Tuesday, November 29, 2011

Shri Krishnana Nooraru Geethegalu - 188

ಗೋವಿಂದ ವಂದೆ ವಂದೆ

ಕ್ಷೀರಾಬ್ಧಿವಾಸ ತಿರುವೇಂಕಟೇಶ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೧)

ಶೇಷಾದ್ರಿನಿಲಯ ಸಿರಿಲಕುಮಿಯೊಡೆಯ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೨)

ಶ್ರೀದೇವಿ ರಮಣ ಭೂದೇವಿ ಪ್ರಾಣ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೩)

ವೈಕುಂಠಸಿರಿಯೆ ವೈಭವದ ದೊರೆಯೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೪)

ಕಲ್ಯಾಣ ನಿಧಯೆ ಆನಂದ ಸುಧೆಯೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೫)

ಓ ದಿವ್ಯಮೂರ್ತೇ ತ್ರೈಲೋಕ ಕೀರ್ತೆ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೬)

ಶ್ರೀಸೋಮವದನ ಕಮಲದಳನಯನ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೭)

ಸಪ್ತಋಷಿ ವಂದ್ಯ ವೇದಾಂತಗಮ್ಯ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೮)

ನಾರದ ತಂಬೂರ ಗಾಯನ ಸಂಪ್ರೀತ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೦೯)

ಕಮಲ ಮಕರಂದ ಭೃಂಗ ಅರವಿಂದ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೦)

ವಸುದೇವನಾತ್ಮ ಏಕಮತ ತತ್ವ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೧)

ನೀ ಮಂತ್ರಘೋಷ ಗೋಕುಲಾಧೀಶ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೨)

ತ್ರೈಲೋಕ್ಯ ಬಂಧು ಜಗದೈಕ್ಯ ಸಿಂಧು ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೩)

ನಾಗ-ಗರುಡಾದಿ ಸಿಂಹ-ಹಯ ಪೂಜಿತಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೪)

ಸೂರ್ಯಸೋಮಾದಿ ಗ್ರಹನವಪಾಲಕಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೫)

ಬಕುತಜನ ಜೀವ ಜೀವ ಸಂಜೀವ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೬)

ದಶರೂಪ ದೇವಂ ಧರಣಿ ಉದ್ಧಾರಂ ಗೋವಿಂದ ವಂದೆ ವಂದೆ
ತೋರಯ್ಯ ಕರುಣ ಓ ದಿವ್ಯ ಚರಣ ತಿರುಮಲನೆ ಕಾಯೊ ತಂದೆ    (೧೭)

ಶ್ರೀವೇಂಕಟಾದ್ರಿ ನಾರಾಯಣಾದ್ರಿ ಗೋವಿಂದ ವಂದೆ ವಂದೆ
ಸಪ್ತಗಿರಿರಾಯ ಶ್ರೀನಿವಾಸ ವಿಠಲ ತಿರುಮಲನೆ ಕಾಯೊ ತಂದೆ    (೧೮)

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೧೧.೨೦೧೧

Sunday, November 27, 2011

Shri Krishnana Nooraru Geethegalu - 187

ಶ್ರೀ ಶ್ರೀನಿವಾಸಾಯ

ನಮೊ ತಿರುಮಲೇಶಾಯ ನಮೊ ವೇಂಕಟೇಶಾಯ
ಶೇಷಾದ್ರಿನಿಲಯ ಹೇ ಶ್ರೀ ಶ್ರೀನಿವಾಸಾಯ

ಶ್ರೀಆದಿದೇವಾಯ ಅನಂತಾಕ್ಷ ಅಚಲಾಯ
ಭವರೋಗಹರನೆ ಶ್ರೀಅಮೃತಾಯ (೧)

ಗರುಡಾದ್ರಿ ದೇವಾಯ ಕಲ್ಯಾಣಗುಣದಾಯ
ದುರಿತಹರ ದೇವ ಶ್ರೀಕೋದಂಡರಾಯ (೨)

ವೈಕುಂಠನಾಥಾಯ ಸಿರಿಲಕುಮಿ ಹೃದಯ
ಪದ್ಮಾವತಿ ದೇವ ಪದುಮನಾಭಾಯ (೩)

ಶ್ರೀಪಾದದೇವಾಯ ತ್ರೈಲೋಕ ಕ್ಷೇಮಾಯ
ಶ್ರೀನಿವಾಸ ವಿಠಲ ಶ್ರೀಗೋವಿಂದರಾಯ (೪)

ನಮೊ ತಿರುಮಲೇಶಾಯ ನಮೊ ವೇಂಕಟೇಶಾಯ
ಶೇಷಾದ್ರಿನಿಲಯ ಹೇ ಶ್ರೀ ಶ್ರೀನಿವಾಸಾಯ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೧.೨೦೧೧

Wednesday, November 23, 2011

Shri Krishnana Nooraru Geethegalu - 186

ಶ್ರೀಹನುಮ

ಭಜಿಸಿರೊ ಇವನೆಮ್ಮ ದೇವ ಶ್ರೀಹನುಮ
ಇವನೊಲಿಯಲು ಅವನೊಲಿವನೊ ರಾಮ ಶ್ರೀರಾಮ

ರಾಮರಾಮರಾಮನೆನುವ ರಾಮನಾಮವ ಜಪಿಸುವ
ರಘುವಂಶಜ ರಾಮಚಂದ್ರನ ಶ್ರೀಪಾದವ ಸವಿಯುವ
ಮೂಲರಾಮರ ನಿಜನೆಂಟನೊ ಪವನಸುತ ಬಲವಂತ
ರಾಮನೆನುವ ನರರ ಕಾವ ಎಮ್ಮ ದೇವ ಹನುಮಂತ (೧)

ತ್ರೇತೆಯೊಳಗೆ ಮಾತೆ ಸೀತೆಯ ಶೋಕಸಾಗರ ನೀಗಿದ
ದುರಿತ ಕಳೆದು ಧರಣಿಯೊಳಗೆ ಧರ್ಮಜಯವನು ಬೀಗಿದ
ಭಾರತದೊಳು ಬಲಭೀಮನೊ ಶ್ರೀಮಧ್ವ ರಾಯರಾಯ
ಶ್ರೀನಿವಾಸ ವಿಠಲಯ್ಯ ಒಲಿದ ಶ್ರೀಮಹನೀಯ (೨)

ಭಜಿಸಿರೊ ಇವನೆಮ್ಮ ದೇವ ಶ್ರೀಹನುಮ
ಇವನೊಲಿಯಲು ಅವನೊಲಿವನೊ ರಾಮ ಶ್ರೀರಾಮ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೧೧.೨೦೧೧

Saturday, November 19, 2011

Shri Krishnana Nooraru Geethegalu - 185


ಶ್ರೀಗೊಲ್ಲ

ಹರಿಹರಿಹರಿಯೆಂದು ಗಿರಗಿರ ಗಿರಿಗಳ
ಅಲೆವುದನು ನಿಲಿಸೊ
ಅಖಿಲಾಂಡನೊ ಹರಿ ಆಕಾರರಹಿತನ
ಆತ್ಮದೊಳು ಭಜಿಸೊ

ಕಟ್ಟೆಯ ಕೆರೆಯೊಳು ಗಳಗಳ ಮುಳುಗಲು
ಒಲಿಯನೊ ಜಲರೂಪಿ
ನಾಸಿಕ ನೇತ್ರವ ಬಂಧಿಸಿ ಉಣದಿರಲು
ನಗುವನೊ ಜಗವ್ಯಾಪಿ (೧)

ಗೀಟಿನ ನಾಮದ ಗರಿಜರಿ ಕುಣಿತವ
ಒಲ್ಲನೊ ಬಹುರೂಪಿ
ಸೊಟ್ಟನೆ ಮನವದು ಇಟ್ಟ ನೈವೇದ್ಯವ
ಒಪ್ಪನೊ ಕುರುಕೋಪಿ (೨)

ದೊಂಬರವಿಲ್ಲದ ದುಂಬಿಯ ಬಕುತಿಗೂ
ನಲಿವನೊ ಶ್ರೀಗೊಲ್ಲ
ಶ್ರೀನಿವಾಸ ವಿಠಲನ ಅರಿಯದ ಹುಂಬಗೆ
ಎಂದಿಗೂ ಮಣಿಯೊಲ್ಲ (೩)

ಹರಿಹರಿಹರಿಯೆಂದು ಗಿರಗಿರ ಗಿರಿಗಳ
ಅಲೆವುದನು ನಿಲಿಸೊ
ಅಖಿಲಾಂಡನೊ ಹರಿ ಆಕಾರರಹಿತನ
ಆತ್ಮದೊಳು ಭಜಿಸೊ

   ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೧೧.೨೦೧೧

Tuesday, November 15, 2011

Shri Krishnana Nooraru Geethegalu - 184

ಭಜಿಸಿರೊ ಕೃಷ್ಣನ

ಭಜಿಸಿರೊ ಕೃಷ್ಣನ ಮೂಜಗವಂದ್ಯನ
ದುರಿತ ನಿವಾರಣ ಶ್ರೀಮೂಲರಾಮನ

ವಸುದೇವ ಕಂದನ ಯದುಕುಲ ನಂದನನ
ನಂದಗೋಪನ ತೋಳ ತೊಟ್ಟಿಲೊಳಾಡುವನ
ಮಾತೆ ಯಶೋದೆಗೆ ತ್ರಿಜಗವ ತೋರಿದನ
ಗೋಕುಲ ಗೋಪಾಲ ಗೋವಿಂದ ದೇವನ (೧)

ದಶಶಿರನೆದೆ ಮೆಟ್ಟಿ ಧರ್ಮವ ಗೆಲಿಸಿದನ
ಕುರುಜನ ಕ್ರೌರ್ಯವ ನಯದೊಳು ಹರಿಸಿದನ
ನಾರಾಯಣನೆನುವ ನರಕುಲ ಸಲಹುವನ
ಶ್ರೀನಿವಾಸ ವಿಠಲ ದಶಮುಖ ದೇವನ (೨)

ಭಜಿಸಿರೊ ಕೃಷ್ಣನ ಮೂಜಗವಂದ್ಯನ
ದುರಿತ ನಿವಾರಣ ಶ್ರೀಮೂಲರಾಮನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೧.೨೦೧೧

Monday, November 7, 2011

Shri Krishnana Nooraru Geethegalu - 183

ಏನೊ ಕಾರಣವರಿಯೆ

ಏನೊ ಕಾರಣವರಿಯೆ ಕೃಷ್ಣನೊಲಿಯನೊ ಎನಗೆ
ಪಡೆವ ಬಗೆ ಬಲ್ಲಿದರೆ ಪೇಳಿರಯ್ಯ

ಹಲವು ಜಲದೊಳು ಮಿಂದೆ ಏಕಪಾದದಿ ನಿಂದೆ
ಮೈಮಡಿಗೆ ಜಗದೊಡೆಯನೊಲಿಯಲಿಲ್ಲ
ಮಸ್ತಕಕೆ ಮೊಗೆಮೊಗೆದು ಕ್ಷೀರವರ್ಷವನೆರೆದೆ
ಶ್ರೀಶವದನದೆ ಹರುಷ ಹಾಡಲಿಲ್ಲ (೧)

ಬಗೆಬಗೆಯ ಫಲಪುಷ್ಪ ಗಂಧಧೂಪಾರತಿಯ
ಹಚ್ಚಿದೊಡೆ ಸ್ವಚ್ಛನವ ಮೆಚ್ಚಲಿಲ್ಲ
ಸ್ವರ್ಣ ರಜತಾದಿ ಜರಿಯಪಟ್ಟೆಯನ್ನುಟ್ಟ
ಶಿಲೆಯೊಳಗೆ ಶ್ರೀಪಾದನಿರಲೇ ಇಲ್ಲ (೨)

ಗಿರಿಯ ಶಿಖರವದೇರಿ ನಾಸಿಕವ ಬಂಧಿಸಿದೆ
ಭಕ್ತವತ್ಸಲ ಹರಿಯು ಬರಲೇ ಇಲ್ಲ
ಮನವಿರದೆ ಬರಿಮೈಯ್ಯ ಮರ್ಕಟನ ಆಟಕ್ಕೆ
ಶ್ರೀನಿವಾಸ ವಿಠಲಯ್ಯ ಮಣಿಯಲಿಲ್ಲ (೩)

ಏನೊ ಕಾರಣವರಿಯೆ ಕೃಷ್ಣನೊಲಿಯನೊ ಎನಗೆ
ಪಡೆವ ಬಗೆ ಬಲ್ಲಿದರೆ ಪೇಳಿರಯ್ಯ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೧೧.೨೦೧೧

Saturday, November 5, 2011

Shri Krishnana Nooraru Geethegalu - 182

ಶ್ರೀಹರಿ ನಿನ್ನವನೊ

ಹರಿ ಎನ್ನವನೊ ಶ್ರೀಹರಿ ನಿನ್ನವನೊ
ಹರಿಹರಿಯೆನುವರ ಒಡಲೊಳಗಿಹನೊ

ಮಡಿಯನು ತಿಳಿಯನೊ ಮೈಲಿಗೆಯರಿಯನೊ
ಮೇಲುಕೀಳೆಂಬೊ ತಾಳಕೆ ಕುಣಿಯನೊ
ಗೋಟುನಾಮವನಿಟ್ಟು ಬರಿಸಟೆಯಾಡುವರ
ಮಂಗಾಟ ಕಂಡೆಮ್ಮ ಕೃಷ್ಣಯ್ಯ ನಗುವನೊ (೧)

ತೆಂಗನು ಒಲ್ಲನೊ ಬಾಳೆಯನೊಲ್ಲನೊ
ಕರ್ಪೂರ-ಕಾಣಿಕೆ ಅವ ಮೊದಲೊಲ್ಲನೊ
ಮಾತಿನ ಮಂತ್ರದ ಗಡಿಬಿಡಿ ಗಣಿತದ
ಎಣಿಕೆಗೆ ನಿಲುಕನೊ ಗೋಪಾಲ ಗೊಲ್ಲನೊ (೨)

ದೀನರ ದೇವನೊ ಶುದ್ಧಗೆ ಒಲಿವನೊ
ಗತಿ ನೀನೆನುವರ ಸಂಗದಿ ನಲಿವನೊ
ತೋರಿಕೆಯದ ತೊರೆದು ನೇರಿಕೆಯೊಳು ನಡೆಯೆ
ಶ್ರೀನಿವಾಸ ವಿಠಲಯ್ಯ ಕರೆದಲ್ಲಿ ಬರುವನೊ (೩)

ಹರಿ ಎನ್ನವನೊ ಶ್ರೀಹರಿ ನಿನ್ನವನೊ
ಹರಿಹರಿಯೆನುವರ ಒಡಲೊಳಗಿಹನೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೧೧.೨೦೧೧

Wednesday, November 2, 2011

Shri Krishnana Nooraru Geethegalu - 181

ಕೃಷ್ಣ ವನಮಾಲಿ

ಕೃಷ್ಣ ವನಮಾಲಿ ಶ್ರೀಹರಿ ಕೃಷ್ಣ ವನಮಾಲಿ
ಮನುಕುಲ ಮಾನಸ ಚಿತ್ತವಿಹಾರಿ

ಶ್ರೀಮೂಲರಾಮಂ ಜಯ ಮೇಘಶ್ಯಾಮಂ
ಸೃಷ್ಟಿಸ್ಥಿತಿಲಯ ಸೂತ್ರಧಾರಂ
ಜಗದೋದ್ಧಾರಕ ದಶಮುಖದೇವಂ
ಶ್ರೀನಾರಾಯಣ ಶ್ರೀನಿವಾಸ ವಿಠಲಂ

ಕೃಷ್ಣ ವನಮಾಲಿ ಶ್ರೀಹರಿ ಕೃಷ್ಣ ವನಮಾಲಿ
ಮನುಕುಲ ಮಾನಸ ಚಿತ್ತವಿಹಾರಿ
  
    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೧೧.೨೦೧೧