Wednesday, August 29, 2012

Shri Krishnana Nooraru Geethegalu - 280

ಯಾವುದೀ ಹೊಸರಾಗ

ಯಾವುದೀ ಹೊಸರಾಗ ಸೆಳೆಯುತಿದೆ ಹೀಗೆನ್ನ
ಬೃಂದಾವನದೆದೆಗೆ ಹೇಳೆ ಗೆಳತಿ

ಎನ್ನ ವಿರಹದ ಎದೆಯ ಕದವ ಮೆಲ್ಲನೆ ತೆರೆದು
ಬಯಕೆ ಗಾನದ ಪದವ ಬರೆಯುತಿಹುದು
ಎನ್ನಾಸೆ ಹಸಿರಿನೊಳು ಕನಸ ಮಲ್ಲಿಗೆ ಹರಡಿ
ಒಲುಮೆ ಘಮಘಮವನ್ನು ಚೆಲ್ಲುತಿಹುದು (೧)

ನಿಲ್ಲಗೊಡದೆ ಗೆಳತಿ ಕೂರಬಿಡದೇ ಎನ್ನ
ಮೈಮನವ ತನ್ನೆಡೆಗೆ ಸೆಳೆಯುತಿಹುದು
ಎನಿತೆನಿತೊ ಜನುಮಗಳ ಪ್ರೇಮವೆಮ್ಮದು ಎನುತ
ಮಧುರ ನೆನಪಿನ ಪುಟವ ತೆರೆಯುತಿಹುದು (೨)

ಎನ್ನೊಲವಿನರಮನೆಯ ಮಾತಿನರಗಿಳಿಯು
ಮುದ್ದುಕೃಷ್ಣನ ಕಥೆಯ ಪೇಳುತಿಹುದು
ಶ್ರೀನಿವಾಸ ವಿಠಲನೆ ಆ ನಿನ್ನ ಪ್ರಾಣಸಖ
ಕೊಳಲನೂದುವ ಚೆಲುವನೆನುತಲಿಹುದು (೩)

ಯಾವುದೀ ಹೊಸರಾಗ ಸೆಳೆಯುತಿದೆ ಹೀಗೆನ್ನ
ಬೃಂದಾವನದೆದೆಗೆ ಹೇಳೆ ಗೆಳತಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೮.೨೦೧೨

Tuesday, August 28, 2012

Shri Krishnana Nooraru Geethegalu - 279

ಅನುಗಾಲ ನಿನ್ನೊಲುಮೆ

ಅನುಗಾಲ ನಿನ್ನೊಲುಮೆ ಎನಗಿರಿಲೊ ಕೃಷ್ಣ
ನಿನ್ನ ಪಾದದ ಧೂಳೊ ಸಲಹೊ ಸುಖದೊಳಗೆನ್ನ

ಅಣುರೇಣು ತೃಣಕಣಕೆ ನೀನಾದಿಯೊ ತಂದೆ
ಅವನಿಯನು ಉದ್ಧರಿಸೆ ದಶದೊಳಗೆ ಬಂದೆ
ಸರಿತಪ್ಪು ನಿನ್ನ ಚಿತ್ತ ನನಗೇನೊ ಗೊತ್ತು
ಅನ್ಯಗಳ ಕರುಣದೊಳು ಮನ್ನಿಸೊ ಕ್ಷಮೆಯಿತ್ತು (೧)

ನೀನಿಲ್ಲದೀ ಜಗದಿ ನಾನು ನಿರ್ಜೀವ
ನೀನೇ ಸಕಲಕು ಕೃಷ್ಣ ಮೂಜಗವ ಕಾವ
ನೀ ಮಾತೆ ನಾ ಕರುವು ಕರೆದೆಡೆಗೆ ಬರುವೆ
ಶ್ರೀನಿವಾಸ ವಿಠಲ ನೀ ಇರಿಸಿದಂದದಿ ಇರುವೆ (೨)

ಅನುಗಾಲ ನಿನ್ನೊಲುಮೆ ಎನಗಿರಿಲೊ ಕೃಷ್ಣ
ನಿನ್ನ ಪಾದದ ಧೂಳೊ ಸಲಹೊ ಸುಖದೊಳಗೆನ್ನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೮.೨೦೧೨

Sunday, August 26, 2012

Shri Krishnana Nooraru Geethegalu - 278

ಓ ಜೀವ ಮನದನ್ನೆ

ಮೌನ ಮುರಿಯೆ ಗೆಳತಿ ಓ ಜೀವ ಮನದನ್ನೆ
ಇರಿದೆನ್ನ ಕೊಲುತಿಹುದೆ ಕಣ್ಣೀರ ಕೆನ್ನೆ

ಸುಡುವ ಬೇಸಿಗೆ ಧಗೆಗೆ ಯುಮುನೆ ಸೊರಗಿದಳೆಂದು
ಕೊರಗುವವೆ ಇಬ್ಬದಿಯ ಅವಳ ತೀರ
ಮುಂಗಾರು ಮಳೆ ಸುರಿದು ಅವಳೊಳ್ಯವ್ವನವರಳೆ
ಸುಖದ ಸಂಭ್ರಮವವಕೆ ಕಳೆದು ಎದೆಭಾರ (೧)

ನಡುಗುವ ಚಳಿಗಾಲ ಎಲೆಯುದುರೆ ಮಾಮರದಿ
ಕೋಗಿಲೆಯು ಮಾಮರವ ಮರೆವುದೇನೆ
ಚೈತ್ರದೊಳು ಚಿಗುರೊಡೆದ ತಳಿರಿಗೆ ತಾಯಾದ
ಮಾಮರವು ಕೋಗಿಲೆಯ ಕರೆಯದೇನೆ (೨)

ತಡವೆಂಬ ಕಾರಣಕೆ ಹುಸಿಗೋಪ ನೀ ತೋರೆ
ಪ್ರಾಣರಾಧೆಯೆ ನಿನ್ನ ಬಿಡುವೆನೇನೆ
ಹುಸಿಮುನಿಸ ಮೌನವದ ಮರೆತು ಮಾತಾಡೆ
ಶ್ರೀನಿವಾಸ ವಿಠಲನ ತೊರೆವೆಯೇನೆ (೩)

ಮೌನ ಮುರಿಯೆ ಗೆಳತಿ ಓ ಜೀವ ಮನದನ್ನೆ
ಇರಿದೆನ್ನ ಕೊಲುತಿಹುದೆ ಕಣ್ಣೀರ ಕೆನ್ನೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೮.೨೦೧೨

Shri Krishnana Nooraru Geethegalu - 277

ಜಯಜಯ ದುರ್ಗೆ

ಜಯಜಯ ದುರ್ಗೆ ಬಕುತಜನ ಸನ್ಮಾರ್ಗೆ
ಕರಮುಗಿವೆನು ಶ್ರೀದೇವಿ ಸಲಹೇ ಮಾತಂಗೆ

ತ್ರಿನೇತ್ರೆ ದಕ್ಷಪುತ್ರೆ ಪವಿತ್ರೆ ದುರ್ಗೆ
ಶೂಲಧಾರಿಣಿ ಮಾತೆ ಜಯತುಜಯ ದುರ್ಗೆ
ಭವಾನಿ ಭವಮೋಚಿನಿ ನಮೋ ಭಾವಪ್ರೀತೆ
ಶರಣೆನುವೆ ಶಾಂಭವಿಯೆ ಹರಸೆಮ್ಮ ದಾತೆ (೧)

ಶ್ರೀಆದ್ಯೆ ಸಿರಿಆರ್ಯೆ ಅಹಂಕಾರಿಣಿ ದುರ್ಗೆ
ಅಭಯೆ ಅನಂತೆ ಜಯತುಜಯ ದುರ್ಗೆ
ಸರ್ವಮಂತ್ರೇ ದೇವಿ ಸತ್ಯಸ್ವರೂಪಿಣಿಯೆ
ಸರ್ವಾಸ್ತ್ರಧಾರಿಣಿಯೆ ಸಲಹೆ ಸುಂದರಿಯೆ (೨)

ನೀ ಭವ್ಯೆ ನೀ ಭಾಗ್ಯೆ ನೀ ಬುದ್ಧಿಸಿದ್ಧಿಯೆ
ನಮೊ ಘೋರೆ ನೀ ರೌದ್ರೆ ಶ್ರೀರುದ್ರದೂತೆಯೆ
ಶ್ರೀನಿವಾಸ ವಿಠಲಾಂಶೆ ವಿಷ್ಣುಮಯೆ ದೇವಿಯೆ
ಜಯವೆಂಬೆ ಕರುಣದೊಳು ಕಾಯೆಮ್ಮ ವೈಷ್ಣವಿಯೆ (೩)

ಜಯಜಯ ದುರ್ಗೆ ಬಕುತಜನ ಸನ್ಮಾರ್ಗೆ
ಕರಮುಗಿವೆನು ಶ್ರೀದೇವಿ ಸಲಹೇ ಮಾತಂಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೮.೨೦೧೨

Friday, August 24, 2012

Shri Krishnana Nooraru Geethegalu - 276

ಗೋವುಗಳೆ ಗೋಕುಲಕೆ

ನಡೆಯಿರಿ ಸಾಕಿನ್ನು ಗೋವುಗಳೆ ಗೋಕುಲಕೆ
ಎನ್ನ ಜೀವದ ಒಡತಿ ಕಾಯುತಿಹಳು

ಚೆಲುವಿನ ಖನಿಯವಳು ರತಿಯನೇ ಮೀರುವಳು
ಮೈಮನವು ಚಿಗರೆಯ ಜೀವಸುಧೆಯು
ವಿರಹದೊಳು ಬೇಯುವಳು ಯಮುನೆಯ ತೀರದೊಳು
ತಡವಾಗೆ ನೋಯುವಳು ಆ ರಾಧೆಯು (೧)

ನೊರೆಹಾಲ ಸಿಹಿಯವಳು ಕೆನೆಮೊಸರಿನಂಥವಳು
ನವನೀತದೊಲುಮೆಯನು ಉಣಿಸುವವಳು
ಮಿಲನದೊಳು ದಣಿಯುವಳು ಕೊಳಲುಲಿಗೆ ತಣಿಯುವಳು
ಎನ್ನ ಜೀವದ ಗೆಳತಿ ರಾಧೆಯವಳು (೨)

ಹಾರುತಿಹ ಹಕ್ಕಿಗಳೆ ಬೀಸಿ ಬಹ ತಂಗಾಳಿ
ಸುದ್ದಿ ತಿಳಿಸಿರೆ ಕೃಷ್ಣ ಬರುತಿಹನು ಎಂದು
ನಾನವಳ ಪ್ರಾಣಸಖ ಶ್ರೀನಿವಾಸ ವಿಠಲನೆ
ಎನ್ನೊಲುಮೆ ರಾಧೆಯನು ಮರೆಯೆನೆಂದು (೩)

ನಡೆಯಿರಿ ಸಾಕಿನ್ನು ಗೋವುಗಳೆ ಗೋಕುಲಕೆ
ಎನ್ನ ಜೀವದ ಒಡತಿ ಕಾಯುತಿಹಳು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೮.೨೦೧೨

Thursday, August 23, 2012

Shri Krishnana Nooraru Geethegalu - 275

ಸಗ್ಗದ ಸಡಗರ

ಸಗ್ಗದ ಸಡಗರ ಸುಂದರಿ ರಾಧೆಗೆ
ಚೆಲುವೆಗೆ ಚೆಲುವದೇ ನಾಚುತಿದೆ

ನಯನದಂಗಳದಿ ನಲಿವಾಸೆಯ ಭೃಂಗ
ಹರಸಿದೆ ಅಧರವು ಅವನೆದೆ ಹೂ ಸಿಹಿ
ಕರ್ಣವು ತಣಿಯಲು ಮೋಹನ ಸವಿನಾದ
ಹೃದಯದ ಕಣಕಣ ಒಲುಮೆ ವಿನೋದ (೧)

ಇರುಳಿನ ಬಾನೊಳು ನಗುತಿಹ ಚಂದಿರ
ಚೆಲ್ಲಿದ ಬೆಳಕಿನ ಚಿತ್ರವೇ ಸುಂದರ
ಮುಡಿಯೊಳು ನಲಿದಿಹ ಮೊಲ್ಲೆಯ ತಿಂಗಳು
ಕೊಳಲನು ಹರಸಿವೆ ವೀಣೆಯ ಕಂಗಳು (೨)

ಚಿತ್ರದ ಬಟ್ಟಲ ಒಲುಮೆಯ ಹಾಲನು
ಪ್ರಾಣಕೃಷ್ಣಗೆ ಕೊಡಲು ಕಾದಿಹಳು
ಎನ್ನ ಜೀವದ ಜೀವ ಶ್ರೀನಿವಾಸ ವಿಠಲನೆ
ಬಾರೊ ವೃಂದಾವನಕೆ ಎನುತಿಹಳು (೩)

ಸಗ್ಗದ ಸಡಗರ ಸುಂದರಿ ರಾಧೆಗೆ
ಚೆಲುವೆಗೆ ಚೆಲುವದೇ ನಾಚುತಿದೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೮.೨೦೧೨

Wednesday, August 22, 2012

Shri Krishnana Nooraru Geethegalu - 274

ಮಳೆಯಾಗಿ ಬಾರೊ ಎನ್ನ

ಮಳೆಯಾಗಿ ಬಾರೊ ಎನ್ನ ಸುಡುವ ವಿರಹದೆದೆಗೆ
ಕಾಯುತಿಹೆನು ಕಡಲಿನಂದದಿ ನಿನ್ನೊಲವಿನ ಸುಧೆಗೆ

ಎದೆಹೊಲವಿದು ಬಾಯಾರಿದೆ ಮೋಹ ನಿನ್ನೊಳು ಎನುತಿದೆ
ವರ್ಷದೊಳಗಿನ ಹರ್ಷರೂಪನೆ ಬಾರೊ ಕೃಷ್ಣನೆ ಕರೆದಿದೆ
ಎನ್ನ ನಯನದ ಕನಸ ಬಿಲ್ಲಿಗೆ ಸಪ್ತವರ್ಣವ ಬಳಿವನೆ
ಜೀವಬುವಿಯೊಳ ಮೊಗ್ಗನರಳಿಸೊ ನಲುಮೆಚಿತ್ರವ ಬರೆವನೆ (೧)

ನಿನ್ನ ಮುರಳಿಯ ರಾಗದೊಳು ಯಮುನೆಯಂದದಿ ವೇಗದೊಳು
ಗೋಪಮಿತ್ರರ ಕಣ್ಣ ಮರೆಸಿ ಬೃಂದಾವನದ ಹಾದಿಯೊಳು
ಸುರಿದುಬಾರೊ ಮೊರೆದುಬಾರೊ ಶ್ರೀನಿವಾಸ ವಿಠಲ ಬಾರೊ
ಕೊನೆಯಿರದ ಒಲುಮೆಮೋಡವ ಎನ್ನೊಡಲಿಗೆ ಹೊತ್ತು ತಾರೊ (೨)

ಮಳೆಯಾಗಿ ಬಾರೊ ಎನ್ನ ಸುಡುವ ವಿರಹದೆದೆಗೆ
ಕಾಯುತಿಹೆನು ಕಡಲಿನಂದದಿ ನಿನ್ನೊಲವಿನ ಸುಧೆಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೮.೨೦೧೨

Monday, August 20, 2012

Shri Krishnana Nooraru Geethegalu - 273

ಇಳಿಸಂಜೆಯೊಡಲಿನಲಿ

ಇಳಿಸಂಜೆಯೊಡಲಿನಲಿ ನಾನೊಬ್ಬಳೇ ಇಲ್ಲಿ
ಎನ್ನ ಪ್ರೇಮದ ಅರಸ ಬರುವನೇನೆ...ಸಖಿ

ಯಮುನೆಯ ತೀರದಲಿ ಅವನ ಎದೆಯೊರಗಿನಲಿ
ಮಧುರ ಮುರಳಿಯ ಗಾನ ಕೇಳಬೇಕು
ನಾಚುತಿಹ ಕೆಂಮೊಗದ ಚಂದಿರನ ತಾರೆಯರ
ಅವನೊಲುಮೆ ಆಗಸದಿ ನೋಡಬೇಕು (೧)

ಸರಸದ ಸರಿಗಮವ ನುಡಿಸೆನ್ನ ಮೈಮನದಿ
ವೀಣೆಯಂದದಿ ಕೃಷ್ಣ ಎನ್ನಬೇಕು
ವಿರಹದ ಕಣಕಣವು ತಣಿದವನ ಮಿಲನದೊಳು
ಜೀವದುಸಿರದು ಅವನ ಸೇರಬೇಕು (೨)

ಎನ್ನ ತೋಳೊಳು ಬಳಸಿ ಗಲ್ಲಕಧರವನಿರಿಸಿ
ನಯನದೊಳು ನುಡಿದನೇ ಬೇಗ ಬರುವೆನೆಂದು
ಎನ್ನೊಡೆಯ ಗೋಕುಲದ ಶ್ರೀನಿವಾಸ ವಿಠಲನೇ
ಮಲ್ಲಿಗೆಯ ಮುಡಿಗಿಡಲು ತರುವೆನೆಂದು (೩)

ಇಳಿಸಂಜೆಯೊಡಲಿನಲಿ ನಾನೊಬ್ಬಳೇ ಇಲ್ಲಿ
ಎನ್ನ ಪ್ರೇಮದ ಅರಸ ಬರುವನೇನೆ...ಸಖಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೮.೨೦೧೨

Sunday, August 19, 2012

Shri Krishnana Nooraru Geethegalu - 272

ಏನ ಬೇಡಲೊ ದೇವ

ಏನ ಬೇಡಲೊ ದೇವ ನಿನ್ನೊಳು ಕರಮುಗಿದು
ಆ ನಿನ್ನ ಶ್ರೀಚರಣ ಸನಿಹ ಸುಖವಲ್ಲದೇ

ಅರಸುತನ ಬೇಡೆನಗೆ ಹರಸುವವ ನೀನಿರಲು
ಅಳಿಸಿ ಪೋದನು ಅಬ್ಬರಿಸಿದಾ ಕುರುಜನು
ಅವನಿ ಐಶ್ವರ್ಯವದ ಹಂಬಲಿಸಿದಸುರನ
ಶಿರಮೆಟ್ಟಿ ಸುತಳದೊಳು ಸಲಹಿದನೆ ಕೃಷ್ಣ (೧)

ಪರಮೋಹವಿಲ್ಲೆನಗೆ ಪರಮಪುಣ್ಯನೆ ಕೃಷ್ಣ
ಸುಧಾಮನಂದದೊಳು ಸಖ್ಯವಿರಿಸೊ
ಶಬರಿಯಂದದಿ ಕಾಯ್ವೆ ಜನುಮಜನುಮಗಳಲ್ಲಿ
ಶ್ರೀರಾಮಮೂರುತಿಯೆ ನೀ ಕರುಣಿಸೊ (೨)

ಧನಕನಕ ಬೇಡೆನಗೆ ಧನಿಕ ಎನ್ನವ ನೀನೊ
ವೈಕುಂಠಪುರದೊಡೆಯ ಲಕುಮಿಲೋಲ
ದಿವ್ಯದಾ ಚರಣಗಳೆ ಸಕಲ ಸಂಪದ ಎನಗೆ
ಮತ್ತೆಲ್ಲ ಕ್ಷಣಿಕವೊ ಶ್ರೀನಿವಾಸ ವಿಠಲ (೩)

ಏನ ಬೇಡಲೊ ದೇವ ನಿನ್ನೊಳು ಕರಮುಗಿದು
ಆ ನಿನ್ನ ಶ್ರೀಚರಣ ಸನಿಹ ಸುಖವಲ್ಲದೇ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೮.೨೦೧೨

Friday, August 17, 2012

Shri Krishna Kavya - 001

ಒಂಟಿಮರ..ಬುದ್ಧ ಮತ್ತು ನಾವು

ವಿಶಾಲದೊಳಗೊಂದು ಒಂಟಿ ಮರ
ಬಯಲು ಆಲಯವೆರಡು ತನ್ನೊಳಗೆ ಎನುವಂತೆ

ಹಠಯೋಗಿ ಅನ್ನಿಸೊಲ್ಲ ಕಾರಣ ಮರ
ಮಧ್ಯಾಹ್ನದ ಬಿಡುವಿನಲ್ಲಿ ಧ್ಯಾನಿಸುತ್ತೆ
ಸಂಭ್ರಮಿಸುತ್ತೆ ಕೊಳಲ ಹುಡುಗನ ತುಂಟಾಟಕೆ
ಮತ್ತು ಮಿಡಿಯುತ್ತೆ ಋತುಚಕ್ರದಾಟಕ್ಕೂ...

ಮತ್ತದರಡಿಯಲ್ಲಿ ಆರೋ ನಡೆದುಹೋದ ಪಾದದೆಳೆ
ಶುದ್ಧನಾದ ಬುದ್ಧನವೇ.. ಮರ ಮೌನ ಮತ್ತು ನೆರಳು
ದೂರದಲ್ಲಿ ಕಿತ್ತ ಸಂಕೋಲೆಗೆ ಯಶೋಧರೆಯ ಅಳು

ಸಂಜೆ ಮರದೆದೆಗೆ ಹಿಂತಿರುಗೆ ಹಕ್ಕಿ-ಪಕ್ಕಿ ಮಿಲನ
ಮಾತುಕತೆ ಮಿಥುನ ಮರಿ ಚಿಗುರಿ ಯಾ ಗರಿಯುದುರಿ

ಧ್ಯಾನದಿಂದೆದ್ದು ಮರ ಕಣ್ಣರಳಿಸುತ್ತೆ
ಸಂಜೆ ಸೂರ್ಯನ ಬಣ್ಣಕ್ಕೆ ಮೈಮರೆಯುತ್ತೆ
ಎದೆಗೂಡಿನೊಳಗೆ ಎಷ್ಟೊಂದು ಜೀವಕ್ಕೆ ತಾಯಿಯಾಗುತ್ತೆ
ತನ್ನೊಳಗೆ ತಾನೇ ಅಚ್ಚರಿಯಂಬಂತೆ...

ಮರಕ್ಕೀಗ ಜ್ಞಾನೋದಯ

ಯಾರೋ ಅದರೆಡೆಗೆ ಬರುತ್ತಿರುವಂತೆ
ಬುದ್ಧನೇ...ಇರಬಹುದು ಮರ ಜೀವನ್ಮುಖಿ
ಯಶೋಧರೆ ಶಾಪವಳಿದು ಸುಖಿ...!

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೮.೨೦೧೨

Thursday, August 16, 2012

Shri Krishnana Nooraru Geethegalu - 271

ರಾಮನಾಮ ನುಡಿಯದವಗೆ

ಪಾಪ ಕಳೆವುದೆ ನಿನ್ನ ಪುಣ್ಯ ಬೆಳೆವುದೆ
ರಾಮನಾಮವ ನುಡಿಯದವಗೆ ಮುಕುತಿ ದೊರೆವುದೆ ಇಹದಿ

ಹಲವು ಆಲಯ ಅಲೆದರೇನು ಹರಕೆಕಾಯನು ಹೊಡೆಯಲೇನು
ಅನ್ಯದ್ರವ್ಯವ ದಾನವೆರೆದು ಧನ್ಯನೆಂದು ಮೆರೆದರೇನು (೧)

ಹಲವು ಗಿರಿಗಳ ಸುತ್ತಲೇನು ಹಣೆಗೆ ಮೃತಿಕೆಯ ಮೆತ್ತಲೇನು
ಮನದ ಕ್ಲೇಶವ ತೊಳೆಯದೇಳು ಪುಣ್ಯಜಲದಿ ಮುಳುಗಲೇನು (೨)

ತ್ರೇತೆ ಕಥೆಯ ಹಾಡಲೇನು ಸೀತೆ ವ್ಯಥೆಯ ಪಾಡಲೇನು
ಧರ್ಮದಾದಿ ಅರಿಯದವಗೆ ಅವನ ಚರಣ ದೊರೆವುದೇನು (೩)

ಹಲವು ದೈವವ ಭಜಿಸಲೇನು ಅವನೀಶನ ಮರೆವುದೇನು
ಶ್ರೀನಿವಾಸ ವಿಠಲನೆನಲು ಎಮ್ಮ ಕರ್ಮ ಕಳೆಯನೇನು (೪)

ಪಾಪ ಕಳೆವುದೆ ನಿನ್ನ ಪುಣ್ಯ ಬೆಳೆವುದೆ
ರಾಮನಾಮವ ನುಡಿಯದವಗೆ ಮುಕುತಿ ದೊರೆವುದೆ ಇಹದಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೮.೨೦೧೨

Wednesday, August 15, 2012

Shri Krishnana Nooraru Geethegalu - 271

ಕೊಳಲನೂದುತ ಬಂದ

ಕೊಳಲನೂದುತ ಬಂದ ರಾಧೆ ಸನಿಹಕೆ ಗೋವಿಂದ
ಉಲಿಯುತ ನಲುಮೆಯ ನವವಿಧರಾಗವ ಹೃದಯದೊಳು ನಿಂದ

ವೇದನೆ ವಿರಹದಾ ಅಂಬುಧಿ ಎದೆಯೊಳು ಪ್ರೀತಿ ಚಂದ್ರ ಬಿಂಬ
ಹೊರಗನು ನಲಿಸಿದ ಒಳಗನು ತಣಿಸಿದ ಧಾರೆ ಮೈಯ್ಯ ತುಂಬ (೧)

ಮೆದುವಿನ ಎದೆಮಣ್ಣು ಬೀಜದ ಕಣ್ಣು ಪ್ರೇಮದ ಸಿರಿಚಿಗುರು
ಒಲುಮೆಯ ಉಣಿಸಿದ ದಳದಳ ತೆರೆಸಿದ ಜೀವದ ಮೊದಲುಸಿರು (೨)

ಸಂಜೆಯ ಶ್ರಾವಣವು ಸುರಿಯುವ ನೆನಪಮಳೆ ಕಾಡುವ ಏಕಾಂತ
ಅಪ್ಪುಗೆ ಹೊದಿಸಿದ ತೋಳೊಳು ಬಳಸಿದ ಸುಖವದು ದಿಗಂತ (೩)

ಕಳೆಯದ ಸಂಜೆಯ ಕರಗದ ಇರುಳೊಳು ನಿರುತವು ಈ ಒಲವು
ಶ್ರೀನಿವಾಸ ವಿಠಲನ ಮಿಲನದಿ ರಾಧೆಯು ವೃಂದಾವನ ಚೆಲುವು (೪)

ಕೊಳಲನೂದುತ ಬಂದ ರಾಧೆ ಸನಿಹಕೆ ಗೋವಿಂದ
ಉಲಿಯುತ ನಲುಮೆಯ ನವವಿಧರಾಗವ ಹೃದಯದೊಳು ನಿಂದ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೨

Shri Krishnana Nooraru Geethegalu - 270

ಮತಿಯನಿವುದು ಗಣಪ

ಮತಿಯನಿವುದು ಗಣಪ ಶಿವಸತಿಸುತ ತಂದೆ
ಮಂಗಳ ಕರುಣಿಸೊ ತಿಂಗಳಧರ ವಂದೆ

ಶುದ್ಧದೊಳಾದಿ ಶುದ್ಧ ಪ್ರಬುದ್ಧ
ದೇವಾದಿದೇವ ಶ್ರೀ ದುರಿತನಿಷಿದ್ಧ
ಶ್ರೀಕಾರದಾಕಾರ ಸಿರಿಗೌರಿ ಮಮಕಾರ
ನಮಿಪೆನು ಹರಿದ್ರ ಕಾಯೊ ನೀ ಕ್ಷಿಪ್ರ (೧)

ವರದಾಯಕ ಪ್ರಭುವೆ ಶುಭದಾಯಕರೂಪ
ಓಂಕಾರದೇವ ಶ್ರೀ ಸಿದ್ಧಿಬುದ್ಧಿಭೂಪ
ಅವನಿಯೊಳಣುವೊ ನಾ ಚರಣಕೆ ಬಂದಿಹೆ
ಶ್ರೀನಿವಾಸ ವಿಠಲನ ಪ್ರಿಯ ನೀ ಹರಸೊ (೨)

ಮತಿಯನಿವುದು ಗಣಪ ಶಿವಸತಿಸುತ ತಂದೆ
ಮಂಗಳ ಕರುಣಿಸೊ ತಿಂಗಳಧರ ವಂದೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೨

Sunday, August 12, 2012

Shri Krishnana Nooraru Geethegalu - 269

ಏಕೊ ಕಾಡುತಲಿರುವೆ

ಏಕೊ ಕಾಡುತಲಿರುವೆ ಹೀಗೆ ನೆರಳಿನ ಹಾಗೆ
ನಗುತಿಹರೊ ಕಂಡವರು ಎನ್ನ ಕೃಷ್ಣ

ಎನ್ನ ಕೈಯ್ಯೊಳ ಕಡೆಗೋಲು ಜಾರುತಿದೆ
ನಿನ್ನ ಧ್ಯಾನದಿ ನನ್ನೇ ನಾನು ಮರೆತು
ಗೋಡೆಯೊಳಗಿನ ಚಿತ್ರ ನಗುತೆನೋ ಗುನುಗುತಿವೆ
ಮೈಮರೆತ ಈ ರಾಧೆಯನ್ನೆ ಕುರಿತು (೧)

ಎನ್ನೆದೆಯ ವೀಣೆಯದು ನಿನ್ನೆ ನಮ್ಮೀರ್ವರ
ಮಿಲನಗಾನದ ನೆನಪ ಮೀಟುತಿಹುದು
ಬೇಡುವೆನು ಕಡೆಗೋಲೆ ನೀಡೆ ಬೆಣ್ಣೆಯ ಮುದ್ದೆ
ಎನ್ನ ಜೀವವದಲ್ಲಿ ಕಾಯುತಿಹುದು (೨)

ಗೋಕುಲದ ಗಾಳಿಯೊಳು ಗಾನವಾಗಿದೆ ಕೃಷ್ಣ
ಎಮ್ಮ ಒಲವಿನ ಪ್ರೇಮ ಸಲ್ಲಾಪವು
ಹೀಗೆನ್ನ ಕಾಡುತಿರೆ ಶ್ರೀನಿವಾಸ ವಿಠಲ ನೀ
ತುಂಟ ಕೃಷ್ಣ ಎನದೆ ಈ ಲೋಕವು (೩)

ಏಕೊ ಕಾಡುತಲಿರುವೆ ಹೀಗೆ ನೆರಳಿನ ಹಾಗೆ
ನಗುತಿಹರೊ ಕಂಡವರು ಎನ್ನ ಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೮.೨೦೧೨

Saturday, August 11, 2012

Shri Krishnana Nooraru Geethegalu - 268

ಕ್ಷಣವೊಂದು ಯುಗ

ಕ್ಷಣವೊಂದು ಯುಗವಹುದು ನಿನ್ನಗಲಿಕೆಯು ಕೃಷ್ಣ
ಸಂಭ್ರಮದ ಸನಿಹದೊಳು ಯುಗವೆ ಕ್ಷಣವು

ನೀನಿರದ ಇರುವಿನೊಳು ನಾನು ನಾನಲ್ಲವೊ
ನಯನದೊಳು ನೋಟವದೆ ಇಲ್ಲದಂತೆ
ಇರುಳಿನೊಳು ಬರಿಬಾನು ಸೊಬಗೇನೊ ಶ್ರೀಕೃಷ್ಣ
ನಿನ್ನಾತ್ಮವಿರದೆನ್ನ ದೇಹದಂತೆ (೧)

ಎನ್ನೆದೆಯ ಸರಿಗಮವ ನುಡಿಸೊ ನಿನ್ನೆದೆ ಮುರಳಿ
ಮೌನವಿದೆ ರಾಗವೇ ತಿಳಿಯದಂತೆ
ಬೀಸುತಿಹ ತಂಗಾಳಿ ಸುದ್ದಿ ತಂದಿತೆ ಕೃಷ್ಣ
ಹೇಳೆಂದೆ ರಾಧೆಗೆ ನಿನದೆ ಚಿಂತೆ (೨)

ಬಾರೆನ್ನ ನೇಸರನೆ ಬೇಸರವು ಎನ್ನೊಳಗೆ
ಕಮಲದಂದದಿ ಕಾಯ್ವೆ ಕ್ಷಣವು ನಿನ್ನ
ಶ್ರೀನಿವಾಸ ವಿಠಲನೆ ಗೋಕುಲದ ಕೃಷ್ಣಯ್ಯ
ನಿನ್ನ ಒಲವಿನಯೆದೆಯು ಒರಗೆ ಚೆನ್ನ (೩)

ಕ್ಷಣವೊಂದು ಯುಗವಹುದು ನಿನ್ನಗಲಿಕೆಯು ಕೃಷ್ಣ
ಸಂಭ್ರಮದ ಸನಿಹದೊಳು ಯುಗವೆ ಕ್ಷಣವು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೮.೨೦೧೨

Thursday, August 9, 2012

Shri Krishnana Nooraru Geethegalu - 267

ಕಾಡದಿರೊ ಹೀಗೆನ್ನ

ಕಾಡದಿರೊ ಹೀಗೆನ್ನ ಕಮಲನಯನನೆ ಕೃಷ್ಣ
ಕಾಯುತಿಹೆ ನಾ ನಿನ್ನ ಬೃಂದಾವನದಿ

ಕಾನನದ ನಡುವಿನೊಳು ಹರಿವ ತೊರೆ ತೀರದೊಳು
ಮುರಳಿಯುಲಿಯುತ ಎನ್ನ ಮರೆತೆಯೆನೊ
ಗೋವುಗಳ ಗಮನಿಸುತ ಗೋಪಜನ ಸಂಗದೊಳು
ಎನ್ನ ಹೃದಯದ ಮೊರೆಯು ಕೇಳದೆನೊ (೧)

ಮುಡಿಯೊಳಗೆ ಮಲ್ಲಿಗೆಯು ಅರಳಿ ಘಮಘಮ ಸುಖವು
ಈ ರಾಧೆ ನಿನಗಾಗಿ ಬಲ್ಲೆಯೆನೊ
ವನಮಾಲೆ ಧರಿಸಿದಾ ಸಂಭ್ರಮದ ಸಡಗರದಿ
ಎನ್ನ ತುಳಸಿಮಾಲೆ ಒಲ್ಲೆಯೆನೊ (೨)

ನೆರೆಹೊರೆಯೊಳೆನ್ನವರು ಗೋಕುಲದಿ ನಗುತಿಹರೊ
ನಿನಗೆಲ್ಲೊ ಭ್ರಾಂತು ಅವ ಬಾರನೆಂದು
ಹುಸಿಯಾಗಲವರ ನುಡಿ ಶ್ರೀನಿವಾಸ ವಿಠಲಯ್ಯ
ತೋರೊ ಜಗಕೆ ಎಮದು ನಿಜಪ್ರೇಮವೆಂದು (೩)

ಕಾಡದಿರೊ ಹೀಗೆನ್ನ ಕಮಲನಯನನೆ ಕೃಷ್ಣ
ಕಾಯುತಿಹೆ ನಾ ನಿನ್ನ ಬೃಂದಾವನದಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೮.೨೦೧೨

Wednesday, August 8, 2012

Shri Krishnana Nooraru Geethegalu - 266

ಕುಣಿದು ಬಾ ಕೃಷ್ಣ

ಥಕಧಿಮಿತ ಥಕಧಿಮಿತ ಕುಣಿದು ಬಾರೊ ಕೃಷ್ಣ
ಕೊಳಲೂದುತ ಕಿರುನಗೆಯೊಳು ನಲಿದು ಬಾರೊ ಕೃಷ್ಣ

ಮಥುರೆಯ ಸೆರೆಯಿಂದ ಯಮುನೆಯ ನಡೆ ತಡೆದು
ಗೋವಿಂದ ಗೋಕುಲಕೆ ನೀನೊಲಿದು ಬಾರೊ
ಕಳೆಯೊ ಕಂಸನ ನಿಶೆಯ ತೋರೊ ಸುಜನಗೆ ಉಷೆಯ
ಕಾಳಿಂದಿ ಮದದೆಡೆಯ ನೀ ತುಳಿದು ಬಾರೊ (೧)

ಮೂಲೋಕದೊಡೆಯನೆ ಮೂಲರಾಮನೆ ಕೃಷ್ಣ
ಜಗದೋದ್ಧಾರಕನೆ ಜಯತು ನೀ ಬಾರೊ
ಧರ್ಮದಾ ಪಾಂಡವರ ಧರಣಿಯೊಳು ಸಲಹಿದನೆ
ದ್ವಾರಕಾಧೀಶನೆ ಜಯತು ನೀ ಬಾರೊ (೨)

ನೊರಹಾಲ ನಿನಗಿಡುವೆ ಸವಿದು ಸಲಹೊ ಎನ್ನ
ನವನೀತಚೋರನೆ ನಗುನಗುತ ಬಾರೊ
ಮುದ್ದುರಾಧೆಯ ಪ್ರಿಯನೆ ಶ್ರೀನಿವಾಸ ವಿಠಲಯ್ಯ
ಅವಳೊಲವ ಒಂದಣುವ ಎನಗೆ ನೀ ತೋರೊ (೩)

ಥಕಧಿಮಿತ ಥಕಧಿಮಿತ ಕುಣಿದು ಬಾರೊ ಕೃಷ್ಣ
ಕೊಳಲೂದುತ ಕಿರುನಗೆಯೊಳು ನಲಿದು ಬಾರೊ ಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೮.೨೦೧೨

Tuesday, August 7, 2012

Shri Krishnana Nooraru Geethegalu - 265

ಬಾರೆ ಎನ್ನ ಸನಿಹಕೆ

ಮೌನ ಧರಿಸಿ ಕೊಲುವೆಯೇಕೆ ಮಾತನಾಡೆ ರಾಧೆ
ಮುನಿಸ ಬಿಡೆ ಮನಸ ಕೊಡೆ ಬಾರೆ ಎನ್ನ ಸನಿಹಕೆ

ಕಾಡಮಲ್ಲಿಗೆ ಮೊಗ್ಗಮಾಲೆಯ ಮುಡಿಗೇರಿಸೆ ತಂದಿಹೆ
ಮುರಳಿಯೆದೆಗೆ ಹೊಸ ಒಲವಿನ ರಾಗ ಬರೆದು ತುಂಬಿಹೆ
ನಿನ್ನ ಚೆಲುವಿನ ಚಿತ್ರಬರೆಯೆ ಹೃದಯದಾಳೆಯ ತೆರೆದಿಹೆ
ಅಧರದಂಚಿಗೆ ಮಧುರ ಕುಂಚವ ತಾರೆ ನಾನು ಕಾದಿಹೆ (೧)

ಇರುಳ ಬಾನೊಳು ನಗುವ ಚಂದಿರ ನಾಚಿವೋಡಿದ ದೂರಕೆ
ಚುಕ್ಕೆ ತಾರೆ ಪ್ರಣತಿ ಸಾಲು ಕಾದು ಎಮ್ಮ ಮಿಲನಕೆ
ತ್ರೇತೆಯಿಂದ ಪ್ರೀತಿಯೆಮದು ಮರೆತೆಯೇನೆ ಜಾನಕಿ
ಶ್ರೀನಿವಾಸ ವಿಠಲ ನಿನ್ನವ ನಿನ್ನೊಲವೊಳು ನಾ ಸುಖಿ (೨)

ಮೌನ ಧರಿಸಿ ಕೊಲುವೆಯೇಕೆ ಮಾತನಾಡೆ ರಾಧೆ
ಮುನಿಸ ಬಿಡೆ ಮನಸ ಕೊಡೆ ಬಾರೆ ಎನ್ನ ಸನಿಹಕೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೮.೨೦೧೨

Monday, August 6, 2012

Shri Krishnana Nooraru Geethegalu - 264

ಲಾಲಿ ಗೋವಿಂದ

ಲಾಲಿ ಗೋವಿಂದ ಕೃಷ್ಣ ಗೋವಿಂದ  ಜೋ ಜೋ ಜೋ ಲಾಲಿ ಕಾಯೊ ಮುಕುಂದ

ಕಂಸನ ಅನುಜೆಯ ಅಷ್ಟಗರ್ಭದಿಂ ಸೆರೆಯೊಳು ಉದಿತನೆ ಗೋವಿಂದ
ರಭಸದ ಯಮುನೆಯ ಪಿತಶಿರವೇರಿ ಗೋಕುಲ ನಡೆದನೆ ಗೋವಿಂದ (ಲಾಲಿ ೧)

ನಂದಗೋಪನ ಮುದ್ದುಮಡದಿಯ ಮಡಿಲೊಳಗಾಡ್ದನೆ ಗೋವಿಂದ
ಶಕಟ ಪೂತನೆ ದುರಿತರ ಹರಿದು ಗೋಕುಲ ಕಾಯ್ದನೆ ಗೋವಿಂದ (ಲಾಲಿ ೨)

ಕಮಲನಯನ ಶ್ರೀಪೂರ್ಣೇಂದುವದನೆನೆ ಮೂನಾಮತಿಲಕ ಶ್ರೀಗೋವಿಂದ
ಮಧುರೇಂದ್ರ ವಸುದೇವಸುತ ಶ್ರೀಕೃಷ್ಣನೆ ರಾಧಾಹೃದಯ ಶ್ರೀಗೋವಿಂದ (ಲಾಲಿ ೩)

ಮುರಳಿಧರನೆ ನವನೀತಪ್ರಿಯನೆ ಶ್ರೀನಿವಾಸ ವಿಠಲನೆ ಗೋವಿಂದ
ನಿನ್ನ ಶ್ರೀಪಾದವ ಭಜಿಸುವ ಸುಜನರ ಧರೆಯೊಳು ಪೊರೆಯೊ ಗೋವಿಂದ (ಲಾಲಿ ೪)

ಲಾಲಿ ಗೋವಿಂದ ಕೃಷ್ಣ ಗೋವಿಂದ  ಜೋ ಜೋ ಜೋ ಲಾಲಿ ಕಾಯೊ ಮುಕುಂದ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೮.೨೦೧೨

Sunday, August 5, 2012

Shri Krishnana Nooraru Geethegalu - 263

ನಿಂದಿಹ ನೇಸರನು

ವೃಂದಾವನದ ಪಡುಜಗಲಿಯೊಳು ನಿಂದಿಹ ನೇಸರನು
ಬರುವನೆ ಕೆಂಪಿನ ಗಲ್ಲದ ರಾಧೆಯ ಸನಿಹಕೆ ಮೋಹನನು

ನಿನ್ನೆಯ ಸಂಜೆಯ ಸವಿಸವಿ ನೆನಪೊಳು ತೂಗಿದೆ ಉಯ್ಯಾಲೆ
ರಾಧೆಯ ಹೃದಯದ ವೀಣೆಯು ಕೃಷ್ಣಗೆ ಬರೆದಿದೆ ಕರೆಯೋಲೆ (೧)

ಬಯಕೆಯ ಪ್ರಣತಿಯ ದೀಪ್ತಿಯ ಕಾಂತಿಯು ರಾಧೆಯ ಕಂಗಳಲಿ
ಸುಂದರ ಚಂದಿರ ತಾರೆಯ ಜಾತ್ರೆಯು ಅವಳೆದೆಯೂರಿನಲಿ (೨)

ಬಿಡುಬಿಡುಯೆಂದರು ಬಿಡದೀ ಮುರಳಿಯ ಮೋಹವು ರಾಧೆಯನು
ವಿರಹದೊಳುರಿಸಿ ಮಿಲನದಿ ತಣಿಸಿ ಉಣಿಸಿದೆ ಪ್ರೀತಿಯನು (೩)

ರಾಧೆ-ಮಾಧವರ ಒಲುಮೆಯ ಯಮುನೆಯು ಹರಿದಿದೆ ಯುಗದಿಂದ
ಮರೆವನೆ ಶ್ರೀನಿವಾಸ ವಿಠಲನು ಅವಳ ಬರುವನು ಮುದದಿಂದ (೪)

ವೃಂದಾವನದ ಪಡುಜಗಲಿಯೊಳು ನಿಂದಿಹ ನೇಸರನು
ಬರುವನೆ ಕೆಂಪಿನ ಗಲ್ಲದ ರಾಧೆಯ ಸನಿಹಕೆ ಮೋಹನನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೮.೨೦೧೨

Saturday, August 4, 2012

Shri Krishnana Nooraru Geethegalu - 262

ಭುವನದಿ ಭವ ಅಳಿಸೊ

ಭುವನದಿ ಭವ ಅಳಿಸೊ ಶ್ರೀಕೃಷ್ಣಯ್ಯ
ಜಗದೊಳು ಸುಖವಿರಿಸೊ ಸುಜನಗೆ

ಹಲವನ್ಯ ಎಸಗಿದೀ ಆರರ ದೇಹವು
ಪರುಷವಾಗುವುದೆ ಹರಿಸ್ಪರ್ಶವಿಲ್ಲದೆ
ಚಕ್ರದೀ ಜಗವಿದು ನಿನ್ನ ಸೃಷ್ಟಿಯೊ ದೇವ
ಬದುಕದು ಬದುಕೆನೊ ಚರಣಕೆ ಬಾಗದೆ (೧)

ಜಡಬಂಡೆಯೊ ನಾನು ಚಳಿಮಳೆಯರಿಯದ
ಹೊಡೆದೆನ್ನ ಒಳಗನು ಮೂರುತಿ ಮೂಡಿಸೊ
ಧರಣಿ ಸೂತ್ರಕ ದೇವ ಶ್ರೀನಿವಾಸ ವಿಠಲಯ್ಯ
ನಿನ್ನ ಕೈಯ್ಯೊಳ ಬೊಂಬೆ ಸುಖದೊಳಗಾಡಿಸೊ (೨)

ಭುವನದಿ ಭವ ಅಳಿಸೊ ಶ್ರೀಕೃಷ್ಣಯ್ಯ
ಜಗದೊಳು ಸುಖವಿರಿಸೊ ಸುಜನಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೮.೨೦೧೨

Friday, August 3, 2012

Shri Krishnana Nooraru Geethegalu - 261

ದರ್ಪಣದ ಬಿಂಬದೊಳು

ದರ್ಪಣದ ಬಿಂಬದೊಳು ಎಮ್ಮ ಚೆಲುವೆ ರಾಧೆ
ತನ್ನ ಚೆಲುವಿಗೆ ತಾನೆ ನಾಚುತಿಹಳು

ಶ್ಯಾಮನನು ಕಾತರಿಸೊ ಚಿಗರೆ ಕಣ್ಣಂಚಿಗೆ
ಕಸ್ತೂರಿ ಕಾಡಿಗೆಯ ತೀಡುತಿಹಳು

ಮೋಹನನ ಅಧರಕ್ಕೆ ತುಡಿವ ತುಟಿ ಗಲ್ಲಕ್ಕೆ
ಪಡುವಣದ ರವಿರಂಗ ಬಳಿಯುತಿಹಳು

ಮುಂಗುರುಳು ನರ್ತಿಸೊ ನೊಸಲ ನಡುವೊಳು
ಸಿಂಧೂರ ಚಂದಿರನ ಧರಿಸುತಿಹಳು

ಬಿಗಿವ ಎದೆ ಹಿಡಿನಡುವ ಸೆಳೆವ ಮೈಮಾಟಕೆ
ಆ ರಾಧೆ ತಂತಾನೆ ಬೀಗುತಿಹಳು

ಮನದಾಸೆ ತಡೆಮೀರಿ ಹರಿವ ವಿರಹದ ನದಿಗೆ
ಬರುವನವ ತಾಳೆಂದು ಹೇಳುತಿಹಳು

ಅರ್ಪಿಸುವೆ ನಿನಗೆನ್ನ ಶ್ರೀನಿವಾಸ ವಿಠಲನೆ
ಎನುತ ವೃಂದಾವನದಿ ಕಾಯುತಿಹಳು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೭.೨೦೧೨

Thursday, August 2, 2012

Shri Krishnana Nooraru Geethegalu - 260

ನಿನ್ನೊಲವ ಬೃಂದಾವನ

ನಿನ್ನ ಸನಿಹದ ಸುಖಕೆ ಕಾತರಿಸುತಿಹೆ ಕೃಷ್ಣ
ಎನ್ನಂತೆ ನಿನ್ನೊಲವ ಬೃಂದಾವನ

ಢವಢವಿಸುವೀ ಎದೆಯು ಕೇಳಿಸದೆ ಮದನಪಿತ
ಮೊದಲ ಅಪ್ಪುಗೆ ಭಯವು ಮೃದುಕಂಪನ
ಬಿಸಿಲ ಬುವಿಯೊ ನಾನು ಸುರಿದು ಬಾರೊ ನೀನು
ಎಮ್ಮ ಮಿಲನದ ಹೆಸರೆ ರೋಮಾಂಚನ (೧)

ಕಾದಿಹೆನು ಬೇಡುವೆನು ನಿನ್ನ ರಾಧೆಯೊ ನಾನು
ಎನ್ನ ಹೃದಯದ ಮೊರೆಯ ನೀ ಕೇಳೆಯ
ಮಳೆಯಾಗಿ ಭೋರ್ಗರೆಯೊ ಎನ್ನ ಪ್ರೀತಿಗೆ ತುಡಿಯೊ
ತಣಿಸು ಸುಡುವೆನ್ನ ವಿರಹಾಗ್ನಿ ಇಳೆಯ (೨)

ಯುಗಯುಗದ ಪ್ರೇಮವದು ಎಮ್ಮದೈ ಮೋಹನ
ಒಲುಮೆ ನಲುಮೆಯ ಚಿಲುಮೆ ಹರಿವ ಯಮುನೆ
ತ್ರೇತೆಯರಸನೆ ರಾಮ ಜಾನಕಿಯೊ ನಾ ನಿನ್ನ
ಕಲಿಯ ಲಕುಮಿಯೊ ಮುಂದೆ ಶ್ರೀನಿವಾಸ ವಿಠಲನೆ (೩)

ನಿನ್ನ ಸನಿಹದ ಸುಖಕೆ ಕಾತರಿಸುತಿಹೆ ಕೃಷ್ಣ
ಎನ್ನಂತೆ ನಿನ್ನೊಲವ ಬೃಂದಾವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೭.೨೦೧೨