Wednesday, March 28, 2012

Shri Krishnana Nooraru Geethegalu - 218

ತ್ರಿಜಗಪಾಲಕ ಕೃಷ್ಣ

ತ್ರಿಜಗಪಾಲಕ ಕೃಷ್ಣ ವಿಶ್ವಮೋಹಕ

ಶುಭದಿಗಂತ ಜಗದನಂತ
ಸಿರಿಲಕುಮಿಕಾಂತ

ಸುಜನಸಂಪ್ರೀತ ಸಕಲಸುದಾತ
ರಾಧಾಮನಮೋಹಿತ

ಯದುಕುಲತಿಲಕ ಶ್ರೀನಿವಾಸ ವಿಠಲ
ದಶರೂಪ ದಿಕ್ಪಾಲಕ

ತ್ರಿಜಗಪಾಲಕ ಕೃಷ್ಣ ವಿಶ್ವಮೋಹಕ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೩.೨೦೧೨

Tuesday, March 27, 2012

Shri Krishnana Nooraru Geethegalu - 217

ನಿನ್ನ ಶ್ರೀಚರಣದೊಳು

ನಿನ್ನ ಶ್ರೀಚರಣದೊಳು ನಿಂತಿಹೆನು ಶ್ರೀಹರಿಯೆ
ಮಾತು ಮರೆತವೊ ದೇವ ಬೇಡಲೇನ

ತೀಡುವ ತಂಗಾಳಿ ತಿಳಿಯ ಹೇಳಿತೊ ಹರಿಯೆ
ಜೀವ ಜೀವದ ಉಸಿರು ನೀನೆ ಎಂದು
ತಿಳಿಹರಿವ ಜಲರಾಶಿ ನಕ್ಕು ನುಡಿಯಿತೊ ತಾನು
ಹರಿಯ ಶ್ರೀಪಾದವನು ತೊಳೆವೆನೆಂದು (೧)

ಮಲ್ಲಿಗೆಯು ಜಾಜಿ ಶ್ರೀತುಳಸಿದಳಮಾಲೆ
ಕಾದಿಹವೊ ನೀ ಧರಿಸಿ ನಲಿಯಲೆಂದು
ನಿತ್ಯ ಸತ್ಯದ ಸ್ಮರಣೆ ಜಯಮಂತ್ರಘೋಷಗಳು
ಶ್ರೀಹರಿಯು ಈ ಧರೆಯ ಸಲಹಲೆಂದು (೨)

ನಾನೆಂಬೊ ನಾನಲ್ಲ ನೀನೆ ಎಲ್ಲವು ಹರಿಯೆ
ಆ ನಾನು ನೀನಾಗೆ ದಣಿಯಲೆಂದು
ಜನನ ಮರಣದ ನಡುವೆ ಮೂಚಣದ ಜೀವನದಿ
ಶ್ರೀನಿವಾಸ ವಿಠಲ ನೀ ಒಲಿಯಲೆಂದು

ನಿನ್ನ ಶ್ರೀಚರಣದೊಳು ನಿಂತಿಹೆನು ಶ್ರೀಹರಿಯೆ
ಮಾತು ಮರೆತವೊ ದೇವ ಬೇಡಲೇನ


        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೩.೨೦೧೨

Monday, March 19, 2012

Shri Krishnana Nooraru Geethegalu - 216

ಭಕ್ತಿ ಹನಿಗಳು

ಬೂಟಕವ ಓದುವನ ನಾಟಕವ ಆಡುವನ
ಬೂಟಕದ ನಾಟಕದ ಪಾತಕದವನ
ಶುದ್ಧ ಸೂತಕದವನಂತೆ ಕಾಣ್ವ
ಎಮ್ಮ ಸೂತ್ರಕ ಶ್ರೀನಿವಾಸ ವಿಠಲ (೧)

ಕುಲಕುಲ ಎನುವನ ಅಡಿಗಡಿಗೆ ಹಾರುವನ
ಮೈಲಿಗೆಯ ಮೈಲುಗಳ ಮಲೀನನ
ಕೆಸರರಾಡಿಯೊಳಾಡ್ವ ಮಹಿಷವಿದು ಎನುವ
ಎಮ್ಮ ನಿರ್ಮಲ ಶ್ರೀನಿವಾಸ ವಿಠಲ (೨)

ದೇಹದಾ ದೇಗುಲದಿ ಆತ್ಮದಾ ಹಣತೆಯಿದೆ
ತುಂಬಿರೊ ಸತ್ಯದಾ ಸತ್ವ ತೈಲ
ಸುಡುಬತ್ತಿ ನೀವಾಗಿ ಶ್ರೀಹರಿಯೆ ಬೆಳಕೆನಲು
ಒಲಿನೆಮ್ಮೆಯ ದೇವ ಶ್ರೀನಿವಾಸ ವಿಠಲ (೩)

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೩.೨೦೧೨

Thursday, March 15, 2012

Shri Krishnana Nooraru Geethegalu - 215

ಏನೊ ದುಗುಡವು

ಏನೊ ದುಗುಡವು ಮನಕೆ ನೀನಿರದೆ ಮಾಧವ
ನೀರ ತೊರೆದಿಹ ಮೀನೊ ಸನಿಹವಿರದಿರೆ ನೀನು

ಇಳಿಸಂಜೆಯೊಡಲಿನೊಳು ಯಮುನೆ ಜುಳುಜುಳು ಹರಿದು
ಗೋಕುಲದ ಹಾದಿಯೊಳು ಗೋವು ಕೆಂಧೂಳಿ
ಕರುಗಳ ಕೊರಳುಲಿವ ಕಿರುಗೆಜ್ಜೆ ಗಾನದೊಡ
ತೇಲಿ ಬರಲಿಹ ನಿನ್ನ ಮುರಳಿನಾದವದಿರದೆ (೧)

ಒಲವ ಬೃಂದಾವನದಿ ಚೆಲುವ ಚಂದಿರರಾಯ
ಸುರಿದು ಬೆಳದಿಂಗಳಿನ ಸುಮಗಳರಳಿ
ಎನ್ನೆದೆಯ ಬನದೊಳಗೆ ನಿನ್ನ ಬಯಕೆಯ ಜಾತ್ರೆ
ಬರುವೆನೆಂದವ ಬರದೆ ನಾನು ಒಂಟಿ (೨)

ತುಳಸಿದಳಮಾಲೆಯನು ಪಿಡಿದು ಕಾದಿಹೆ ಕೃಷ್ಣ
ನಿನ್ನ ಪ್ರೇಮದ ಪಾದ ಸೇವೆಯರಸಿ
ನೊರೆಹಾಲು ನವನೀತ ನವಬಗೆಯ ಸಿಹಿ ಕೊಡುವೆ
ಶ್ರೀನಿವಾಸ ವಿಠಲ ನೀ ದಯಮಾಡಿಸೊ (೩)

ಏನೊ ದುಗುಡವು ಮನಕೆ ನೀನಿರದೆ ಮಾಧವ
ನೀರ ತೊರೆದಿಹ ಮೀನೊ ಸನಿಹವಿರದಿರೆ ನೀನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೩.೨೦೧೨

Sunday, March 11, 2012

Shri Krishnana Nooraru Geethegalu - 214

ಪಾವನ ವನಮಾಲ

ತುಳಸೀ ದಳಮಾಲೆ ತಂದೆ ದೇವ ಅರ್ಪಿಸೆ ನಿನಗೆಂದೆ ಕೃಷ್ಣ
ಪೂಜಿಸೆ ನಿನ್ನಯ ಶ್ರೀಪಾದ ಕೃಷ್ಣ
ಜೀವನವೆನ್ನದು ಪಾವನ ವನಮಾಲ

ನಿನ್ನಯ ಕರದೊಳು ಮುರಳಿಯು ನಾನಯ್ಯ
ನವರಾಗ ನುಡಿಸೆನ್ನ ಶ್ರೀಮಾಧವ
ಎನ್ನ ಹೃದಯದ ಮಣಿವೀಣೆಯ ಮೀಟೆ
ಉಲಿವುದು ನಿನ್ನಯ ಶ್ರೀನಾಮನಾದ (೧)

ನವನೀತಚೋರನೆ ಗೋಕುಲ ಕೃಷ್ಣಯ್ಯ
ಎನ್ನ ಮನಚೋರನು ನೀನೆ ಕಾಣಯ್ಯ
ಎನ್ನ ಪ್ರಾಣವು ನೀನೊ ಶ್ರೀನಿವಾಸ ವಿಠಲಯ್ಯ
ಪ್ರೇಮದೀ ತುಳಸಿಮಾಲೆಯ ಧರಿಸಯ್ಯ (೨)

ತುಳಸೀ ದಳಮಾಲೆ ತಂದೆ ದೇವ ಅರ್ಪಿಸೆ ನಿನಗೆಂದೆ ಕೃಷ್ಣ
ಪೂಜಿಸೆ ನಿನ್ನಯ ಶ್ರೀಪಾದ ಕೃಷ್ಣ
ಜೀವನವೆನ್ನದು ಪಾವನ ವನಮಾಲ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೩.೨೦೧೨

Wednesday, March 7, 2012

Shri Krishnana Nooraru Geethegalu - 213

ಸ್ಮರಣೆ ಮಾಡಿರೊ ಶ್ರೀರಾಯರ

ಸ್ಮರಣೆ ಮಾಡಿರೊ ಶ್ರೀರಾಯರ ಕರುಣೆ ಕಾಣಿರೊ
ಹಲವು ರೂಪಗಳಲಿ ಹರಿಯ ಸೇವೆಗೈದ ಪುಣ್ಯಯತಿಯ

ಶಂಖಕರ್ಣ ಬಾಹ್ಲಿಕ ಪ್ರಹ್ಲಾದರಾದಿ ವ್ಯಾಸರಾಜ
ಭುವನಗಿರಿಯ ಭಾಗ್ಯವೆಮ್ಮ ರಾಘವೇಂದ್ರರಾಯರ (೧)

ಯತಿಗಳಲಿ ಸುಯತೀಂದ್ರ ಮತಿಯೊಳು ತಾ ಸುಮತೀಂದ್ರ
ನಿರ್ಗತಿಗೆ ಸುಗತಿಯೆಮ್ಮ ರಾಘವೇಂದ್ರರಾಯರ (೨)

ಶರಣ ಕಾಮಧೇನುವ ಸುಜನ ಕಲ್ಪವೃಕ್ಷವ
ಒಲಿದ ನರಗೆ ಸನ್ಮಂಗಳವೀವ ರಾಘವೇಂದ್ರರಾಯರ (೩)

ತುಂಗಾತೀರದೊಡೆಯನ ಮುಖ್ಯಪ್ರಾಣರೊಲಿದನ
ಶ್ರೀನಿವಾಸ ವಿಠಲ ಪ್ರಿಯನ ರಾಘವೇಂದ್ರರಾಯರ (೪)

ಸ್ಮರಣೆ ಮಾಡಿರೊ ಶ್ರೀರಾಯರ ಕರುಣೆ ಕಾಣಿರೊ
ಹಲವು ರೂಪಗಳಲಿ ಹರಿಯ ಸೇವೆಗೈದ ಪುಣ್ಯಯತಿಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೩.೨೦೧೨

Sunday, March 4, 2012

Shri Krishnana Nooraru Geethegalu - 212

ಕೃಷ್ಣನಿರದೆ ರಾಧೆಯಿಲ್ಲ

ಕೃಷ್ಣನಿರದೆ ರಾಧೆಯಿಲ್ಲ ರಾಧೆಗೋ ಇವನೆ ನಲ್ಲ
ಗೋಕುಲದ ಗೋಪಾಲ ಗೊಲ್ಲ ಇರದೆ ರಾಧೆ ಜಗವೆ ಇಲ್ಲ

ನಯನವವಳು ನೋಟವಿವನು ಹೃದಯವವಳ ಬಡಿತವು
ಕರ್ಣಗಳಿಗೆ ವೇಣುಯಿವನು ರಾಧೆ ಜೀವಮಿಡಿತವು
ರಾಧೆ ಮೈಯ್ಯ ಕಣಕಣದೊಳು ಮುರಳಿಯವನ ಮೋಹವು
ಅವನಿಲ್ಲದೆ ರಾಧೆಯವಳು ಆತ್ಮವಿರದ ದೇಹವು (೧)

ಬರುವೆನೆಂದು ಪೇಳಿದವನು ಬರದಿದ್ದೊಡೆ ನೋವಳು
ಸಂಜೆಯಲಿ ಸಿಂಗಾರದೊಡತಿ ತೂಗುಮಂಚದಿ ಕಾವಳು
ಬಯಕೆ ಬಾಗಿಲ ಹೊಸ್ತಿಲಲ್ಲಿ ಒಲುಮೆ ತೋರಣ ಬಿಗಿವಳು
ಪ್ರಣತಿಯೊಡಲಿನ ದೀಪ್ತಿಯಂದದಿ ಕಾತರಿಸುವ ಕಂಗಳು (೨)

ಮೂಲೋಕದಿ ಚೆಲುವನವನು ತಡವಾದರು ಬರುವನು
ಗಲ್ಲ ರಮಿಸಿ ರಾಜಕಾರಣ ತಡವಾಯಿತು ಎನುವನು
ಶ್ರೀನಿವಾಸ ವಿಠಲನವನು ರಾಧೆ ವಿರಹವ ಬಲ್ಲನು
ತೋಳಬಳಸಿ ಪ್ರೇಮವುಣಿಸಿ ಅವಳ ಗೆಲುವ ಜಾಣನು (೩)

ಕೃಷ್ಣನಿರದೆ ರಾಧೆಯಿಲ್ಲ ರಾಧೆಗೋ ಇವನೆ ನಲ್ಲ
ಗೋಕುಲದ ಗೋಪಾಲ ಗೊಲ್ಲ ಇರದೆ ರಾಧೆ ಜಗವೆ ಇಲ್ಲ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೩.೨೦೧೨

Shri Krishnana Nooraru Geethegalu - 211

ನೀನಿರದೆ ಮಾಧವ

ಬೇಸರವೀ ಸಂಜೆಯು ನೀನಿರದೆ ಮಾಧವ
ಎಲ್ಲಿರುವೆಯೊ ಸಖನೆ ತಾಳೆನೀ ವಿರಹವ

ಹರಿವ ಯಮುನೆಯೆ ಪೇಳೆ ಗಾನ ಕಾಜಾಣವೆ
ಚಿಗುರು ಹಸಿರಿನ ನಡುವೆ ನಗುವ ಸುಮವೆ
ಗೋಪಾಲನೆಲ್ಲಿಹನು ಹೇಳಿ ಗೋ-ಕರುಗಳೆ
ಕಂಡರವ ಬರಲೇಳಿ ಕಾದಿಹೆನು ಈಗಲೆ (೧)

ಎನ್ನೊಡಲ ವೀಣೆಯದು ಮೌನ ವೈಣಿಕನಿರದೆ
ನುಡಿಸು ಬಾರೆಲೊ ಕೃಷ್ಣ ಶೃಂಗಾರ ರಾಗ
ಚೆಲುವರೊಳು ಚೆಲುವ ನೀ ಶ್ರೀನಿವಾಸ ವಿಠಲನೆ
ನಿನ್ನವಳೊ ಈ ರಾಧೆ ನಂಬೊ ನನ್ನಾಣೆ (೨)

ಬೇಸರವೀ ಸಂಜೆಯು ನೀನಿರದೆ ಮಾಧವ
ಎಲ್ಲಿರುವೆಯೊ ಸಖನೆ ತಾಳೆನೀ ವಿರಹವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೩.೨೦೧೨

Friday, March 2, 2012

Shri Krishnana Nooraru Geethegalu - 210

ಮತ್ತೆ ಸಂಜೆಯಾಗಿದೆ

ಮತ್ತೆ ಸಂಜೆಯಾಗಿದೆ ನಿನ್ನ ನೆನಪೆ ಕಾಡಿದೆ
ಬೃಂದಾವನದ ಎದೆಬನದೊಳು ಮರಳಿ ಬಂದು ಯೌವ್ವನ

ತೂಗುತಿರುವ ಉಯ್ಯಾಲೆಯಲಿ ಆವುದೊ ಹೊಸ ಸಂಭ್ರಮ
ನುಡಿಸೆ ವೀಣೆ ಕಾಯುತಿಹುದು ಶೃಂಗಾರದ ಸರಿಗಮ

ನಾಚಿ ಯಮುನೆ ದೂರ ಸರಿದು ಹಕ್ಕಿ ಕೊರಳೊಲು ಗಾನ ಬರೆದು
ವಿರಹಿ ರಾಧೆಯ ಒಡಲ ಕಡಲೊಳು ಬಯಕೆ ವರ್ಣವ ಸುರಿದು

ಬಾರೊ ಪ್ರಾಣಸಖನೆ ಸನಿಹ ಶ್ರೀನಿವಾಸ ವಿಠಲ
ಕೊಡುವೆ ಒಲುಮೆ ಸಕ್ಕರೆ ಬೆರೆತ ನೊರೆಹಾಲಿನ ಬಟ್ಟಲ

ಮತ್ತೆ ಸಂಜೆಯಾಗಿದೆ ನಿನ್ನ ನೆನಪೆ ಕಾಡಿದೆ
ಬೃಂದಾವನದ ಎದೆಬನದೊಳು ಮರಳಿ ಬಂದು ಯೌವ್ವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೩.೨೦೧೨