Sunday, July 29, 2012

Shri Krishnana Nooraru Geethegalu - 259

ಬಾರೊ ಬೇಗನೆ ಬೃಂದಾವನಕೆ

ಬಾರೊ ಬೇಗನೆ ಬೃಂದಾವನಕೆ ಚೆಲುವ ಮೇಘಶ್ಯಾಮ
ಉಲಿದು ಮುರಳಿಯ ಅರಳಿಸಿನ್ನು ರಾಧೆಯೆದೆಯೊಳು ಪ್ರೇಮ

ರಾಧೆ ಕಂಗಳು ಖಾಲಿ ಪ್ರಣತಿಯೊ ನೀನೆ ಜೀವದ ಕಾಂತಿಯೊ
ಬಿಸಿಲು ಹೂಮಳೆ ನಡುವೆ ನಗುವ ಬಣ್ಣಬಿಲ್ಲಿನ ರೀತಿಯೊ
ಗರಿಗೆದರಿಸಿ ಬಯಕೆ ನವಿಲನು ಅವಳ ಒಡಲೊಳು ಕೃಷ್ಣನೆ
ತರವೆ ಹೀಗೆ ಬಾರದಿರುವುದು ಕಳೆಯೆ ರಾಧೆಯ ವೇದನೆ (೧)

ದೇಹವವಳೊ ಪ್ರಾಣ ನೀನೊ ಅವಳೊಲಮೆಯ ತಾಣವೊ
ನೀನೇ ಇರದ ವೃಂದಾವನದೊಳು ರಾಧೆಗೆಲ್ಲಿಯ ಪ್ರೇಮವೊ
ತೂಗುಮಂಚದಿ ನಲಿವ ವೀಣೆಯ ನಾದಯಮುನೆಯು ಮೌನವು
ಶ್ರೀನಿವಾಸ ವಿಠಲ ನೀನಿರೆ ರಾಧೆ ಪ್ರೇಮದ ಯಾನವು (೨)

ಬಾರೊ ಬೇಗನೆ ಬೃಂದಾವನಕೆ ಚೆಲುವ ಮೇಘಶ್ಯಾಮ
ಉಲಿದು ಮುರಳಿಯ ಅರಳಿಸಿನ್ನು ರಾಧೆಯೆದೆಯೊಳು ಪ್ರೇಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೭.೨೦೧೨

Saturday, July 28, 2012

Shri Krishnana Nooraru Geethegalu - 258

ಶ್ಯಾಮನೀಗ ಬರುವನೆ

ಹೇಳೆ ಸಖಿ ಹೇಳೆ ಸಖಿ ಶ್ಯಾಮನೀಗ ಬರುವನೆ
ಶ್ರಾವಣಿಯ ವಿರಹದೊಡಲಿಗೆ ಪ್ರೀತಿಹೂಮಳೆ ತರುವನೆ

ತೇಲಿಬರುತಿಹ ತಿಳಿಗಾಳಿಯೆ ರಾಧೆ ಮೊರೆಯನು ಕೇಳೆಯ
ಕೊಳಲನೂದುವ ಗೊಲ್ಲಚೆಲ್ವನ ಹಾದಿಯೊಳು ನೀ ಕಂಡೆಯ
ಬರುವೆನೆಂದ ಬರೆವೆನೆಂದ ಎನ್ನ ಹೃದಯದ ಪಟದೊಳು
ಮಧುರಕಾವ್ಯದ ನವಪಲ್ಲವಿ ಎನ್ನ ಮೈಮನ ವನದೊಳು(೧)

ಏನೊ ತಿಳಿಯೆ ಎನ್ನ ಶ್ಯಾಮನ ಮುರಳಿ ಮೌನವ ತಾಳಿದೆ
ಒಂಟಿಯಾಗಿಹ ರಾಧೆಯೆದೆಯನು ಮೌನಶರವದು ಕೊಲುತಿದೆ
ಜಗದ ಮಾತಿಗೆ ಏಕೊ ಬೇಸರ ಬಾರೊ ಪ್ರಾಣ ಶ್ರೀಕೃಷ್ಣನೆ
ಶ್ರೀನಿವಾಸ ವಿಠಲ ನೀನು ನಿಜದಿ ಭಾಮೆಗು ನಲ್ಲನೆ (೨)

ಹೇಳೆ ಸಖಿ ಹೇಳೆ ಸಖಿ ಶ್ಯಾಮನೀಗ ಬರುವನೆ
ಶ್ರಾವಣಿಯ ವಿರಹದೊಡಲಿಗೆ ಪ್ರೀತಿಹೂಮಳೆ ತರುವನೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೭.೨೦೧೨

Thursday, July 26, 2012

Shri Krishnana Nooraru Geethegalu - 257

ವಂದೆ ಶ್ರೀ ನಾರಾಯಣಿ

ವಂದೆ ಶ್ರೀ ನಾರಾಯಣಿ ವೈಕುಂಠವಾಸಿನಿ
ಸುಖದಿ ಕಾಯೆ ಕಲಿಯೊಳೆಮ್ಮ ಕರಿವರದನ ರಾಣಿ

ಮೂಢರೆಮಗೆ ಮತಿಯನೀಯೆ ಮಂಗಳದ ಬದುಕನು
ಮಾತೆ ನೀನು ಮೂಜಗಕೆ ನಿನ್ನ ಮಮತೆ ಮಡಿಲನು
ದುರಿತ ದಾರಿದ್ರ್ಯ ಕಳೆಯೆ ಧರಣೀಶನ ಒಡತಿಯೆ
ಧನಧಾನ್ಯೆ ಮಾನ್ಯೆ ನಮೊ ಗೋವಿಂದನ ಮಡದಿಯೆ (೧)

ಶಕ್ತಿಸಂಪದ ಸಿರಿಯು ನೀನು ನೆಲಸೆ ಕಲಿಯ ಬುವಿಯೊಳು
ಭಾಗ್ಯಲಕುಮಿ ಸೌಭಾಗ್ಯದಾತೆ ಸದಾ ಎಮ್ಮ ಬಲದೊಳು
ವಿಜಯವಿತ್ತು ರಾಜ್ಯ ಪೊರೆಯೆ ಪದುಮನಾಭವಲ್ಲಭೆ
ಶ್ರೀನಿವಾಸ ವಿಠಲ ಹೃದಯೆ ನೀನಿರುವೆಡೆ ಶ್ರೀ ಶುಭೆ (೨)

ವಂದೆ ಶ್ರೀ ನಾರಾಯಣಿ ವೈಕುಂಠವಾಸಿನಿ
ಸುಖದಿ ಕಾಯೆ ಕಲಿಯೊಳೆಮ್ಮ ಕರಿವರದನ ರಾಣಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೭.೨೦೧೨

Shri Krishnana Nooraru Geethegalu - 256

ಕಾಯುತಿಹೆನು ಹೇಳೆ ಸಖಿ

ಗೋಕುಲದಾ ಚೆಲುವ ಕೃಷ್ಣ ಎನ್ನ ಗೆಳೆಯನೆ
ಕಾಯುತಿಹೆನು ಹೇಳೆ ಸಖಿ ಎಂದು ಬರುವನೆ ಅವ

ಸುಮ್ಮನಿದ್ದ ಎನ್ನ ಎದೆಗೆ ಸುಮಬಾಣವ ಹೂಡಿದ
ಸನಿಹ ಕರೆದು ಅಧರಗಳಲಿ ಅಕ್ಕರೆಯನು ಬರೆದ
ಮುಂಜುಹನಿ ಮುಸುಕಿದೆನ್ನ ಮೊಗ್ಗಿನಂಥ ಹೃದಯದಿ
ಒಲುಮೆಹೂವ್ವ ವರ್ಣ ಚೆಲ್ಲಿ ಚಿತ್ತಾರವ ಬಿಡಿಸಿದ (೧)

ನಿದಿರೆ ಕಸಿದ ಕನಸ ಹೊಸೆದ ಬಯಕೆ ಚಾದರ ಹೊದಿಸಿದ
ಕೊಳಲನೂದಿ ನಲುಮೆರಾಗವೆನ್ನ ಮೈಮನ ತುಂಬಿದ
ನಡುವ ಬಳಸಿದ ಜಗವ ಮರೆಸಿದ ಪ್ರಾಣವೆನ್ನ ಲೋಲ
ಬರುವನೆಂದೇ ಬೃಂದಾವನಕೆ ಶ್ರೀನಿವಾಸ ವಿಠಲ (೨)

ಗೋಕುಲದಾ ಚೆಲುವ ಕೃಷ್ಣ ಎನ್ನ ಗೆಳೆಯನೆ
ಕಾಯುತಿಹೆನು ಹೇಳೆ ಸಖಿ ಎಂದು ಬರುವನೆ ಅವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೭.೨೦೧೨

Wednesday, July 25, 2012

Shri Krishnana Nooraru Geethegalu - 255

ಓಡಿ ಪೋಗದಿರೆಲೊ ರಂಗ

ಓಡಿ ಪೋಗದಿರೆಲೊ ರಂಗ ನೀ ಮೊಸರಗಡಿಗೆಯ ಹೊಡೆದು
ನಂದನಸುತನಿಗೆ ಅಂಕೆಯೆಂಬುವುದಿಲ್ಲ ಎಂದು ದೂರುವರೊ ಗೋಕುಲಜನ

ಸಾಸಿರ ಸುಳ್ಳ ನೀ ಪೇಳಬಹುದೊ ನವನೀತಚೋರ ನೀನಲ್ಲವೆಂದು
ಅಂಗೈ ಹುಣ್ಣಿಗೆ ಕನ್ನಡಿ ಏಕೊ ನೋಡಿಕೊ ನಿನ್ನ ಕೈಬಾಯನ್ನ (೧)

ಕಂಡೋರ ಮನೆಗೋಗಿ ತಿಂದುಣ್ಣುವುದ ಕೃಷ್ಣಯ್ಯ ಕದಿಯದಿರೊ
ಗೋಕುಲದೆಜಮಾನ ಆ ನಿನ್ನ ಅಪ್ಪಯ್ಯ ತಪ್ಪನು ಮಾಡದಿರೊ (೨)

ಸಕ್ಕರೆ ಸಿಹಿತಿಂಡಿ ಕೊಡುವೆನೊ ನಿನಗೆ ರುಚಿರುಚಿ ಹಾಲಬಟ್ಟಲ
ಸಕಲದಾಯಕ ನೀನು ಕದಿವುದು ಸರಿಯೆನೊ ಶ್ರೀನಿವಾಸ ವಿಠಲ (೩)

ಓಡಿ ಪೋಗದಿರೆಲೊ ರಂಗ ನೀ ಮೊಸರಗಡಿಗೆಯ ಹೊಡೆದು
ನಂದನಸುತನಿಗೆ ಅಂಕೆಯೆಂಬುವುದಿಲ್ಲ ಎಂದು ದೂರುವರೊ ಗೋಕುಲಜನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೭.೨೦೧೨

Shri Krishnana Nooraru Geethegalu - 254

ಶ್ರಾವಣದ ಇಳಿಸಂಜೆ

ಶ್ರಾವಣದ ಇಳಿಸಂಜೆ ಸುರಿವ ಮಳೆ ಚಳಿ ಗಾಳಿ
ಬೇಡುತಿದೆ ಮೈಮನವು ಶ್ಯಾಮನೊಲುಮೆ

ಎನ್ನೆದೆಯ ಬನದೊಳಗೆ ಆಸೆ ತರುಲತೆ ಚಿಗುರು
ಶ್ಯಾಮನೆದೆಯನು ತಬ್ಬೆ ತವಕಿಸುತಿದೆ
ಒಳವುರಿವ ವಿರಹಾಗ್ನಿ ನಾಚಿಕೆಯ ಗೆರೆ ಮೀರಿ
ತಣಿಸೊ ಶ್ಯಾಮ ಎನುತ ಧಗಧಗಿಸಿದೆ (೧)

ಎನ್ನೆದೆಯ ಬಾನಿನೊಳು ಗಾಳಿಮಳೆ ಹೊಯ್ದಾಟ
ನೀನಿರದೆ ನಾ ಒಂಟಿ ನೋವ ಕವಿತೆ
ಕತ್ತಲೊಳು ನಾನಿಹೆನು ಒಲುಮೆ ಬೆಳಕನು ತಾರೊ
ಶ್ರೀನಿವಾಸ ವಿಠಲ ನೀ ಜೀವ ಹಣತೆ (೨)

ಶ್ರಾವಣದ ಇಳಿಸಂಜೆ ಸುರಿವ ಮಳೆ ಚಳಿ ಗಾಳಿ
ಬೇಡುತಿದೆ ಮೈಮನವು ಶ್ಯಾಮನೊಲುಮೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೭.೨೦೧೨

Monday, July 23, 2012

Shri Krishnana Nooraru Geethegalu - 253

ಯಾರೆ ಆ ಚೆಲುವನಾರೆ

ಯಾರೆ ಆ ಚೆಲುವನಾರೆ ಹೇಳೆ ಗೆಳತಿ ಎನಗೆ
ವೃಂದಾವನದ ನೆರೆಯವಳೆ ಪರಿಚಯವೆ ನಿನಗೆ

ಎನ್ನ ನಯನದಿ ನಗುತ ನಿಲುವ ಸವಿಸಕ್ಕರೆ ನಿದಿರೆ ಕದಿವ
ಬಾರೊ ಎನ್ನ ಸನಿಹವೆನಲು ರೆಪ್ಪೆಕದವ ತೆರೆದೋಡುವ (೧)

ಬಯಕೆ ಕಂಗಳ ಕಣಜವವನು ಒಲುಮೆ ಹೂವಿನ ಹೃದಯನೆ
ಸೆಳೆದು ಎನ್ನನು ಪ್ರೀತಿಸುಳಿಯೊಳು ಒಂಟಿಯಾಗಿಸಿ ಹೋದನೆ (೨)

ಉಲಿದು ಮುರಳಿಯ ಮೋಹರಾಗವ ಪ್ರೇಮವರ್ಷವ ಸುರಿದನೆ
ವಿರಹದಗ್ನಿಯ ಉರಿಸಿ ಎನ್ನೊಳು ತಣಿಸಲಾರದೆ ಹೋದನೆ (೩)

ಬೇಸರವ ಮರೆಯೆ ರಾಧೆ ಅವನು ಗೋಕುಲ ಚೆಲುವನೆ
ಶ್ರೀನಿವಾಸ ವಿಠಲ ಕೃಷ್ಣನೆ ನಿನ್ನ ಪ್ರೇಮಕೆ ಒಲಿವನೆ (೪)

ಯಾರೆ ಆ ಚೆಲುವನಾರೆ ಹೇಳೆ ಗೆಳತಿ ಎನಗೆ
ವೃಂದಾವನದ ನೆರೆಯವಳೆ ಪರಿಚಯವೆ ನಿನಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೭.೨೦೧೨

Saturday, July 21, 2012

Shri Krishnana Nooraru Geethegalu - 252

ಶ್ರೀಗಣಪ

ಶಿವಹೃದಯೆ ಪಾರ್ವತಿಯುದರನೆ ಕಾವುದು ಎಮ್ಮನು ಶ್ರೀಗಣಪ
ಮೊರಕರ್ಣನೆ ಎಮ್ಮ ಮೊರೆಯನಾಲಿಸಿ ಸಲಹುವುದೆಮ್ಮ ಶ್ರೀಗಣಪ

ವಿಘ್ನಗಳೆಮ್ಮವ ಭಗ್ನವಗೊಳಿಸೊ ಮೋದಕಪ್ರಿಯನೆ ಶ್ರೀಗಣಪ
ಗರಿಕೆಯನಿರಿಸಿ ಹರಕೆಯು ನಿನ್ನೊಳು ಸುಖದಿಂ ಪೊರೆಯೊ ಶ್ರೀಗಣಪ (೧)

ಸಿರಿಮತಿಯೊಡೆಯನೆ ಸುಮತಿಯ ನೀಡೊ ಮಂಗಳಮೂರುತಿ ಶ್ರೀಗಣಪ
ಕ್ಷಿಪ್ರ ಕೃಪಾಳು ಸುಗತಿಯ ಕರುಣಿಸೊ ನಿಟಿಲಾಕ್ಷಸುತನೆಮ್ಮ ಶ್ರೀಗಣಪ (೨)

ಓಂಕಾರರೂಪನೆ ಉರಗಭೂಷಣನೆ ಮೂಷಕವಾಹನ ಶ್ರೀಗಣಪ
ಶ್ರೀನಿವಾಸ ವಿಠಲನೆ ಆದಿಯೊಳ್ಪೂಜಿಪ ಶ್ರೀಆದಿದೇವನೆ ಶ್ರೀಗಣಪ (೩)

ಶಿವಹೃದಯೆ ಪಾರ್ವತಿಯುದರನೆ ಕಾವುದು ಎಮ್ಮನು ಶ್ರೀಗಣಪ
ಮೊರಕರ್ಣನೆ ಎಮ್ಮ ಮೊರೆಯನಾಲಿಸಿ ಸಲಹುವುದೆಮ್ಮ ಶ್ರೀಗಣಪ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೧.೦೭.೨೦೧೨

Friday, July 20, 2012

Shri Krishnana Nooraru Geethegalu - 251

ಯಾವಾಗಲೂ ಹೀಗೇ ಅವನು

ಯಾವಾಗಲೂ ಹೀಗೇ ಅವನು ಎನ್ನ ಪ್ರಾಣ ಶ್ಯಾಮನು
ಇಗೋ ಬಂದೆ ಎನುತ ಬರದೆ ಬೇಸರವನು ತರುವನು

ತಲೆಬಾಗಿಲ ಮಾವು ತೋರಣ ಶ್ಯಾಮನೆಲ್ಲಿ ಎನುತಿದೆ
ಅಂಗಳದ ರಂಗವಲ್ಲಿ ಬರುವನೆನೇ ಕೇಳಿದೆ
ಹೊಸ್ತಿಲೊಳು ಬೆಳಗೊ ಪ್ರಣತಿ ಹಾದಿಬೆಳಕ ಚೆಲ್ಲಿವೆ
ಪಾದತೊಳೆಯೆ ನೀರತಂಬಿಗೆ ಶ್ಯಾಮನವನ ಕಾದಿದೆ (೧)

ತೂಗಲೇನೆ ಎನುವ ಮಂಚಕೆ ಶ್ಯಾಮನಿಲ್ಲ ಎನ್ನಲೇ
ನುಡಿಯಲೇನೆ ಎನುವ ವೀಣೆಗೆ ಮೌನಧರಿಸು ಎನ್ನಲೇ
ಗೋಡೆಯೊಳಗಿನ ಮಿಲನಚಿತ್ರಕೆ ನಾನು ಒಂಟಿ ಎನ್ನಲೇ
ವಿರಹದೆದೆಯ ಭೋರ್ಗರೆತವ ಕೊಂಚ ತಾಳು ಎನ್ನಲೇ (೨)

ಶೃಂಗಾರದ ಶಯನಗೃಹದಿ ಗಂಧಚಂದನ ಘಮಘಮ
ಬಿಸಿಹಾಲಿನ ತಂಬಿಗೆಯೊಳು ಸಿಹಿಸಕ್ಕರೆ ಸಂಗಮ
ಮಿಲನ ಸುಖಕೆ ಅವನೇ ಇಲ್ಲ ಶ್ರೀನಿವಾಸ ವಿಠಲ
ಎನ್ನಂತೆಯೆ ಕಾಯುತಿಹುದು ಅವನ ಪ್ರೀತಿಗೋಕುಲ (೩)

ಯಾವಾಗಲೂ ಹೀಗೇ ಅವನು ಎನ್ನ ಪ್ರಾಣ ಶ್ಯಾಮನು
ಇಗೋ ಬಂದೆ ಎನುತ ಬರದೆ ಬೇಸರವನು ತರುವನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೭.೨೦೧೨

Thursday, July 19, 2012

Shri Krishnana Nooraru Geethegalu - 250

ಏಕೆ ಹೀಗೆ ಮೌನ ರಾಧೆ

ಏಕೆ ಹೀಗೆ ಮೌನ ರಾಧೆ ಮನವ ತೆರೆದು ಹೇಳೆ
ಗೋಧೂಳಿಯ ಘಮಘಮವಿದೆ ಬರುವ ಶ್ಯಾಮ ತಾಳೆ

ಗೋಕುಲದೆ ಮುದ್ದುಕರುಗಳು ಮಾತೆಮೊಲೆಯ ಮರೆತಿವೆ
ಪುಟ್ಟ ಕಾಲ್ಗಳ ಕಿರುಗೆಜ್ಜೆಯು ದಿವ್ಯಮೌನ ತಳೆದಿವೆ (೧)

ಯುಮುನೆಯೆದೆಯೊಳು ಚಡಪಡಿಕೆಯು ವೃಂದಾವನದಿ ಬೇಸರ
ನಲಿಯುತಿರಲು ಶ್ಯಾಮ ನಿನ್ನೊಡ ಚುಕ್ಕೆಯಾಗಸ ಸುಂದರ (೨)

ಚಿತ್ರಗಡಿಗೆಯ ನೊರೆಯ ಹಾಲು ಬಾರೊ ಕೃಷ್ಣ ಎನುತಿದೆ
ಒಲುಮೆರಾಗವ ನುಡಿಯೆ ವೀಣೆಯು ತೂಗುಮಂಚದಿ ಕಾದಿದೆ (೩)

ಮೌನ ಮುರಿಯೆ ನೋವ ತೊರೆಯೆ ಶ್ಯಾಮ ಬಂದೇ ಬರುವನು
ಶ್ರೀನಿವಾಸ ವಿಠಲ ಕೃಷ್ಣನು ಪ್ರೀತಿಧಾರೆಯ ಎರೆವನು (೪)

ಏಕೆ ಹೀಗೆ ಮೌನ ರಾಧೆ ಮನವ ತೆರೆದು ಹೇಳೆ
ಗೋಧೂಳಿಯ ಘಮಘಮವಿದೆ ಬರುವ ಶ್ಯಾಮ ತಾಳೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೭.೨೦೧೨


Wednesday, July 18, 2012

Shri Krishnana Nooraru Geethegalu - 249

ರಾಮನ ತೋರೆನಗೆ

ರಾಮನ ತೋರೆನಗೆ ಹನುಮ ಶ್ರೀರಾಮನ ತೋರೆನಗೆ
ರಾಮನ ದಿವ್ಯನಾಮನ ಮೂಜಗಕ್ಷೇಮನ

ಕಮಲನಯನ ಶ್ರೀಕೌಸಲ್ಯೆಕಂದನ
ಕಲಿಯುಗವರದ ಶ್ರೀಕೋದಂಡರಾಮನ
ಪಿತವಾಕ್ಯಪರಿಪಾಲ ರಾಮ ಪುರುಷೋತ್ತಮನ
ಅಕ್ಷಯಗುಣಧಾಮ ತ್ರೇತಾದೇವನ (೧)

ಭವರೋಗಹರ ಶ್ರೀಬಕುತ ಸುಲಭನ
ಜಗದೋದ್ಧಾರ ಶ್ರೀಜಾನಕಿವಲ್ಲಭನ
ಶಬರಿಯ ಕರುಣನ ನಿನ್ನಾತ್ಮ ಪ್ರಾಣನ
ದಿವ್ಯಚರಣವ ತೋರೊ ದಶಶಿರಹರನ (೨)

ವಾಯುರೂಪದೊಳು ನೀ ಸೇವೆಗೈದನ
ಬಲವಂತ ನೀನಾಗೆ ಜಯವ ತಂದಿತ್ತನ
ಧರೆಯೊಳು ನೀ ನೆಲೆಸೆ ಶ್ರೀಮಧ್ವರಾಯನಾಗಿ
ಶ್ರೀನಿವಾಸ ವಿಠಲನೆ ತಾನಾಗಿ ಪೊರೆದನ (೩)

ರಾಮನ ತೋರೆನಗೆ ಹನುಮ ಶ್ರೀರಾಮನ ತೋರೆನಗೆ
ರಾಮನ ದಿವ್ಯನಾಮನ ಮೂಜಗಕ್ಷೇಮನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೭.೨೦೧೨

Shri Krishnana Nooraru Geethegalu - 248

ಸಡಗರ

ಸುಂದರ ಶ್ಯಾಮ ಸುಂದರ ರಾಧೆ ವದನವು ಚಂದಿರ
ರಾಧೆ-ಮಾಧವ ಮಿಲನ ಕ್ಷಣವು ಬೃಂದಾವನದೆ ಸಡಗರ

ಕೃಷ್ಣ ನಯನವು ಸಂಜೆಯಾಗಸ ಬಯಕೆ ತಾರೆ ಹೊಳಪು
ರಾಧೆ ನಡುವದು ಬಳುಕೊ ಯಮುನೆ ಆಹಾ ಎಂಥ ಒನಪು (೧)

ಕೃಷ್ಣನೆದೆಯದು ಮತ್ತಿನಶ್ವವೊ ವೇಗೋನ್ಮಾದದೋಟ
ರಾಧೆ ಚೆಲುವದಾ ರಸಿಕನೊಡಲಿಗೆ ಒಲುಮೆ ಬೆರೆತ ಊಟ (೨)

ಕೃಷ್ಣ ಮೈಮನ ಜೀವಕಣಕಣ ಮೋಹ ಮೋಹನ ಗಾನ
ರಾಧೆ ನುಡಿವ ಜೀವವೀಣೆಯು ಹರ್ಷದಲೆಯಲೆ ಯಾನ (೩)

ಕೃಷ್ಣ ಚೆಲುವನು ಚೆಲುವ ಚೋರನು ಶ್ರೀನಿವಾಸ ವಿಠಲ
ದಿನವೂ ಸವಿವನು ಸವಿದು ತಣಿವನು ರಾಧೆ ಪ್ರೇಮದ ಬಟ್ಟಲ(೪)

ಸುಂದರ ಶ್ಯಾಮ ಸುಂದರ ರಾಧೆ ವದನವು ಚಂದಿರ
ರಾಧೆ-ಮಾಧವ ಮಿಲನ ಕ್ಷಣವು ಬೃಂದಾವನದೆ ಸಡಗರ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೭.೨೦೧೨

Saturday, July 14, 2012

Shri Krishnana Nooraru Geethegalu - 247

ಕೃಷ್ಣ ತ್ರಿಜಗವಂದಿತ

ಕೃಷ್ಣ ತ್ರಿಜಗವಂದಿತ ಶ್ರೀಕೃಷ್ಣ
ಸುಚರಿತ ಶುಭದಾತ ಸುಜನ ಸಂಪ್ರೀತ

ಮಥುರಾ ಸೆರೆಯುದಯ ಗೋಕುಲಪುರನಿಲಯ
ದ್ವಾಪರದ ಮೂಡಣದ ಅರುಣೋದಯ
ಶ್ರೀಪಾದ ಶರಣಂಗೆ ಸರ್ವಮಂಗಳ ಪುಣ್ಯ
ವಂದೆ ದೇವಕಿ ಕಂದ ತ್ರೈಲೋಕಜನ್ಯ (೧)

ಕಂಸ ಸಂಹಾರ ಶ್ರೀ ಕಾಳಿಂಗ ಮರ್ದನನೆ
ಗೋವರ್ಧನ ಎತ್ತಿ ಇಂದ್ರನಹಂ ಇಳುಹಿದನೆ
ಪೂತನೆಯ ಪ್ರಿಯಸುತನೆ ಪಾಂಡವರ ಪೊರೆದವನೆ
ಯದುಕುಲಜ ಪ್ರಿಯದೇವ ರಾಧೆಹೃದಯ (೨)

ಸೃಷ್ಟಿಶಕ್ತಿಯು ಕೃಷ್ಣ ಕರ್ಮಮುಕ್ತಿಯು ಕೃಷ್ಣ
ಜಯದೇವ ರಸಗೀತದುದ್ಗೀತ ಕೃಷ್ಣ
ಸಕಲವನು ಸಕಲರನು ಸಲಹುವನೆ ಶ್ರೀಕೃಷ್ಣ
ಶ್ರೀನಿವಾಸ ವಿಠಲ ಶ್ರೀದಶದೇವ ಕೃಷ್ಣ (೩)

ಕೃಷ್ಣ ತ್ರಿಜಗವಂದಿತ ಶ್ರೀಕೃಷ್ಣ
ಸುಚರಿತ ಶುಭದಾತ ಸುಜನ ಸಂಪ್ರೀತ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೭.೨೦೧೨

Monday, July 9, 2012

Shri Krishnana Nooraru Geethegalu - 246

ನಿನ್ನೊಲುಮೆ ಇರದೆನ್ನ

ನಿನ್ನೊಲುಮೆ ಇರದೆನ್ನ ಬದುಕುಂಟೆ ಮಾಧವ
ನಾ ಬರಿಯ ಬೊಂಬೆಯೊ ನೀನೆನ್ನ ಜೀವ

ಮೂಜಗದ ಅಣುಕಣದ ಜೀವ ಜೀವನ ನೀನೊ
ಚರಣದೊಳು ಶರಣಾದೆ ಕರುಣ ಹರಸು
ನೀನಿತ್ತ ಬದುಕಿದುವು ನೀ ದಿವ್ಯ ಬೆಳಕಯ್ಯ
ನಿಶೆ ಹರಿದು ಉಷೆಯೆಡೆಗೆ ಎನ್ನ ನಡೆಸು (೧)

ಧರೆ-ಧರ್ಮವನು ಪೊರೆದ ದಶರೂಪನೊ ನೀನು
ಎನ್ನೊಳಗಿನಂಧಕನ ತೊಲಗಿಸಿನ್ನು
ಪಂಚಾಬ್ಧಿ ದೇಹದೀ ಶುದ್ಧಾತ್ಮದಾಲಯದೆ
ಶ್ರೀನಿವಾಸ ವಿಠಲಯ್ಯ ನೆಲೆಸೊ ಇನ್ನು (೨)

ನಿನ್ನೊಲುಮೆ ಇರದೆನ್ನ ಬದುಕುಂಟೆ ಮಾಧವ
ನಾ ಬರಿಯ ಬೊಂಬೆಯೊ ನೀನೆನ್ನ ಜೀವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೭.೨೦೧೨

Saturday, July 7, 2012

Shri Krishnana Nooraru Geethegalu - 245

ಆಗಮನ

ರಾಧೆಯೆದೆಯೊಳು ಮೌನಯಾನ ಕಾಯುತಿದೆ ಬೃಂದಾವನ
ಗೋಧೂಳಿಯ ಸಂಭ್ರಮದೊಳು ಬರುವ ಎಮ್ಮ ಶ್ಯಾಮನ

ಯಮುನೆಯೊಡಲೊಳು ಚಿಂತಾಲಹರಿ ಬರುವನೆ ಬಾರದಿರುವನೆ
ಕಾಯಿಸದಿರೊ ವಿರಹಿ ರಾಧೆಯ ಎನುವುದದರ ಪ್ರಾರ್ಥನೆ (೧)

ಚುಕ್ಕೆ ಬಾನೊಳು ಚಂದ್ರ ಬೇಸರ ಬರುವನೆ ಬಾರದಿರುವನೆ
ನಡುವ ಬಳಸಿ ರಾಧೆಯಧರಕೆ ಸಿಹಿಯೊಲುಮೆಯ ಸುರಿವನೆ (೨)

ತೂಗುಮಂಚವು ಕೇಳುತಿಹುದು ಬರುವನೆ ಬಾರದಿರುವನೆ
ರಾಧೆ ಸನಿಹದ ಸಂಗಸುಖದೊಳು ಹರ್ಷೋದ್ಘಾರಗರೆವನೆ (೩)

ಮುದ್ದುವೀಣೆಯು ಮೌನವಾಗಿದೆ ಬರುವನೆ ಬಾರದಿರುವನೆ
ರಾಧೆ ಹೃದಯದ ಜೀವತಂತಿಯ ಮಿಡಿವನೆ ರಾಗ ನುಡಿವನೆ (೪)

ಯುಗದ ಸಾಕ್ಷಿಯ ಬೃಂದಾವನವಿದು ರಾಧೆ-ಮಾಧವ ಮಿಲನಕೆ
ಎಂಬ ನಿಜವದ ಶ್ರೀನಿವಾಸ ವಿಠಲನವನು ಮರೆವನೆ (೫)

ರಾಧೆಯೆದೆಯೊಳು ಮೌನಯಾನ ಕಾಯುತಿದೆ ಬೃಂದಾವನ
ಗೋಧೂಳಿಯ ಸಂಭ್ರಮದೊಳು ಬರುವ ಎಮ್ಮ ಶ್ಯಾಮನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೭.೨೦೧೨

Wednesday, July 4, 2012

Shri Krishnana Nooraru Geethegalu - 244

ನಂಬಲು ಕೆಡುಕಿಲ್ಲವೊ

ನಂಬಲು ಕೆಡುಕಿಲ್ಲವೊ ಶ್ರೀರಾಮನ
ನಂಬದೆ ಬದುಕಿಲ್ಲವೊ ಶ್ರೀಶ್ಯಾಮನ (ಪಲ್ಲವಿ)

ನಂಬದೆ ನಂಬಿದೆನೆನುವ ನರಜನುಮವು
ಬವಣೆಯ ಬಣವೆಯೊ ನರಮನುಜ (ಅನುಪಲ್ಲವಿ)

ಧನ್ಯನಾದನೊ ಹನುಮ ದಿವ್ಯಚರಣವ ನಂಬಿ
ದರುಶನ ಮಾತ್ರದೊಳಾ ಶಬರಿ
ನಂಬದೆ ಉಳಿದಸುರ ಧರೆಯೊಳಗಳಿದನೊ
ಶರಣರ ಪೊರೆವನೊ ಶ್ರೀಹರಿ (೧)

ಮಾತೆ ಯಶೋದೆಯ ಮಡಿಲೊಳಗಾಡುತ
ಗೋಕುಲ ಸಲಹಿದ ಗೋವಿಂದ
ಹಿಂಸಕ ಕಂಸನ ಧ್ವಂಸವಗೈದನೊ
ದ್ವಾರಕಾಧೀಶ ಶ್ರೀಅರವಿಂದ (೨)

ಕೃತದಿಂ ಕಲಿವರೆಗು ಆರರ ನಿಶೆ ಕಳೆದು
ಕಾಯುತಲಿರುವನೊ ಶ್ರೀಲೋಲ
ನಂಬಿದ ಸುಜನರ ಸುಖದೊಳು ಪಾಲಿಸುತ
ಮಂಗಳವೀವನೊ ಶ್ರೀನಿವಾಸ ವಿಠಲ (೩)

ನಂಬಲು ಕೆಡುಕಿಲ್ಲವೊ ಶ್ರೀರಾಮನ
ನಂಬದೆ ಬದುಕಿಲ್ಲವೊ ಶ್ರೀಶ್ಯಾಮನ (ಪಲ್ಲವಿ)

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೭.೨೦೧೨

Shri Krishnana Nooraru Geethegalu - 243

ಸುಮಧುರ ಮುರಳಿಗಾನ

ಮಧುರ ಸುಮಧುರ ಮುರಳಿಗಾನವು ಕರ್ಣಾನಂದವ ತರುತಲಿದೆ
ರಾಧೆಯೊಲವಿನ ಬೃಂದಾವನದೊಳು ಗೋಕುಲಕೃಷ್ಣನ ನಾದವಿದೆ

ಜುಳುಜುಳು ಜುಳುಜುಳು ಕಿರುಗೆಜ್ಜೆ ಕಾಲ್ಗಳ ಯಮುನೆಯು ನಲುಮೆಯಿಂದೋಡುತಿದೆ
ತೀರದ ಹಸುರಿನ ಚಿಗುರಿನ ಎದೆಯೊಳು ನವಪುಷ್ಪಾಂಕುರವಾಗುತಿದೆ
ಮಾಮರದೆದೆಯಲಿ ಕೋಕಿಲ ತಾನು ನವರಸಗಾನವ ಬರೆಯುತಿದೆ
ರಂಗಿನ ಬಾನೊಳು ಚುಕ್ಕಿಯ ಸಿಂಗಾರ ತಿಂಗಳು ಚೆಂದದಿ ನಗುತಲಿದೆ (೧)

ಚಿನ್ನದ ಚಿತ್ರದ ಉಯ್ಯಾಲೆಯು ತಾ ರಾಧೆ-ಮಾಧವರ ಕರೆಯುತಿದೆ
ಶೃಂಗಾರ ನುಡಿಸೊ ವಿರಹದ ವೀಣೆಯು ಒಂಟಿಯೆಂದೊಳಗೇ ನೋಯುತಿದೆ
ಮೋಹನನಿಲ್ಲದ ರಾಧೆಯ ಲೋಕದಿ ಪ್ರೇಮಕೆ ಅರ್ಥವೇ ಶೂನ್ಯವಿದೆ
ರಾಧೆಯ ಜೀವನ ಶ್ರೀನಿವಾಸ ವಿಠಲನ ಬೃಂದಾವನವದು ಕಾಯುತಿದೆ (೨)

ಮಧುರ ಸುಮಧುರ ಮುರಳಿಗಾನವು ಕರ್ಣಾನಂದವ ತರುತಲಿದೆ
ರಾಧೆಯೊಲವಿನ ಬೃಂದಾವನದೊಳು ಗೋಕುಲಕೃಷ್ಣನ ನಾದವಿದೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೭.೨೦೧೨