯ
ರಾಮಸೇವಕ ಶರಣು ಕಾಯೋ ಮಹನೀಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೯.೨೦೧೧