Sunday, September 30, 2012

Shri Krishnana Nooraru Geethegalu - 301

ಪ್ರೇಮವೆ ರಾಧೆ

ಪ್ರೇಮವೆ ರಾಧೆ ಕೃಷ್ಣನ ಜೊತೆಯೊಳು ಇಲ್ಲ ಎನ್ನದಿರೆ
ಕೆಂಪಿನ ಗಲ್ಲವೆ ಎಲ್ಲವ ಹೇಳಿವೆ ಸುಮ್ಮನೆ ನಾಚದಿರೆ

ಕಂಗಳ ಚಿಗರೆಯು ಗೋಕುಲ ಗೊಲ್ಲನ ಕರೆಯೆ ಓಡುತಿವೆ
ಮುಚ್ಚದ ರೆಪ್ಪೆಯು ಆ ನಿನ್ನ ನಲ್ಲನ ಹಾದಿಯ ಕಾಯುತಿವೆ (೧)

ಹೃದಯದಿ ಢವಢವ ತಾಳಮೃದಂಗ ಭಯವನು ನುಡಿಸುತಿವೆ
ಗೆಜ್ಜೆಯ ಕಾಲ್ಗಳ ನೀಳದ ಬೆರಳು ಚಿತ್ರವ ಬಿಡಿಸುತಿವೆ (೨)

ನಿನ್ನಯ ಸುಂದರ ಒಡಲಿನ ವೀಣೆಯು ಮುರಳಿಯ ಕಾಯುತಿದೆ
ಬಾರೆನ್ನ ದೊರೆಯೆ ಬಿಡಿಸೆನ್ನ ಸೆರೆಯ ಕೃಷ್ಣ ಎನುತಲಿದೆ (೩)

ಪ್ರೇಮವೆ ರಾಧೆ ಕೃಷ್ಣನ ಜೊತೆಯೊಳು ಇಲ್ಲ ಎನ್ನದಿರೆ
ಕೆಂಪಿನ ಗಲ್ಲವೆ ಎಲ್ಲವ ಹೇಳಿವೆ ಸುಮ್ಮನೆ ನಾಚದಿರೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೯.೨೦೧೨

Shri Krishnana Nooraru Geethegalu - 300

ಅವುದೊ ಮೋಹವದು

ಅವುದೊ ಮೋಹವದು ಸೆಳೆಯುತಿದೆ ಎನ್ನನು ಆ ಮುರಳಿಯ ಕರೆಗೆ
ಒಲುಮೆಯ ದಾಹವಿದೆ ಪೋಗುವೆನು ಗೆಳತಿಯೆ ಅವನೆದೆಯಾಸರೆಗೆ

ತೀಡುವ ತಂಗಾಳಿ ಅವ ಬರುವ ಕಚಗುಳಿಯ ಇಡುತಿಹುದೆ ಮೈಯ್ಯ ಒಳಗೆ
ವಿರಹದ ವೀಣೆಯದು ಮೋಹದ ಸರಿಗಮವ ನುಡಿಯುತಿದೆ ಎದೆಯ ಒಳಗೆ (೧)

ಮನಬನದ ಮಾಮರದಿ ಹಾಡುತಿದೆ ಕೋಕಿಲವು ನಲುಮೆಯ ಹೊಸತು ಕಾವ್ಯ
ಅವನೆದೆಯ ಅಪ್ಪುಗೆಯ ಬೆಚ್ಚನೆಯ ಬಂಧನದಿ ಈ ರಾಧೆ ಒಲವೆ ರಮ್ಯ (೨)

ಪ್ರೀತಿಮೋಡದ ಒಡೆಯ ಶ್ರೀನಿವಾಸ ವಿಠಲನೆ ಸುರಿವನು ಸ್ವಾತಿಯ ವರ್ಷವಾಗಿ
ಚಿಗುರಾಗಿ ಹಸಿರಾಗಿ ಗೊನೆಯಾಗಿ ತೆನೆಯಾಗಿ ನಲಿವನೆ ಎನ್ನೊಳಗ ದಾಹ ನೀಗಿ (೩)

ಅವುದೊ ಮೋಹವದು ಸೆಳೆಯುತಿದೆ ಎನ್ನನು ಆ ಮುರಳಿಯ ಕರೆಗೆ
ಒಲುಮೆಯ ದಾಹವಿದೆ ಪೋಗುವೆನು ಗೆಳತಿಯೆ ಅವನೆದೆಯಾಸರೆಗೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೯.೨೦೧೨

Wednesday, September 26, 2012

Shri Krishnana Nooraru Geethegalu - 299

ಕಂಡಿರಾ ಎಮ್ಮ ಕಂದನ

ಕಂಡಿರಾ ಎಮ್ಮ ಕಂದನ ಎಮ್ಮ ಚೆಲುವ ಗೊಲ್ಲನ
ಕೃಷ್ಣನಾಮದ ತುಂಟಬಾಲನ ಗೋಕುಲದ ಪಾಲನ

ಮುಡಿಗೆ ಗರಿಯನಿಟ್ಟನ ಬಲಿಯ ಮೆಟ್ಟಿದ ಪುಟ್ಟನ
ತ್ರೇತೆಯೊಳು ದಶನ ಮುರಿದ ದ್ವಾರಕೆಯ ದಿಟ್ಟನ (೧)

ರಾಧೆ ಪ್ರೀತಿಯ ಪಟ್ಟನ ಭಾಮೆಗು ಹೂವ ಕೊಟ್ಟನ
ಮನಮನದಿ ಮಧುರ ಮುರಳಿಯ ಗಾನ ತೇಲಿಬಿಟ್ಟನ (೨)

ಶುದ್ಧಬಕುತಿಗೆ ಒಲಿವನ ಬಿಡದೆ ಸುಜನರ ಪೊರೆವನ
ಶ್ರೀನಿವಾಸ ವಿಠಲ ಕೃಷ್ಣನ ನವನೀತ ಚೋರನ (೩)

ಕಂಡಿರಾ ಎಮ್ಮ ಕಂದನ ಎಮ್ಮ ಚೆಲುವ ಗೊಲ್ಲನ
ಕೃಷ್ಣನಾಮದ ತುಂಟಬಾಲನ ಗೋಕುಲದ ಪಾಲನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೯.೨೦೧೨

Tuesday, September 25, 2012

Shri Krishnana Nooraru Geethegalu - 298

ಒಲಿದು ಬಾರೊ ಕೃಷ್ಣನೆ

ಕುಣಿದು ಬಾರೊ ನಲಿದು ಬಾರೊ ಒಲಿದು ಬಾರೊ ಕೃಷ್ಣನೆ
ಎನ್ನ ಎದೆಯೊಳು ಪ್ರೀತಿರಾಗವ ಉಲಿದು ಬಾರೊ ಕೃಷ್ಣನೆ

ಕಾರ್ಯಕಾರಣ ನಿನ್ನದೊ ಕಾವ ಕರುಣೆಯು ನಿನ್ನದೊ
ಕರೆತಂದವ ನೀನೊ ಕೃಷ್ಣ ಪೊರೆವ ಭಾರವು ನಿನ್ನದೊ (೧)

ಜೀವಬಂಧವು ನಿನ್ನದೊ ಈ ಗಾಳಿಗಂಧವು ನಿನ್ನದೊ
ಬಂಧದೊಳಗೆ ಸುಬಂಧವಾದ ಹೂವ ಅಂದವು ನಿನ್ನದೊ (೨)

ಶುದ್ಧಬಕುತಿಯು ಎನ್ನದೊ ಭವದೆ ಮುಕುತಿಯು ನಿನ್ನದೊ
ಶ್ರೀನಿವಾಸ ವಿಠಲ ಕೃಷ್ಣನೆ ಎನ್ನಾತ್ಮ ಶಕುತಿಯು ನಿನ್ನದೊ (೩)

ಕುಣಿದು ಬಾರೊ ನಲಿದು ಬಾರೊ ಒಲಿದು ಬಾರೊ ಕೃಷ್ಣನೆ
ಎನ್ನ ಎದೆಯೊಳು ಪ್ರೀತಿರಾಗವ ಉಲಿದು ಬಾರೊ ಕೃಷ್ಣನೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೯.೨೦೧೨

Shri Krishna Nooraru Geethegalu - 297

ಕಂಡು ಧನ್ಯನಾದೆ

ಕಂಡು ಧನ್ಯನಾದೆ ನಾ ಕಾವೇರಿ ರಂಗನ
ಸ್ಮರಿಸೆ ಸುಖದಿ ಎಮ್ಮ ಕಾವ ಬಕುತಸಂಗನ

ಅಮ್ಮ ಲಕುಮಿಯ ಪ್ರಾಣದೊಡೆಯನ ವೇಂಕಟೇಶನ
ಪರಮ ಪಾವನೆ ಪುಣ್ಯೆಯವಳು ಪಾದ ತೊಳೆವನ
ಆದಿಶೇಷನ ಶಾಂತಶಯನದಿ ಸುಖಿಪ ಶ್ರೀನಿವಾಸನ
ಧರಣಿ ಕಾವ ದಶದ ದೇವನ ದುರಿತ ಭಂಗನ (೧)

ಆದಿರಂಗನ ಭಜಿಸೆ ಶುದ್ಧದಿ ಅಂತರಂಗದಿ ನಲಿವನ
ನಾನು ತೊರೆದು ನೀನೆ ಎನುವನ ಕರೆಗೆ ತಾನೊಲಿವನ
ಜಗದ ದಾಸರು ಹಾಡಿ ಪೊಗಳಿದ ಆದಿ ಅನಂತ ಅಂತ್ಯನ
ದೀನನೆನ್ನನು ಮಾನದಿ ಕಾಯ್ವ ಶ್ರೀನಿವಾಸ ವಿಠಲ

ಕಂಡು ಧನ್ಯನಾದೆ ನಾ ಕಾವೇರಿ ರಂಗನ
ಸ್ಮರಿಸೆ ಸುಖದಿ ಎಮ್ಮ ಕಾವ ಬಕುತಸಂಗನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೯.೨೦೧೨

Saturday, September 22, 2012

Shri Krishnana Nooraru Geethegalu - 296

ಕೊಲದಿರೆ ಹೀಗೆನ್ನ

ಅಗಲದಿರೆ ರಾಧೆ ಕೊಲದಿರೆ ಹೀಗೆನ್ನ
ನೀನಿರದ ಎನ್ನಿರುವು ಶೂನ್ಯ ಕಾಣೆ

ಕಡಲಿನಾಳದ ಚಿಪ್ಪು ರೆಪ್ಪೆಯರಳಿಸೆ ಮುತ್ತು
ಹೊಸಬೆಳಕಿನನುಭವವು ಕಪ್ಪ ಸೀಳಿ
ನಿನ್ನ ಮನದಾಗಸವ ಮುಸುಕಿದಾ ತೆರೆ ಸರಿಸೆ
ಸುಳಿಯಲಿ ತಂಗಾಳಿ ಒಲವ ಕೇಳಿ (೧)

ಸಂಜೆಯ ಇಳಿಬಾನು ನಗುವ ಚಂದಿರಚುಕ್ಕಿ
ಎನ್ನೆದೆಯ ಹೂಹಾಸು ಬಾಡುತಿಹುದೆ
ನಿನ್ನ ಕಂಗಳ ಒಲುಮೆ ಪ್ರಣತಿ ಬೆಳಗಿಸೆ ರಾಧೆ
ಬರುವೆ ಸನಿಹಕೆ ಒಂಟಿ ಕಾಡುತಿಹುದೆ (೨)

ಮಾತುಗಳ ಮೋಡಗಳು ಮಥಿಸಿ ಮಳೆಗರೆಯಲಿ
ಬಿರುಕಾದ ಎದೆದಡೆಗೆ ಬೆಸುಗೆ ಹೊಸೆದು
ಭೋರ್ಗರೆಯಲಿ ಪ್ರೀತಿ ವಿರಹದೆದೆಗಳ ತಣಿಸಿ
ಉಲ್ಲಾಸ ಹೊಸಹಗಲಿನಧರ ಬಿರಿದು (೩)

ಅಗಲದಿರೆ ರಾಧೆ ಕೊಲದಿರೆ ಹೀಗೆನ್ನ
ನೀನಿರದ ಎನ್ನಿರುವು ಶೂನ್ಯ ಕಾಣೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೯.೨೦೧೨

Thursday, September 20, 2012

Shri Krishnana Kavya - 003

ಹನಿಗಳು
ತಲೆಬಾಗಿಲೊಳು
ತೋರಣ
ಹೋಳಿಗೆಯೊಳು
ಸಿಹಿ ಹೂರಣ
ಗೌರಿಗೆ ಮಗಳು
ಮನೆಗೆ ಬರುವ
ಕಾರಣ

-೨-

ಗಣಪತಿ
ಬರುವ ಹಾದಿಯಲಿ
ನಾರದರು ಸಿಕ್ಕಿದ್ದರು
ಬೆಂಗಳೂರ ಕಡೆ
ಕುಡಿವ ನೀರಿನ ಸಮಸ್ಯೆ
ಒಂದೆರಡು ಬಾಟಲ್
ಗಂಗಾಜಲ ಕ್ಯಾರಿ
ಮಾಡು ಅಂದರು
ಕೊರಗು

-೩-

ಚೌತಿಚಂದ್ರನ ಎದ್ಯಾಗೊಂದೆ ಕೊರ್ಗು
ಬೆಳದಿಂಗ್ಳ ಪೆನ್ನಾಗ್ ಕವಿತೆ ಬರ್ಯೊ
ಕವ್ಗೋಳು ಕೂಡಾ
ನೋಡ್ತಾಯಿಲ್ಲಾಂತ ತನ್ಕಡೆ ತಿರ್ಗು

-೪-

ಗಂಡಸಿಗ್ಯಾಕ್ರಪ್ಪ
ಗೌರಿ ದು:ಖ
ನಾಳೆ ಹೋದ್ರೆ
ಅತ್ತೆ ಮನೇಲಿ
ಭೂರಿ ಭೋಜನ
ಗಣೇಶ ಸುಖ

Shri Krishnana Kaavya - 002

ಕಿರುತೊರೆ

ಮೂಲವೆಂಬೊ ತಾಯಮಡಿಲ ಜಿಗಿದು
ಅಂಬೆಗಾಲಲ್ಲರಿದು ಜುಳುಜುಳು ಕವಿತೆ
ಅಣುಅಣು ನೀರಾಗುವ ಮಾಯೆ
ಕಿರುತೊರೆಯ ಜೀವದೊರತೆ

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ನಡೆಯಲೇ ಬೇಕು ಇನ್ನು ತೊರೆ
ತೊರೆದಾಗಿದೆ ತಾಯತೊಡೆ
ಆವುದೋ ಊರ ತಿರುವಲಿ ಸೊಂಟ ಬಳುಕಿ
ಬೃಹತ್ ಬಂಡೆಯ ತಲೆಯಿಂದ ಧುಮುಕಿ
ಹರಿದರಿದು ತಿಳಿಯಾಗಿ ನದಿಯಾಗಿ
ಬಣ್ಣದ ಮೀನು, ಸೀಗಡಿ ಮತ್ತು ಕಲ್ಲುಏಡಿಗೂ ತಾಯಾಗಿ
ಜೀವಜೀವದ ದಾಹವಾರಿಸೊ ಗಂಗೆ
ಕೆಲವೊಮ್ಮೆ ಪ್ರೇಮಿಗಳ ಪಾದಕೆ ತಂಪು
ಅವಕಾಶವಿದ್ದಂತೆ ಆಕಾರ ಅದಲುಬದಲು
ತೆಳ್ಳನೆಯ ಸ್ಫಟಿಕದಂತೆ ಒಮ್ಮೆಮ್ಮೆ
ವಜ್ರದಂತೆ ಗಡಸು
ಮರದ ನೆರಳಿದ್ದರೂ ದಂಡೆಯಲಿ
ವಿಶ್ರಮಿಸದಂತೆ
ಕೃಶವಾಗಿ ಸುಡುಬೇಸಿಗೆಗೆ ಮತ್ತೆ
ಮುಖವೊಡ್ಡಿ ಮಳೆಗೆ ಖುಷಿಯಾಗಿ

ನಾನೆಂಬೊ ಪದಕಳೆದು
ಕಡಲ ಗರ್ಭದೊಳ ನಡೆದು
ತೊರೆಯೀಗ ಪರಿಪೂರ್ಣ ಮತ್ತು
ಸ್ಪಷ್ಟ ಹರಿವುದರ ಕಾರಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೯.೨೦೧೨

(ಶ್ರೀಪುರುಷೋತ್ತಮ ಬಿಳಿಮಲೆಯವರ ’ಬಂಟಮಲೆಯ ಕಿರುತೊರೆ’ ಓದಿ...)

Tuesday, September 18, 2012

Shri Krishnana Nooraru Geethegalu - 295

ಸ್ನೇಹಿತರೆ, ಗಣೇಶ ಚತುರ್ಥಿಯ ಶುಭಸಂದರ್ಭದಲ್ಲಿ, ಮಹಾಗಾತ್ರನ ಬಗ್ಗೆ ಒಂದು ಲೈಟ್ ಕವಿತೆ.

ನಮ್ಮ ಗಣಪ

ಡೊಳ್ಳು ಹೊಟ್ಟೆ ಬಿಟ್ಟುಕೊಂಡು
ಅಪ್ಪ ಶಿವಂಗ್ ಟಾಟಾ ಮಾಡಿ
ಬತ್ತಾ ಅವ್ನೆ ಅವ್ವನ್ ಜೊತೆ
ನಮ್ಮ ಗಣಪ

ಬಾಗ್ಲೀಗ್ ಮಾವಿನ್ ತೋರ್ಣ ಕಟ್ಟಿ
ಆಡ್ಗೆ ಮನೇಲ್ ಹೋಳ್ಗೆ ತಟ್ಟಿ
ಉಣ್ಣಾಕ್ ಬಾರೊ ಅವ್ವನ್ಜೊತೆ
ಕರ್ಯಾನ್ ಬರ್ರಪ್ಪ

ಮಳೆಪಳೆ ಕೊಡೋನ್ ನೀನು
ಅಕ್ಕಿಅನ್ನ ನೀಡೋನ್ ನೀನು
ಇನ್ನೊಂದ್ ನಾಕ್ದಿನ ಇದ್ದೋಗಂತ
ಕೇಳಿಕೊಳ್ರಪ್ಪ

ಆಗಾಕಿಲ್ಲ ಬಿಲ್ ಕುಲ್ ಅಂತ
ವಂಟೆ ಬಿಟ್ರೆ ನಂ ಗಣಪ
ದಾರೀಗ್ ಕಡ್ಬೀನ್ ಬುತ್ತಿ ಕಟ್ಟಿ
ಕಳ್ಸಿಕೊಡ್ರಪ್ಪ

ಮುಂದಿನ್ವರ್ಸ ಬರ್ಬೇಕಂತ
ಅಲ್ಲಿವರೆಗು ಕಾಯ್ಬೇಕಂತ
ಸಿವ್ನ ಸುಬ್ನ ಕೇಳುದ್ವೀಂತ
ಹೇಳಿ ಕಳುಸ್ರಪ್ಪ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೯.೨೦೧೨

Shri Krishnana Nooraru Geethegalu - 294

ಬಾರೊ ನಮ್ಮ ಮನೆಗೆ

ಚೆಂಡುಬುಗುರಿ ಆಡೊ ಚೆಲುವ ಕೃಷ್ಣಯ್ಯ ಬಾರೊ ನಮ್ಮ ಮನೆಗೆ
ಗೋಪಿ-ನಂದನು ಕಂಡು ಕೋಪಗೊಳ್ಳರೆ ಕೃಷ್ಣ ಬಾರೊ ನಮ್ಮ ಮನೆಗೆ

ನಿನ್ನ ಮುದ್ದಿನ ಮೈಯ್ಯ ಮುದ್ದಾಡಿ ತೊಳೆಯುವೆ ನೊಸಲಿಗೆ ಶ್ರೀತಿಲಕ
ಕಿರುನಗೆ ಸೂಸುವ ನಿನ್ನಯ ಅಧರಕೆ ಸಂಜೆಯ ರವಿವುದಕ
ಪಟ್ಟೆಪೀತಾಂಬರ ಉಡಿಸುವೆ ದೊರೆಯೆ ಕೊರಳಿಗೆ ಮಣಿಪದಕ
ಕೇಶದಿ ಗರಿಯು ಕಾಲೊಳು ಕಿರುಗೆಜ್ಜೆ ನಲಿಯೊ ಜಗಜನಕ (೧)

ಚುಕ್ಕೆಚಂದ್ರನ ತೋರಿ ತೂಗುಮಂಚದಿ ನಿನ್ನ ತೂಗುವೆ ಶ್ರೀಹರಿಯೆ
ತುಪ್ಪದ ಚಕ್ಕುಲಿ ಸಕ್ಕರೆ ನೊರೆಹಾಲ ಸವಿಯೊ ಮನದಣಿಯೆ
ಜಗವ ತೊಟ್ಟಿಲ ಮಾಡಿ ಜೋಗುಳವಾಡುವೆ ಮಲಗೊ ಶ್ರೀಲೋಲ
ಕಣ್ತಣಿಯೆ ನಿನ್ನ ಕಂಡು ಧನ್ಯನಾಗುವೆ ಶ್ರೀನಿವಾಸ ವಿಠಲ (೨)

ಚೆಂಡುಬುಗುರಿ ಆಡೊ ಚೆಲುವ ಕೃಷ್ಣಯ್ಯ ಬಾರೊ ನಮ್ಮ ಮನೆಗೆ
ಗೋಪಿ-ನಂದನು ಕಂಡು ಕೋಪಗೊಳ್ಳರೆ ಕೃಷ್ಣ ಬಾರೊ ನಮ್ಮ ಮನೆಗೆ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೯.೨೦೧೨

Monday, September 17, 2012

Shri Krishnana Nooraru Geethegalu - 293

ಚೆಲುವ ನಾಮದ ಕೃಷ್ಣನ

ಬಾರೆ ಗೆಳತಿ ತಾರೆ ಬಿಂದಿಗೆ ಯಮುನೆಯೆಡೆಗೆ ಪೋಗುವ
ನೀರ ತರುವ ನೆವದಿ ನಗುವ ಚೆಲುವ ಗೊಲ್ಲನ ನೋಡುವ

ಕಂಗಳಲೆ ಕವಿತೆ ಬರೆವನ ಕಿರುನಗೆಯೊಳು ಸನಿಹ ಕರೆವನ
ಮುರಳಿಯುಲಿದು ಮಧುರಗಾನವ ಎದೆಗೆ ಬರೆವನ
ನಿದ್ದೆಗೊಡದ ನೀಲವರ್ಣನ ಆಸೆಯಧರದೆ ಎನ್ನ ಕೊಲುವನ
ಗರಿಯ ಮುಡಿದು ಗಿರಿಯ ತಿರುಗೊ ಎನ್ನ ಕೃಷ್ಣನ (೧)

ಸೆರೆಯೂರನು ತೊರೆದನ ನೆರೆಗೋಕುಲ ಪೊರೆದನ
ದುಷ್ಟವುರಗದ ಹೆಡೆಯ ಮೆಟ್ಟಿ ವಿಶಿಷ್ಟ ನಾಟ್ಯವನಾಡ್ದನ
ಸಂಜೆ ಸುಂದರ ವೃಂದಾವನದಿ ರಾಧೆಯೊಲುಮೆಯ ಗೆಲುವನ
ಶ್ರೀನಿವಾಸ ವಿಠಲನೆಂಬೊ ಚೆಲುವ ನಾಮದ ಕೃಷ್ಣನ (೨)

ಬಾರೆ ಗೆಳತಿ ತಾರೆ ಬಿಂದಿಗೆ ಯಮುನೆಯೆಡೆಗೆ ಪೋಗುವ
ನೀರ ತರುವ ನೆವದಿ ನಗುವ ಚೆಲುವ ಗೊಲ್ಲನ ನೋಡುವ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೯.೨೦೧೨

Sunday, September 16, 2012

Shri Krishnana Nooraru Geethegalu - 292

ಎಂದು ಬರುವೆಯೊ

ಎಂದು ಬರುವೆಯೊ ಇಂದಿರೆರಮಣ ಎನ್ನ ನೋಡಲು
ಜೀವವೆನದು ಕಾಯುತಿಹುದೊ ನಿನ್ನ ಕಾಣಲು

ರಾಮನಂದದಿ ಬರುವೆನೆಂದರೆ ಶಬರಿಯಾಗಿ ಕಾವೆನು
ನೀನಲ್ಲದೆ ಅರಿವರಾರೊ ಶಿಲೆಯೊಳಗಿನ ನೋವನು
ದಶಶಿರನು ನಾನಾಗುವೆ ಕೊಲುವೆಯೆಂದರೆ ರಾಮನೆ
ಕೊಲುವ ಮೊದಲು ಶ್ರೀಚರಣವ ತೋರೊ ಎನ್ನ ಪ್ರಾಣನೆ (೧)

ಕೃಷ್ಣರೂಪದಿ ಬರುವೆಯಾದರೆ ಕುರುಜನಾಗಿ ನಿಲುವೆನು
ಸಮರಧರೆಯೊಳು ಕಂಡು ದೇವನೆ ಧನ್ಯ ಧನ್ಯ ಎನುವೆನು
ಬೇಡವೆನದಿರೊ ಹನುಮನಾಗಿ ನಿನ್ನ ಚರಣದಿ ಇರುವೆನು
ಶ್ರೀನಿವಾಸ ವಿಠಲನಲ್ಲದೆ ಆವ ದೇವರ ಅರಿಯೆನು (೨)

ಎಂದು ಬರುವೆಯೊ ಇಂದಿರೆರಮಣ ಎನ್ನ ನೋಡಲು
ಜೀವವೆನದು ಕಾಯುತಿಹುದೊ ನಿನ್ನ ಕಾಣಲು

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೯.೨೦೧೨

Saturday, September 15, 2012

Shri Krishnana Nooraru Geethegalu - 291

ವಂದೆ ಗಣನಾಥ

ಗಣನಾಥ ವಂದೆ ಗಣನಾಥ
ವರದ ವಿನಾಯಕ ಗುಣದಾತ

ಕೈಲಾಸಪತಿಯೆಮ್ಮ ಶಿವರಾಯಸುತನೆ
ಮಾತೆಯ ಮೈಯ್ಯ ಉದಕದೊಳುದಿಸಿದನೆ
ಜನುಮ ಕಾರಣರೆ ಜಗವೆನಗೆಂದವನೆ
ಸ್ಕಂದಾಪೂರ್ವಜ ಸುಮುಖ ಶ್ರೀ ದೇವನೆ (೧)

ದೇವದೇವಾದಿಗಳ ದುರಿತವ ಕಳೆದನೆ
ಆದಿಪೂಜೆಯು ನಿನಗೆ ವರವದ ಪಡೆದನೆ
ಕರುಣದಿ ಕಾಯೆಮ್ಮ ಕಪಿಲ ಕವೀಶನೆ
ಶ್ರೀನಿವಾಸ ವಿಠಲ ತಾ ಒಪ್ಪಿ ವಂದಿಪನೆ (೨)

ಗಣನಾಥ ವಂದೆ ಗಣನಾಥ
ವರದ ವಿನಾಯಕ ಗುಣದಾತ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೯.೨೦೧೨

Friday, September 14, 2012

Shri Krishnana Nooraru Geethegalu - 290

ವಂದಿಪೆ ವರಪ್ರದ

ವಂದಿಪೆ ವರಪ್ರದ ವಿನಾಯಕ
ಚಂದ್ರಕಿರೀಟನೆ ಸುರಗಣವಂದಿತ

ಆನೆ ಅಂದದ ಮೊಗನೆ ಹರಸೆಮ್ಮ ಹೇರಂಬ
ಜಗದೊಳು ಸಕಲವು ನಿನ್ನಿಂದಲಾರಂಭ
ದುರಿತದ ಮೋದಕ ಭಂಜಿಸೊ ಭವಹರ
ಸುಖದೊಳು ಸಲಹೆಮ್ಮ ಶಂಕರಕುವರ (೧)

ಭಾರತ ಬರೆದನೆ ಭವಿತದಿ ಪೊರೆವನೆ
ಅಕ್ಷರದಂಬುಧಿಯೆ ಏಕಾಕ್ಷರನೆ
ದಶದೊಳು ಧರೆಕಾಯ್ವ ಶ್ರೀನಿವಾಸ ವಿಠಲನೆ
ಅದಿಯೊಳು ಪೂಜಿಸುವ ಎಮ್ಮ ರಕ್ಷಕನೆ (೨)

ವಂದಿಪೆ ವರಪ್ರದ ವಿನಾಯಕ
ಚಂದ್ರಕಿರೀಟನೆ ಸುರಗಣವಂದಿತ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೯.೨೦೧೨

Shri Krishnana Nooraru Geethegalu - 289

ಕಾದಿಹೆನು ನಾ ನಿನ್ನ

ಕಾದಿಹೆನು ನಾ ನಿನ್ನ ಮುದ್ದುಮೋಹನ
ತಡವೇಕೊ ಈ ರಾಧೆ ಬೇಡವಾದೆನ

ನೀನಿರದೆ ಎನ್ನುಳಿವೆ ಪ್ರೀತಿ ಸಂಭ್ರಮ ಸುಖವೆ
ಒಲುಮೆಯೊಡವೆಯ ತಾರೊ ಕೃಷ್ಣ ಪ್ರಭುವೆ
ನೀನಿರದ ಈ ಹೃದಯ ಗಾನವರಿಯದ ಕೊಳಲು
ಶ್ರೀನಿವಾಸ ವಿಠಲನೆ ಬಾರೊ ದೊರೆಯೆ

ಕಾದಿಹೆನು ನಾ ನಿನ್ನ ಮುದ್ದುಮೋಹನ
ತಡವೇಕೊ ಈ ರಾಧೆ ಬೇಡವಾದೆನ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೯.೨೦೧೨

Thursday, September 13, 2012

Shri Krishnana Nooraru Geethegalu - 288

ಶುಭೋದಯಂ

ಶುಭೋದಯಂ ಶುಭದಾಯಕಂ
ಉಮಾಸುತಂ ವಂದೆ ಗಣನಾಯಕಂ

ಆದಿಪೂಜಿತಂ ಅನಂತಚಿದ್ರೂಪಂ
ಭುವನಪತೀಂ ವಂದೆ ಸೋಮಶೋಭಿತಂ (೧)

ಚತುರ್ಭುಜಂ ಮನೋಚಿತ್ತವಿಹಾರಂ
ಬುದ್ಧಿನಾಥಂ ವಂದೆ ಬಾಲಗಣಪತೀಂ (೨)

ಏಕದಂತಂ ಅನೇಕ ವರಪ್ರದ ಶಾಂತಂ
ಈಶಪುತ್ರಂ ವಂದೆ ಏಕಾಕ್ಷರಂ (೩)

ಗಜಾನನಂ ಗಜವಕ್ರದೇವಂ
ಗಣಾಧ್ಯಕ್ಷಂ ವಂದೆ ಗಧಾಧರಂ (೪)

ಸುರೇಶ್ವರಂ ಸಕಲ ಸಿದ್ಧಿಶ್ರೇಯಂ
ನಮೊ ನಮೊ ಶ್ರೀನಿವಾಸ ವಿಠಲ ಪ್ರಿಯಂ (೫)

ಶುಭೋದಯಂ ಶುಭದಾಯಕಂ
ಉಮಾಸುತಂ ವಂದೆ ಗಣನಾಯಕಂ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೯.೨೦೧೨

Tuesday, September 11, 2012

Shri Krishnana Nooraru Geethegalu - 287

ಒಲವ ಮಳೆಯ ಸುರಿಯೊ

ಒಲವ ಮಳೆಯ ಸುರಿಯೊ ಕೃಷ್ಣ ಹದವಿರದೀ ಎದೆಯೊಳು
ಕಣ್ಣ ತೆರೆದು ಬಯಕೆಬೀಜವು ನವೋಲ್ಲಾಸ ಹೊಳೆಯಲು

ಮೊದಲ ಬಸಿರು ಹೊಸತು ಹಗಲು ಚಿಗುರಿ ನಗಲಿ ಹಸಿರೆಲೆ
ಮರೆಯದಿರಲಿ ಬುವಿಯ ತಬ್ಬಿದ ತಾಯಬೇರಿನ ಹಿನ್ನೆಲೆ (೧)

ಕಾರಣವೇ ಇರದೆ ಯಮುನೆ ಹರಿಯುತಿಹಳೆ ಸುಮ್ಮನೆ
ಹರಿಯಬೇಕು ದಿನವು ಜಗವು ತಿಳಿಯಾಗಲು ಒಳಮನೆ (೨)

ಮೌನ ಮೂಡಣದೊಡಲಿನೊಳಗೆ ಮಧುರಮಾತಿನ ಕಿರಣವು
ಚಿಪ್ಪಿನೊಳಗಿನ ಮುತ್ತೆ ಅಂದವು ಇರಲಿ ಹಾಗೆಯೆ ಹೃದಯವು (೩)

ಇರಲಿ ಬೇಸಿಗೆ ಬಿಸಿಲು ಸಹಜವೇ ಸಂಜೆ ಸೋನೆಯ ಮಳೆಹನಿ
ಬೆಳಗೊಳಿರಿಸೊ ಶ್ರೀನಿವಾಸ ವಿಠಲ ಜೀವದಸಿರೊಳು ಇಬ್ಬನಿ (೪)

ಒಲವ ಮಳೆಯ ಸುರಿಯೊ ಕೃಷ್ಣ ಹದವಿರದೀ ಎದೆಯೊಳು
ಕಣ್ಣ ತೆರೆದು ಬಯಕೆಬೀಜವು ನವೋಲ್ಲಾಸ ಹೊಳೆಯಲು

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೯.೨೦೧೨

Monday, September 10, 2012

Shri Krishnana Nooraru Geethegalu - 286

ಸನಿಹ ದೂರ ಎನುವುದೇಕೆ

ಸನಿಹ ದೂರ ಎನುವುದೇಕೆ ಎನ್ನವಳು ನೀ ಎಂದ ಮೇಲೆ
ಎದೆಗೆಯೆದೆಯು ಬೆರೆಯೆ ಜೇನು ಸವಿಯೆ ಸಿಹಿ ತಡವೇಕೆ

ನಿನ್ನ ಕಂಗಳ ಕಾಂತಿ ಸಾಕು ಹೊಳೆವ ತಾರೆಯ ಹಂಗೇಕೆ
ಸೋಮಸುಧೆಯು ವ್ಯರ್ಥ ಗೆಳತಿ ನಿನ್ನ ಅಧರವು ಅರಳಿರೆ

ನಿನ್ನ ಮೌನವೆ ಕವಿತೆ ಬರೆದೊಡೆ ಮಾತಿಗೆಲ್ಲಿಯ ಅರ್ಥವೇ
ಮಾತನಾಡಲು ಅರಳಿ ಮಲ್ಲಿಗೆ ಒಲುಮೆಯ ಹೊಸ ಸೂತ್ರವೆ

ಸನಿಹವಿರದಿರೆ ರಾಧೆ ನೀನು ಎನ್ನ ಜೀವಕ್ಕೆಲ್ಲಿಯ ಸಾರವೆ
ಶ್ರೀನಿವಾಸ ವಿಠಲ ನಿನ್ನವ ನೀನೆನ್ನ ಒಲುಮೆ ಆಧಾರವೆ

ಸನಿಹ ದೂರ ಎನುವುದೇಕೆ ಎನ್ನವಳು ನೀ ಎಂದ ಮೇಲೆ
ಎದೆಗೆಯೆದೆಯು ಬೆರೆಯೆ ಜೇನು ಸವಿಯೆ ಸಿಹಿ ತಡವೇಕೆ

                     ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೯.೨೦೧೨

Sunday, September 9, 2012

Shri Krishnana Nooraru Geethegalu - 285

ಬರುವೆ ನಿನ್ನ ಸನಿಹ

ಬೇಸರವು ಏಕೆ ರಾಧೆ ಬರುವೆ ನಿನ್ನ ಸನಿಹ
ಒಲುಮೆ ಹನಿಹನಿ ವರ್ಷಗರೆದು ಕಳೆವೆ ನಿನ್ನ ವಿರಹ

ನಿನ್ನ ವೇದನೆ ಎನಗೆ ಅರಿಯದೇ ನೀನೆ ಎನ್ನ ಪ್ರಾಣವು
ನಿನ್ನ ನಿರ್ಮಲಪ್ರೇಮ ತೊರೆದು ಬದುಕಲುಂಟೆ ತ್ರಾಣವು (೧)

ಸುರಿವ ಸೋನೆಮಳೆಯು ತಾನು ನಿನ್ನ ನೆನಪನೆ ತರುತಿದೆ
ಎನ್ನ ಎದೆಯ ವೇಣು ನಿನ್ನ ವೀಣೆ ಸನಿಹವ ಬಯಸಿದೆ (೨)

ನಿನ್ನ ಕಂಗಳ ಬೆಳಕೆ ಸಾಕು ಪ್ರಣತಿ ಸಾಲು ಏತಕೆ
ಚಂದ್ರ ತಾರೆ ತೂಗುಮಂಚವು ಸಾಕ್ಷಿ ಎಮ್ಮ ಮಿಲನಕೆ (೩)

ದಾಹವೆನುತಿದೆ ಎನ್ನ ಮೈಮನ ರಾಧೆ ನಿನ್ನ ಸೇರಲು
ಶ್ರೀನಿವಾಸ ವಿಠಲ ಬರುವೆನೆ ಸಿಹಿಯಧರವ ಹೀರಲು (೪)

ಬೇಸರವು ಏಕೆ ರಾಧೆ ಬರುವೆ ನಿನ್ನ ಸನಿಹ
ಒಲುಮೆ ಹನಿಹನಿ ವರ್ಷಗರೆದು ಕಳೆವೆ ನಿನ್ನ ವಿರಹ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೯.೨೦೧೨

Friday, September 7, 2012

Shri Krishnana Nooraru Geethegalu - 284

ಸಂಜೆಯಾಗಿದೆ ಗೆಳತಿ

ಸಂಜೆಯಾಗಿದೆ ಗೆಳತಿ ಬರಲ್ಲಿಲ್ಲ ಅವನಿನ್ನು
ನೆನಪುಗಳ ಜಾತ್ರೆಯಲಿ ನಾನು ಒಂಟಿ

ಎನ್ನ ನಯನಗಳಲ್ಲಿ ಬಯಕೆ ತಾರೆಗಳರಳಿ
ಕಾತರದ ದೀಪಗಳ ಮೆರವಣಿಗೆಯು
ಬೇಸರದೆ ಸುಡುವೆನ್ನ ಆಸೆಯ ಹಾಳೆಯೊಳು
ಸನಿಹ ಬಾರೋ ಎನುವ ಬರವಣಿಗೆಯು (೧)

ಬೇಗ ಬರುವೆನೆ ಎಂದ ಮಧುರತೆಯ ಪಿಸುಮಾತು
ಎನ್ನ ಹೃದಯದ ಕದವ ತೆರೆಯುತಿಹುದು
ಬಿಗಿದಪ್ಪಿ ಮುದ್ದಿಟ್ಟ ಅವನ ಅಧರದ ಬಿಸಿಯು
ಎನ್ನೊಳಗೆ ದಾಹಾಗ್ನಿ ಮೊರೆಯುತಿಹುದು (೨)

ಗೋಕುಲದೆ ಗೋಧೂಳಿ ತರುತಲಿದೆ ತಂಗಾಳಿ
ಅವನ ಬರುವನು ಮುರಳಿ ಉಲಿಯುತಿಹುದು
ಶ್ರೀನಿವಾಸ ವಿಠಲನವ ಬಂದೇ ಬರುವನು ತಾಳೆ
ಎನ್ನೊಳಗಿನಾ ವೀಣೆ ನುಡಿಯುತಿಹುದು (೩)

ಸಂಜೆಯಾಗಿದೆ ಗೆಳತಿ ಬರಲ್ಲಿಲ್ಲ ಅವನಿನ್ನು
ನೆನಪುಗಳ ಜಾತ್ರೆಯಲಿ ನಾನು ಒಂಟಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೨

Shri Krishnana Nooraru Geethegalu - 283

ಮೂಲರೂಪರ ಮುಂದೆ ನಲಿವ

ಮೂಲರೂಪರ ಮುಂದೆ ನಲಿವ ಯತಿಯ ನೋಡಿರೊ
ಭವದ ಭಂಗವ ನೀಗಿ ಸುಕೃತದ ಗತಿಯು ಕಾಣಿರೊ

ಪೂರ್ಣಚಂದಿರ ವದನ ಸುಂದರ ಗುರುಸುಧೀಂದ್ರರ ಶಿಷ್ಯರ
ದ್ವೈತದಂಬುಧಿಯೊಳಗೆ ನಗುವ ಭುವನಗಿರಿಯ ರಾಯರ (೧)

ಮೂಲರಾಮರ ದಿವ್ಯಚರಣವ ನಂಬಿ ಭಜಿಸಿದ ಹನುಮರ
ಕಳೆದು ಕಲಿಯೊಳು ನರರ ಅನ್ಯವ ಮುಕುತಿಯೀಯುವ ದೇವರ (೨)

ತುಂಗಾತೀರದ ವೃಂದಾವನದೊಳು ನಿಂತು ಎಮ್ಮನು ಕಾವರ
ಶ್ರೀನಿವಾಸ ವಿಠಲ ನೇಮಕ ಮಂತ್ರಾಲಯದ ಪೂಜ್ಯರ (೩)

ಮೂಲರೂಪರ ಮುಂದೆ ನಲಿವ ಯತಿಯ ನೋಡಿರೊ
ಭವದ ಭಂಗವ ನೀಗಿ ಸುಕೃತದ ಗತಿಯು ಕಾಣಿರೊ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೨

Wednesday, September 5, 2012

Shri Krishnana Nooraru Geethegalu - 282

ನಿನ್ನ ಸಿರಿಚರಣವನು

ನಿನ್ನ ಸಿರಿಚರಣವನು ಭಜಿಪ ಶ್ರೀದಾಸರ
ದಯೆಯು ಎನಗಿರಲು ನೀನ್ಯಾತಕೊ

ಅರಿಯದೆ ಹರಿಯೆಂದ ಅಜಮಿಳಗೆ ನಮಿಸುವೆನೊ
ನೀನೆ ಗತಿಯೆಂದ ಪ್ರಹ್ಲಾದಗೆ
ಶ್ರೀಹರಿಯೆ ಕಾಯೆಂದ ಕರಿಗೆ ವಂದಿಪೆ ಕೃಷ್ಣ
ನೀನೆನ್ನ ಬಲವೆಂದ ಆ ಭೀಮಗೆ (೧)

ಮೂಢಮತಿ ನಾನಯ್ಯ ದೂರದಕ್ಷರವರಿಯೆ
ಕೃತ ತ್ರೇತೆ ಜಪತಪವ ಕೇಳೊ ದೇವ
ನಿನ್ನುಂಡ ಬಕುತರ ಬಾಗಿಲೊಳು ನಾನಿರುವೆ
ಕಾದಿಹೆನು ಶ್ರೀನಿವಾಸ ವಿಠಲ ಬರುವ (೨)

ನಿನ್ನ ಸಿರಿಚರಣವನು ಭಜಿಪ ಶ್ರೀದಾಸರ
ದಯೆಯು ಎನಗಿರಲು ನೀನ್ಯಾತಕೊ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೯.೨೦೧೨

Saturday, September 1, 2012

Shri Krishnana Nooraru Geethegalu - 281

ಕಾಡ ಬಿದಿರಿನ ಕೊರಡೊ

ಕಾಡ ಬಿದಿರಿನ ಕೊರಡೊ ಕಾದಿಹೆ ನಾನವನ
ಈ ಜೀವ ಜೀವನ ಪಾವನನ

ಶಬರಿಯ ಮೊರೆಗೆ ತಾನೊಲಿದವನ
ಶಿಲೆಯೊಳು ಜೀವವ ತುಂಬಿದನ
ಕೇಸರಿಸುತನವನು ನಿನ್ನ ಚರಣವೊ ಎನಲು
ಬಕುತನ ಎದೆಯೊಳು ನಿಂದವನ (೧)

ಗೋಕುಲ ಪುರಜನ ಪೂಜಿಪ ದೇವನ
ರಾಧೆಯು ಹೃದಯದಿ ಪ್ರೇಮಿಪನ
ಜಗದ ಗೋಗಳ ಕಾವ ಶ್ರೀನಿವಾಸನ ವಿಠಲ
ಕೊಳಲಾಗಿಸಿ ಎನ್ನ ನುಡಿಸುವನ (೨)

ಕಾಡ ಬಿದಿರಿನ ಕೊರಡೊ ಕಾದಿಹೆ ನಾನವನ
ಈ ಜೀವ ಜೀವನ ಪಾವನನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೯.೨೦೧೨