Monday, May 30, 2011

Shri Krishnana Nooraru Geethegalu - 121

ಶ್ರೀಪಾದಸೇವೆಯೆ

ಅರಸುತನವಿಲ್ಲೆನಗೆ ಆಸ್ಥಾನ ದೊರೆತನವು
ಅಂತಃಪುರ ಮೊದಲಿಲ್ಲ ಅರಸಿ ಸಖಿಬಳಗ
ಮಂತ್ರಿಮಾಗಧರಿಲ್ಲ ಸೆಣೆವ ಸೈನಿಕರಿಲ್ಲ
ಕಪ್ಪಕಾಣಿಕೆಯೊಪ್ಪಿಸುವ ಅಂಗರಾಜರು
ಒಡ್ಡೋಲಗವಿಲ್ಲ ಪರಾಕು ಪರಿಚಾರಕರಿಲ್ಲ
ಗಾಯಕ ನೃತ್ಯಕರಿಲ್ಲ ಮೇಣ್ ನೆಲಜಲದ
ಧಿಕಾರವೆನಗಿಲ್ಲವೊ ಹರಿಯೆ

ವಜ್ರವೈಢೂರ್ಯಗಳಿಲ್ಲ ನವಮುಕುಟ ಮಣಿಮಾಲೆ
ಇಲ್ಲವೊ ವಡವೆವಡ್ಯಾಣನವರತ್ನಾಭರಣ ಕಿರೀಟವು
ಗಜಾಶ್ವದಕ್ಷೋಯಿಣಿಯಿಲ್ಲ ಖಡ್ಗ ಗುರಾಣಿಗಳಿಲ್ಲ
ಕೋಟೆಕೊತ್ತಲವ ವಿಜಯಿಸುವ ಹುರಿಮೀಸೆ ಗುರಿಯಾಳು

ಶ್ರೀಪಾದ ಸೇವೆಯೆ ಅರಸುತನವೆನಗೆ
ಪರಮುಕುತಿ ಆಸ್ಥಾನ ದೊರೆತನವು
ನಿನ್ನ ವೈಕುಂಠವೆ ಅಂತಃಪುರವೆನಗೆ
ಹರಿದಾಸ ಸಖ್ಯವೆ ಅರಸಿ ಸಖಿಬಳಗ
ಮಂತ್ರಿಮಾಗಧರು ಸುಜನ ಸೈನಿಕರು
ಅವರಿಡುವನ್ನವೆ ಕಪ್ಪಕಾಣಿಕೆಯೆನಗೆ
ನಿನ್ನ ಒಗ್ಗೂಡಿ ಪಾಡುವುದೆ ಒಡ್ಡೋಲಗ
ಪರಾಕು ಸೇವೆಯದು ಪರಿಚಾರಿಕ ಧರ್ಮ ಗಾನನಾಟ್ಯವೆಲ್ಲ

ನಿನ್ನ ಶ್ರೀನಾಮವದು ವಜ್ರವೈಢೂರ್ಯವು
ಧರಿಸಿದರಂತರಂಗದಿ ನವಮುಕುಟಮಣಿಮಾಲೆ ವಡವೆವಡ್ಯಾಣ
ಶಿರಬಾಗಿದೊಡೆ ನಿನಗೆ ನವರತ್ನಾಭರಣ ಕಿರೀಟ
ನಿನ್ನ ಶ್ರೀರಕ್ಷೆಯೆ ಗಜಾಶ್ವಸೇನೆ ಖಡ್ಗ ಗುರಾಣಿ
ಕೋಟೆಕೊತ್ತಲವ ಜಯಿಸುವ ಹುರಿಮೀಸೆ ಗುರಿಯಾಳು

ಇಂತಿರ್ಪ ಶ್ರೀನಿವಾಸ ವಿಠಲನ ಅಡಿಯಾಳು ನಾನೆನಲು
ಅದಾವ ಅರಸಗೆ ಕೀಳು ಕಾಯೊ ಮೂಜಗದಯ್ಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೫.೨೦೧೧

Sunday, May 29, 2011

Shri Krishnana Nooraru Geethegalu - 120

ರಂಗ ಶ್ರೀರಂಗ

ರಂಗ ಶ್ರೀರಂಗ ವೇದಾಂಗಾಂಗ
ನಿನ್ನ ಸಂಗದಿ ಸಲಹೊ ಶ್ರೀಹರಿ ಪಾಂಡುರಂಗ

ಕೇಸರಿಸುತನ ಶಬರಿ ಅಹಲ್ಯೆಯ
ಸಲಹಿದಂದದಿ ಸಲಹೊ ತ್ರೇತೆಯ ರಾಮಯ್ಯ
ಅಸುರನನುಜಗೆ ಅರಸು ಪಟ್ಟಕಟ್ಟಿದ ದೊರೆಯೆ
ಶ್ರೀಪಾದಸೇವೆಯನು ಎನಗಿತ್ತು ಸಲಹೊ

ಆದಿಯೊಳು ಅಜಮಿಳನು ನಾರಾಯಣನೆನಲು
ಆ ಕ್ಷಣದಿ ಕಂಡವನೆ ದೇವದೇವ
ಕರಿಯ ಕುಚೇಲರ ಕರುಣದಿಂ ಕಾಯ್ದವನೆ
ಶ್ರೀಚರಣಸೇವೆಯನು ಎನಗಿತ್ತು ಸಲಹೊ

ಮೂಜಗದೊಡಯನೆ ನೀನೆನ್ನಯ ಜಗವೊ
ನಿನ್ನ ಶ್ರೀನಾಮನುಡಿ ಜೀವಾಮೃತ
ಭಕ್ತವತ್ಸಲ ಸಲಹೊ ಶ್ರೀನಿವಾಸ ವಿಠಲಯ್ಯ
ಕಲಿಯೊಳಿಹ ಜೀವರನು ಬಿಡದೆ ಸತತ

ರಂಗ ಶ್ರೀರಂಗ ವೇದಾಂಗಾಂಗ
ನಿನ್ನ ಸಂಗದಿ ಸಲಹೊ ಶ್ರೀಹರಿ ಪಾಂಡುರಂಗ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೫.೨೦೧೧

Saturday, May 28, 2011

Shri Krishnana Nooraru Geethegalu - 119

ಹಯಗ್ರೀವಂ ಮಹಾವಿಷ್ಣುಂ

ನಮೋ ದೇವಂ ಹಯಗ್ರೀವಂ ಸಕಲ ವಿದ್ಯಾಧೀಶ್ವರಂ
ಸ್ಮರೇನಿತ್ಯಂ ಮಹಾವಿಷ್ಣುಂ ಸರ್ವಮಂಗಳದಾಯಕಂ

ತುರಂಗವದನಂ ಮಹಾಮಂತ್ರಶರೀರಂ ಲಕ್ಷ್ಮೀಸಹಿತಂ
ಶ್ವೇತಪದ್ಮಾಸ್ಥಿತಂ ಶ್ರೀದೇವಂ ಶ್ವೇತಧರಂ ಶುಭ್ರಂ

ಸತ್ವಮೂರ್ತಿಂ ದಿವ್ಯತೇಜಂ ಬ್ರಹ್ಮಗರ್ವಶಮನಂ
ಮಧುಕೈಟಭಾಸುರಾಂತಕಂ ಚತುರ್ವೇದ ಸಂರಕ್ಷಕಂ

ನೀಳನಾಸಿಕಂ ಹಯಶಿರಂ ಸ್ಫಟಿಕಾಕೃತಿಂ ಲೋಕಕರ್ಣಂ
ರವಿಕಿರಣಕೇಶಂ ಭೂನೊಸಲನ್ ಸೋಮಸೂರ್ಯಾಕ್ಷಂ

ಸಂಧ್ಯಾದೇವಿ ನಾಸಿಕದೊರಳನ್ ಪಿತೃದೇವತಾದಂತಂ
ಗೋಬ್ರಹ್ಮಲೋಕಾಧರಂ ಸಾಮವೇದಸ್ವರವುದ್ಗೀತಂ

ನಮೋ ದೇವಂ ಹಯಗ್ರೀವಂ ಶ್ರೀನಿವಾಸ ವಿಠಲಂ
ಭಜೇ ನಿತ್ಯಂ ಕಾವಂ ದಶರೂಪಂ ಮೂಜಗಪಾಲಂ

(ದಿನಾಂಕ ೨೮.೦೫.೨೦೧೧ರಂದು ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಪರಕಾಲಮಠದ ಶ್ರೀಲಕ್ಷ್ಮೀಹಯಗ್ರೀವ ದೇವಳದಲ್ಲಿ ಭಗವಂತನ ದರ್ಶನದ ನಂತರದ ರಚಿಸಿದ್ದು.)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೫.೨೦೧೧

Friday, May 27, 2011

Shri Krishnana Nooraru Geethegalu - 118

ನೀನಲ್ಲವೇ ಕೃಷ್ಣ

ಏನ ಕೇಳಲೊ ಹರಿಯೆ ಎಲ್ಲವೂ ನಿನ್ನದೇ
ಎನ್ನ ಕರೆತಂದವನೂ ನೀನಲ್ಲವೇ ಕೃಷ್ಣ

ಅಣುವಿನೀ ದೇಹದೊಳು ಗುಣಾವಗುಣ ಗೊಂಬೆ
ಆಡಿಸುವ ಸೂತ್ರಕನು ನೀನಲ್ಲವೆ
ಮತ್ತಾರು ಮತ್ತರನು ಅಂಕೆಯಿಲ್ಲದೆ ಬಿಟ್ಟು
ಮಾಯೆಯಾಟದೊಳಿಹನು ನೀನಲ್ಲವೆ (೧)

ತಲೆಗುಣಿಸಿದರಸರು ಧರೆಯಾಳುವೆವೆಂದು
ಆರ್ಭಟಿಸೆ ನಕ್ಕವನು ನೀನಲ್ಲವೆ
ತೊಡೆಮುರಿದ ಕೌರವನು ದೈನ್ಯನಾಗಿರಲಾಗ
ಧರ್ಮವನು ಗೆಲಿಸಿದನು ನೀನಲ್ಲವೆ (೨)

ಪಂಚಭೂತಾಬ್ಧಿಯ ಸ್ಥಿತಿಗತಿಲಯದೊಳಗೆ
ಬಹಿರಾಂತರ ಶಕ್ತಿ ನೀನಲ್ಲವೆ
ನೀನೆನ್ನ ಗತಿಯೆನಲು ಬಿಡದೇ ಸಲಹುವ ದೊರೆಯೆ
ಶ್ರೀನಿವಾಸ ವಿಠಲನು ನೀನಲ್ಲವೆ (೩)

ಏನ ಕೇಳಲೊ ಹರಿಯೆ ಎಲ್ಲವೂ ನಿನ್ನದೇ
ಎನ್ನ ಕರೆತಂದವನೂ ನೀನಲ್ಲವೇ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೫.೨೦೧೧

Thursday, May 26, 2011

Shri Krishnana Nooraru Geethegalu - 117

ಬಾರಮ್ಮ ಸಿರಿಲಕುಮಿ

ಬಾರಮ್ಮ ಸಿರಿಲಕುಮಿ ಬಾರೆಮ್ಮ ಮನೆಗೆ
ಪನ್ನಗಶಯನ ಶ್ರೀವೈಕುಂಠಪತಿಯೊಡನೆ

ಸರ್ವಮಂಗಳೆ ದೇವಿ ಚಂದಿರವದನೆಯೆ
ಶಂಖ ಚಕ್ರ ಗದಾ ಪುಣ್ಯಹಸ್ತೆ
ನವರತ್ನಾಭರಣೆ ನಯನಮನೋಹರಿ
ನರಹರಿಯೊಡ ನಾಚಿ ನಲಿಯುತಲಿ (೧)

ಮಂಗಳ ಮಂಟಪದಿ ಬಿಲ್ವದಲಂಕಾರ
ಜಾಜಿ ಮಲ್ಲಿಗೆ ಪದ್ಮ ಮೊದಲಿಡುವೆ
ಅರಿಶಿಣ ಕುಂಕುಮ ಕಣ ಕಾಣಿಕೆಗಳ
ಶ್ರೀಹರಿಯೊಡತಿಯೆ ನಿನಗಿಡುವೆ (೨)

ಶ್ರೀಪಾದನೊಡನೆ ಸಿರಿಪಾದದೊಡತಿಯೆ
ಹೆಜ್ಜೆ ಬಲದೆಜ್ಜೆಯಿಟ್ಟು ನೀ ಬಾರೆ
ಶ್ರೀನಿವಾಸ ವಿಠಲನ ಶ್ರೀಪಾದ ಸೇವಕಿಯೆ
ಮೂಜಗದೊಡೆಯನ ಕರೆ ತಾರೆ (೩)

ಬಾರಮ್ಮ ಸಿರಿಲಕುಮಿ ಬಾರೆಮ್ಮ ಮನೆಗೆ
ಪನ್ನಗಶಯನ ಶ್ರೀವೈಕುಂಠಪತಿಯೊಡನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೫.೨೦೧೧

Shri Krishnana Nooraru Geethegalu - 116

ಯಾಚಕ ನಾನೊ

ಯಾಚಕ ನಾನೊ ಹರಿ ನಿನ್ನ ಮುಂದೆ
ಪ್ರದಾಯಕ ನೀನೊ ಶ್ರೀಕೃಷ್ಣ ತಂದೆ

ಆದಿಮೂಲದೊಳು ಜಲರೂಪದಿ ಸಂದೆ
ಕೂರ್ಮವರಾಹನರಸಿಂಹ ರೂಪಿಂದೆ
ಬಲಿಯ ನೆತ್ತಿಯ ಮೆಟ್ಟಿ ಕಶ್ಯಪನ ಕೊಂದೆ
ಭಾರ್ಗವ ಬಲರಾಮ ಲವಕುಶ ತಂದೆ (೧)

ಸುಜನರ ಸಲಹಲು ದಶರೂಪದಿ ಬಂದೆ
ಪರಶುರಾಮ ಶ್ರೀ ಮದನನ ತಂದೆ
ಶ್ರೀಪಾದದೊಡೆಯನೆ ಶ್ರೀನಿವಾಸ ವಿಠಲ
ಕಾಯೊ ಸುಖದೊಳು ಎಮ್ಮನು ಮುಂದೆ (೨)

ಯಾಚಕ ನಾನೊ ಹರಿ ನಿನ್ನ ಮುಂದೆ
ಪ್ರದಾಯಕ ನೀನೊ ಶ್ರೀಕೃಷ್ಣ ತಂದೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೫.೨೦೧೧

Shri Krishnana Nooraru Geethegalu - 115

ರಾಧೆ ಮಾಧವ ಚೆಲುವ

ಗೋವಿಂದ ಜಯಜಯ ಗೋವಿಂದ ಕೃಷ್ಣ
ರಾಧೆ ಮಾಧವ ಚೆಲುವ ಜಯಜಯ ಕೃಷ್ಣ

ಯದುವಂಶಕುಲಜಶ್ರೀ ಗೋವಿಂದ ಕೃಷ್ಣ
ವಸುದೇವಕಂದನೆ ಗೋವಿಂದ ಕೃಷ್ಣ
ದೇವಕಿಯರವಿಂದ ಗೋವಿಂದ ಕೃಷ್ಣ
ಯಶೋದೆಯಾನಂದ ಗೋವಿಂದ ಕೃಷ್ಣ (೧)

ಸೆರೆಯೊಳು ಉದಿಸಿದ ಗೋವಿಂದ ಕೃಷ್ಣ
ಗೋಕುಲದಿ ನೆಲೆಸಿದ ಗೋವಿಂದ ಕೃಷ್ಣ
ಭಾಮೆಯ ಮನಚೋರ ಗೋವಿಂದ ಕೃಷ್ಣ
ಗೋಪಜನ ಪ್ರಿಯದೇವ ಗೋವಿಂದ ಕೃಷ್ಣ (೨)

ದುರುಳರ ಮಡುಹಿದ ಗೋವಿಂದ ಕೃಷ್ಣ
ಕುರುಜನ ಕೆಡುಹಿದ ಗೋವಿಂದ ಕೃಷ್ಣ
ಸುಜನರ ಪೊರೆವ ಶ್ರೀಗೋವಿಂದ ಕೃಷ್ಣ
ಪಾಂಡವಪ್ರಿಯನೆಮ್ಮ ಗೋವಿಂದ ಕೃಷ್ಣ (೩)

ಬಕುತಿಗೆ ಒಲಿವನೊ ಗೋವಿಂದ ಕೃಷ್ಣ
ಯುಕುತಿಲಿ ಸಲಹುವ ಗೋವಿಂದ ಕೃಷ್ಣ
ಶ್ರೀನಿವಾಸ ವಿಠಲನೊ ಗೋವಿಂದ ಕೃಷ್ಣ
ವೈಕುಂಠಪತಿಯೆಮ್ಮ ಗೋವಿಂದ ಕೃಷ್ಣ (೪)

ಗೋವಿಂದ ಜಯಜಯ ಗೋವಿಂದ ಕೃಷ್ಣ
ರಾಧೆ ಮಾಧವ ಚೆಲುವ ಜಯಜಯ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೫.೨೦೧೧

Wednesday, May 25, 2011

Shri Krishnana Nooraru Geethegalu - 114

ಸರಸಿ ಗೊಲ್ಲ

ಜಯಜಯ ವನಮಾಲಿ ಶ್ರೀಹರಿ ಜಯಜಯ ವನಮಾಲಿ
ಗೋವರ್ಧನಧಾರಿ ಕೃಷ್ಣ ಮುರಾರಿ

ನೊಸಲ ಚಂದನ ತಿಲಕ ನಯನ ತೀಡಿದ ಕಪ್ಪು
ಹವಳರೇಖೆಯ ಚಿತ್ರ ತುಟಿ ಕೆಂಪು
ಸಂಜೆ ಸೂರ್ಯನ ಗಲ್ಲ ನಯನದಿ ನಗೊ ನಲ್ಲ
ರಾಧೆ ಸಂಗದಿಯೆಮ್ಮ ಸರಸಿ ಗೊಲ್ಲ (೧)

ಶಂಖ ಚಕ್ರ ಗದಾ ಮಕರಕುಂಡಲಧರಿತ
ನವರತ್ನಾಭರಣ ಕೌಸ್ತುಭನು
ಕೇಯೂರನು ಕೃಷ್ಣ ಶ್ರೀತುಳಸಿ ಪೂಜಿತನು
ಸುಂದರ ಶ್ಯಾಮಲ ಗೋಕುಲನು (೨)

ದಶರಥಸುತನು ಧರೆಯ ಕಾಯ್ದವನು
ದ್ವಾರಕಾ ಗೋವಿಂದ ಗೋಪಾಲನು
ಕಲಿಯೊಳಗೆಮ್ಮ ಶ್ರೀನಿವಾಸ ವಿಠಲಯ್ಯ
ನಾರಾಯಣನೆನಲು ಸಲಹುವನು (೩)

ಜಯಜಯ ವನಮಾಲಿ ಶ್ರೀಹರಿ ಜಯಜಯ ವನಮಾಲಿ
ಗೋವರ್ಧನಧಾರಿ ಕೃಷ್ಣ ಮುರಾರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೫.೨೦೧೧

Tuesday, May 24, 2011

Shri Krishnana Nooraru Geethegalu - 113

ವೇಂಕಟನೊ ಹರಿ

ವೇಂಕಟನೊ ಹರಿ ವೇಂಕಟನೊ ಕೃಷ್ಣ
ಸುಜನರ ಸಂಕಟ ಕಳೆಯುವ ನಿಜನೆಂಟ

ಮಥುರೆಯ ಸೆರೆಯೊಳು ಪುಟ್ಟಿದನೊ ಹರಿ
ಗೋಕುಲ ಗೊಲ್ಲರನೊಪ್ಪಿದನೊ
ದುರುಳರ ತಲೆ ಕುಟ್ಟಿ ದುರಿತದಯೆದೆ ಮೆಟ್ಟಿ
ಧರಣಿ ಧರ್ಮವ ಕಾಯ್ದ ಗೋವಿಂದನೊ (೧)

ಜಲದಾದಿರೂಪನೊ ಅವತಾರಿ ಶ್ರೀಹರಿ
ದಶರೂಪದಿ ಜಗವ ಕಟ್ಟಿದನೊ
ಶರಣಯ್ಯ ಸಲಹೆನಲು ಕರಿಯು ಕುಚೇಲರು
ಕರುಣೆಯಿಂದಲಿ ಕಾಯ್ದ ಕೃಷ್ಣಯ್ಯನೊ (೨)

ಪರಮಾತ್ಮ ಪೊರೆಯೆನಲು ಭಕ್ತವತ್ಸಲ ಹರಿ
ಧರ್ಮದ ಪಾಂಡವಗೊಲಿದವನೊ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲ
ನೆಚ್ಚಿದ ನರರನು ಸಲಹುವನೊ (೩)

ವೇಂಕಟನೊ ಹರಿ ವೇಂಕಟನೊ ಕೃಷ್ಣ
ಸುಜನರ ಸಂಕಟ ಕಳೆಯುವ ನಿಜನೆಂಟ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೫.೨೦೧೧

Monday, May 23, 2011

Shri Krishnana Nooraru Geethegalu - 112

ಹರಿ ನೀನು

ಹರಿ ನೀನು ಹಗಲಯ್ಯ ಎನ್ನಿರುಳಿನೊಳಗಿಗೆ
ಅರಿವಿನಣತೆಯ ಬೆಳಗೊ ಆದಿದೇವ

ಹರಿ ನೀನು ಮಾಮರವು ನಾ ನಿನ್ನ ಕೋಕಿಲವೊ
ದಿವ್ಯನಾಮವ ನುಡಿಸೊ ದೇವದೇವ

ಹರಿ ನೀನು ಹಸಿರಯ್ಯ ಕೊನರದ ಕೊರಡೊ ನಾ
ಚಿಗುರ ಚಿತ್ರವ ಬಿಡಿಸೊ ವಾಸುದೇವ

ಹರಿ ನೀನು ಹರಿವ ನದಿ ನಾ ಬರಿಯ ಪಾತ್ರವೊ
ಒರತೆ ಇಂಗದೆ ಸಲಹೊ ದೇವದೇವ

ಹರಿ ನೀನು ದೀಪ್ತಿಯೊ ನಾನುರಿವ ದೀಪವೊ
ಉಣಿಸಿ ತೈಲವ ಪೊರೆಯೊ ಶ್ಯಾಮದೇವ

ಹರಿ ನೀನು ಧರೆ ಕಾಯ್ವ ಶ್ರೀನಿವಾಸ ವಿಠಲನೊ
ಸುಜನರಾತ್ಮದಿ ನೆಲೆಸೊ ದೇವದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೫.೨೦೧೧

Saturday, May 21, 2011

Shri Krishnana Nooraru Geethegalu - 111

ಪ್ರೀತಿ ನೆನಪಿನ ವೀಣೆ

ಜನ್ಮಜನ್ಮಾಂತರದ ಸ್ಮೃತಿಗಾನ ಮಿಡಿಯುತಿದೆ
ಪ್ರೀತಿ ನೆನಪಿನ ವೀಣೆ ಆಲಿಸೊ ಕೃಷ್ಣ

ಪ್ರಾಣದೇವನೆ ಸಖ ಪುರುಷೋತ್ತಮ ನಿನಗೆ
ಜಯಮಾಲೆ ತೊಡಿಸಿದಾ ಜಾನಕಿಯೊ ನಾ
ಶ್ರೀಪಾದಸೇವೆಯನು ವೈಕುಂಠದೊಳು ಹರಿಯೆ
ದಾಸಿಯಂದದಿಗೈದ ಲಕುಮಿಯೊ ನಾ (೧)

ಗೋಕುಲದ ಗೆಳೆತನದ ಸಂಭ್ರಮದಾ ಕ್ಷಣಗಳನು
ಮುರಳಿಮೋಹನ ಕೃಷ್ಣ ಮರೆತೆಯೆನೊ
ನಿನ್ನ ಪ್ರೀತಿಯ ಹಸಿರು ಎನ್ನ ಯೌವನದಲ್ಲಿ
ಚಿಗುರಿ ನಿಂತಿಹ ಪರಿಯ ಬಲ್ಲೆಯೆನೊ (೨)

ಮದನನಯ್ಯನೆ ಕೃಷ್ಣ ಎನ್ನ ಹೃದಯದ ಜೀವ
ಒಲುಮೆ ಮೇಘಗಳೊಡೆಯ ಸನಿಹ ಬಾರೊ
ಶ್ರೀನಿವಾಸ ವಿಠಲನೆ ಎನ್ನುಸಿರ ಕೃಷ್ಣಯ್ಯ
ಪ್ರೀತಿಯಕ್ಷಯ ಮಧುವ ಎನಗೆ ತಾರೊ (೩)

ಜನ್ಮಜನ್ಮಾಂತರದ ಸ್ಮೃತಿಗಾನ ಮಿಡಿಯುತಿದೆ
ಪ್ರೀತಿ ನೆನಪಿನ ವೀಣೆ ಆಲಿಸೊ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೧.೦೫.೨೦೧೧

Friday, May 20, 2011

Shri Krishnana Nooraru Geethegalu - 110

ನಮೊ ಮಾರಪಿತಂ

ವಂದೇ ತ್ರೇತಾರಾಮಂ ಕೌಸಲ್ಯೇಯಂ ಅಯೋಧ್ಯಾಪುರನಿವಾಸಂ
ಪುಣ್ಯಪುರುಷಂ ಪುರುಷೋತ್ತಮಂ ವಂದೇ ಶ್ರೀರಾಮಂ ಜಗತ್ಕಾರಣಂ

ವಂದೇ ಮಾರಪಿತಂ ಮುದ್ದುಕೃಷ್ಣಂ ರಾಧಾಹೃದಯಚೋರಂ
ಶ್ಯಾಮಲಾಂಗಂ ಗೋಕುಲವಾಸಂ ವಂದೇ ಶ್ರೀಕೃಷ್ಣಂ ಜಗತ್ ರಕ್ಷಕಂ

ವಂದೇ ನಯನಮನೋಹರಂ ನಾರಾಯಣಂ ಶ್ರೀವೈಕುಂಠನಿಲಯಂ
ಲಕ್ಷೀವಲ್ಲಭಂ ಶ್ರೀನಿವಾಸ ವಿಠಲಂ ವಂದೇ ಗೋವಿಂದಂ ಮೂಜಗಕ್ಷೇಮಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೫.೨೦೧೧

Shri Krishnana Nooraru Geethegalu - 109

ವಂದೇ ಜಗಪಾಲ

ಮುರಳೀಧರನೆ ಕೃಷ್ಣಾನಂದ ನಮಿಪೆನು ವನಮಾಲ
ರಾಧಾವಲ್ಲಭ ಶ್ರೀ ಗೋವರ್ಧನ ವಂದೇ ಜಗಪಾಲ

ಮಾತೆದೇವಕಿ ಅಷ್ಟಮಗರ್ಭನೆ ಜಯಜಯ ಗೋಪಾಲ
ಸುಜನರಾ ವಸುದೇವನ ಕಂದನೆ ಜಯಜಯ ಶ್ರೀಪಾಲ
ಯಾದವವಂಶಜ ಶ್ರೀಕುಲತಿಲಕನೆ ಜಯಜಯ ದಿಕ್ಪಾಲ
ದೇವ ಸುದೇವನೆ ಶ್ಯಾಮಲಸುಂದರ ಮೂಜಗ ಪರಿಪಾಲ (೧)

ದೇವದೇವರೊಳು ಆದಿದೇವನೆ ಜಯಜಯ ಗೋಪಾಲ
ತ್ರೇತಾರಾಮ ಗೋಕುಲಶ್ಯಾಮನೆ ಜಯಜಯ ಶ್ರೀಪಾಲ
ದಶರೂಪದೊಳು ಧರಣಿಯ ಕಾವನೆ ಜಯಜಯ ದಿಕ್ಪಾಲ
ಜಯಮಂಗಳನೆ ಶ್ರೀನಿವಾಸ ವಿಠಲ ಮೂಜಗ ಪರಿಪಾಲ (೨)

ಮುರಳೀಧರನೆ ಕೃಷ್ಣಾನಂದ ನಮಿಪೆನು ವನಮಾಲ
ರಾಧಾವಲ್ಲಭ ಶ್ರೀ ಗೋವರ್ಧನ ವಂದೇ ಜಗಪಾಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೫.೨೦೧೧

Thursday, May 19, 2011

Shri Krishnana Nooraru Geethegalu - 108

ಕೃಷ್ಣಂ ಶ್ರೀನಿಧೇ

ರಾಧಾರಮಣ ಶುಭಕಲ್ಯಾಣ ಕೃಷ್ಣಂ ಶ್ರೀನಿಧೇ
ಕೃಷ್ಣಂ ಶ್ರೀನಿಧೇ ನಮೊ ವಿಷ್ಣುಂ ಶ್ರೀನಿಧೇ

ಬೃಂದಾವನ ಸಂಚಾರಿ ಶ್ರೀಹರಿ ಕೃಷ್ಣಂ ಶ್ರೀನಿಧೇ
ಸುರಮಾಧವ ವೇಣುಲೋಲನೆ ಕೃಷ್ಣಂ ಶ್ರೀನಿಧೇ
ಗೋಕುಲವಾಸ ಜನಮನಚೋರ ಕೃಷ್ಣಂ ಶ್ರೀನಿಧೇ
ದ್ವಾಪರಾಯುಗ ಧರ್ಮರಕ್ಷಕ ಶ್ರೀಕೃಷ್ಣಂ ಶ್ರೀನಿಧೇ (೧)

ಜೀವಜಾಲ ಪರಿಪಾಲದೇವಂ ಕೃಷ್ಣಂ ಶ್ರೀನಿಧೇ
ಶರಣ ಸಜ್ಜನ ಶ್ರೀಪುರಂದರ ಕೃಷ್ಣಂ ಶ್ರೀನಿಧೇ
ತ್ರಿಪುರಕಾವ ಉಡುಪಿಯೊಡೆಯನೆ ಕೃಷ್ಣಂ ಶ್ರೀನಿಧೇ
ಕಲಿವರದನೆ ಶ್ರೀನಿವಾಸ ವಿಠಲ ಕೃಷ್ಣಂ ಶ್ರೀನಿಧೇ (೨)

ರಾಧಾರಮಣ ಶುಭಕಲ್ಯಾಣ ಕೃಷ್ಣಂ ಶ್ರೀನಿಧೇ
ಕೃಷ್ಣಂ ಶ್ರೀನಿಧೇ ನಮೊ ವಿಷ್ಣುಂ ಶ್ರೀನಿಧೇ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೫.೨೦೧೧

Shri Krishnana Nooraru Geethegalu - 107

ರಾಮ ರಾಮ ರಾಮನೆನಿರೊ

ರಾಮ ರಾಮ ರಾಮನೆನಿರೊ ರಾಮಧ್ಯಾನವೆ ಕ್ಷೇಮವೆನಿರೊ
ಕಲಿಯ ಕರ್ಮವ ಕಳೆದು ಪರದೊಳು ಸುಖವ ಪಡೆಯಿರೊ

ರಘುವಂಶಜ ರಾಮನೆನಿರೊ ದಶರಥಸುತ ರಾಮನೆನಿರೊ
ಕೌಸಲ್ಯೆಯ ಕಂದರಾಮ ಜನಕಸುತೆಯ ಪ್ರೇಮನೆನಿರೊ
ಶಬರಿಗೊಲಿದ ರಾಮನೆನಿರೊ ಹನುಮಗೆ ಶ್ರೀಪಾದನೆನಿರೊ
ಪುಣ್ಯಪುರುಷನ ದಿವ್ಯನಾಮವ ಭಜಿಸಿ ನಲಿಯಿರೊ

ಶುಭದಾಯಕ ರಾಮನೆನಿರೊ ಸುಗುಣಧಾಮ ರಾಮನೆನಿರೊ
ಶೂರಸುಂದರ ಶ್ಯಾಮಲಾಂಗ ಲವಕುಶರ ಪಿತನೆನಿರೊ
ದ್ವಾರಪದೊಳು ರಾಧೆರಾಮ ಕಲಿಯೊಳಗೆ ಸಕಲ ಕ್ಷೇಮ
ಶ್ರೀನಿವಾಸ ವಿಠಲ ಪದದಿ ಮುಕುತಿ ಪಡೆಯಿರೊ

ರಾಮ ರಾಮ ರಾಮನೆನಿರೊ ರಾಮಧ್ಯಾನವೆ ಕ್ಷೇಮವೆನಿರೊ
ಕಲಿಯ ಕರ್ಮವ ಕಳೆದು ಪರದೊಳು ಸುಖವ ಪಡೆಯಿರೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೫.೨೦೧೧

Shri Krishnana Nooraru Geethegalu - 106

ಇಷ್ಟದರಸ ಕೃಷ್ಣ

ಅಷ್ಟಮಹಿಷಿಯರೊಡೆಯ ಇಷ್ಟದರಸನೆ ಕೃಷ್ಣ
ಎಮ್ಮನಿಷ್ಟ ಕಷ್ಟಗಳ ಬೆನ್ನಟ್ಟಿ ಹರಸೊ

ಎನ್ನೊಳಾರ್ಭಟಿಸುತಿಹ ಆರರ ಪೂತನೆಯ ಹಾಲ
ಹಲವಳಿದೆನ್ನ ಶುದ್ಧನಾಗಿರಿಸೊ

ಶೌರಿಯೆ ಸುಭದ್ರಾಗ್ರ ಅಭಿಮನ್ಯು ಮಾವಯ್ಯ
ದುರಿತದೆನ್ನೆಯ ವ್ಯೂಹಚಕ್ರವದ ಮುರಿಯೊ

ಎನ್ನ ಮನ ಚಂಚಲಿಪ ಮಾಯಾಷ್ಟವಕ್ರೆಯನು
ಕಲಿವರದ ಶ್ರೀನಿವಾಸ ವಿಠಲನೆ ವರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೫.೨೦೧೧

Sunday, May 15, 2011

Shri Krishnana Nooraru Geethegalu - 105

ನಾರಾಯಣ ನಾಮವದು

ನಾರಾಯಣ ನಾಮವದು ಎನ್ನೊಳಗೆ ನಲಿಯಲಿ
ಅಂತರಂಗದಾತ್ಮದೊಳಗೆ ಹರಿಹಣತೆಯು ಬೆಳಗಲಿ

ಅಮ್ಮ ಲಕುಮಿ ಸಂಗದೊಳಗೆ ಆನಂದಕ್ಷೀರ ಕಡಲಲಿ
ಸರಸವಾಡೊ ಸುಂದರಾಂಗನ ಕಣ್ಣು ನೋಡಿ ತಣಿಯಲಿ (೧)

ಆದಿದೇವನ ಹಾಡಿ ಪೊಗಳುವಮೋಘ ಗಾನ ಸುಧೆಯನು
ಎನ್ನ ನಾಲಗೆ ನುಡಿದು ನಲಿಯಲಿ ಕರ್ಣಂಗಳು ಸವಿಯಲಿ (೨)

ಎನ್ನ ನಾಸಿಕವವಗೆ ಮಣಿಯಲಿ ಸರ್ವಗಂಧನ ಅಲೆಯಲಿ
ಶ್ರೀನಿವಾಸ ವಿಠಲ ನೆಲೆಸಲಿ ಎನ್ನ ಚಿತ್ತದ ಗುಡಿಯಲಿ (೩)

ನಾರಾಯಣ ನಾಮವದು ಎನ್ನೊಳಗೆ ನಲಿಯಲಿ
ಅಂತರಂಗದಾತ್ಮದೊಳಗೆ ಹರಿಹಣತೆಯು ಬೆಳಗಲಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೫.೨೦೧೧

Shri Krishnana Nooraru Geethegalu - 104

ಶ್ರೀಪಾದ ನಂಬಿದೆನೊ

ಶ್ರೀಹರಿಯೆ ಜಗದೊರೆಯೆ ನೀನೆನ್ನ ಗತಿಯೆಂದು
ಶ್ರೀಪಾದ ನಂಬಿದೆನೊ ಗೋವಿಂದ ಸಲಹೆನ್ನ

ಅಣುರೇಣುತೃಣಕಾಷ್ಠದಾದಿಮೂಲನೆ ದೇವ
ನಿನ್ನ ಸೃಷ್ಟಿಯೊಳುದಿತ ಅಂಡಾಣು ನರನೆನ್ನ
ಅಂಗದೊಳು ಕುಣಿವಾರು ಪುಂಡರಾ ಹೆಡೆಕಟ್ಟಿ
ಸರಿಯಂಕೆಯೊಳಿಟ್ಟು ಸುಖದಿ ಪೊರೆಯೆಂದು (೧)

ಪಾಪಪುಣ್ಯವ ಕೆಡುವಿ ಮೆರೆಯುವೀ ಕಲಿಯೊಳಗೆ
ಕಾಮ-ಮೋಹಗೆಳೆಂಬೊ ಸಂಸಾರ ಸಂತೆಯೊ
ಸತಿಸುತರು ಸಿರಿಯಾಳೊ ಸ್ವಾರ್ಥ ಸಡಗರದಿ
ಪಾರಮಾರ್ಥವ ಮರೆತೀ ಮೂಢನ ಕ್ಷಮಿಸೆಂದು (೨)

ಭವರೋಗಹರ ನೀನು ನರಹರಿಯು ಧರೆಯೊಳಗೆ
ನಶ್ವರದ ನರಬಾಳ್ವೆ ನರಕ ಸಾಕೊ
ತಿರುಮಲೆಯ ಕಲಿವರದ ಶ್ರೀನಿವಾಸ ವಿಠಲಯ್ಯ
ಸುಖದೊಳಗೆ ನೀನೆನ್ನ ಕಾಯಬೇಕೆಂದು (೩)

ಶ್ರೀಹರಿಯೆ ಜಗದೊರೆಯೆ ನೀನೆನ್ನ ಗತಿಯೆಂದು
ಶ್ರೀಪಾದ ನಂಬಿದೆನೊ ಗೋವಿಂದ ಸಲಹೆನ್ನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೫.೨೦೧೧

Saturday, May 14, 2011

Shri Krishnana Nooraru Geethegalu - 103

ನಿನ್ನ ನಾಮ ಭಜಿಸೆ

ನಿನ್ನ ನಾಮವ ಭಜಿಸೆ ಜನುಮ ಪಾವನವಂತೆ
ನೆಚ್ಚಿದಾ ದೀನರನು ಹರಿಯೆ ನೀ ಕಾವೆಯಂತೆ

ಅರಿಯೆನೊ ತ್ರೇತೆಯೊಳು ದಶರಥನ ಸುತನಾಗಿ
ಧರಣಿಯೊಳು ಧರ್ಮವನು ನೀ ಕಾಯ್ದೆಯಂತೆ
ಬಕುತ ಹನುಮನಿಗೊಲಿದ ಜಾನಕೀಪ್ರಿಯನಂತೆ
ಅಸುರನನುಜನನ ಮೆಚ್ಚಿ ಪಟ್ಟಗಟ್ಟಿದೆಯಂತೆ (೧)

ಅರಿಯೆನೊ ದ್ವಾಪರದೆ ವಸುದೇವ ಸುತನಾಗಿ
ಗೋಕುಲದ ಸುಜನರನು ನೀ ಪೊರೆದೆಯಂತೆ
ಧರ್ಮದೈವರಿಗೊಲಿದ ಕುರುದುರಿತಹರನಂತೆ
ಕಾಡ ಕಾಂಡವ ನುಡಿಸೊ ಕುಚೇಲಪ್ರಿಯನಂತೆ (೨)

ಅರಿಯೆನೊ ಕಲಿಯೊಳಗೆ ಭಕ್ತವತ್ಸಲನಾಗಿ
ಶರಣಂಗೆ ಸುಖಕೊಡುವ ಲಕುಮಿಪತಿಯಂತೆ
ಸ್ತುತಿಪ ದಾಸರಿಗೊಲಿದ ಭವರೋಗಹರನಂತೆ
ಶ್ರೀನಿವಾಸ ವಿಠಲ ನೀ ವೈಕುಂಠಪತಿಯಂತೆ (೩)

ನಿನ್ನ ನಾಮವ ಭಜಿಸೆ ಜನುಮ ಪಾವನವಂತೆ
ನೆಚ್ಚಿದಾ ದೀನರನು ಹರಿಯೆ ನೀ ಕಾವೆಯಂತೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೫.೨೦೧೧

Thursday, May 12, 2011

Shri Krishnana Nooraru Geethegalu - 102

ಶ್ರೀಗುರು ಪಾರ್ಥಸಾರಥಿ ವಿಠಲ

ಗುರುವು ಬಂದ ಎನ್ನ ಅರಿವು ಬಂದ
ಪಾರ್ಥಸಾರಥಿ ವಿಠಲ ದೊರೆಯು ಬಂದ

ಹಿಂದಿನಾ ಜನುಮಗಳ ಕರ್ಮವ ನೀಗಿಸಿ
ಗಾಢಾಂಧ ಮಸುಕಿದೀ ಕಂಗಳ ತೆರೆಯಿಸಿ
ಪಾಳುಕೊತ್ತಲದಂತೀ ದೇಹ ದೇವಳದಿ
ಅರಿವಿನ ಹಣತೆಯ ಬೆಳಗಿಸೊ ದೇವ (೧)

ಜಲರೂಪನುದಯವ ನಿಜದೊಳು ಸ್ಮರಿಸಿ
ಅಮರರಾಮನ ಕಥೆಯ ಎದೆಯೊಳು ನಿಲಿಸಿ
ದ್ವಾಪರದೊಡೆಯ ಶ್ರೀಕೃಷ್ಣನ ನಯವನು
ತಿಳಿಸೆನ್ನ ಭವರೋಗವಳಿಸುವ ದೇವ (೨)

ಇಂದೆನ್ನ ಜನುಮವದು ಸಾರ್ಥಕವೊ ಗುರುವೆ
ನಿನ್ನ ಸೇವೆಯ ಭಾಗ್ಯವೆನಗೆ ನೀಡೋ
ನಿನ್ನ ಶ್ರೀಪಾದದಡಿ ಧೂಳಕಣ ನಾ ಗುರುವೆ
ಶ್ರೀನಿವಾಸ ವಿಠಲ ನೀ ಎನ್ನ ಹರಸೊ (೩)

ಗುರುವು ಬಂದ ಎನ್ನ ಅರಿವು ಬಂದ
ಪಾರ್ಥಸಾರಥಿ ವಿಠಲ ದೊರೆಯು ಬಂದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೫.೨೦೧೧

Tuesday, May 10, 2011

Shri Krishnana Nooraru Geethegalu - 101

ನಮಿಪೆನು ಶ್ರೀಗುರುವೆ

ನಮಿಪೆನು ಶ್ರೀಗುರುವೆ ಪಾರ್ಥಸಾರಥಿ ವಿಠಲ
ಗುರಿಯಿರದೀ ಮೂಢಂಗೆ ಹರಿಯ ತೋರಿದ ದೊರೆಯೆ

ಅರಳುಮಲ್ಲಿಗೆ ಗುರುವೆ ಅರಿವಿನಕ್ಷಯವೆ
ಕಲಿಯೊಳಗೆ ನಾರದರೆ ಹರಿದಾಸರದ್ಭುತವೆ
ಹಾಲ್ಗಡಲಿನರಮನೆಯ ಹಾವಿನಾಸಿಗೆಯವನ
ಪಾಡಿ ಅಕ್ಕರೆಯೊಳಗೆ ನಲಿದಾಡುವವರೆ (೧)

ಮುನ್ನ ನಾ ಮಾಡಿದ ಪಾಪಕರ್ಮಂಗಳ
ಕಳೆದು ಕರುಣಿಸಿ ಗುರುವೆ ಈ ದೀನನ
ಉಳಿದೆನ್ನ ಕೆಲಕ್ಷಣವು ನಿಮ್ಮ ಸಾನಿಧ್ಯದೊಳು
ಸೇವೆಯ ಭಾಗ್ಯವದ ಬೇಡುವೆನು ನಾ (೨)

ಶ್ರೀಹರಿಯ ಪರಸಿರಿಯ ತೋರಿದಾ ಗುರುವೆ
ಇಹದೆನ್ನ ಸಕಲಾದಿ ಭವ ಮುರಿದ ಗುರುವೆ
ಗುರುವಿರದ ಆದಿಗುರು ಶ್ರೀನಿವಾಸ ವಿಠಲನ್ನ
ನಿಮ್ಮ ಶ್ರೀಪಾದದೊಳು ಕಂಡೆ ಶ್ರೀಗುರುವೆ (೩)

ನಮಿಪೆನು ಶ್ರೀಗುರುವೆ ಪಾರ್ಥಸಾರಥಿ ವಿಠಲ
ಗುರಿಯಿರದೀ ಮೂಢಂಗೆ ಹರಿಯ ತೋರಿದ ದೊರೆಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೫.೨೦೧೧


Monday, May 9, 2011

Shri Krishnana Nooraru Geethegalu - 100

ಹರಿಯೆ ದಯಮಾಡಿಸೊ

ಎಲ್ಲ ಕೇಳುವರೆನ್ನ ಎಲ್ಲಿಹನು ಅವನೆಂದು
ಏನ ಹೇಳಲೊ ಹರಿಯೆ ದಯಮಾಡಿಸೊ
ಎಲ್ಲೆಲ್ಲೂ ನೀನೆಂದು ಎಲ್ಲವು ನಿನದೆಂದು
ಪೇಳೆ ನಂಬರು ಹರಿಯೆ ದಯಮಾಡಿಸೊ

ಸದ್ಜನರು ಮಥುರೆಯೊಳು ಕಂಗೆಟ್ಟು ಕಾಯೆನಲು
ಕಾಪಾಡ್ದ ದ್ವಾರಕನೆ ದಯಮಾಡಿಸೊ
ಗೋಕುಲದಿ ಗೋಪಜನ ಗೋವಿಂದ ಕಾಯೆನಲು
ಗಿರಿಯೆತ್ತಿ ಸಲುಹಿದನೆ ದಯಮಾಡಿಸೊ (೧)

ಅಜಮಿಳನು ಹೃದಯದಿಂ ನಾರಾಯಣನೆನಲಾ
ಕ್ಷಣದಿ ಕಂಡವನೆ ದಯಮಾಡಿಸೊ
ಕಶ್ಯಪನ ಸುತನವನು ಶ್ರೀಹರಿಯೆ ಕಾಯೆನಲು
ಕಂಬವನೆ ಸೀಳಿದನೆ ದಯಮಾಡಿಸೊ (೨)

ಜಗಜೀವ ಸಂಕುಲದ ಸೌಭಾಗ್ಯ ಸಿರಿನಿಧಿಯೆ
ಸರ್ವಾದಿದೇವನೆ ದಯಮಾಡಿಸೊ
ಜನನಮರಣದ ಮಧ್ಯೆ ಸುಖದೆಮ್ಮ ಕಾಯುವನೆ
ಶ್ರೀನಿವಾಸ ವಿಠಲನೆ ದಯಮಾಡಿಸೊ (೩)

ಎಲ್ಲ ಕೇಳುವರೆನ್ನ ಎಲ್ಲಿಹನು ಅವನೆಂದು
ಏನ ಹೇಳಲೊ ಹರಿಯೆ ದಯಮಾಡಿಸೊ
ಎಲ್ಲೆಲ್ಲೂ ನೀನೆಂದು ಎಲ್ಲವು ನಿನದೆಂದು
ಪೇಳೆ ನಂಬರು ಹರಿಯೆ ದಯಮಾಡಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೫.೨೦೧೧

Shri Krishnana Nooraru Geethegalu - 099

ಭಕ್ತವತ್ಸಲ ಹರಿಯೆ

ಬೇಡಿದರು ಬಾರದಿಹ ಭಕ್ತವತ್ಸಲ ಹರಿಯೆ
ಬಂಧಿಯಾಗಿಹೆ ಬಿಡಿಸೊ ಭವದಾರು ಸೆರೆಯೊಳಗೆ

ಮುನ್ನ ತ್ರೇತೆಯೊಳು ಶ್ರೀರಾಮ ಸಲಹೆನಲು
ವಾನರನ ಎದೆಯೊಕ್ಕು ನಿಂತ ದೇವ
ರಾವಣನ ಶಿರಮುರಿದೆ ಶ್ರೀಹರಿಯೆ ಕಾಯೆನಲು
ಅಹಲ್ಯೆಗೊಲಿದನೆ ರಾಮಜೀವ (೧)

ಅಜಮಿಳನ ಕಾಯ್ದವನೆ ನಾರಾಯಣನೆನಲು
ಅಸುರಕಂದನ ಶ್ರೀಪ್ರಹ್ಲಾದ ದೇವ
ಕೌರವನ ತೊಡೆಮುರಿದೆ ಶ್ರೀಕೃಷ್ಣ ಕಾಯೆನಲು
ಧರ್ಮ ಪಾಂಡವಪಕ್ಷ ದೇವದೇವ (೨)

ಕಾಮ-ಕ್ರೋಧವನಿಳಿಸೊ ಲೋಭ-ಮೋಹವನಳಿಸೊ
ಎನ್ನ ಮದಮತ್ಸರವ ಹೊಡೆದುರುಳಿಸೊ
ಶುದ್ಧಾಂತರಂಗದೊಳು ಶ್ರೀನಿವಾಸ ವಿಠಲಯ್ಯ
ಬೇಡುವೆನೊ ಬಂದಲ್ಲಿ ಸ್ಥಿರದಿ ನೆಲೆಸೊ(೩)

ಬೇಡಿದರು ಬಾರದಿಹ ಭಕ್ತವತ್ಸಲ ಹರಿಯೆ
ಬಂಧಿಯಾಗಿಹೆ ಬಿಡಿಸೊ ಭವದಾರು ಸೆರೆಯೊಳಗೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೫.೨೦೧೧

Sunday, May 8, 2011

Shri Krishnana Nooraru Geethegalu - 098

ಮತ್ತೆ ಅವತರಿಸೊ

ಮುದ್ದುವಾಮನನಾಗಿ ಮತ್ತೆ ಅವತರಿಸೊ
ಎನ್ನಹಂ ನೆತ್ತಿಯೊಳು ಶ್ರೀಪಾದವಿರಿಸೊ

ಎನ್ನ ಮೈಯೊಳು ಮೊರೆವ ಕಾಮಕಾಲಿಂದಿಯ
ಕ್ರೋಧದ ಹೆಡೆಮೆಟ್ಟಿ ಥಕಧಿಮಿತ ಕುಣಿಯೊ
ಮೋಹ ವಿಷಪೂತನೆಯ ಲೋಭದಾ ಸ್ತನವೀರಿ
ಜಯಜಯತುಜಯವೆಂದು ಶ್ರೀಕೃಷ್ಣ ನಲಿಯೊ (೧)

ಎನ್ನ ಮೈಯೊಳು ಕೆನೆವ ಮತ್ಸರದ ಕೌರವನ
ಮದದ ತೊಡೆಮುರಿದು ಧರ್ಮಜಯ ಬರೆಯೊ
ಎನ್ನ ಮೈಗುಡಿಯೊಂಬೊ ಪಂಚಭೂತಾಬ್ಧಿಯೊಳು
ಶ್ರೀನಿವಾಸ ವಿಠಲನೆ ನೆಲೆಸೆನ್ನ ಹರಸೊ (೨)

ಮುದ್ದುವಾಮನನಾಗಿ ಮತ್ತೆ ಅವತರಿಸೊ
ಎನ್ನಹಂ ನೆತ್ತಿಯೊಳು ಶ್ರೀಪಾದವಿರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೫.೨೦೧೧

Shri Krishnana Nooraru Geethegalu - 097

ಶರಣ ಪರಿಪಾಲ

ಗೋಪಾಲ ಶರಣಪರಿಪಾಲ ಲೋಲ
ದ್ವಾರಕಾಪುರವಾಸ ಧರಣೀಶ ಶ್ರೀಶ

ಶ್ಯಾಮಲಾಂಗನೆ ಕೃಷ್ಣ ಕಮಲನಯನ
ಮಕರಕುಂಡಲಧರಿತ ವಸುನಂದನ
ನೊಸಲ ಚಂದನತಿಲಕ ಚೆಲುವ ಕೌಸ್ತುಭಪದಕ
ಶ್ರೀತುಳಸಿ ಶೋಭಿತನೆ ಯದುನಂದನ (೧)

ಸುಂದರಾಂಗನೆ ಕೃಷ್ಣ ಸೋಮವದನ
ನವರತ್ನಭೂಷಣನೆ ಗೋವರ್ಧನ
ನೀಳನಾಸಿಕ ಮೆರಗು ಅಧರಹೂ ಅರಳಿನಗು
ಮಯೂರ ಕೇಶವನೆ ಜನಾರ್ಧನ (೨)

ಮಂಗಳಾಂಗನೆ ಕೃಷ್ಣ ಲಕುಮಿರಮಣ
ಕ್ಷೀರಾಬ್ಧಿಯರಸ ಶ್ರೀಶೇಷಶಯನ
ಶೇಷಜನ ಸುಖಪಾಲ ಶ್ರೀನಿವಾಸ ವಿಠಲ
ದೇವದೇವನೆ ಕಾಯೊ ನಾರಾಯಣ (೩)

ಗೋಪಾಲ ಶರಣಪರಿಪಾಲ ಲೋಲ
ದ್ವಾರಕಾಪುರವಾಸ ಧರಣೀಶ ಶ್ರೀಶ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೫.೨೦೧೧

Shri Krishnana Nooraru Geethegalu - 096

ಲಕುಮಿರಮಣ

ನಾರಾಯಣ ನಮೋ ನಾರಾಯಣ
ಲಕುಮಿರಮಣ ಶ್ರೀ ಶುಭಕಲ್ಯಾಣ

ತ್ರಿಜಗ ಸೂತ್ರಶ್ರೀ ರವಿಶಶಿ ನೇತ್ರನೆ
ಪಂಚಭೂತಾದಿ ಸೃಷ್ಟಿ ಸಾಕಾರನೆ
ಆದಿ ಅದ್ಭುತ ಅಚಲ ಅನಂತದೇವನೆ
ದೇವಕೀ ಕಂದ ಶ್ರೀ ಜಗಕಾರಣನೆ (೧)

ಗೋಕುಲಪುರವಾಸ ಗೋಪಾಲಕೃಷ್ಣನೆ
ಕರುಣಾನಿಧಿ ಶ್ರೀ ಕಂಜಲೋಚನನೆ
ಜತನದೊಳು ಸುಜನರ ಸುಖ ಕಾಯ್ದವನೆ
ಯಶೋದೆನಂದನ ಶ್ರೀಗೋವಿಂದನೆ (೨)

ಕಲಿಯೊಳು ಧರೆಕಾಯ್ವ ವೈಕುಂಠವಾಸನೆ
ಸಪ್ತಗಿರೀಶ ಸಿರಿನಿಧಿಯೊಡಯನೆ
ಗತಿ ನೀನೆ ತಿರುಮಲೆಯ ತಿಮ್ಮಪ್ಪನೆನ್ನಲು
ತಲೆಕಾಯ್ವ ನಮ್ಮಪ್ಪ ಶ್ರೀನಿವಾಸ ವಿಠಲನೆ (೩)

ನಾರಾಯಣ ನಮೋ ನಾರಾಯಣ
ಲಕುಮಿರಮಣ ಶ್ರೀ ಶುಭಕಲ್ಯಾಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೫.೨೦೧೧

Saturday, May 7, 2011

Shri Krishnana Nooraru Geethegalu - 095

ಗುಣನಿಧಿ ಗೋವಿಂದ

ಮಾಧವ ವೇಣುಗೋಪಾಲ ಪಾಲ
ಶ್ರೀಕರ ಶುಭಕರ ಕರುಣಾಸಾಗರ

ಬೃಂದಾವನ ಸಂಚಾರಿ ಶ್ರೀಹರಿ
ಪ್ರಿಯಸಖಿ ರಾಧಾ ಮನಚೋರಿ
ಗಿರಿಧಾರಿ ಕೃಷ್ಣ ತ್ರಿಜಗವಿಹಾರಿ
ಮದನಮೋಹನ ಗೋಕುಲಶೌರಿ (೧)

ನಾರಾಯಣ ನಮೋ ನಿರಂಜನ
ಪದುಮನಾಭ ಶ್ರೀ ಸನಾತನ
ನರಕುಲಕಾವ ನಿರ್ಗುಣ ಪಾವನ
ಆದಿದೇವ ಶ್ರೀಹರಿ ಚಿರನೂತನ (೨)

ದಯಾನಿಧಿ ಸಿರಿ ಸುಖಾಂಬುಧಿ
ಗುಣನಿಧಿ ಸಹಜ ಶ್ರೀಪಾದಿ
ಶ್ರೀನಿವಾಸ ವಿಠಲನೆ ಜಗದಾದಿ
ಸಕಲವ ಸಲಹೊ ಕರುಣದಿ (೩)

ಮಾಧವ ವೇಣುಗೋಪಾಲ ಪಾಲ
ಶ್ರೀಕರ ಶುಭಕರ ಕರುಣಾಸಾಗರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೫.೨೦೧೧

Thursday, May 5, 2011

Shri Krishnana Nooraru Geethegalu - 094

ದೇವದೇವಂ

ದೇವದೇವಂ ವಾಸುದೇವಂ
ಸಕಲಶುಭ ಪ್ರದಾಯಕಂ

ದೇವಕಿಸುತಂ ಗೋಪನಂದಂ
ಯಾದವಕುಲ ತಿಲಕಂ

ಆದಿಪುರುಷಂ ಅಂತ್ಯರಹಿತಂ
ಅನೇಕ ವರದಾಯಕಂ

ಸುಜನವರಂ ದುರಿತಹರಂ
ತ್ರಿಕಾಲ ಲೋಕಪಾಲಂ

ಕಲಿವರದಂ ನಾರಾಯಣಂ
ನರಕುಲ ಕಲ್ಯಾಣಂ

ವಂದೇ ರಾಮಂ ವಂದೇ ಶ್ಯಾಮಂ
ಶ್ರೀನಿವಾಸ ವಿಠಲಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೫.೨೦೧೧

Wednesday, May 4, 2011

Shri Krishnana Nooraru Geethegalu - 093

ಕೊಳಲಾಗಿಸೊ ಕೃಷ್ಣ

ಕೊಳಲಾಗಿಸೊ ಕೃಷ್ಣ ನಿನ್ನ ಕೈಯೊಳು ಎನ್ನ
ನುಡಿಸು ನಿಲಿಸದೆ ಹರಿಯೆ ಜೀವನಾದ

ಕಾಡ ಕಾಂಡದ ಕೊಳವೆ ನಿರ್ಜೀವ ನಾನಯ್ಯ
ಒದಗೊ ಎನ್ನೊಲವ ಜೀವಸಂಗೀತ
ಉಣಿಸೊ ರಾಗದ ಸುಧೆಯ ಸಪ್ತಸರಿಗಮದಲ್ಲಿ
ಹರಿಸಿ ಜೀವದವುಸಿರ ಪ್ರೇಮನಾಥ (೧)

ನುಡಿಸಿದೊಳು ನೀನೆನ್ನ ನಲಿವೆನೊ ಕೃಷ್ಣಯ್ಯ
ನಿನ್ನಧರ ದಡೆ ಮೀರಿ ನಾದಯಮುನೆ
ತಣಿಸೊ ವಿರಹಿರಾಧೆ ಕಾದು ಗೋಕುಲದಲ್ಲಿ
ನಿನ್ನ ಮೋಹದ ಕರೆಗೆ ಒಂದೆ ಸಮನೆ (೨)

ನಿನ್ನ ಸನಿಹದೊಳಿರುವ ಮಹದಾಸೆ ಎನದಯ್ಯ
ಎನ್ನಗಲಿ ಪೋಗದಿರೊ ದೇವದೇವ
ಕೊನರದ ಕೊರಡಿನ ಕೊಳಲೆಂದು ಬಿಸುಡದಿರೊ
ಶ್ರೀನಿವಾಸ ವಿಠಲನೆ ಎನ್ನ ಜೀವ (೩)

ಕೊಳಲಾಗಿಸೊ ಕೃಷ್ಣ ನಿನ್ನ ಕೈಯೊಳು ಎನ್ನ
ನುಡಿಸು ನಿಲಿಸದೆ ಹರಿಯೆ ಜೀವನಾದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೫.೨೦೧೧

Tuesday, May 3, 2011

Shri Krishnana Nooraru Geethegalu - 092

ಎನ್ನ ಹೃದಯದಿ

ಎನ್ನ ಹೃದಯದಿ ನಿನ್ನುದಯವೊ ಹರಿಯೆ
ನಿನ್ನ ಜಗದುದರದೊಳ ಜೀವಾಣು ನಾ

ನಯನ ನಿನ್ನವು ಹರಿಯೆ ನೋಡ್ವ ನೋಟವು
ಕರ್ಣದೊಳ ಶ್ರವಣವದು ನಿನ್ನದಯ್ಯ
ನಾಸಿಕದ ವಾಯುವೊಳ ಸರ್ವಗಂಧನು ನೀನೆ
ನಾಲಗೆಯದು ನುಡಿವ ನಾರಾಯಣ (೧)

ದೇಹ ನಿನ್ನದು ಹರಿಯೆ ನಿನ್ನದೀ ಗುಡಿಯು
ಒಳಮನೆಯ ಆತ್ಮವದು ನಿನ್ನದಯ್ಯ
ಶುದ್ಧಿಯೊಳು ಬೇಡುವೆನೊ ಶ್ರೀನಿವಾಸ ವಿಠಲನೆ
ಸುಖದೊಳಗೆ ನೆಲೆಸಲ್ಲಿ ನಾರಾಯಣ (೨)

ಎನ್ನ ಹೃದಯದಿ ನಿನ್ನುದಯವೊ ಹರಿಯೆ
ನಿನ್ನ ಜಗದುದರದೊಳ ಜೀವಾಣು ನಾ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೫.೨೦೧೧

Monday, May 2, 2011

Shri Krishnana Nooraru Geethegalu - 091

ಬೇಡವೊ ನಿನ್ನ ಸಂಗ

ಬೇಡಯ್ಯ ಬೇಡ ರಂಗ ಬೇಡವೊ ನಿನ್ನ ಸಂಗ
ನೀನೆಮ್ಮವನೆನಲು ಅಭಿಮಾನ ಭಂಗ

ಸೆರೆಯೊಳು ಜನಿಸಿದನೆ ಮಾಯದಿ ನೆಲೆಸಿದನೆ
ನವನೀತಚೋರನೆಂ ಗೋಪಕುಲ ದೂರುವನೆ
ಪುಂಡಪೋರರ ಕೂಡಿ ಕಂಡೋರ ಮನೆಸೇರಿ
ಕೆನೆಹಾಲುಮೊಸರ ಮೆದ್ದೆದ್ದು ಓಡುವನೆ (೧)

ಕಾಡುಹೂಗಳನಾಯ್ದು ವನಮಾಲೆ ಧರಿಸುವನೆ
ಬಿದಿರಕಾಂಡದ ಕೊಳಲ ರಾಗವ ಪಾಡುವನೆ
ಸಿಕ್ಕ ಬಿಕ್ಕೆಯ ಹಣ್ಣು ಜೇನ್ಹಿಂಡಿ ಉಣುವವನೆ
ಗೋಕುಲದ ದನಗಾಹಿ ಗೋಪಾಲ ಗೊಲ್ಲನೆ (೨)

ನಿತ್ಯವಸುರರ ಮಡುಹಿ ರಕುತ ಚೆಲ್ಲಾಡುವನೆ
ಮಾತೆಯೆಂ ಪೂತನೆ ವಿಷಮೊಲೆಯನುಣುವನೆ
ಆವುದೊ ಮಾಯದೊಳು ಗೋವರ್ಧನವೆತ್ತಿದನೆ
ಅಣುರೇಣು ನೀನೆನುವ ಶ್ರೀನಿವಾಸ ವಿಠಲನೆ (೩)

ಬೇಡಯ್ಯ ಬೇಡ ರಂಗ ಬೇಡವೊ ನಿನ್ನ ಸಂಗ
ನೀನೆಮ್ಮವನೆನಲು ಅಭಿಮಾನ ಭಂಗ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೫.೨೦೧೧

Sunday, May 1, 2011

Shri Krishnana Nooraru Geethegalu - 090

ಭಜಿಸಿರೊ ಶ್ರೀಹರಿಯ

ಭಜಿಸಿರೊ ಶ್ರೀಹರಿಯ ನಮಿಸಿರೊ ನರಹರಿಯ
ನಮ್ಮಮ್ಮ ಸಿರಿಲಕುಮಿ ಸೇವಿಪ ದೊರೆಯ

ಸಪ್ತಗಿರಿಯೆತ್ತರದಿ ಪಂಚಭೂತಾಬ್ಧಿಯೊಳು
ವೈಭವದಿ ವಿರಮಿಸಿಹ ವೈಕುಂಠನ
ಮೂಜಗದಿ ಮುಕ್ಕೋಟಿಜೀವರನು ನೂರ್ಕಾಲ
ಉದರದೊಳುದ್ಧರಿಪ ನಿಜನೆಂಟನ (೧)

ದಿಕ್ಕೆಟ್ಟು ಜೀವನದಿ ಹರಿ ನೀನೆ ಗತಿಯೆನಲು
ಸರಿದಾರಿ ಸರಿಗಮದ ಸಂಗೀತನ
ನಾರಾಯಣನೆನುವ ನರಜನುಮ ನಾಲಗೆಗೆ
ನಾಕ ನವಕೋಟಿ ಸುಖವರದನ (೨)

ಮನಬಾಗಿ ಮದದ ಶಿರಬಾಗಿ ಶರಣೆನಲು
ಅನಿತು ಕರ್ಮಾಂಧದ ಕೊಳೆ ಕಳೆವನ
ಕ್ಷಮಿಸಿ ಕಾಯೊ ಎನಲು ಶ್ರೀನಿವಾಸ ವಿಠಲಯ್ಯ
ಎದೆಯೆಂಬೊ ಗುಡಿಯೊಳು ನೆಲೆನಿಲುವನ (೩)

ಭಜಿಸಿರೊ ಶ್ರೀಹರಿಯ ನಮಿಸಿರೊ ನರಹರಿಯ
ನಮ್ಮಮ್ಮ ಸಿರಿಲಕುಮಿ ಸೇವಿಪ ದೊರೆಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೧