Wednesday, March 30, 2011

Shri Krishnana Nooraru Geethegalu - 069

ಗೋವಿಂದ ಬರುವನೆ

ಕಂದ ಬರುವನೆ ಎಮ್ಮ ನಂದ ಬರುವನೆ
ಸಂಜೆಯಾಯ್ತು ಗೋಕುಲಕೆ ಗೋವಿಂದ ಬರುವನೆ

ಚಿಣ್ಣಗೋಪರ ಸಂಗ ಕುಣಿದ
ರಾಗಮುರಳಿಯ ನುಡಿಸಿ ನಲಿದ
ಮಂದೆತುರುಗಳ ಕಾಯ್ದು ದಣಿದ
ಮುದ್ದುಗೋಪಿಯ ಮುಕುಂದ ಕಂದ (೧)

ಯಮುನೆಯೊಡಲ ಕಾಳಿಂದಿ ಜೈಸಿದ
ಕಾಡು ಹೂಗಳ ಮಾಲೆ ಧರಿಸಿದ
ದುರುಳರೆದೆಯನು ಬಗೆದು ಸೀಳಿದ
ಅಮ್ಮ ದೇವಕಿ ಅರವಿಂದ ಕಂದ (೨)

ಚೆಲುವೆ ರಾಧೆಯ ಸನಿಹ ಕರೆದ
ನಯನ ಮಿಲನದಿ ಎಲ್ಲ ನುಡಿದ
ರಂಗು ಗಲ್ಲಕೆ ತುಟಿ ಚಿತ್ರ ಬರೆದ
ಶ್ರೀನಿವಾಸ ವಿಠಲ ನಾಮದ (೩)

ಕಂದ ಬರುವನೆ ಎಮ್ಮ ನಂದ ಬರುವನೆ
ಸಂಜೆಯಾಯ್ತು ಗೋಕುಲಕೆ ಗೋವಿಂದ ಬರುವನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೩.೨೦೧೧

Shri Krishnana Nooraru Geethegalu - 068

ದೇವ ನಾರಾಯಣ

ಸರ್ವರೊಳು ಸರ್ವದೊಳು ನೀನೆಂಬುದಿರಲಿ
ನಾನಳಿದು ನಾಮವದು ನಾರಾಯಣ

ನಯನ ನರಜಾಲ ನಾಸಿಕವು ನಾಲಗೆಯು
ಸತತ ನಿನ್ನೊಳಗಿರಲಿ ನಾರಾಯಣ
ಚಿತ್ತವಿರಲೊ ಶುದ್ಧ ನಿನ್ನ ಸ್ಮರಣೆಗೆ ಬದ್ಧ
ಅನ್ಯದಾಸೆಯದೆಕೊ ನಾರಾಯಣ (೧)

ಹೇಗೆ ಬಂದೆನೊ ಅರಿಯೆ ಎತ್ತ ಪೋಗುವೆನರಿಯೆ
ನಶ್ವರವು ನಿನ್ನನ್ಯ ನಾರಾಯಣ
ಜನನಮರಣವು ನೇಮ ಶ್ರೀನಿವಾಸ ವಿಠಲಯ್ಯ
ನಡುವೆ ಕಾಯೋ ದೇವ ನಾರಾಯಣ (೨)

ಸರ್ವರೊಳು ಸರ್ವದೊಳು ನೀನೆಂಬುದಿರಲಿ
ನಾನಳಿದು ನಾಮವದು ನಾರಾಯಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೩.೨೦೧೧

Shri Krishnana Nooraru Geethegalu - 067

ನಂದ ಕೋಲನಾಡಿದ

ನಂದ ಕೋಲನಾಡಿದ ಆನಂದ ಕೋಲನಾಡಿದ
ಅಂದಚೆಂದದ ಬೃಂದಾವನದಿ ಗೋವಿಂದ ಕೋಲನಾಡಿದ

ಚಿನ್ನದ ಕೋಲನಾಡಿದ ರನ್ನದ ಕೋಲನಾಡಿದ
ಮೇಲುಕೋಟೆಯ ಚೆಲುವರಾಯ ಚೆಂದದ ಕೋಲನಾಡಿದ (೧)

ಬಣ್ಣದ ಕೋಲನಾಡಿದ ಚೆನ್ನಾದ ಕೋಲನಾಡಿದ
ಬೇಲೂರಚೆಲ್ವ ಚೆನ್ನಿಗರಾಯ ಹೊನ್ನಾದ ಕೋಲನಾಡಿದ (೨)

ಸಂಗದಿ ಕೋಲನಾಡಿದ ಮೂರಂಗದಿ ಕೋಲನಾಡಿದ
ಕಾವೇರಿಪುರದ ಶ್ರೀರಂಗರಾಯ ಅಂದದಿ ಕೋಲನಾಡಿದ (೩)

ರಾಮಯ್ಯ ಕೋಲನಾಡಿದ ಶಾಮಯ್ಯ ಕೋಲನಾಡಿದ
ಶ್ರೀನಿವಾಸ ವಿಠಲನೆಮ್ಮ ದಶದಯ್ಯ ಕೋಲನಾಡಿದ (೪)

ನಂದ ಕೋಲನಾಡಿದ ಆನಂದ ಕೋಲನಾಡಿದ
ಅಂದಚೆಂದದ ಬೃಂದಾವನದಿ ಗೋವಿಂದ ಕೋಲನಾಡಿದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೩.೨೦೧೧

Shri Krishnana Nooraru Geethegalu - 066

ಏಕೆ ಹೀಗೆ ಕಾಡುತಿರುವೆ

ಏಕೆ ಹೀಗೆ ಏಕೆ ಹೀಗೆ ಕಾಡುತಿರುವೆ ಮೋಹನ
ಸನಿಹವಿರದೆ ನಿದ್ದೆಗೊಡದೆ ಸುಡುತಲಿಹೆ ಮೈಮನ

ಸಂಜೆಯೊಡಲ ತಂಪಿನಿರುಳೊ ಅರಳುತ್ತಿದೆ ಯೌವನ
ಮೌನದೆನ್ನೀ ವೀಣೆ ನುಡಿಸೊ ತುಂಬಿ ಪ್ರೀತಿ ಕಣಕಣ (೧)

ಸುಪ್ತ ಬಯಕೆ ಬಾಯಾರಿವೆ ಕಾಯ್ದು ಪ್ರೇಮ ಸಿಂಚನ
ಉಣಿಸು ಬಾರೊ ಒಲುಮೆ ಸವಿಯ ಸಖನೆ ಗೋಪನಂದನ (೨)

ವಿರಹವಾಗಿದೆ ಮೊರೆವ ಕಡಲು ಕೇಳದೇ ಪ್ರೇಮಪ್ರೇರಣ
ತಣಿಸೊ ಹರಿಸಿ ಮಿಥುನದಮೃತ ಎನ್ನ ಜೀವನ ಪಾವನ (೩)

ಪಾದ ತೊಳೆಯೆ ಹರಿದು ಯಮುನಾ ನಲಿದು ಬೃಂದಾವನ
ತಳಿರು ತೋರಣ ಸಿಹಿಯ ಹೂರಣ ಗಂಧಚಂದನ ಲೇಪನ (೪)

ಭಾಮೆಯವಳು ಕರೆದರೆನ್ನ ಮರೆಯದಿರೊ ಮೋಹನ
ಶ್ರೀನಿವಾಸ ವಿಠಲ ನೀನೆ ರಾಧೆಯೊಲುಮೆ ಚೇತನ (೫)

ಏಕೆ ಹೀಗೆ ಏಕೆ ಹೀಗೆ ಕಾಡುತಿರುವೆ ಮೋಹನ
ಸನಿಹವಿರದೆ ನಿದ್ದೆಗೊಡದೆ ಸುಡುತಲಿಹೆ ಮೈಮನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೩.೨೦೧೧

Shri Krishnana Nooraru Geethegalu - 065

ಅಂಕಿತವೇಕೆ ನಾಮಾಂಕಿತ ಬೇಕೆ

ಅಂಕಿತವೇಕೆ ನಾಮಾಂಕಿತ ಬೇಕೆ
ಸಾಸಿರನಾಮದ ಶ್ರೀ ಹರಿಯನು ಭಜಿಸಲು

ದೇಹದೇಗುಲ ಮಾಡಿ ಮನದ ಮಂದಿರದೊಲು
ಆರೆಂಬೊ ಅಸುರರ ಮುರಿದು ಮೂಲೆಯೊಳಿಟ್ಟು
ಬಂದು ನೆಲೆಸೈ ಎನಲು ಶುದ್ಧ ಬಕುತಿಯೊಳು
ಬಾರದಿರುವನೆ ಎಮ್ಮ ಮೂನಾಮದಯ್ಯನು (೧)

ಕರಿಯದು ಹರಿಯೆನಲು ಶಬರಿ ಶ್ರೀರಾಮನೆನಲು
ಕಯಾದು ಕಂದನವ ನಾರಾಯಣನೆನಲು
ಉಡುವಸ್ತ್ರ ದ್ರೌಪದಿಗೆ ಕೃಷ್ಣಯೆಂ ಮೊರೆಯಿಡಲು
ಕಾಯಲಿಲ್ಲವೆ ಎಮ್ಮ ಶ್ರೀಪಾದದಯ್ಯನು (೨)

ಗುಣವಂತ ರಾಮನೆನ್ನಿ ಗೋಕುಲದ ಶ್ಯಾಮನೆನ್ನಿ
ಮೇಲುಕೋಟೆಯ ಚೆಲುವ ಚೆನ್ನಿಗರಾಯನೆನ್ನಿ
ಗೋಪಿಯ ಮಡಿಲೊಳಾಡ್ವ ಮುದ್ದುಕೃಷ್ಣಯ್ಯನೆನ್ನಿ
ಬಿಡದೆ ಪೊರೆವನೊ ಎಮ್ಮ ಶ್ರೀನಿವಾಸ ವಿಠಲನು (೩)

ಅಂಕಿತವೇಕೆ ನಾಮಾಂಕಿತ ಬೇಕೆ
ಸಾಸಿರನಾಮದ ಶ್ರೀ ಹರಿಯನು ಭಜಿಸಲು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೩.೨೦೧೧

Shri Krishnana Nooraru Geethegalu - 064

ಹರಿದಾಸರಾಗಮನ

ಹರಿದಾಸರಾಗಮನ ಶ್ರೀಹರಿಯ ಬರುವೆಮಗೆ
ಶ್ರೀಹರಿಯ ಸಿರಿತಾಣ ಹರಿದಾಸರೆದೆ ಕಾಣ

ಮನವೆಂಬೊ ಮನೆಗುಡಿಯ ಬಕುತಿ ಶುದ್ಧೋದಕದಿ
ಸಿಂಗರಿಸಿ ಕರೆ ಬರುವ ಶ್ರೀಹರಿಯ ಕುಲದಾಸ
ಹರಿದಾಸರಿರುವಲ್ಲಿ ಶ್ರೀಹರಿಯ ನೆಲೆಯೊ
ಶ್ರೀಹರಿಯ ಎದೆಯಲ್ಲಿ ಸಿರಿಲಕುಮಿ ಸೆಲೆಯೊ
ದಾಸದಾಸರ ದೇವ ಗೋಕುಲದ ಗೋಪಾಲ
ಬಿಡದೆ ಎಮ್ಮನೂ ಕಾವ ಶ್ರೀನಿವಾಸ ವಿಠಲ

ಹರಿದಾಸರಾಗಮನ ಶ್ರೀಹರಿಯ ಬರುವೆಮಗೆ
ಶ್ರೀಹರಿಯ ಸಿರಿತಾಣ ಹರಿದಾಸರೆದೆ ಕಾಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೩.೨೦೧೧

Shri Krishnana Nooraru Geethegalu - 063

ಉಗಾಭೋಗ - ೦೩

ತ್ರೇತೆಯೊಳು ರಾವಣನ ದಶಶಿರವ ತರಿದಂತೆ
ಎನ್ನೊಳಡಗಿಹ ದುರಾಸೆಯದ ಬಿಡಿಸೊ
ನಿನ್ನ ಕಾಣುವಾಸೆಯೊಂದನು ಉಳಿಸೊ

ದ್ವಾಪರದೆ ಕೌರವನ ಕೆನೆವತೊಡೆ ಮುರಿದಂತೆ
ಎನ್ನೊಳಡಗಿಹ ಕಾಮಕ್ರೋಧಾಗ್ನಿಯದ ದಹಿಸೊ
ನಿನ್ನ ಕೂಡುವ ಕಾಮನೆಯೊಂದನು ಉಳಿಸೊ

ಎನ್ನೊಳಡಗಿಹ ಮೋಹಮದಮತ್ಸರವ ಮರೆಸೊ
ಎನ್ನೊಡೆಯ ಶ್ರೀನಿವಾಸ ವಿಠಲನೆ ಆರರ ಕಸಕಳೆದು
ನಿನ್ನ ಶ್ರೀಪದದೊಳು ಮೂರಕ್ಷರದ ಮುಕುತಿಯನು ಕರುಣಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೩.೨೦೧೧

Shri Krishnana Nooraru Geethegalu - 062

ಬಂದಿದ್ದನವ್ವ ಬಂದಿದ್ದ

ಬಂದಿದ್ದನವ್ವ ಬಂದಿದ್ದ ಅವ ಬಂದಿದ್ದಾನವ್ವ ಬಂದಿದ್ದ
ನಸುಕಿನ ನನ್ನ ಸವಿನಿದ್ದಿ ಸಪುನಾಕ ಅವನೇ ಬಂದಿದ್ದ ಶತಸಿದ್ಧ

ಕಂಗಳು ಆಸೆಯ ಬಟ್ಟಲ ಅವ ನಕ್ಕಾರ ಹುಣ್ಣಿಮೆ ತಿಂಗಳ
ಹಣೆತುಂಬಿ ಮುಂಗಾರಿನ ಮುಗಿಲ ಎದೆತುಂಬಿ ಪ್ರೇಮದ ದಿಗಿಲ (೧)

ಕಣ್ಣಂಚೊಳು ಕಾಡಿಗೆ ಚಳಕ ಅವನ ನೊಸಲಾಗ ಚಂದನ ತಿಲಕ
ಮುಡಿಯಾಗಿನ ಬಣ್ಣದ ಗರಿ ನಲಿದಾಡುತಿತ್ತೆ ತಂಗಾಳಿ ಸವರಿ (೨)

ಮಾವನ ಊರೊಳು ಉದಯ ಗೋಕುಲದಿ ನೆಲೆಯಾದ ಹೃದಯ
ಕಾರ್ಕೋಟ ಕಾಲಿಂದಿಯ ಮೆಟ್ಟಿ ಗೋವರ್ಧನವ ಬೆರಳೊಳಗೆತ್ತಿ (೩)

ನೊರೆಹಾಲ ಕುಡಿಯೆ ಕದಿತಾನ ಮೊಸರು ಬೆಣ್ಣೆಯ ಮೆಲುತಾನ
ದುರುಳರ ಪಕ್ಕೆಯ ಮುರಿತಾನ ಸದಾ ಸುಜನರ ಸಂಗದಿ ಇರುತಾನ (೪)

ರಾಧೆ-ಭಾಮೆಯರ ಜತೆಗಾರ ಇವ ಮೂರೂರನಾಳುವ ಹಮ್ಮೀರ
ನಮ್ಮಮ್ಮ ಲಕುಮಿಗು ಸರದಾರ ಶ್ರೀನಿವಾಸ ವಿಠಲ ನಾಮದ ಧೀರ (೫)

ಬಂದಿದ್ದನವ್ವ ಬಂದಿದ್ದ ಅವ ಬಂದಿದ್ದಾನವ್ವ ಬಂದಿದ್ದ
ನಸುಕಿನ ನನ್ನ ಸವಿನಿದ್ದಿ ಸಪುನಾಕ ಅವನೇ ಬಂದಿದ್ದ ಶತಸಿದ್ಧ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೩.೨೦೧೧

Shri Krishnana Nooraru Geethegalu - 061

ತೊರೆಯದಿರೊ ಸಂಗ

ನಿನ್ನ ಕಂಗಳ ಕಾಡಿಗೆಯೊ ನಾ
ಅಳಿಸದಿರೊ ರಂಗ
ನಿನ್ನ ನೊಸಲ ಕಸ್ತೂರಿ ತಿಲಕವೊ
ಒರೆಸದಿರೊ ರಂಗ (೧)

ನಿನ್ನ ಕಿರೀಟದ ಕೊನೆಹರಳೊ ನಾ
ಬೀಳಿಸದಿರೊ ರಂಗ
ನಿನ್ನ ಕಾಲ್ಗಳ ಅಂದುಗೆ ಗೆಜ್ಜೆಯೊ
ಕಳಚದಿರೊ ರಂಗ (೨)

ನಿನ್ನ ಕೈಯೊಳ ಮುರಳಿಯೊ ನಾ
ನಿಲ್ಲಿಸದಿರೊ ರಂಗ
ನಿನ್ನ ಮೊಸರಿನ ಚಿತ್ರದ ಗಡಿಗೆಯೊ
ಒಡೆಯದಿರೊ ರಂಗ (೩)

ನಿನ್ನ ನೆಚ್ಚದ ಭೃಷ್ಟನೊ ನಾ
ಎಣಿಸದಿರೊ ರಂಗ
ನಿನ್ನ ದಾಸರ ತರಲೆಯ ಕೂಸೊ
ಕಡೆಗಣಿಸದಿರೊ ರಂಗ (೪)

ನಿನ್ನ ಶ್ರೀಪಾದದಿ ಭೃಂಗವೊ ನಾ
ಮರೆಯದಿರೊ ರಂಗ
ಎನ್ನ ರಂಗಯ್ಯ ಶ್ರೀನಿವಾಸ ವಿಠಲನೆ
ತೊರೆಯದಿರೊ ಸಂಗ (೫)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೩.೨೦೧೧

Shri Krishnana Nooraru Geethegalu - 060

ಶ್ರೀ ಮಂಜುನಾಥ

ಕಾಣಬಂದೆನೊ ದೇವ ನಿನ್ನ ಸಿರಿ ವೈಭವವ
ಧರ್ಮವೇ ಧರೆಗಿಳಿದು ಧನ್ಯವಾದೀ ಸೋಜಿಗವ
ಶುಭನೇತ್ರೆಯ ತಟದಿ ನೆಲೆಯಾದ ಶಂಕರನೆ
ಧರ್ಮಸ್ಥಳದ ದೊರೆಯೆ ಶ್ರೀಮಂಜುನಾಥ

ನೋವಿಗೆ ಬಲವಾಗಿ ಇಲ್ಲವಗೆ ಎಲ್ಲವಾಗಿ
ದುರುಳರನು ಸದೆಬಡಿವ ಅಣ್ಣಪ್ಪನರಸನೆ
ನಿತ್ಯಾನ್ನದಕ್ಷಯನೊ ನೀ ಮೂಜಗದ ಹಸಿವಿಗೆ
ಅನ್ನಪೂರ್ಣೆಯ ದೇವ ಕಣ್ಣಪ್ಪಗೊಲಿದನೆ (೧)

ಸಾಸಿರದ ಶರಣಯ್ಯ ಸಿರಿಗೌರಿ ಪತಿರಾಯ
ಕರುಣಿಸೊ ಮಂಗಳನೆ ಮುಕ್ಕಣ್ಣ ಶಿವರಾಯ
ರಕ್ಷೆಯಾಗಲಿ ಮಗನು ಕುಕ್ಕೆಯ ಸುಬ್ಬರಾಯ
ಹರಸಿ ನಿನ್ನಯ ಸಖನು ಶ್ರೀನಿವಾಸ ವಿಠಲಯ್ಯ (೨)

ಕಾಣಬಂದೆನೊ ದೇವ ನಿನ್ನ ಸಿರಿ ವೈಭವವ
ಧರ್ಮವೇ ಧರೆಗಿಳಿದು ಧನ್ಯವಾದೀ ಸೋಜಿಗವ
ಶುಭನೇತ್ರೆಯ ತಟದಿ ನೆಲೆಯಾದ ಶಂಕರನೆ
ಧರ್ಮಸ್ಥಳದ ದೊರೆಯೆ ಶ್ರೀಮಂಜುನಾಥ

(ದಿನಾಂಕ ೦೨.೦೩.೨೦೧೧ರಂದು ಶಿವರಾತ್ರಿಯ ಶುಭರಾತ್ರಿಯಂದು, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ರಚಿಸಿದ ಕೃತಿ)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೩.೨೦೧೧

Shri Krishnana Nooraru Geethegalu - 059

ಎನ್ನ ಹರಿ ನೀನು

ಎನ್ನ ಮತಿಯೊಳ ಸುಗತಿ ನೀನು
ಎನ್ನ ಕಂಗಳ ಬಿಂಬವು

ಎನ್ನ ನಾಸಿಕಕೆ ಶ್ರೀಗಂಧ ನೀನು
ಎನ್ನ ಕರ್ಣದ ಶ್ರವಣವು

ಎನ್ನ ನಾಲಗೆಯ ಸತ್ಪದವು ನೀನು
ಎನ್ನ ಆತ್ಮದ ಹಣತೆಯು

ಎನ್ನ ಹೃದಯದ ಮಿಡಿತ ನೀನು
ಎನ್ನ ಜೀವದ ವಾಯುವು

ಎನ್ನ ಒಳ ಹರಿ ಅರಿವು ನೀನು
ಶ್ರೀನಿವಾಸ ವಿಠಲನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೨.೨೦೧೧

Shri Krishnana Nooraru Geethegalu - 058

ಕರೆದರೆ ಬರುವನೊ

ಕರೆದರೆ ಬರುವನೊ ಕುಣಿದಾಡಿ ನಲಿವನೊ
ಮುದ್ದು ಗೋಪಮ್ಮನ ಕಂದ ಗೋವಿಂದನು

ತುಂಟ ಕಂಗಳ ಪೋರ ಮುಗುದೆಯ ಮನಚೋರ
ವಸುದೇವ-ದೇವಕಿಯ ಆನಂದ ಸುಕುಮಾರ
ಜಗನಿಧಿ ಕಲ್ಯಾಣ ಜಯಪ್ರದ ಶುಭಗುಣ
ನಮ್ಮಮ್ಮ ಸಿರಿಲಕುಮಿ ಹೃದಯದಾ ರಮಣ (೧)

ಶಕಟಾಂತಕ ಧೀರ ಪೂತನೆಯ ಮುಕ್ತಿವರ
ಕಾಲಿಂದಿಯ ಮೆಟ್ಟಿ ಕಟ್ಟಿದವ ದುರುಳರ
ಸುಜನ ಪಾಂಡವ ಪಕ್ಷ ಸುರಕ್ಷ ಚಾಣಾಕ್ಷ
ದಶದೊಳಗೆ ನಳಿನಾಕ್ಷ ಧರೆಕಾಯ್ದ ದಕ್ಷ (೨)

ಇವ ನಮ್ಮ ವಿಠಲ ಮೂಜಗ ಸುಶೀಲ
ಇವ ನಿಮ್ಮ ವಿಠಲ ಜೀವಜಾಲ ಕುಶಲ
ಜಗನೇಮದಧ್ಯಕ್ಷ ಇವನಮ್ಮ ತಿರುಮಲ
ಪಂಢರಾಪುರವಾಸ ಶ್ರೀನಿವಾಸ ವಿಠಲ (೩)

ಕರೆದರೆ ಬರುವನೊ ಕುಣಿದಾಡಿ ನಲಿವನೊ
ಮುದ್ದು ಗೋಪಮ್ಮನ ಕಂದ ಗೋವಿಂದನು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೨.೨೦೧೧

Shri Krishnana Nooraru Geethegalu - 057

ಜಯತು ಜಾನಕಿ ರಮಣ

ಜಯತು ಜಯಜಯ ಜಯತು ಜಯಜಯ ಜಯತು ಜಾನಕಿ ರಮಣನೆ
ಸಲಹೊ ನೀನೇ ಗತಿಯೆಮಗೆನಲು ಬಿಡದೆ ಕಾವನೆ ಕರುಣನೆ

ರಘುವಂಶಜ ರಾಮಚಂದಿರ ದಶರಥಾಗ್ರಕುವರನೆ
ಲಕ್ಷ್ಮಣಾಗ್ರಜ ಸೀತಾಹೃದಯನೆ ಶಿವಧನುವನು ಗೆಲಿದನೆ
ತಾಟಕಾಸುರ ಗರ್ವ ಮುರಿದನೆ ರಾವಣನ ಶಿರ ತರಿದನೆ
ಹನುಮರಾಯರ ಬಕುತಿಗೊಲಿದನೆ ತನ್ನೊಳಾಶ್ರಯವಿತ್ತನೆ (೧)

ತ್ರೇತಾರಾಮನೆ ದ್ವಾಪರಶ್ಯಾಮನೆ ಭೀಮ-ಮಧ್ವರ ದೇವನೆ
ವ್ಯಾಸವಾದಿ ಗುರುರಾಯರೂಪನೆ ಮಂತ್ರಾಲಯ ನಿವಾಸನೆ
ಏಳೇಳು ಜನುಮದ ಜಂಜಡ ಜಾಡಿಸಿ ಸುಖದೊಳೆಮ್ಮ ಕಾವನೆ
ಅಮ್ಮ ಲಕುಮಿಯ ಸರಸಾಂಗ ರಂಗನೆ ಶ್ರೀನಿವಾಸ ವಿಠಲನೆ

ಜಯತು ಜಯಜಯ ಜಯತು ಜಯಜಯ ಜಯತು ಜಾನಕಿ ರಮಣನೆ
ಸಲಹೊ ನೀನೇ ಗತಿಯೆಮಗೆನಲು ಬಿಡದೆ ಕಾವನೆ ಕರುಣನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೨.೨೦೧೧

Shri Krishnana Nooraru Geethegalu - 056

ನೆಚ್ಚನೊ ತಿಮ್ಮಪ್ಪ

ಮೆಚ್ಚನೊ ನಮ್ಮಪ್ಪ ನೆಚ್ಚನೊ ತಿಮ್ಮಪ್ಪ
ಇಹದಿ ನಿಜವಿರದೆ ಪರಮುಕುತಿ ಬೇಡುವರ

ತೊಗಲ ಚಪ್ಪರಕೆ ಚೆಂದ ಚಂದನವ ಸವರಿ
ಪಟ್ಟೆಜರಿ ಕಟ್ಟೆಯೊಳು ದೊಂಬರಾಡುವರ
ಗಂಗೆ-ತುಂಗೆಯ ಮಿಂದು ಆತ್ಮದೊಳಶುದ್ಧರ
ಒಳಕೊಳೆಯ ಕಳೆಯದೆ ತಿಳಿಗೊಳವ ತೋರುವರ (೧)

ತಲೆಯಹಂ ನಿಲದೆ ತಳಗಾಗಿ ಬಿದ್ದವರ
ಮನಸು ಮುದ್ರೆಯೊಳಿರದೆ ಮಂತ್ರ ಮರೆತವರ
ಕಪ್ಪು ಕಾಂಚಾಣ ವಜ್ರ ಕಿರೀಟವಿಡುವವರ
ತೆಂಗುಬಾಳೆಯನಿಟ್ಟು ಕರ್ಪೂರ ಸುಡುವವರ (೨)

ಬಾಹ್ಯಬಡಬಡಿಕೆಯದ ಬಡಿದು ಹೊರದೂಡಿ
ಮನದಮನೆ ಮೂಲೆಯದ ಸಿಂಗಾರ ಮಾಡಿ
ಬರುವನೊ ಶ್ರೀನಿವಾಸ ವಿಠಲನು ಓಡೋಡಿ
ಅಂತರಂಗದಿಂದವನ ಕರೆಯೆ ಪದ ಹಾಡಿ (೩)

ಮೆಚ್ಚನೊ ನಮ್ಮಪ್ಪ ನೆಚ್ಚನೊ ತಿಮ್ಮಪ್ಪ
ಇಹದಿ ನಿಜವಿರದೆ ಪರಮುಕುತಿ ಬೇಡುವರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೨.೨೦೧೧

Shri Krishnana Nooraru Geethegalu - 055

ದಾಸರೊಳಾದಿ ದಾಸರಯ್ಯ

ದಾಸರೊಳಾದಿ ದಾಸರಯ್ಯ ಎಮ್ಮ
ಪುರಂದರದಾಸರೆ ದಾಸ ವಿಶೇಷರಯ್ಯ

ಶೇಷಜನವಾಸ ಮಲೆಯ ಕ್ಷೇಮಾಪುರದಿ
ಆರು ಕ್ಲೇಶಗಳೊಡೆಯ ಬಲುಮೋಹಿ ಶೆಟ್ಟಿ
ಮಡದಿ ಮೂಗುತಿಯೊಳು ಹರಿ ಅರಿವಾದ ಕ್ಷಣದಿ
ನಡೆದರೈ ನಶ್ವರದೀ ನವಕೋಟಿ ದಾಟಿ (೧)

ಜಲಕಮಲಪತ್ರ ಸೂತ್ರದೀ ಸಂಸಾರಿ
ಗುರುವ್ಯಾಸರಿಂ ಫಲಿಸಿ ವೈಕುಂಠ ರಹದಾರಿ
ನೆಲೆಸಿದರೈ ಶ್ರೀನಿವಾಸ ವಿಠಲನ ಶ್ರೀಪದದಿ
ಪಾಡಿ ಪುರಂದರನ ಪದ-ಭೋಗ-ಸುಳಾದಿ (೨)

ದಾಸರೊಳಾದಿ ದಾಸರಯ್ಯ ಎಮ್ಮ
ಪುರಂದರದಾಸರೆ ದಾಸ ವಿಶೇಷರಯ್ಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೨.೨೦೧೧

Shri Krishnana Nooraru Geethegalu - 054

ಓಂಕಾರ ಪ್ರಣವ

ಗಣರಾಯನೆ ಶರಣು ಮಹನೀಯನೆ ಶರಣು
ಆದಿದೇವ ಓಂಕಾರ ಪ್ರಣವನೆ ಶರಣು

ಏಕದಂತನೆ ಶರಣು ಬುದ್ಧಿವಂತನೆ ಶರಣು
ಉಮೆ-ಉರಿಗಣ್ಣನ ಉದರನೆ ಶರಣು
ಉರಗದಿಂ ಉದರವನು ಬಿಗಿದನೆ ಶರಣು
ಸುಮುಖನೆ ಗಜಕರ್ಣ ಗಣಪಯ್ಯ ಶರಣು (೧)

ಅಗ್ರಪೂಜಿತ ಶರಣು ಶೀಘ್ರಪ್ರದನೆ ಶರಣು
ಹೆತ್ತವರ ಸೃಷ್ಟಿಯೆಂ ಸುತ್ತಿದನೆ ಶರಣು
ವಕ್ರಮೂಷಕನಹಂ ಮೆಟ್ಟಿದನೆ ಶರಣು
ಅನಂತಚಿದ್ರೂಪ ಬೆನಕಯ್ಯ ಶರಣು (೨)

ಇಷ್ಟದೇವನೆ ಶರಣು ಕಷ್ಟಹರನೆ ಶರಣು
ಚಂದಿರನ ನಗೆಗರ್ವ ಮುರಿದನೆ ಶರಣು
ಶ್ರೀನಿವಾಸ ವಿಠಲನ ಪ್ರಿಯದೇವನೆ ಶರಣು
ಬಿಡದೆ ಸಲುಹೋಯೆಮ್ಮ ಸಾಸಿರದ ಶರಣು (೩)

ಗಣರಾಯನೆ ಶರಣು ಮಹನೀಯನೆ ಶರಣು
ಆದಿದೇವ ಓಂಕಾರ ಪ್ರಣವನೆ ಶರಣು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೨.೨೦೧೧

Shri Krishnana Nooraru Geethegalu - 053

ಶ್ರೀದೇವಿ ಶಾರದೆ

ಓಂಕಾರ ರೂಪಿಣಿ ಸಕಲಶುಭ ಪ್ರದಾಯನಿ
ಶೃಂಗೇರಿ ಶಾರದೆಯೆ ಸಿದ್ಧಿಬುದ್ಧಿ ಕಾರಣಿ

ಶುಭ್ರೆ ಶ್ವೇತಧಾರಿಣಿ  ಜ್ಞಾನಿ ವೀಣಾಪಾಣಿ ನೀ
ವಸುಧೆ ವಾಗ್ದೇವಿ ನೀ ಸಿರಿ ಸುಮುಖೆ ಹಂಸಿನೀ (೧)

ಸುಖ ವರದೆ ತಾಯಿ ನೀ ತ್ರಿಜಗ ಪಾಪಹಾರಿಣಿ
ಸಪ್ತಸ್ವರದ ಗಾನ ನೀ ಸರ್ವಕಲಾಪೂರ್ಣೆ ನೀ (೨)

ವೇದಶಾಸ್ತ್ರದಾತೆ ನೀ ಬೊಮ್ಮಹೃದಯ ವಾಸಿನಿ
ಶ್ರೀನಿವಾಸ ವಿಠಲಾತ್ಮಿಕೆ ಕಾಯೆ ಅಕ್ಕರೆ ಮಾತೆ ನೀ (೩)

ಓಂಕಾರ ರೂಪಿಣಿ ಸಕಲಶುಭ ಪ್ರದಾಯನಿ
ಶೃಂಗೇರಿ ಶಾರದೆಯೆ ಸಿದ್ಧಿಬುದ್ಧಿ ಕಾರಣಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೧.೨೦೧೧

Shri Krishnana Nooraru Geethegalu - 052

ಭೃಂಗವಾಗಿಸೊ ಎನ್ನ

ಭೃಂಗವಾಗಿಸೊ ಎನ್ನ ಸಂಗ-ಶೃಂಗದಿ ನಿನ್ನ
ಶ್ರೀಪಾದಪುಷ್ಪದ ಮುಕುತಿಮಧುವನು ನೀಡಿ

ಅದುವು ಅಹುದೆಂದು ಇದು ಅಹುದಹುದೆಂದು
ರುಚಿರುಚಿಯೊಳಿದುವೆ ಸವಿಯ ರುಚಿಯೆಂದು
ಸಾರವಿಲ್ಲದೀ ಹೂವ್ವ ನಿಸ್ಸಾರವುಂಡೆನೊ ದೇವ
ನಿನ್ನ ಸುಸ್ಸಾರ ನಾಮದಮೃತವು ಸಿಗದೆ (೧)

ಸನಾತನ ಶ್ರೀಹರಿಯೆ ಚಿರನೂತನ ನರಹರಿಯೆ
ಆದಿ ಅನಂತ ಅಂತ್ಯವರಿಯದ ದೊರೆಯೆ
ಬರಿದಾಗದಕ್ಷಯ ನಿನ್ನ ಶ್ರೀನಾಮದಾ ಬಟ್ಟಲ
ಮಧುವ ಎನಗಿತ್ತು ಸಲಹೊ ಶ್ರೀನಿವಾಸ ವಿಠಲ (೨)

ಭೃಂಗವಾಗಿಸೊ ಎನ್ನ ಸಂಗ-ಶೃಂಗದಿ ನಿನ್ನ
ಶ್ರೀಪಾದಪುಷ್ಪದ ಮುಕುತಿಮಧುವನು ನೀಡಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೧.೨೦೧೧

Shri Krishnana Nooraru Geethegalu - 051

ಕಾಯೋ ಧರೆಯೊಳುತ್ತಮರ 

ಹರಿಯೇ ಶ್ರೀಹರಿಯೇ ಶ್ರೀನಿವಾಸ ದೊರೆಯೇ
ನೆಚ್ಚಿದೀ ಸುಜನರ ನೀ ಮರೆವುದು ಸರಿಯೇ

ಮೀನಾದೆ ಕೃತದಿ ಮನು ಕಮಂಡಲದಿ
ಮಂದರಧರನು ಅಮೃತಾಂಬುಧಿ ಮಥನದಿ
ಬುವಿಗೊಲಿದೆ ರಸಾತಳದಸುರಗೆ ಮುಳುವಾದೆ (೧)

ನರಸಿಂಹನಾದೆ ಕಶ್ಯಪನ ಕರುಳಿಗೆ
ನಾರಾಯಣನಾದೆ ನಂಬಿದವನ ಪುತ್ರಗೆ
ಮೇಲವನ ಮೊಮ್ಮಗನ ಮೆಟ್ಟಿ ವಾಮನನಾದೆ (೨)

ಹಯಗ್ರೀವನಾದೆ ವೇದ ಸಂರಕ್ಷಿಸಿದೆ
ಶ್ರೀರಾಮ-ಶ್ಯಾಮನು ತ್ರೇತೆ-ದ್ವಾಪರದೆ
ಕ್ಷತ್ರಿಯ ಕುಲಹರ ಶ್ರೀಪರಶುರಾಮನಾದೆ (೩)

ಸೃಷ್ಠಿಯೊಳಜೇಯನೆ ಯದುವಂಶ ಕುಲಜನೆ
*ಕೋಟೆಬೆಟ್ಟದವಾಸ ಶ್ರೀನಿವಾಸ ವಿಠಲನೆ
ದಯೆಯಿರಿಸಿ ಕಾಯೋ ಧರೆಯೊಳುತ್ತಮರ (೪)

ಹರಿಯೇ ಶ್ರೀಹರಿಯೇ ಶ್ರೀನಿವಾಸ ದೊರೆಯೇ
ನೆಚ್ಚಿದೀ ಸುಜನರ ನೀ ಮರೆವುದು ಸರಿಯೇ

(*ಕೋಟೆಬೆಟ್ಟ, ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ, ಶ್ರೀ ಕಂಭದ ನರಸಿಂಹದೇವರು ನೆಲೆಯಾದ ಪುಣ್ಯಕ್ಷೇತ್ರ. ಇದೇ ತಾಲೂಕಿನ ಬೆಳ್ಳೂರು ಹೋಬಳಿಯ, ನೆಲ್ಲೀಗೆರೆ ಹತ್ತಿರದ ತೊರೆಮಾವಿನಕೆರೆ ಗ್ರಾಮದವರಾದ ನನ್ನ ಪೂರ್ವಜರಾದಿ ನಡೆದುಕೊಳ್ಳುತ್ತಿರುವ ಕುಲದೈವ ಸ್ಥಳ.)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೧.೨೦೧೧

Shri Krishnana Nooraru Geethegalu - 050

ಮನುಜನ ಮಾಡೆನ್ನ

ಮನುಜನ ಮಾಡೆನ್ನ ಹರಿಯೇ ಮುಕುತಿಯ ಕೊಡೋ ಮುನ್ನ ಶ್ರೀಹರಿಯೇ
ಜ್ಯೋತಿಯದು ತಾನುರಿದು ಬೆಳಗುವಂದದಿ ಜಗವ
ಕರುಣಿಸೊ ಮತಿಯನು ನಿನ್ನ ನಾಮ ಪೊಗಳುವ

ವಾಮನ ನೀನಾಗಿ ಬಲಿ ನೆತ್ತಿಯ ತುಳಿದಂತೆ
ಮಾವ ಕಂಸಾದಿ ಕೂಳರನು ಕೊಂದಂತೆ
ನಯದೊಳು ಕುರುಜನ ದುರಿತವ ಮುರಿದಂತೆ
ಎನ್ನೊಳಗಾರರ ಕೇಡನು ತೊಳೆದು (೧)

ಏಳುಬೆಟ್ಟದ ದೊರೆಯೇ ಎನ್ನೈಸಿರಿಯೇ
ಅಪ್ಪಪ್ಪನಪ್ಪನ ಕಾಯ್ದ ತಿಮ್ಮಪ್ಪನೆ
ರಂಗಪಟ್ಟಣವಾಸ ಶ್ರೀನಿವಾಸ ವಿಠಲನೆ
ಎನ್ನೊಳಡಗಿಹ ಮಂಗನಾಟವ ಕಳೆದು (೨)

ಮನುಜನ ಮಾಡೆನ್ನ ಹರಿಯೇ ಮುಕುತಿಯ ಕೊಡೋ ಮುನ್ನ ಶ್ರೀಹರಿಯೇ
ಜ್ಯೋತಿಯದು ತಾನುರಿದು ಬೆಳಗುವಂದದಿ ಜಗವ
ಕರುಣಿಸೊ ಮತಿಯನು ನಿನ್ನ ನಾಮ ಪೊಗಳುವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೧.೨೦೧೧

Shri Krishnana Nooraru Geethegalu - 049

ಉಗಾಭೋಗ - ೦೨

ಗುರುವ ಕಂಡೆನೊ ಎನ್ನ ಗುರುವಿನ ಗುರುವ ಕಂಡೆನೊ
ಅಚುತಾನಂತ ಶ್ರೀಹರಿಯೆಡೆಗೆ ಹರಿವ ಅರಿವನ್ನರುಹಿದ ಗುರುವ
ಗುರುತರದ ಗುರಿಗೆ ಸರಿದಾರಿ ತೋರಿದೆನ್ನ ಗುರು ಶ್ರೀ
ಗುರುವಿನ ಗುರುವಿನೊಳು ಶ್ರೀನಿವಾಸ ವಿಠಲ ಮಹಾಗುರುವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೧೨.೨೦೧೦

Shri Krishnana Nooraru Geethegalu - 048

ಉಗಾಭೋಗ - ೦೧

ಪಂಡಿತ ನಾನಲ್ಲ ನಿನ್ನ ಪಾಮರ ದಾಸನು ಪ್ರಭುವೇ
ನಿನ್ನಗಣಿತಸೃಷ್ಠಿಯೊಳು ನಾನೆಷ್ಟರವನೊ ಅರಿಯೇ ಶ್ರೀಹರಿಯೇ
ಮೊರೆಯೆನ್ನದು ಮುರಾರಿ ಒಂದಗುಳು-ಹನಿಯಿಟ್ಟು ಮೂಜಗವ
ಸಲಹೋ ಶ್ರೀನಿವಾಸ ವಿಠಲ ದೊರೆಯೇ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೧೨.೨೦೧೦

Shri Krishnana Nooraru Geethegalu - 047

ರಾಮ-ಶ್ಯಾಮ ನಾಮ

ರಾಮ ರಾಮ ರಾಮ ಜಯಜಯ
ಶ್ಯಾಮ ಶ್ಯಾಮ ಶ್ಯಾಮ
ರಾಮ-ಶ್ಯಾಮರ ನಾಮ ನುಡಿಯಿರೊ
ಜಗದೊಳದುವೇ ಕ್ಷೇಮ

ಶಬರಿ ಬಕುತಿಗೆ ಒಲಿಯಿತೊ ನಾಮ
ಹನುಮಗಾಶ್ರಯಧಾಮ
ದಶಶಿರ ಕಾಮವ ಸುಟ್ಟಿತೊ ನಾಮ
ಸೀತೆಯ ಶಾಶ್ವತ ಪ್ರೇಮ (೧)

ಧರ್ಮದ ಪಾಂಡವಗೊಲಿಯಿತೊ ನಾಮ
ಕೌರವ ಕೇಡದು ನಿರ್ನಾಮ
ಭಜಿಪ ಸುಜನರ ಬಿಡದೆ ಕಾವುದೊ
ಶ್ರೀನಿವಾಸ ವಿಠಲ ನಾಮ (೨)

ರಾಮ ರಾಮ ರಾಮ ಜಯಜಯ
ಶ್ಯಾಮ ಶ್ಯಾಮ ಶ್ಯಾಮ
ರಾಮ-ಶ್ಯಾಮರ ನಾಮ ನುಡಿಯಿರೊ
ಜಗದೊಳದುವೇ ಕ್ಷೇಮ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೧೨.೨೦೧೦

Shri Krishnana Nooraru Geethegalu - 046

ಆರು ಕಾಯುವರೆನ್ನ

ಆರೊ ಕಾಯುವರೆನ್ನ ನಿನಗಿಂತ ಮಿಗಿಲಾಗಿ
ಆದಿಶೇಷಶಯನ ದೊರೆಯೆ ಶ್ರೀಹರಿಯೇ

ಅಣುರೇಣು ತೃಣಮೂಲ ಮುಕ್ಕೋಟಿ ಜೀವರಿಗೆ
ಹನಿ-ಅನ್ನಾಮೃತ ರೂಪದಿಂದೊದಗುವನೆ
ಭಕ್ತಿಯಿಂ ಹರಿಯೆನಲು ಮದ-ಮೋಹ ಕಸಕಳೆದು
ಮುದದೊಳನವರತ ಮನದಿ ಮೂಡುವನೆ (೧)

ಸೆರೆಯೊಳುದ್ಭವಿಸಿದೆ ಕಂಸಾಂಧನ ತೊಡೆದೆ
ಗೋಕುಲದೊಳಖಿಲವನು ಬೆಳಗಿದವನೆ
ಸಲಹೆನ್ನ ಶ್ರೀನಿವಾಸ ವಿಠಲನೆ ಅಭಯದೊಳು
ಅವತರಿಸಿ ದಶದೊಳಗೆ ಮೊಳಗಿದವನೆ (೨)

ಆರೊ ಕಾಯುವರೆನ್ನ ನಿನಗಿಂತ ಮಿಗಿಲಾಗಿ
ಆದಿಶೇಷಶಯನ ದೊರೆಯೆ ಶ್ರೀಹರಿಯೇ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೧೨.೨೦೧೦

Shri Krishnana Nooraru Geethegalu - 045

ನಿಜ ಕನಕ

ಕನಕವೊಲ್ಲೆನೊ ಈ ಕನಕ
ಸ್ಥಿರವಲ್ಲದೀ ಧನ-ಕನಕ
ಆದಿಕೇಶವನು ಎಮ್ಮಯ ಜನಕ
ಮೂಜಗದೊಳಗವ ನಿಜಕನಕ

ದಶಶಿರ ಕಾಮವ ಮುರಿದಾ ಕನಕ
ಹನುಮನ ಬಕುತಿಗೆ ಒಲಿದಾ ಕನಕ
ಶಬರಿಗೆ ನಿಜದೊಳು ಒದಗಿದಾ ಕನಕ
ಸುಜನರಿಗಾಸರೆ ಶ್ರೀರಾಮ ಕನಕ (೧)

ಕುರುಜನ ಮುಳುವಿಗೆ ಕೇಶವೇ ಕನಕ
ಪಾಂಡವ ಧರಿಸಿದ ಧರ್ಮದ ಕನಕ
ದುರಿತಹರ ಶ್ರೀಪಾದದ ಕನಕ
ಶ್ರೀನಿವಾಸ ವಿಠಲ ಸಿರಿಕನಕ (೨)

ಕನಕವೊಲ್ಲೆನೊ ಈ ಕನಕ
ಸ್ಥಿರವಲ್ಲದೀ ಧನ-ಕನಕ
ಆದಿಕೇಶವನು ಎಮ್ಮಯ ಜನಕ
ಮೂಜಗದೊಳಗವ ನಿಜಕನಕ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೨.೨೦೧೦

Shri Krishnana Nooraru Geethegalu - 044

ರಘುವಂಶ ಕುಲತೇಜ

ರಾಮಯ್ಯ ಮುದ್ದು ರಾಮಯ್ಯ
ರಾಮಯ್ಯ ಚೆಲುವ ರಾಮಯ್ಯ
ರಘುವಂಶ ಕುಲತೇಜ ತಿಲಕಶ್ರೀ ರಾಮಯ್ಯ

ಕೌಸಲ್ಯೆ ಕಂದನೆ ಕೋದಂಡರಾಮಯ್ಯ
ದಶರಥ ಪುತ್ರನೆ ದಾಶರಥಿ ರಾಮಯ್ಯ
ಅಯೋಧ್ಯೆ ಭಾಗ್ಯನಿಧಿ ಆನಂದರಾಮಯ್ಯ
ಜಾನಕೀರಮಣ ಶ್ರೀ ಸುಂದರರಾಮಯ್ಯ (೧)

ಶ್ಯಾಮನೆ ಮೂಜಗದ ಕ್ಷೇಮನೇ ರಾಮಯ್ಯ
ರಾಧೆ-ಭಾಮೆಯ ನಿತ್ಯ ಪ್ರೇಮನೇ ರಾಮಯ್ಯ
ನಮ್ಮಮ್ಮ ಸಿರಿಲಕ್ಷ್ಮಿ ಗಂಡನೇ ರಾಮಯ್ಯ
ಶ್ರೀನಿವಾಸ ವಿಠಲನೆ ವೇಂಕಟ ರಾಮಯ್ಯ (೨)

ರಾಮಯ್ಯ ಮುದ್ದು ರಾಮಯ್ಯ
ರಾಮಯ್ಯ ಚೆಲುವ ರಾಮಯ್ಯ
ರಘುವಂಶ ಕುಲತೇಜ ತಿಲಕಶ್ರೀ ರಾಮಯ್ಯ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೧.೨೦೧೦

Shri Krishnana Nooraru Geethegalu - 043

ನಾರಾಯಣೀ ನಮಸ್ತೆ

ನಾರಾಯಣೀ ನಮಸ್ತೆ ಶ್ರೀನಾರಾಯಣೀ ನಮಸ್ತೆ
ಕ್ಷೀರಸಾಗರತನಯೆ ಶ್ರೀನಿವಾಸಿನಿ ನಮಸ್ತೆ

ನಮಸ್ತೆ ಸ್ಥಿರಮಾಂಗಲ್ಯೆ ಮಂಗಳೆ ಇಳೆ
ನಮಸ್ತೆ ಪದ್ಮಕಂಗಳೆ ಬೆಳುದಿಂಗಳೆ (೧)

ನಮಸ್ತೆ ಸುರಾರ್ಚಿತೆ ನವರತ್ನಭೂಷಿತೆ
ನಮಸ್ತೆ ಸಕಲಸಿರಿ ಮಾನ-ಸನ್ಮಾನದಾತೆ (೨)

ನಮಸ್ತೆ ಶ್ರೀಶುಭೆ ಕೋಟಿಸೂರ್ಯಪ್ರಭೆ
ನಮಸ್ತೆ ಶ್ರೀನಿವಾಸ ವಿಠಲ ಪ್ರಿಯವಲ್ಲಭೆ (೩)

ನಾರಾಯಣೀ ನಮಸ್ತೆ ಶ್ರೀನಾರಾಯಣೀ ನಮಸ್ತೆ
ಕ್ಷೀರಸಾಗರತನಯೆ ಶ್ರೀನಿವಾಸಿನಿ ನಮಸ್ತೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೧೧.೨೦೧೦

Shri Krishnana Nooraru Geethegalu - 042

ಮೋದಕಪ್ರಿಯನೆ ನಮೋ

ಮೂಷಕಾರೂಢ ನಮೋ ನಮೋ ಮೋದಕಪ್ರಿಯನೆ ನಮೋ
ಮೂಜಗವಂದಿತ ವಿದ್ಯಾವಾರಿಧೇ ವಿಘ್ನೇಶ್ವರನೆ ನಿನಗೆ ನಮೋ

ಗೌರೀಶ ಪುತ್ರ ನಮೋ ನಮೋ ರಾಕ್ಷಸ ಶತ್ರು ನಮೋ
ಗಜವದನಶ್ರೀ ಗಿರಿಜಾಸುತನೆ ಸ್ಕಂದಾಗ್ರಜನೆ ನಿನಗೆ ನಮೋ (೧)

ಮಂಗಳಮೂರ್ತಿ ನಮೋ ನಮೋ ಸಕಲಕೂ ಸ್ಫೂರ್ತಿ ನಮೋ
ಓಂಕಾರರೂಪಶ್ರೀ ಬಾಲಚಂದ್ರನೆ ಬುದ್ಧಿವಂತನೆ ನಿನಗೆ ನಮೋ (೨)

ಬಲದಂತ ಮುರಿದ ನಮೋ ನಮೋ ಭಾರತ ಬರೆದ ನಮೋ
ಶ್ರೀನಿವಾಸ ವಿಠಲನಾದಿ ದೇವಕುಲ ಪೂಜಿತನೆ ಮುದ್ದುಗಣಪಯ್ಯನೆ ನಿನಗೆ ನಮೋ(೩)

ಮೂಷಕಾರೂಢ ನಮೋ ನಮೋ ಮೋದಕಪ್ರಿಯನೆ ನಮೋ
ಮೂಜಗವಂದಿತ ವಿದ್ಯಾವಾರಿಧೇ ವಿಘ್ನೇಶ್ವರನೆ ನಿನಗೆ ನಮೋ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೧೧.೨೦೧೦

Shri Krishnana Nooraru Geethegalu - 041

ಇಹದ ಪುಣ್ಯ

ಪುಣ್ಯ ಪುಣ್ಯಕೆ ಮಿಗಿಲೀ ಇಹದ ಪುಣ್ಯ
ಪದುಮನಾಭನ ಬಿಡದೆ ನೆನೆವ ನರ ಧನ್ಯ

ಶ್ರೀರಾಮ ನಾಮನುಡಿ ನೆನೆದು ಸ್ಮರಿಸುವ ಪುಣ್ಯ
ಶ್ರೀರಾಮ ಜಯರಾಮ ಜಯಜಯರಾಮ (೧)

ಶ್ರೀಕೃಷ್ಣ ನಾಮಸಿಹಿ ನುಡಿದು ಸವಿಯುವ ಪುಣ್ಯ
ಶ್ರೀಕೃಷ್ಣ ಜಯಕೃಷ್ಣ ಜಯಜಯಕೃಷ್ಣ (೨)

ಶ್ರೀನಿವಾಸ ವಿಠಲನ ದಿವ್ಯನಾಮದಾ ಪುಣ್ಯ
ಶ್ರೀನಿವಾಸ ಹರೇ ಶ್ರೀನಿವಾಸ ಶ್ರೀನಿವಾಸ ಹರೇ (೩)

ಪುಣ್ಯ ಪುಣ್ಯಕೆ ಮಿಗಿಲೀ ಇಹದ ಪುಣ್ಯ
ಪದುಮನಾಭನ ಬಿಡದೆ ನೆನೆವ ನರ ಧನ್ಯ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೧೧.೨೦೧೦

Shri Krishnana Nooraru Geethegalu - 040

ಎದ್ದುಬಾರೋ ಮುದ್ದುರಂಗ

ಎದ್ದು ಬಾರೋ ಮುದ್ದುರಂಗ ಮೊಗವ ತೊಳೆಯುವೆ ನಿನ್ನಾ
ಕಣ್ಗೆ ಕಾಡಿಗೆ ತಿದ್ದಿ ತಿಲಕವ ಚಂದನ ಹಣೆಗಿಡುವೆ ಕೃಷ್ಣ

ಕಟ್ಟಿ ಕೇಶವ ಗಟ್ಟಿಮುಡಿಯೊಳು ಇಟ್ಟು ನವಿಲಿನ ಗರಿಯನು
ತೊಡಿಸಿ ಕೌಸ್ತುಭ ಪದಕಮಾಲೆ ಅಂದ ತುಂಬಿಕೊಳುವೆನು
ಇಟ್ಟು ದೃಷ್ಟಿಯ ಬೊಟ್ಟ ಗಲ್ಲಕೆ ಮುತ್ತುಸಾಸಿರ ಅಧರಕೆ
ಅಪ್ಪಿಕೊಳುವೆನೊ ಹರಿಯೆ ನಿನ್ನ ಮುದ್ದಿಸಿ ಶ್ರೀಪಾದಕೆ(೧)

ಉಂಡೆಬೆಣ್ಣೆ ರುಚಿಯ ಹಾಲು ಕೆನೆಯ ಗಟ್ಟಿಮೊಸರನು
ಸಿಹಿಯೋಳಿಗೆ ಬಿಸಿಯುಗ್ಗಿ ತುಪ್ಪವುಣಲು ಕೊಡುವೆನು
ಕದಿಯದಿರೊ ನೆರೆಯೊಳ್ ಹೈನವ ದೇವ ಬೇಡಿಕೊಳುವೆನು
ಶ್ರೀನಿವಾಸ ವಿಠಲ ನೀನೆ ಸಕಲ ಸಿರಿಯ ದಾತನು (೨)

ಎದ್ದು ಬಾರೋ ಮುದ್ದುರಂಗ ಮೊಗವ ತೊಳೆಯುವೆ ನಿನ್ನಾ
ಕಣ್ಗೆ ಕಾಡಿಗೆ ತಿದ್ದಿ ತಿಲಕವ ಚಂದನ ಹಣೆಗಿಡುವೆ ಕೃಷ್ಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೧೦.೨೦೧೦

Shri Krishnana Nooraru Geethegalu - 039

ಇದು ಕಲಿಯುಗವೊ

ಇದು ಕಲಿಯುಗವೊ ಕಲಹದಾ ಜಗವೊ
ಶ್ರೀಹರಿ ದಯೆಯಿರಿಸೊ ಇದ ಸರಿ ನಡೆಸೊ

ಆರು ತಮಂಗಳ ಆಚರಿಸೊ ಕೌರವರೊ
ಪರಸತಿ-ಸ್ವತ್ತಿಗೆ ದಾಹಾಕ್ಷಿ ರಾವಣರೊ
ನಾರಾಯಣನೆನದ ಪ್ರಹ್ಲಾದನ ಪಿತರೊ
ಅತಿಘೋರ ನರಕಕೆ ನಡೆದಿಹ ಜನರಿವರೊ (೧)

ಅಂಧಕಾರವನಳಿಸೊ ಹಣತೆಯ ಬೆಳಗಿಸೊ
ಸುಶೀಲ-ಸುಮತಿಗಳ ತೈಲವ ತುಂಬಿಸೊ
ನೀತಿನೇಮ ನಿಯಮವೆಂಬೊ ಹರಳೆಯನು ಹೊಸೆದಿಟ್ಟು
ಶ್ರೀನಿವಾಸ ವಿಠಲನೆ ನೀನೀ ಜಗವ ರಕ್ಷಿಸೊ (೨)

ಇದು ಕಲಿಯುಗವೊ ಕಲಹದಾ ಜಗವೊ
ಶ್ರೀಹರಿ ದಯೆಯಿರಿಸೊ ಇದ ಸರಿ ನಡೆಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೦.೨೦೧೦

Shri Krishnana Nooraru Geethegalu - 038

ಕಂಡುಹೋಗುವ ಚೆಲುವನ

ಇಲ್ಲೇ ಎಲ್ಲೋ ಸನಿಹದಲ್ಲಿ ಯಮುನೆ ಜುಳುಜುಳು ಹರಿದಿದೆ
ಮಾತೆ ಮೊಲೆಯೊಳು ಮುದ್ದುಕರುವು ಮಮತೆಸುಧೆಯ ಸವಿದಿದೆ

ಬೃಂದಾವನದೆದೆ ನಂದಾದೀಪವು ಗೋಕುಲವನೇ ಬೆಳಗಿದೆ
ಖಾಲಿ ತೂಗೋ ಉಯ್ಯಾಲೆಯಲಿ ರಾಧೆ-ಕೃಷ್ಣರ ಒಲವಿದೆ

ಮಿಲನ ಗಳಿಗೆ ಮರೆತ ಮುರಳಿ ರಾಗ ಮೌನವಾಗಿದೆ
ಒಂಟಿ ವೀಣೆ ಭಾವತುಂಬಿ ನುಡಿಸೊ ಬೆರಳ ಹರಸಿದೆ

ಖಾಲಿ ಮೊಸರ ಗಡಿಗೆಯೊಳಗೆ ಚೋರಕೃಷ್ಣನ ನಗುವಿದೆ
ಸರ್ವಗಂಧನ ಮುದ್ದುಬಾಯೊಳು ಮೂಜಗವೆ ಅಡಗಿದೆ

ಬಾರೆ ಗೆಳತಿ ಕಂಡುಹೋಗುವ ಒಂದುಕ್ಷಣವಾ ಚೆಲುವನ
ಗೋಪಗೊಲ್ಲನ ರಾಧೆನಲ್ಲನ ಶ್ರೀನಿವಾಸ ವಿಠಲ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೧೦.೨೦೧೦

Shri Krishnana Nooraru Geethegalu - 037

ಸಿರಿಸಂವರ್ಷಿಣಿ

ವಂದಿಪೆನು ಶ್ರೀಮಾತೆ ಶ್ರೀಪೀಠೇ ಪೂಜಿತೇ
ಮೊರೆಯೆನ್ನದು ತಾಯೆ ಸಕಲಶುಭ ಕರುಣಿಸೆ

ಚತುರೆ ಚತುರ್ಭುಜೆ ಅಸುರ ಭಯಂಕರಿ
ವದನ ಪ್ರಸನ್ನೆ ಚಂದ್ರಸಹೋದರಿ
ಕಮಲೆ ಕಾಮಾಕ್ಷೆ ಕಮಲಸಂಭವೆ ಮಾಯೇ
ಧನಧಾನ್ಯೆ ಮಾನ್ಯೆ ಎಮ್ಮನು ಕಾಯೇ (೧)

ವಿಷ್ಣುವಕ್ಷೇ ಸದಾರಕ್ಷೆ ದಾರಿದ್ರ್ಯನಾಶಿನಿ
ಪದ್ಮಹಸ್ತೇ ಪುಣ್ಯಗಂಧೆ ಸಿರಿಸಂವರ್ಷಿಣಿ
ಶ್ರೀನಿವಾಸ ವಿಠಲನೊಲಿದ ಸಮಾಶ್ರೀ ಪ್ರಕೃತೆ
ವಸುಧಾರಿಣಿ ಕರುಣೀ ಎಮ್ಮ ಜನ್ಮದಾತೆ (೨)

ವಂದಿಪೆನು ಶ್ರೀಮಾತೆ ಶ್ರೀಪೀಠೇ ಪೂಜಿತೇ
ಮೊರೆಯೆನ್ನದು ತಾಯೆ ಸಕಲಶುಭ ಕರುಣಿಸೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೯.೨೦೧೦

Shri Krishnana Nooraru Geethegalu - 036

ಕರುಣಿಸೊ ಶ್ರೀಹರಿ

ಕರುಣಿಸೊ ಶ್ರೀಹರಿ ಸಕಲ ಸುಗುಣಂಗಳ
ಬೇಡುವೆನೊ ಪಾಮರನು ನಾ ನಿನ್ನ ದಾಸ

ಮತಿಯೆನ್ನದು ನಿನ್ನ ಬಿಡದೆ ಸ್ತುತಿಸುವ ಗುಣವ
ಅಕ್ಷಿಗಳೆನ್ನವು ನಿನ್ನ ಸದಾ ಹರಸುವ ಗುಣವ
ನಾಸಿಕವದು ನಿನ್ನ ಆಘ್ರಾಣಿಸೊ ಗುಣವ
ಕರ್ಣಂಗಳೆನ್ನವು ನಿನ್ನೇ ಆಲಿಸೊ ಗುಣವ (೧)

ನಾಲಗೆಯದು ನಿತ್ಯ ನಿನ್ನ ನುಡಿಯುವ ಗುಣವ
ಹೃದಯವೆನ್ನದು ದೇವ ನಿನಗೆ ಮಿಡಿಯುವ ಗುಣವ
ಕರಪಾದಂಗಳು ನಿನಗೆ ಮುಗಿದು ನಡೆಯುವ ಗುಣವ
ಶ್ರೀನಿವಾಸ ವಿಠಲನೆ ನಿನ್ನ ಸಂಪನ್ನ ಸದ್ಗುಣವ (೨)

ಕರುಣಿಸೊ ಶ್ರೀಹರಿ ಸಕಲ ಸುಗುಣಂಗಳ
ಬೇಡುವೆನೊ ಪಾಮರನು ನಾ ನಿನ್ನ ದಾಸ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೯.೨೦೧೦

Shri Krishnana Nooraru Geethegalu - 035

ಕಾಯೋ ಹರಿ ಶ್ರೀನಿವಾಸ

ಕಾಯೋ ಹರಿ ಶ್ರೀನಿವಾಸ ಜಗದೀಶ ಶ್ರೀಶ
ಜತನದಿಂ ಮೂಜಗವ ಕಾಯೋ ಆದಿಶೇಷ

ಮನೋಹರ ವನಮಾಲಿ ಗೋವರ್ಧನ ವಿಹಾರಿ
ಮಾಧವ ಮಧುಸೂದನ ಬೃಂದಾವನ ಸಂಚಾರಿ
ಕೇಶವ ಕಾಳಿಂಗಮರ್ದನ ವಿಶ್ವರೂಪಿ ಅವತಾರಿ
ಮಧುರೇಶ ದ್ವಾರಕೇಶ ನರಸಿಂಹ ಕೇಸರಿ (೧)

ಲೀಲಾಧರ ಲೋಹಿತಾಕ್ಷ ಲೋಕನಾಥ ಶ್ರೀಹರಿ
ಪದ್ಮೇಶ ಪರಮೇಶ ಪುರುಷೋತ್ತಮ ಮುರಾರಿ
ಬಾಲಕೃಷ್ಣ ಗೋವಿಂದ ಗೋಕುಲೇಶ ಶೌರಿ
ಶ್ರೀನಿವಾಸ ವಿಠಲನೆ ಗೋಪಾಲ ನರಹರಿ (೨)

ಕಾಯೋ ಹರಿ ಶ್ರೀನಿವಾಸ ಜಗದೀಶ ಶ್ರೀಶ
ಜತನದಿಂ ಮೂಜಗವ ಕಾಯೋ ಆದಿಶೇಷ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೯.೨೦೧೦

Shri Krishnana Nooraru Geethegalu - 034

ಹೇರಂಬ ಗಣಪ

ಕೊಡು ಮತಿಯ ಪಾಮರಗೆ ಮೋದಕನೆ
ಕರುಣಿಸೊ ಕರಮುಗಿವೆ ಹೇರಂಬ ಗಣಪನೆ

ಗೌರಿಯ ದಿವ್ಯದೇಹದ್ರವ್ಯದಿಂದುದಯಿಸಿ
ಮಾತೆನುಡಿಯ ಪಾಲಿಸೆ ಶಂಕರನ ಕೆರಳಿಸಿ
ನಿಜರೂಪ ಕಳಕೊಂಡ ಗಜರೂಪ ಪಡಕೊಂಡ
ಮುಕ್ಕೋಟಿ ದೇವರೊಳು ಮೊದಲು ಪೂಜಿಪನೆ (೧)

ಏಕದಂತ ಬುದ್ಧಿವಂತ ಭುವನಪತಿ ಬಾಲಚಂದ್ರ
ಉದ್ಧಂಡ ವಕ್ರತುಂಡ ವರಪ್ರದ ಅವನೀಂದ್ರ
ಶ್ರೀನಿವಾಸ ವಿಠಲನೆ ಆದಿಯೊಳು ವಂದಿಸುವ
ಓಂಕಾರ ಪ್ರಮೋದ ಸುಮುಖನೆ ಮಹಾದೇವ (೨)

ಕೊಡು ಮತಿಯ ಪಾಮರಗೆ ಮೋದಕನೆ
ಕರುಣಿಸೊ ಕರಮುಗಿವೆ ಹೇರಂಬ ಗಣಪನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೯.೨೦೧೦

Shri Krishnana Nooraru Geethegalu - 033

ಮೇಘಶ್ಯಾಮ

ಮೇಘಶ್ಯಾಮ ಮೇಘಶ್ಯಾಮ ಕೊಳಲನೂದಿದ
ನಾದದಲೆಯಲೆ ಪ್ರೇಮಸ್ವರವ ಎದೆಗೆ ತುಂಬಿದ

ಚೆಲುವಾಯಿತೊ ನಂದನ ಗೋಕುಲದ ಕಣಕಣ
ಕೇಳಿ ಮುರಳಿ ಗಾಯನ ಪುಳಕಿತ ಬೃಂದಾವನ
ಮೊಗ್ಗರಳಿ ಮಾಲೆಯಾಗಿ ದಳದಳದೊಳು ಮೋಹನ (೧)

ಜಡವಾಗಿವೆ ಮೈಮನ ನುಡಿಸೊ ವೀಣೆ ಪ್ರೇರಣ
ಜಗವ ನಡೆಸೊ ಪಾವನ ಪ್ರೀತಿಪ್ರೇಮ ಕಾರಣ
ಶ್ರೀನಿವಾಸ ವಿಠಲನಾಗಿ ಕಾಯಬೇಕೊ ಅನುದಿನ (೨)

ಮೇಘಶ್ಯಾಮ ಮೇಘಶ್ಯಾಮ ಕೊಳಲನೂದಿದ
ನಾದದಲೆಯಲೆ ಪ್ರೇಮಸ್ವರವ ಎದೆಗೆ ತುಂಬಿದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೦

Shri Krishnana Nooraru Geethegalu - 032

ತುಂಗಾತೀರದೊಡೆಯ

ಜೀಯ ಮಹನೀಯ ರಾಯರಾಯರ ರಾಯ
ಮುಖ್ಯಪ್ರಾಣರೊಲಿದ ತುಂಗಾತೀರದೊಡೆಯ

ಶ್ರೀಗುರು ಸಂಪನ್ನ ಸುಗುಣೇಂದ್ರ ಸುಮತೀಂದ್ರ
ಮಂತ್ರಾಲಯ ದೊರೆಯೆ ಯತಿವರ ರಾಘವೇಂದ್ರ
ಶ್ರೀಹರಿ ಪಾದಪದ್ಮ ಪ್ರಹ್ಲಾದ ಪ್ರತಿರೂಪ
ಮಧ್ವಮತವರ್ಧನ ದ್ವೈತಶ್ರೀ ಪುಣ್ಯದೀಪ (೧)

ಭುವನಗಿರಿ ಭಾಗ್ಯನಿಧಿ ಕ್ಷಮಾಸುರೇಂದ್ರ
ವೆಂಕಟನಾಥನೆ ಮಹಾಮಹಿಮ ವಿಜಯೇಂದ್ರ
ಶ್ರೀನಿವಾಸ ವಿಠಲನ ಮಾನಸ ಯೋಗೇಂದ್ರ
ಕರುಣಿಸಿ ಕಾಯೆಮ್ಮ ಶ್ರೀಗುರುರಾಘವೇಂದ್ರ (೨)

ಜೀಯ ಮಹನೀಯ ರಾಯರಾಯರ ರಾಯ
ಮುಖ್ಯಪ್ರಾಣರೊಲಿದ ತುಂಗಾತೀರದೊಡೆಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೭.೨೦೧೦

Shri Krishnana Nooraru Geethegalu - 031

ನಿನ್ನ ಕರುಣ

ಎಂದಿಗೊದಗುವುದೊ ನಿನ್ನ ಕರುಣ ವೆಂಕಟರಮಣ
ನೀತಿನೇಮವರಿಯದೀ ಮತಿಹೀನ ಪಾಮರಗೆ

ನಾನಾ ಜನುಮಗಳಲ್ಲಿ ನಾನಾ ಯೋನಿಗಳಲ್ಲಿ
ನಾನೆಂಬ ವೇಷವ ಧರಿಸಿ ಬಂದೆ
ಸರ್ವಾವತಾರದೊಳು ಸಕಲರ ತಲೆಕಾವ
ದೇವ ನಿನ್ನರಿಯದೆ ದೂರ ನಿಂತೆ (೧)

ಮದುವೆ-ಮಡದಿಯೆಂದೆ ಮಕ್ಕಳ-ಮೋಹ ಮುಂದೆ
ನೆಲ-ಜಲ ಸಕಲವು ಎನಗಿರಲೆಂದೆ
ಬಾಡಿಗೆಮನೆಯವನೊ ಭಜಿಸದೆ ಮರೆತೆ ನಿನ್ನ
ಶ್ರೀನಿವಾಸ ವಿಠಲನೆ ಕ್ಷಮಿಸು ತಂದೆ (೨)

ಎಂದಿಗೊದಗುವುದೊ ನಿನ್ನ ಕರುಣ ವೆಂಕಟರಮಣ
ನೀತಿನೇಮವರಿಯದೀ ಮತಿಹೀನ ಪಾಮರಗೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೭.೨೦೧೦

Shri Krishnana Nooraru Geethegalu - 030

ಬಂದ ಗೋವಿಂದ

ಬಂದ ಮನೆಗೆ ಗೋವಿಂದ ಎಮ್ಮ ಮನೆಗೆ ಗೋವಿಂದ
ಮೆಲ್ಲಮೆಲ್ಲನಿರಿಸುತ ಶ್ರೀ ಪಾದಾರವಿಂದ
ಬಹುದಿನದೀ ಪಾಮರನ ಬಿನ್ನಹವ ಮನ್ನಿಸಿ
ಮಂಗಳೆ ಮಾಂಗಲ್ಯೆ ಲಕುಮಿಯ ನಡುಬಳಸಿ

ದೀನರ ದೇವ ಬಂದ ದೈನ್ಯರ ಕಾವ ಬಂದ
ದಾಸದಾಸ ಹೃದಯೇಶ ಧರಣೀಶ ಬಂದ
ತಲೆನೆವರಿ ಮೈದಡವಿ ಕಂದ ಕ್ಷೇಮವೇ ಎಂದ
ಅರೆಪಾವು ನೊರೆಹಾಲು ತನಗರ್ಪಿತವೆಂದ (೧)

ಕುಣಿದು ಕೋಮಲ ಬಂದ ನಲಿದು ಶ್ಯಾಮಲ ಬಂದ
ಸುದಾಮ ಪ್ರಿಯಮಿತ್ರ ಕೃಷ್ಣಯ್ಯ ತಾ ಬಂದ
ರವಿ-ಶಶಿ ನೇತ್ರ ಬಂದ ಉಶೆ-ನಿಶೆ ಸೂತ್ರ ಬಂದ
ಶ್ರೀನಿವಾಸ ವಿಠಲ ಎನ್ನೊಳು ಸಂದ (೨)

ಬಂದ ಮನೆಗೆ ಗೋವಿಂದ ಎಮ್ಮ ಮನೆಗೆ ಗೋವಿಂದ
ಮೆಲ್ಲಮೆಲ್ಲನಿರಿಸುತ ಶ್ರೀ ಪಾದಾರವಿಂದ
ಬಹುದಿನದೀ ಪಾಮರನ ಬಿನ್ನಹವ ಮನ್ನಿಸಿ
ಮಂಗಳೆ ಮಾಂಗಲ್ಯೆ ಲಕುಮಿಯ ನಡುಬಳಸಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೭.೨೦೧೦

Shri Krishnana Nooraru Geethegalu - 029

ಗೋಕುಲ

ಆ ಕುಲ ಈ ಕುಲ ಯಾಕೋ ಈ ವ್ಯಾಕುಲ
ಜಗದೊಡೆಯನ ಕುಲ ಗೋಕುಲವೋ

ಸೆರೆಯೊಳು ಜನಿಸಿದನ ಕುಲಹೀನವೇ ಕೃಷ್ಣ
ಜಗದಾಶ್ರಯನ ಕುಲವಾವುದೋ
ವಸುದೇವನೊಂಶಜನ ಸುಜನರ ಪೊರೆವವನ
ಶ್ರೀ ಆದಿಕೇಶವನ ಕುಲವಾವುದೋ (೧)

ಗೋಪರೊಳು ಬಾಳ್ದವನ ಕುಲಹೀನವೇ ಕೃಷ್ಣ
ತುರುಗಳ ಕಾಯ್ದವನ ಕುಲವಾವುದೋ
ವನಮಾಲೆ ಧರಿಸಿಹನ ಅವಲಕ್ಕಿ ಸವಿದವನ
ಶ್ರೀನಿವಾಸ ವಿಠಲನ ಕುಲವಾವುದೋ (೨)

ಆ ಕುಲ ಈ ಕುಲ ಯಾಕೋ ಈ ವ್ಯಾಕುಲ
ಜಗದೊಡೆಯನ ಕುಲ ಗೋಕುಲವೋ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೬.೨೦೧೦

Shri Krishnana Nooraru Geethegalu - 028

ಗೋಕುಲ ನಿರ್ಗಮನ

ಗೋಕುಲ ನಿರ್ಗಮನ ಗೋವಿಂದನ ಗೋಕುಲ ನಿರ್ಗಮನ
ಮನ್ನಿಸಿ ಮಹಾಮಂತ್ರಿ ಅಕ್ರೂರನಾಹ್ವಾನ
ಮಾವನ ಮಥುರೆಗೆ ಶ್ರೀಕೃಷ್ಣನಾಗಮನ

ಬಂದ ಬಂದನೊ ಬಂದ ಬೃಂದಾವನಕ೦ದ
ಭವರೋಗಶಮನ ಶ್ರೀಮುಕುಂದ ಬಂದ
ಅಂಧನ ಕೊಲಬಂದ ಬಂಧನ ಕಳೆಬಂದ
ಕಂಸಕತ್ತಲನ್ನಳಿಸಿ ಧರ್ಮವುಳಿಸೆ ಬಂದ (೧)

ಮುಷ್ಟಿಕಹರ ಬಂದ ಚಾಣೂರನ ಕೊಂದ
ಮದಿಸಿದ ಗಜಗರ್ವ ಮುರಿದು ಬಂದ
ಮಾವನ ಮಡಿಯೆಂದ ಅಗ್ನಿಗಾಯುಧ ಸಂದ
ಶ್ರೀನಿವಾಸ ವಿಠಲನೆಮ್ಮ ದೇವಕಿಕಂದ

ಗೋಕುಲ ನಿರ್ಗಮನ ಗೋವಿಂದನ ಗೋಕುಲ ನಿರ್ಗಮನ
ಮನ್ನಿಸಿ ಮಹಾಮಂತ್ರಿ ಅಕ್ರೂರನಾಹ್ವಾನ
ಮಾವನ ಮಥುರೆಗೆ ಶ್ರೀಕೃಷ್ಣನಾಗಮನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೬.೨೦೧೦

Shri Krishnana Nooraru Geethegalu - 027

ಪದ ಹಾಡೋ

ಪದ ಹಾಡೋ ಹರಿಯ ಪದ ಹಾಡೋ
ವಸುದೇವಕಂದನ ಪರವಾಸುದೇವನ
ಪುರಂದರನೊಡೆಯನೆಮ್ಮ ಶ್ರೀನಿವಾಸ ವಿಠಲನ

ನಾನು ನಾನಲ್ಲವೆಂಬ ಪದ ಹಾಡೋ
ಜಗದೊಡೆಯ ನೀನೆಂಬ ಪದ ಹಾಡೋ
ನಿನ್ನೊಳು ನಾನೆಂಬ ನಿಯಮವೆ ಸರಿಯೆಂಬ
ಶ್ರೀನಾಮ ಪಾಡುವುದೆ ಮುಕ್ತಿಯ ಗುರಿಯೆಂಬ (೧)

ನಾನು ನಶ್ವರನೆಂಬ ಪದ ಹಾಡೋ
ನೀನೇ ಈಶ್ವರನೆಂಬ ಪದ ಹಾಡೋ
ಪಾಮರನ ಪೊರೆವ ಪರಮಾತ್ಮ ನೀನೆಂಬ
ನಂಬಿನೆಚ್ಚಿಹರ ಕಾವ ಗೋವಿಂದನೆಂಬ (೨)

ಪದ ಹಾಡೋ ಹರಿಯ ಪದ ಹಾಡೋ
ವಸುದೇವಕಂದನ ಪರವಾಸುದೇವನ
ಪುರಂದರನೊಡೆಯನೆಮ್ಮ ಶ್ರೀನಿವಾಸ ವಿಠಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೬.೨೦೧೦

Shri Krishnana Nooraru Geethegalu - 026

ಯಾಕೋ ರಂಗಯ್ಯ

ಯಾಕೋ ರಂಗಯ್ಯ ಅದ್ಯಾಕೋ ನನ್ನಯ್ಯ
ಚೋರನೆನುವರೊ ನಿನ್ನ ಮುದ್ದುಕೃಷ್ಣಯ್ಯ

ಎಮ್ಮ ಮನೆಯೊಳು ಕರೆವ ಗೋವಿಲ್ಲವೆ ಕೃಷ್ಣ
ಚಿತ್ರದ ಗಡಿಗೆಯೊಳು ನೊರೆಯ ಹಾಲಿಲ್ಲವೆ
ಸಿಹಿಸಿಹಿ ಕೆನೆಯಾದ ಮೊಸರಿಲ್ಲವೆ ಕೃಷ್ಣ
ಗರಿಗರಿ ರುಚಿಯಾದ ನವನೀತವಿಲ್ಲವೆ (೧)

ಅರಿಯಳು ಯಶೋದೆ ಅವತಾರಿ ಇವನೆಂದು
ನವನೀತಚೋರ ಕೃಷ್ಣ ಮನೆಗೆ ಮಂಗಳನೆ೦ದು
ದೂರುವ ಜನರೆದೆಯೊಳು ನೆಲೆಯಾದ ಹರಿಯೆಂದು
ಸಕಲರ ಭವಬಂಧು ಶ್ರೀನಿವಾಸ ವಿಠಲನೆಂದು (೨)

ಯಾಕೋ ರಂಗಯ್ಯ ಅದ್ಯಾಕೋ ನನ್ನಯ್ಯ
ಚೋರನೆನುವರೊ ನಿನ್ನ ಮುದ್ದುಕೃಷ್ಣಯ್ಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೬.೨೦೧೦

Shri Krishnana Nooraru Geethegalu - 025

ಕಾಯಬೇಕೊ ಎನ್ನ

ಕಾಯಬೇಕೊ ಎನ್ನ ಜಗದೀ ಸಜ್ಜನರನ್ನ
ಕಾಯ್ದಂತೆ ನೂರ್ಕಾಲ ನೀ ಗೋಕುಲವನ್ನ

ವಿಷಕನ್ಯೆಯ ವಧಿಸಿ ಶಕಟನ ಸಂಹರಿಸಿ
ಧೇನುಕಾಸುರನ ಅಗ್ರಜನಿಂ ಕೊಲಿಸಿ
ಬಕ-ವ್ಯೋಮಾಸುರರ ಯುಕ್ತಿಯೊಳು ನಿಗ್ರಹಿಸಿ
ಕಂದ ಕೃಷ್ಣಯ್ಯನಾಗಿ ಧರೆಯನ್ನುದ್ಧರಿಸಿ (೧)

ಬೃಹ್ಮನಹಂ ಅಳಿಸಿ ಗೋಗ್ರಹಣವ ಬಿಡಿಸಿ
ಇಂದ್ರಗರ್ವವನಿಳಿಸಿ ಗೋವಿಂದನೆನಿಸಿ
ಕಾಳಿಂಗನೊಡ ಸೆಣಸಿ ಕ್ಷಮಿಸಿದಂದದಿ ಮಣಿಸಿ
ಶ್ರೀನಿವಾಸ ವಿಠಲನೆ ಮಂಗಳ ಹರಸಿ (೨)

ಕಾಯಬೇಕೊ ಎನ್ನ ಜಗದೀ ಸಜ್ಜನರನ್ನ
ಕಾಯ್ದಂತೆ ನೂರ್ಕಾಲ ನೀ ಗೋಕುಲವನ್ನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೫.೨೦೧೦