Wednesday, May 30, 2012

Shri Krishnana Nooraru Geethegalu - 237

ಶ್ರೀಪಾದರಾಜ

ರಾಜ ಗುರುರಾಜ ಮಧ್ವಾಷ್ಟಮ ತೇಜ
ಯತಿಕುಲೋತ್ತಮ ನಮೊ ಶ್ರೀಪಾದರಾಜ

ಸುಜನವಂದಿತ ಸಿರಿಯೆ ವ್ಯಾಸರಾಜ ಸದ್ಗುರುವೆ
ನರಸಿಂಹತೀರ್ಥ ಪುರವಾಸ ಪ್ರಭುವೆ
ವಾಗ್ವಜ್ರಕೋವಿದ ಶ್ರೀಧ್ರುವರಾಜ ಪ್ರತಿರೂಪ
ಶ್ರೀರಂಗವಿಠಲನ ಚರಣಸುಖ ಸಂಪದರೆ (೧)

ಸುಜ್ಞಾನದಂಬರವೆ ವೈರಾಗ್ಯದಂಬುಧಿಯೆ
ಸಕಲಶುಭಕಲ್ಯಾಣ ಸುಗುಣಸುಧೆಯೆ
ಕಂಬವನು ಸೀಳಿ ತಾ ಕಂದನ ಪೊರೆದವನ
ಶ್ರೀನಿವಾಸ ವಿಠಲನ ಶ್ರೀಪಾದನಿಧಿಯೆ (೨)

ರಾಜ ಗುರುರಾಜ ಮಧ್ವಾಷ್ಟಮ ತೇಜ
ಯತಿಕುಲೋತ್ತಮ ನಮೊ ಶ್ರೀಪಾದರಾಜ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೫.೨೦೧೨

Saturday, May 26, 2012

Shri Krishnana Nooraru Geethegalu - 236

ಕಂಡಿರೇನಯ್ಯ ಎಮ್ಮ ಕಂದನ

ಕಂಡಿರೇನಯ್ಯ ಎಮ್ಮ ಕಂದನ
ಕಂದನ ಗೋವಿಂದನ ಗೋಕುಲದ ಅರವಿಂದನ

ಕಟ್ಟು ಮುಡಿಯ ದಿಟ್ಟನ ಮುಡಿಗೆ ಗರಿಯ ಇಟ್ಟನ
ರತ್ನಮುಕುಟವ ತೊಟ್ಟನ ಜಟ್ಟಿಯ ಸಮಮಟ್ಟನ (೧)

ಮೂಚಂದನ ನಾಮನ ಅಧರ ಕೆಂಪಿನ ಶ್ಯಾಮನ
ಪುಟ್ಟಪುಟ್ಟ ಹೆಜ್ಜೆಯಿಟ್ಟು ಗೆಜ್ಜೆ ಸಪ್ಪಳ ಮಾಳ್ಪನ (೨)

ವೇಣುಮುರಳಿಯ ನುಡಿವನ ಭಾಮೆ ಪ್ರೇಮಕು ತುಡಿವನ
ಚೆಲುವ ಗೋಪಗೊಲ್ಲನ ಚೆಲುವೆ ರಾಧೆ ನಲ್ಲನ (೩)

ಮಾವ ಕಂಸನ ಕೊಂದನ ಅಸುರೆಯ ಮೊಲೆವುಂಡನ
ದುರುಳ ಕುರುಜನ ಹರಿದ ಶ್ರೀಪಾದನೆಮ್ಮ ಮಲ್ಲನ (೪)

ತ್ರೇತೆಯೊಳು ಶ್ರೀರಾಮನ ದ್ವಾಪರದ ಶ್ರೀಕೃಷ್ಣನ
ಸೃಷ್ಟಿಯೊಳಗೆ ಸುಜನ ಪೂಜಿಪ ಶ್ರೀನಿವಾಸ ವಿಠಲನ (೫)

ಕಂಡಿರೇನಯ್ಯ ಎಮ್ಮ ಕಂದನ
ಕಂದನ ಗೋವಿಂದನ ಗೋಕುಲದ ಅರವಿಂದನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೫.೨೦೧೨

Wednesday, May 23, 2012

Shri Krishnana Nooraru Geethegalu - 235

ಸಂಜೆಯಾಗುತಿದೆ ಗೋಕುಲದೆ

ಸಂಜೆಯಾಗುತಿದೆ ಗೋಕುಲದೆ ಪ್ರಾಣಸಖಿ
ಜೀವ ಮಾಧವನವನು ಎಲ್ಲಿಹನು ಪೇಳೆ

ಎನ್ನ ವಿರಹದ ಎದೆಗೆ ಅವನೆ ಜುಳುಜುಳು ಯಮುನೆ
ಎನ್ನಾಸೆ ತೀರದೊಳು ನಗುವ ಹಸಿರು
ಗೋಕುಲದ ಸಿರಿಚೆಲುವ ಗೋವಿಂದ ಗೋಪಾಲ
ಎನ್ನೊಲವ ಪ್ರತಿಮಿಡಿತ ಪ್ರಾಣ ಉಸಿರು (೧)

ಎನ್ನೆದೆಯ ಮಣಿವೀಣೆ ನುಡಿಸೊ ವೈಣಿಕ ಕೃಷ್ಣ
ಶೃಂಗಾರ ರಸ ಹರಿಸಿ ತಣಿಸೊ ಜೀವ
ಈ ರಾಧೆ ಪ್ರಿಯಕರನೆ ಶ್ರೀನಿವಾಸ ವಿಠಲಯ್ಯ
ಬಾರೊ ತಾಳೆನೊ ನೀನು ಸನಿಹವಿರದಿಹ ನೋವ (೨)

ಸಂಜೆಯಾಗುತಿದೆ ಗೋಕುಲದೆ ಪ್ರಾಣಸಖಿ
ಜೀವ ಮಾಧವನವನು ಎಲ್ಲಿಹನು ಪೇಳೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೫.೨೦೧೨

Saturday, May 19, 2012

Shri Krishnana Nooraru Geethegalu - 234

ಶ್ರೀಶಾರದಾ ಮಾತೆ

ಶ್ರೀಶಾರದಾ ಮಾತೆ ಸುಜ್ಞಾನದಾತೆ
ಶೃಂಗೇರಿಪುರವಾಸಿನಿ ತ್ರೈಲೋಕ ಪ್ರೀತೆ

ಬ್ರಹ್ಮಹೃದಯವಿಹಾರಿಣಿ ಶ್ರೀವಾಣಿ ಕಲ್ಯಾಣಿ
ಶ್ವೇತಕಮಲಸ್ಥಿತೇ ದೇವಿ ಸನ್ಮಂಗಳದಾಯಿನಿ
ಶುಭ್ರೆ ಸುಮುಖೆ ಸುಮಾಂಗಲ್ಯೆ ಓಂಕಾರರೂಪಿಣಿ
ಮತಿಯನರಸಿ ಸಲಹೆಯೆಮ್ಮ ಮೂಲೋಕ ಪಾವನಿ (೧)

ಶಿವಸುತೆಯೆ ಶ್ರೀಶಾರದೆ ಸಕಲಕಲಾವಲ್ಲಭೆ
ವೀಣಾಪಾಣಿ ವರದಾಯಿನಿ ಸಿರಿಲಕುಮಿಸೋದರಿ
ಸೋಮಸುಂದರವದನೆ ದೇವಿ ಕಾಯೆ ಹಂಸವಾಹಿನಿ
ಶ್ರೀನಿವಾಸ ವಿಠಲಾತ್ಮಿಕೆ ತಾಯೆ ಬೊಮ್ಮನರಾಣಿ (೨)

ಶ್ರೀಶಾರದಾ ಮಾತೆ ಸುಜ್ಞಾನದಾತೆ
ಶೃಂಗೇರಿಪುರವಾಸಿನಿ ತ್ರೈಲೋಕ ಪ್ರೀತೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೫.೨೦೧೨

Friday, May 11, 2012

Shri Krishnana Nooraru Geethegalu - 233

ನಿನ್ನ ಶ್ರೀಚರಣದೊಳು

ನಿನ್ನ ಶ್ರೀಚರಣದೊಳು ಮುಗಿದು ನಿಂತಿಹೆ ಪ್ರಭುವೆ
ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ವಾಯುಸುತ ಬಕುತಿಯಿಂ ಪ್ರೇರಿತನ ಸ್ಥಾಪಿತನ
ಜಗಮಾನ್ಯ ಬಹುಮಾನ್ಯ ಶ್ರೀರಾಮನ
ದಶಶಿರನ ದುರಿತವನು ದಹಿಸಿ ತಾ ಧರೆಯೊಳಗೆ
ಧರ್ಮದುನ್ನತಿ ಮೆರೆದ ಶ್ರೀತ್ರೇತನ (೧)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ಮಥುರೆಮಾವನ ಸೀಳಿ ದ್ವಾಪರದಿ ಜಯಕೇಳಿ
ಧರ್ಮದೈವರ ಪೊರೆದ ಶ್ರೀಕೃಷ್ಣನ
ಕುರುಸುತರ ಎದೆಯೇರಿ ರಣದೊಳಗೆ ಜಯಭೇರಿ
ಶರಣ ಸುಜನರ ಕಾಯ್ದ ಶ್ರೀದೇವನ (೨)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ನಿನ್ನ ಗಾನದ ಸುಧೆಗೆ ತುಂಗೆತೀರದೊಳಾಡ್ವ
ರಾಯರಾಯರ ರಾಯ ಶ್ರೀಪಾದನ
ವೈಕುಂಠಪುರದೊಳಗೆ ಸಿರಿಲಕುಮಿಯೊಡನಾಡ್ವ
ಶ್ರೀನಿವಾಸ ವಿಠಲ ಶ್ರೀಕಲಿವರದನ (೩)

ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

ನಿನ್ನ ಶ್ರೀಚರಣದೊಳು ಮುಗಿದು ನಿಂತಿಹೆ ಪ್ರಭುವೆ
ತೋರಯ್ಯ ಶ್ರೀಪಾದನ ಯತಿರಾಯ
ತೋರಯ್ಯ ಮಹನೀಯನ ಗುರುರಾಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೫.೨೦೧೨

Thursday, May 10, 2012

Shri Krishnana Nooraru Geethegalu - 232

ನಾರಾಯಣ ಕೃಷ್ಣ

ನಾರಾಯಣ ಕೃಷ್ಣ ವಾಸುದೇವ
ರಾಮ ಶ್ರೀರಾಮ ನಮೋ ದೇವಾದಿದೇವ

ಕಮಲನಯನ ರಾಮ ಸೋಮವದನ
ದುರಿತಹರಣ ನಮೋ ಜಾನಕೀರಮಣ (೧)

ಯದುನಂದನ ಕೃಷ್ಣ ಮನಮೋಹನ
ನಿಜ ನಿರ್ಗುಣ ನಮೋ ಧರ್ಮಕಾರಣ (೨)

ದಶದೇವನ ಹರಿ ಎಮ್ಮ ಕಾವನ
ಶ್ರೀನಿವಾಸ ವಿಠಲ ನಮೋ ಲಕುಮಿರಮಣ (೩)

ನಾರಾಯಣ ಕೃಷ್ಣ ವಾಸುದೇವ
ರಾಮ ಶ್ರೀರಾಮ ನಮೋ ದೇವಾದಿದೇವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೫.೨೦೧೨

Tuesday, May 1, 2012

Shri Krishnana Nooraru Geethegalu - 231

ಯಶವಂತ

ಸಕಲ ಸುಗುಣಚರಿತ ಶ್ರೀರಾಮದೂತ
ಶ್ರೀಪತಿ ಪಾದಸೇವಿತ ಪವನಸುತ

ಅಂಜನಾಸಂಭೂತ ಶ್ರೀರಾಮಪ್ರೀತ
ವಾನರಸಂಜಾತ ಹನುಮಂತ ದಾಂತ
ಯಶವಂತ ಧೀಮಂತ ಜಯಜಯ ಬಲವಂತ
ಶ್ರೀನಿವಾಸ ವಿಠಲನೊಲಿದ ಶ್ರೀಗುಣವಂತ

ಸಕಲ ಸುಗುಣಚರಿತ ಶ್ರೀರಾಮದೂತ
ಶ್ರೀಪತಿ ಪಾದಸೇವಿತ ಪವನಸುತ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೨