Saturday, January 14, 2012

Shri Krishnana Nooraru Geethegalu - 201

ಶ್ರೀಪಾದ ಸನ್ಮಾನ

ಹರಿ ನಿನ್ನ ಸ್ತುತಿಯೆನಗೆ ಮಾನ ಬಹುಮಾನ
ನೆಚ್ಚಿದೊಳು ಇಹಪರದಿ ಶ್ರೀಪಾದ ಸನ್ಮಾನ

ಮೆಚ್ಚಲವ ಪವಮಾನ ಪರಮಾತ್ಮ ಪಾವನನ
ಪಾದಸೇವೆಯನಿತ್ತು ದಾಸನೊಳು ನೆಲೆಸಿದನ
ಶ್ರೀನಾಮ ನುಡಿದವನ ಕರುಣದೊಳು ಪೊರೆದವನ
ಹರಿ ನೀನೆ ಗತಿಯೆನಲು ದಶದೊಳಗೆ ಒದಗಿದನ (೧)

ಮಾವನ ಮುರಿದವನ ಕಾಮನ ಸುರಪಿತನ
ದ್ರೌಪದಿಯ ಕೇಶವನು ಕಟ್ಟಿಸಿದನ
ಕುಲಕುಲ ಕುಲವೆನದೆ ಗೋಕುಲವ ಸಲಹಿದನ
ಶ್ರೀನಿವಾಸ ವಿಠಲ ಶ್ರೀದೇವಕಿಪ್ರಿಯಸುತನ (೩)

ಹರಿ ನಿನ್ನ ಸ್ತುತಿಯೆನಗೆ ಮಾನ ಬಹುಮಾನ
ನೆಚ್ಚಿದೊಳು ಇಹಪರದಿ ಶ್ರೀಪಾದ ಸನ್ಮಾನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೧.೨೦೧೨

Monday, January 9, 2012

Shri Krishnana Nooraru Geethegalu - 200

ದಾಸನಾಗೊ ಹರಿದಾಸನಾಗೊ

ದಾಸನಾಗೊ ಹರಿದಾಸನಾಗೊ ನೀ
ದಾಸದಾಸರ ಪುಣ್ಯ ಪಾದಪದುಮನ ದಾಸ

ಇಹದಾರು ವಿಷಯದ ಮೋಹವ ನೀಗೊ
ಹರಿದಾರಿ ಸರಿಯೆನುವ ಪಥದೊಳು ಸಾಗೊ
ಪ್ರಹ್ಲಾದ ಪಾಂಡವರ ಪೊರೆದ ಶ್ರೀಪಾವನನ
ದಶಮುಖ ರೂಪನ ಶ್ರೀವಾಸುದೇವನ (೧)

ಮದ-ಮೋಹವನಳಿದು ಶುದ್ಧದಿ ಶಿರಬಾಗೊ
ಕಾಮ-ಕ್ರೋಧವ ಕಳೆದು ಪರಿಶುದ್ಧನಾಗೊ
ಲೋಭ-ಮತ್ಸರ ಮರೆತು ನಯವಂತನಾಗೊ
ಹರಿವಾಯುಗುರುವಿಗೆ ವಿನಯವಂತನಾಗೊ (೨)

ದಾಸನ ಬಕುತಿಯ ಶೇಷಶಯನ ಮೆಚ್ಚಿ
ಶೇಷಕ್ಲೇಶಂಗಳೆಂಬೊ ಬಲಿಶಿರ ಮೆಟ್ಟಿ
ವಿಶೇಷ ಫಲವೀವ ಶ್ರೀಕಲಿಯ ವರದ
ಶ್ರೀನಿವಾಸ ವಿಠಲನ ಚರಣದಿ ಮುಗಿದು (೩)

ದಾಸನಾಗೊ ಹರಿದಾಸನಾಗೊ ನೀ
ದಾಸದಾಸರ ಪುಣ್ಯ ಪಾದಪದುಮನ ದಾಸ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೧.೨೦೧೨

Wednesday, January 4, 2012

Shri Krishnana Nooraru Geethegalu - 199

ವಂದಿಪೆ ಹನುಮ

ವಂದಿಪೆ ಹನುಮ ನರಕುಲ ಕ್ಷೇಮ
ಪಾವನ ಪವನ ಶುಭಕಲ್ಯಾಣ

ವಾನರ ಸಂಜಾತ ಅಂಜನಾಸುತ ಶೂರ
ದೈತ್ಯಕುಲಾಂತಕ ದಶಬಾಹವೆ
ಭೀಮಸಹಾಯಕ ಭಜರಂಗಿ ಬಲದೇವ
ಧೀರಾತಿಧೀರ ಶ್ರೀದೀನಬಂಧವೆ (೧)

ಶ್ರೀರಾಮದೂತ ರಾಮನಾಮ ಪ್ರೀತ
ಸೀತಾರಾಘವ ಶ್ರೀಪಾದಸೇವಿತ
ಸಂಜೀವರಾಯನೆ ಲಕ್ಷ್ಮಣ ಪ್ರಾಣದಾತ
ಸಂಕಟಮೋಚಕ ಸುರಗಣವಂದಿತ (೨)

ಮುಗಿವೆನೊ ಕರಗಳ ಹರಿಸೆನ್ನ ಕರ್ಮವ
ಪಾಲಿಸೊ ಕಲಿಯೊಳು ಗುಣವಂತ
ಶ್ರೀನಿವಾಸ ವಿಠಲನ ಧ್ಯಾನವೆ ಜಯವೆಂಬ
ಸೂತ್ರವ ಅರಿತನೆ ಹನುಮಂತ (೩)

ವಂದಿಪೆ ಹನುಮ ನರಕುಲ ಕ್ಷೇಮ
ಪಾವನ ಪವನ ಶುಭಕಲ್ಯಾಣ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೧.೨೦೧೨

Tuesday, January 3, 2012

Shri Krishnana Nooraru Geethegalu - 198

ಜೀವ ಮೋಹನ

ಏಕೊ ಮೌನ ಇರದೆ ಗಾನ ಇಂದು ಬೃಂದಾವನ
ರಾಧೆಯೋರ್ವಳೆ ಸನಿಹವಿಲ್ಲ ಅವಳ ಜೀವ ಮೋಹನ

ವೀಣೆಯದುವು ರಾಗ ಮರೆತಿದೆ ನಡೆಸೊ ಬೆರಳು ವೇಗವ
ನಾದತಂತಿಯ ಕಾಯುತ್ತಲಿದೆ ರಾಧೆ ಹೃದಯವು ಜೀವವ
ಬರುವೆನೆಂದ ಮುರಳಿ ಮಾತು ತುಂಬಿ ಮೈಯೊಳು ದಾಹವ
ಖಾಲಿ ತೂಗೊ ಉಯ್ಯಾಲೆಯಲಿ ಅಪ್ಪಿ ಆಡುವ ಮೋಹವ (೧)

ಬೃಂದಾವನವು ಒಲವಧಾಮ ವರ್ಣದ್ಹೂಗಳ ಘಮಘಮ
ರಾಧೆಯುಸಿರಿನ ಜೀವ ಕುಸುಮವು ಅವನೆ ಮೇಘಶ್ಯಾಮ
ಶ್ರೀನಿವಾಸ ವಿಠಲ ಕೃಷ್ಣನೆ ರಾಧೆಯೊಲವ ಪ್ರೇಮ
ಶ್ಯಾಮನಿರದ ಬೃಂದಾವನದಿ ರಾಧೆಗೆಲ್ಲಿಯ ಕ್ಷೇಮ (೨)

ಏಕೊ ಮೌನ ಇರದೆ ಗಾನ ಇಂದು ಬೃಂದಾವನ
ರಾಧೆಯೋರ್ವಳೆ ಸನಿಹವಿಲ್ಲ ಅವಳ ಜೀವ ಮೋಹನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೧.೨೦೧೨

Sunday, January 1, 2012

Shri Krishnana Nooraru Geethegalu - 197

ನಾನೆಂಬುದಳಿಯಲಿ

ಬರಿದೆ ಭ್ರಮಿಸೆದೆನಯ್ಯ ನಾನು ನಾನೆಂದು
ನೀನೆ ಸರ್ವೋತ್ತಮನೊ ಅರಿವಾಯ್ತು ಎನಗಿಂದು

ನಾನು ಹುಟ್ಟಿತೊ ನನ್ನೊಳಗೆ ದೇವ
ಮನೆ ಮಡದಿ ಮದ ಮೋಹ ಇಹದ ವಿಷಯ
ಅಗಣಿತದ ಅರಸುಜನ ಅವನಿಯಾಳುವೆವೆನುತ
ಅನಾಮರಾದರೈ ಅರಿತೆ ದೇವ (೧)

ತ್ರೇತೆಯೊಳು ರಾವಣನ ಒಡಲೊಳುದಿಸಿದ ನಾನು
ದ್ವಾಪರದೆ ಕರುಳವರ ಕೇಕೆಯಾದೆ
ಭವವಾದೆ ಬಲಿಯೊಳಗೆ ಪ್ರಹ್ಲಾದ ಪಿತನೊಳಗೆ
ನಶ್ವರವು ನಾನೆಂದು ಅರಿತೆ ದೇವ (೨)

ಶ್ರೀಪಾದ ಮುಗಿವೆನೊ ಶ್ರೀಹರಿಯೆ ಕ್ಷಮಿಸೆಂದು
ಅಣುರೇಣುತೃಣದಾದಿ ದೇವ ಶರಣೆಂದು
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲಯ್ಯ
ನಾನೆಂಬುದಳಿದೆನ್ನ ನೀ ಪಾಲಿಸಯ್ಯ  (೩)

ಬರಿದೆ ಭ್ರಮಿಸೆದೆನಯ್ಯ ನಾನು ನಾನೆಂದು
ನೀನೆ ಸರ್ವೋತ್ತಮನೊ ಅರಿವಾಯ್ತು ಎನಗಿಂದು

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೧.೨೦೧೨