Thursday, October 25, 2012

Shri Krishnana Nooraru Geethegalu - 312

ಕರಮುಗಿವೆ ಶ್ರೀಮಾತೆ

ಕರಮುಗಿವೆ ಶ್ರೀಮಾತೆ ಕಾತ್ಯಾಯನಿ
ಸಕಲ ಶುಭಗಳ ನೀಡೆ ನಾರಾಯಣಿ

ಶಿವದೂತೆಯೆ ವಂದೆ ಪರಮೇಶ್ವರಿ
ಸತಿ ಸಾಧ್ವಿ ಶಾಂಭವಿಯೆ ಸುರಸುಂದರಿ
ಕಳೆಯೆಮ್ಮ ಕರುಮಗಳ ಜಗದೀಶ್ವರಿ
ಅನಂತೆ ವರದಾತೆ ಆದಿಶಂಕರಿ (೧)

ಜಯಜಯತು ಜಯದುರ್ಗೆ ಶೂಲಧಾರಿಣಿ
ಶ್ರೀಮಾತೆ  ತ್ರೈನೇತ್ರೆ ಬಕುತಕರುಣಿ
ಶ್ರೀನಿವಾಸ ವಿಠಲಾಂಶೆ ಸುಖದಾಯಿನಿ
ಶರಣೆನುವೆ ಸಲಹೆಮ್ಮ ಶ್ರೀಭವಾನಿ (೨)

ಕರಮುಗಿವೆ ಶ್ರೀಮಾತೆ ಕಾತ್ಯಾಯನಿ
ಸಕಲ ಶುಭಗಳ ನೀಡೆ ನಾರಾಯಣಿ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೦.೨೦೧೨

Friday, October 19, 2012

Shri Krishnana Nooraru Geethegalu - 311

ನಡೆಯೆ ಬೇಗ ಬೃಂದಾವನಕೆ

ಏಕೆ ಮೌನ ಹೇಳೆ ರಾಧೆ ಅದ್ಯಾರ ಧ್ಯಾನವೆ
ಹಾಲಗಡಿಗೆ ಹೊತ್ತು ಹೀಗೆ ಎತ್ತ ಪಯಣವೆ

ಕರೆದನೇನೆ ಕೊಳಲಹುಡುಗ ಸರಸವಾಡೆ ಗಿರಿಯಲಿ
ಸನಿಹ ಸೆಳೆದು ಒಲುಮೆಮಾತಿಗೆ ಹರಿವ ಯಮುನೆದಡದಲಿ (೧)

ಕಾಡಮಲ್ಲಿಗೆ ದಂಡೆಯಿಡಿದು ಕಾದು ವಿರಹದ ಎದೆಯಲಿ
ಬಾರೆ ಮುಡಿಸುವೆ ಎಂದನೇನೆ ಬಯಕೆ ಚೆಲ್ಲುತ ಕಣ್ಣಲಿ (೨)

ನಂದಗೋಪನ ಕಂದನವನೆ ಗೋಕುಲದೊಳು ಚೆಲುವನು
ಮುರಳಿಯುಲಿದು ಮುಗುದೆ ಮನವನು ಬೆಣ್ಣೆಯಂದದಿ ಕದಿವನು (೩)

ನಡೆಯೆ ಬೇಗ ಬೃಂದಾವನಕೆ ಸಂಜೆ ಕೃಷ್ಣನು ಬರುವನು
ಶ್ರೀನಿವಾಸ ವಿಠಲ ನಿನ್ನಯ ಅಧರದಮೃತ ಸವಿವನು (೪)

ಏಕೆ ಮೌನ ಹೇಳೆ ರಾಧೆ ಅದ್ಯಾರ ಧ್ಯಾನವೆ
ಹಾಲಗಡಿಗೆ ಹೊತ್ತು ಹೀಗೆ ಎತ್ತ ಪಯಣವೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೧೦.೨೦೧೨

Thursday, October 18, 2012

Shri Krishnana Nooraru Geethegalu - 310

ಆವ ಮೋಹವೊ ತಿಳಿಯೆ ರಾಧೆ

ಆವ ಮೋಹವೊ ತಿಳಿಯೆ ರಾಧೆ ಎನ್ನ ಸೆಳೆದಿದೆ ನಿನ್ನೆಡೆ
ಒಂಟಿ ಬೇಸರ ಭಾರ ತನುವು ಸನಿಹ ಬಯಸಿದೆ ಎನ್ನೆದೆ

ಹೃದಯಬನವಿದು ಖಾಲಿಖೋಲಿಯು ವಿರಹಗಾನವೆ ಎಲ್ಲೆಡೆ
ನುಡಿವ ಮುರಳಿಯು ಮೌನವಾಗಿದೆ ರಾಗವೆದೆಯೊಳು ನಲುಗಿದೆ (೧)

ಬಿರಿದ ಅಧರವು ಜೇನಮಳೆಯನು ಬಯಸಿ ಕಾದಿದೆ ನಿನ್ನನೇ
ಮೌನದೊಳಗಿನ ಪ್ರೇಮಕವಿತೆಯು ಮಾತನಾಡದೆ ಸುಮ್ಮನೆ (೨)

ಅವನು ಬಾರನು ಇವಳು ಕಾವಳು ಜಗವು ಎಮ್ಮೆಡೆ ನಗುತಿದೆ
ಕಾವ ವಿರಹದಿ ಪಕ್ವ ಪ್ರೇಮವು ಎನುವ ಸತ್ಯವ ಮರೆತಿದೆ (೩)

ಆವ ಮೋಹವೊ ತಿಳಿಯೆ ರಾಧೆ ಎನ್ನ ಸೆಳೆದಿದೆ ನಿನ್ನೆಡೆ
ಒಂಟಿ ಬೇಸರ ಭಾರ ತನುವು ಸನಿಹ ಬಯಸಿದೆ ಎನ್ನೆದೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೧೦.೨೦೧೨

Wednesday, October 17, 2012

Shri Krishnana Nooraru Geethegalu - 309

ಎಲ್ಲವ ಬಿಟ್ಟೆನೊ

ಅಲ್ಲದ ಬಿಟ್ಟೆನೊ ಸಲ್ಲದ ಬಿಟ್ಟೆನೊ
ಸಜ್ಜನರೊಲ್ಲದ ಎಲ್ಲವ ಬಿಟ್ಟೆನೊ

ಹರಿಯನು ಕಾಣದ ಕಂಗಳ ಬಿಟ್ಟೆನೊ
ಸ್ಮರಣೆಯ ಕೇಳದ ಕರ್ಣಗಳ
ಹರಿಯನು ನುಡಿಯದ ನಾಲಗೆ ಬಿಟ್ಟೆನೊ
ಅವನೇ ಇಲ್ಲದ ಹೃದಯಗಳ (೧)

ನಾನು ನಾನೆಂಬಾರು ಕೇಡನು ಬಿಟ್ಟೆನೊ
ನೀನು ನೀನೆನ್ನುವ ಬಕುತಿಯೊಳು
ಶುದ್ಧದ ನೊಸಲೆನದ ಶ್ರೀಚರಣದೊಳಿಟ್ಟೆನೊ
ಶ್ರೀನಿವಾಸ ವಿಠಲನೆ ಸಲಹೆನುತ (೨)

ಅಲ್ಲದ ಬಿಟ್ಟೆನೊ ಸಲ್ಲದ ಬಿಟ್ಟೆನೊ
ಸಜ್ಜನರೊಲ್ಲದ ಎಲ್ಲವ ಬಿಟ್ಟೆನೊ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೧೦.೨೦೧೨

Shri Krishnana Nooraru Geethegalu - 308

ದಿವ್ಯಚರಣ

ನಂಬಿಹೆನು ನಾ ನಿನ್ನ ದಿವ್ಯಚರಣವ ಕೃಷ್ಣ
ಬಿಡದೆ ಸಲಹೊ ಹರಿಯೆ ಸಿರಿಲಕುಮಿರಮಣ

ಗಾಳಿಯೊಳು ಮೂಲೋಕ ಜೀವವರಳಿಸಿದವನೆ
ಅಗ್ನಿಜಲದೊಳು ಶುದ್ಧಜಗವದನು
ಮಣ್ಣಿನೊಳು ಮುಕುತಿಯನು ನವದುದಯ ಶಕುತಿಯನು
ಸ್ವಚ್ಛದಿ ಪರಪಂಚ ನಡೆಸುವನೆ (೧)

ಆತ್ಮಂಗೆ ವಿಶ್ವಾತ್ಮ ನಿಷ್ಕ್ರಿಯಗೆ ಸಕ್ರಿಯನು
ಸಕಲ ಚರಾಚರದೆ ಅವತರಿಪ ದಿಟವೆ
ಕನಕಯ್ಯಗೊಲಿದೆಮ್ಮ ಶ್ರೀನಿವಾಸ ವಿಠಲನೆ
ಶರಣು ಬಂದೆನು ಕಾಯೊ ದೇವಭೃದ್ಗುರುವೆ (೨)

ನಂಬಿಹೆನು ನಾ ನಿನ್ನ ದಿವ್ಯಚರಣವ ಕೃಷ್ಣ
ಬಿಡದೆ ಸಲಹೊ ಹರಿಯೆ ಸಿರಿಲಕುಮಿರಮಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೦.೨೦೧೨

Thursday, October 11, 2012

Shri Krishnana Nooraru Geethegalu - 306

ಒಂಟಿ ಇಹಳು ರಾಧೆ

ಒಂಟಿ ಇಹಳು ರಾಧೆ ಒಲವ ವೃಂದಾವನದೆ
ಪಡುತಿಹಳು ಎದೆಬಾಧೆ ಶ್ಯಾಮನಿರದೆ

ಹೃದಯದಾ ಕೋಕಿಲವು ದಿವ್ಯಮೌನವ ತಳೆದು
ಮುರಳಿ ಮೋಹನಗಾನ ಕಾಯುತಿಹುದು
ವಡಲಿನಾ ಮಣಿವೀಣೆ ನವರಾಗದೊಳು ನಲಿಯೆ
ಬಾರೊ ವೈಣಿಕ ನುಡಿಸೊ ಎನುತಲಿಹುದು (೧)

ಮುಡಿಯೊಳಗೆ ಮಲ್ಲಿಗೆಯು ಘಮದ ಕಂಪನು ಸೂಸಿ
ಬರುವನೇನೆ ಅವನು ಕೇಳುತಿಹಳು
ಹರಿವ ಜುಳುಜುಳು ಯಮುನೆ ಯಾರಿಗೋ ಪಿಸುಪಿಸನೆ
ರಾಧೆ ಪ್ರೇಮದ ವ್ಯಥೆಯ ಪೇಳುತಿಹಳು (೨)

ಇರುಳಿನಾಗಸದಲ್ಲಿ ನಗುವ ಹುಣ್ಣಿಮೆ ಚಂದ್ರ
ಒಲುಮೆ ತಿಂಗಳ ಧರೆಗೆ ಸುರಿಯುತಿಹನು
ಶ್ರೀನಿವಾಸ ವಿಠಲನವ ನಿನ್ನ ಪ್ರಾಣದ ಕೃಷ್ಣ
ಬರುವನೆ ನೋಯದಿರು ಎನುತಲಿಹನು (೩)

ಒಂಟಿ ಇಹಳು ರಾಧೆ ಒಲವ ವೃಂದಾವನದೆ
ಪಡುತಿಹಳು ಎದೆಬಾಧೆ ಶ್ಯಾಮನಿರದೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೨

Shri Krishnana Nooraru Geethegalu -305

ಎನ್ನ ಕೃಷ್ಣ

ದಿನಕರನ ಉದಯದೊಳು ಮೂಡಿಬಹ ಕಿರಣದೊಳು
ನಿನ್ನ ನಗುವನೆ ಕಾಣ್ವೆ ಎನ್ನ ಕೃಷ್ಣ

ಹೇ ದಿವ್ಯ ಕಿರಣನೆ ಜಗಜೀವ ಕಾರಣನೆ
ಎನ್ನಾತ್ಮದೊಳು ನೆಲಸೊ ಉಷೆಯ ಹರಸೊ
ಭವದಿ ತಮವನು ಅಳಿಸೊ ಉತ್ತಮನ ಒಳಗುಳಿಸೊ
ಮೂಜಗದ ಸೂತ್ರಕನೆ ಎನ್ನ ಕೃಷ್ಣ (೧)

ಜಗವು ನಿನ್ನದು ಹರಿಯೆ ಈ ಜೀವ ಸೋಜಿಗವು
ನೋಯಿಸದೆ ಕಾಯುವುದು ಎನ್ನ ದೊರೆಯೆ
ಏಳುಬೆಟ್ಟದ ಒಡೆಯ ಶ್ರೀನಿವಾಸ ವಿಠಲಯ್ಯ
ಬೇಡಿದೊಳು ಬಂದೊದಗೊ ಜಗವ ಪೊರೆಯೆ (೨)

ದಿನಕರನ ಉದಯದೊಳು ಮೂಡಿಬಹ ಕಿರಣದೊಳು
ನಿನ್ನ ನಗುವನೆ ಕಾಣ್ವೆ ಎನ್ನ ಕೃಷ್ಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೨

Monday, October 8, 2012

Shri Krishnana Nooraru Geethegalu - 304

ಶ್ರೀಚರಣ ಕೃಷ್ಣ

ನೀನಲ್ಲದಿನ್ಯಾವ ದೇವರನು ನಾ ಅರಿಯೆ
ಸಿರಿಲಕುಮಿ ದೊರೆಯೆನ್ನ ದಿವ್ಯಚರಣನೆ ಕೃಷ್ಣ

ಧರ್ಮಜಗೆ ಪಗಡೆಯೊಳು ಸೋಲ ಬರೆದವ ನೀನೆ
ಸೋತು ಗೆಲುವುದೆ ಜಗದ ಧರ್ಮವೆಂದರುಹಿದನೆ
ಕುರುಜನಹಂ ಕೇಕೆಗು ಮೂಲಕಾರಣ ನೀನೆ
ರಣದೊಳಗೆ ಜೀವನವ ಮಧ್ಯಮಗೆ ತಿಳುಹಿದನೆ (೧)

ಅಷ್ಟಮಹಿಷಿಯರೊಡೆಯ ನಿಷ್ಠ ರಾಧೆಗು ಹೃದಯ
ಗಿರಿಯೆತ್ತಿ ಗೋಕುಲವ ಸಲುಹಿದವನೆ
ಬಿಂದು ಪದ್ಮದ ಪತ್ರ ಬದುಕೆಂದ ಜಗಸೂತ್ರ
ಶ್ರೀನಿವಾಸ ವಿಠಲ ನಮೊ ಧರಣೀಶನೆ (೨)

ನೀನಲ್ಲದಿನ್ಯಾವ ದೇವರನು ನಾ ಅರಿಯೆ
ಸಿರಿಲಕುಮಿ ದೊರೆಯೆನ್ನ ದಿವ್ಯಚರಣನೆ ಕೃಷ್ಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೧೦.೨೦೧೨

Thursday, October 4, 2012

Shri Krishnana Nooraru Geethegalu - 303

ನಿತ್ಯವಾಗಲೊ

ನಿನ್ನ ಮಧುರ ಮುರಳಿಗಾನವು ನಿತ್ಯವಾಗಲೊ
ಕರುಣೆ ನಿನ್ನದು ಸುಜನ ಬಕುತಗೆ ಸತ್ಯವಾಗಲೊ

ಮುಗಿಲ ಮಳೆಹನಿ ಬುವಿಗೆ ಮರಳಿ ಬಸಿರು ಮೊಳೆಯಲೊ
ಚಿಗುರಿ ಹಸಿರೊಳು ತೆನೆಯು ಸಾಸಿರ ಅನ್ನವಾಗಲೊ (೧)

ನೀನೆ ಬೆಳಗಿದೀ ಜೀವ ಹಣತೆಯು ಅಂಧ ಕಳೆಯಲೊ
ರವಿಯು ಮೂಡಲಿ ಚಂದ್ರ ಕಾಡಲಿ ಚಕ್ರವುರುಳಲೊ (೨)

ಯುಗಯುಗದೊಳು ಪ್ರೀತಿಯಮುನೆ ಬಿಡದೆ ಹರಿಯಲೊ
ಶ್ರೀನಿವಾಸ ವಿಠಲ ರಾಧೆಯು ಎನ್ನೊಳಗೆ ನಲಿಯಲೊ (೩)

ನಿನ್ನ ಮಧುರ ಮುರಳಿಗಾನವು ನಿತ್ಯವಾಗಲೊ
ಕರುಣೆ ನಿನ್ನದು ಸುಜನ ಬಕುತಗೆ ಸತ್ಯವಾಗಲೊ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೧೦.೨೦೧೨

Wednesday, October 3, 2012

Shri Krishnana Nooraru Geethegalu - 302

ಅವನೆ ಕಾರಣನೊ ಶ್ರೀಪತಿ

ಅಲ್ಪನೆನ್ನಯ ಹಲ ಜನುಮದ ಕರ್ಮವ ಕಳೆದು ಕಾವನೊ ದೇವ ಶ್ರೀಹರಿ
ಮತಿಗೇಡಿ ನಿನ್ನಯ ಸದ್ಗತಿಯು ಸುಮತಿಗೆ ಅವನೆ ಕಾರಣವರಿಯೊ ಶ್ರೀಪತಿ

ಜಲಬಿಂದು ಆದಿಯೊಳು ಜಗಬಂಧು ದಶದೊಳಗೆ ಮತ್ಸ್ಯನೊ ಸತ್ಯದೊಳು ಧರಣೀಶ್ವರ
ಕೂರ್ಮನೊ ಅಮೃತಕೆ ವರಾಹನವನಿಗೆ ಕಂದ ಕಾಯೆನೆ ಸಿಂಹ ಜಗದೀಶ್ವರ

ಗರ್ವ ಮೆಟ್ಟಿದ ಪುಟ್ಟ ಕೊಡಲಿಯೆತ್ತಿದ ದಿಟ್ಟ ತ್ರೇತೆ ಸದ್ಗುಣ ರಾಮ ಸತ್ಯನಾಮ
ಶ್ರೀನಿವಾಸ ವಿಠಲ ತಾ ದ್ವಾಪರನು ಬಲರಾಮ ಬಿಡದೆ ಎಮ್ಮನು ಕಾವ ನಿತ್ಯಪ್ರೇಮ (೨)

ಅಲ್ಪನೆನ್ನಯ ಹಲ ಜನುಮದ ಕರ್ಮವ ಕಳೆದು ಕಾವನೊ ದೇವ ಶ್ರೀಹರಿ
ಮತಿಗೇಡಿ ನಿನ್ನಯ ಸದ್ಗತಿಯು ಸುಮತಿಗೆ ಅವನೆ ಕಾರಣವರಿಯೊ ಶ್ರೀಪತಿ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೧೦.೨೦೧೨