Sunday, October 30, 2011

Shri Krishnana Nooraru Geethegalu - 180

ಶ್ರೀಪಂಚವದನಂ

ದೇವಾದಿದೇವಂ ಶ್ರೀಮುಖ್ಯಪ್ರಾಣಂ
ಪಾಲಿಸೈ ಪವನಸುತ ಶ್ರೀಪಂಚವದನಂ

ಶ್ರೀಬಾಲಸೂರ್ಯಂ ಭೀಮಸಹಾಯಂ
ಬಕುತಜನಮಂದಾರ ಬಲಸಿದ್ಧಿದಾಯಂ
ದುರಿತಕುಲಸಂಹಾರ ದಶಬಾಹುದೇವಂ
ದೀನಜನ ಕರುಣ ಶ್ರೀಧೀರಾಧಿಧೀರಂ (೧)

ಶ್ರೀಮಹಾತೇಜಂ ಮಹಾಕಾಯದೇವಂ
ಮಾರುತಾತ್ಮಜ ಶ್ರೀಮನೋಜವಾಯಂ
ಕೇಸರಿಸುತ ವಂದೇ ಕಪಿಸೇನಾನಾಯಕಂ
ಲಂಕಿಣಿಭಂಜನನೆ ಮೂಲೋಕಪೂಜ್ಯಂ (೨)

ನಮೊ ಹನುಮದೇವಂ ಶ್ರೀರಾಮದೂತಂ
ಜಾನಕೀ ಶೋಕಹರ ಜೀವ ಸಂಜೀವಂ
ದ್ವಾಪರನೆ ಭೀಮಯ್ಯ ಮಧ್ವಾದಿರಾಯಂ
ಶ್ರೀನಿವಾಸ ವಿಠಲನ ಶ್ರೀಪಾದ ಸೇವಕಂ (೩)

ದೇವಾದಿದೇವಂ ಶ್ರೀಮುಖ್ಯಪ್ರಾಣಂ
ಪಾಲಿಸೈ ಪವನಸುತ ಶ್ರೀಪಂಚವದನಂ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೧೦.೨೦೧೧

Thursday, October 27, 2011

Shri Krishnana Nooraru Geethegalu - 179

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ ನಿಜ
ನಿನ್ನೊಳ ಕೊಳೆಯದ ತೊಳಕೊಳ್ಳೊ
ಮನವೆಂಬೊ ಗುಡಿಯೊಳ ಗೋಡೆಗೋಪುರಕೆ
ಶುದ್ಧದ ಸುಣ್ಣವ ಬಳಕೊಳ್ಳೊ

ನಾನೆಂಬೊ ಕೂಳನ ಹೊರತಳ್ಳೊ ನಿಜ
ಆರೆಂಬೊ ಅಸುರರ ನೀ ಕೊಲ್ಲೊ
ಮಡಿಮೈಲಿಗೆಯೆಂಬೊ ಗಡಿಬಿಡಿ ಬದಿಗಿಡೊ
ಇಹದೀ ಮೋಹವ ಕಳಕೊಳ್ಳೊ (೧)

ಬಾಡಿಗೆ ಕಾಯವೊ ಬರಕೊಳ್ಳೊ ನಿಜ
ಅವನೇ ದಾತನು ತಿಳಕೊಳ್ಳೊ
ಶ್ರೀನಿವಾಸ ವಿಠಲನ ಸಿರಿ ಶ್ರೀಪಾದವ
ಬಿಡದೇ ಎಂದೆಂದು ಹಿಡಕೊಳ್ಳೊ (೨)

ನಿನ್ನ ನೀ ಶ್ರೀಹರಿಗೆ ತೆರಕೊಳ್ಳೊ
ನಿನ್ನೊಳ ಕೊಳೆಯದ ತೊಳಕೊಳ್ಳೊ
ಮನವೆಂಬೊ ಗುಡಿಯೊಳ ಗೋಡೆಗೋಪುರಕೆ
ಶುದ್ಧದ ಸುಣ್ಣವ ಬಳಕೊಳ್ಳೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೧೦.೨೦೧೧

Tuesday, October 25, 2011

Shri Krishnana Nooraru Geethegalu - 178


ರಾಧೆಯವಳು ನಿಜದಿ ಮುಗುದೆ

ರಾಧೆಯವಳು ನಿಜದಿ ಮುಗುದೆ ಕೃಷ್ಣನಿವನೆ ಚೋರ
ಅರಿಯದವಳ ಹೃದಯ ವನಕೆ ಲಗ್ಗೆಯಿಟ್ಟ ಪೋರ

ಗೋಕುಲದ ತಂಗಾಳಿ ನುಡಿದಿದೆ ಗೋಪಮ್ಮನ ಕಂದನು
ಮಾನಿನಿಯರ ಮನದ ಕದವ ಮೆಲ್ಲಮೆಲ್ಲ ತೆರೆವನೊ
ಮುರಳಿಮೋಹನ ಮದನಮಾಧವ ಚೆಲುವರೊಳಗೆ ಚೆಲ್ವನು
ಮೋಡಿಗಾರ ಮುದ್ದುಕೃಷ್ಣ ರಾಧೆ ನಿದಿರೆ ಕದಿವನೊ (೧)

ಬಲ್ಲೆನಯ್ಯ ಬೆಡಗಿ ಇವಳೊ ಬೃಂದಾವನದ ಚೆಲುವೆಯೊ
ನಸುನಕ್ಕರೆ ಸವಿಸಕ್ಕರೆ ಪೂರ್ಣಚಂದಿರ ವದನೆಯೊ
ಒಲುಮೆ ವೀಣೆಯ ಮೀಟಿ ಕರೆವಳೊ ವಿರಹಗಾನವ ಪಾಡುತ
ಶ್ರೀನಿವಾಸ ವಿಠಲ ಬರುವನೊ ರಾಧೆ ಮಿಲನಕೆ ಓಡುತ (೨)

ರಾಧೆಯವಳು ನಿಜದಿ ಮುಗುದೆ ಕೃಷ್ಣನಿವನೆ ಚೋರ
ಅರಿಯದವಳ ಹೃದಯ ವನಕೆ ಲಗ್ಗೆಯಿಟ್ಟ ಪೋರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೦.೨೦೧೧

Monday, October 24, 2011

Shri Krishnana Nooraru Geethegalu - 177

ಶ್ರೀಕೃಷ್ಣ ಹರೆ

ಕೃಷ್ಣ ಹರೆ ಶ್ರೀಕೃಷ್ಣ ಹರೆ
ಮೂಜಗಪಾಲ ಶ್ರೀವಿಷ್ಣು ಹರೆ

ಯದುವಂಶಜ ಶ್ರೀಯದುಕುಲನಂದನ
ಯಮುನಾಪುರವಾಸ ಕೃಷ್ಣ ಹರೆ
ವಸುದೇವಸುತ ಶ್ರೀದೇವಕಿ ಗರ್ಭನೆ
ನಂದಗೋಪಿಯ ಕಂದ ಕೃಷ್ಣ ಹರೆ (೧)

ಬೃಂದಾವನ ಬಾಲ ಗೋಕುಲ ಗೋಪಾಲ
ನವನೀತಚೋರ ಶ್ರೀಕೃಷ್ಣ ಹರೆ
ರಾಧಾ ಮನಚೋರ ಗೋವರ್ಧನಧರ
ಗಾನಗಂಭೀರಮಾರ ಕೃಷ್ಣ ಹರೆ (೨)

ದ್ವಾರಕಾಧೀಶ ಶ್ರೀಧರಣೀಶ ಶ್ರೀಶ
ಸುಜನ ಸುಪಾಲಕ ಕೃಷ್ಣ ಹರೆ
ದುರಿತ ಸಂಹಾರಕ ಸುಜನ ಸಂರಕ್ಷಕ
ಜಗದೋದ್ಧಾರಕ ಕೃಷ್ಣ ಹರೆ (೩)

ತ್ರೇತಾ ರಾಮನೆ ದ್ವಾಪರ ಶ್ಯಾಮನೆ
ಕಲಿವರದನೆ ಹರಿ ಕೃಷ್ಣ ಹರೆ
ಅಣುರೇಣುತೃಣಪಾಲ ಶ್ರೀನಿವಾಸ ವಿಠಲನೆ
ಕರುಣಾಳು ದೇವ ಶ್ರೀಕೃಷ್ಣ ಹರೆ (೪)

ಕೃಷ್ಣ ಹರೆ ಶ್ರೀಕೃಷ್ಣ ಹರೆ
ಮೂಜಗಪಾಲ ಶ್ರೀವಿಷ್ಣು ಹರೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೧೦.೨೦೧೧

Saturday, October 22, 2011

Shri Krishnana Nooraru Geethegalu - 176

ಜಯಜಯಕೃಷ್ಣ

ಜಯಜಯಕೃಷ್ಣ ಶ್ರೀದೇವಕಿ ಕೃಷ್ಣ
ನರಕುಲಪಾವನ ನಾರಾಯಣ ಕೃಷ್ಣ

ಜಯಜಯಕೃಷ್ಣ ಶ್ರೀವಸುದೇವ ಕೃಷ್ಣ
ದುರಿತ ಸಂಹಾರಕ ನಾರಾಯಣ ಕೃಷ್ಣ

ಜಯಜಯಕೃಷ್ಣ ಶ್ರೀಗೋಕುಲ ಕೃಷ್ಣ
ಸುಜನ ಸುಪಾಲಕ ನಾರಾಯಣ ಕೃಷ್ಣ

ಜಯಜಯಕೃಷ್ಣ ಶ್ರೀಮೋಹನ ಕೃಷ್ಣ
ರಾಧಾ ಮಾಧವ ನಾರಾಯಣ ಕೃಷ್ಣ

ಜಯಜಯಕೃಷ್ಣ ಶ್ರೀದಶದೇವ ಕೃಷ್ಣ
ಶ್ರೀನಿವಾಸ ವಿಠಲ ನಾರಾಯಣ ಕೃಷ್ಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೦.೨೦೧೧

Tuesday, October 18, 2011

Shri Krishnana Nooraru Geethegalu - 175

ಕೋಲನ್ನಾಡು ಬಾರೊ

ಕೋಲನ್ನಾಡು ಬಾರೊ ರಂಗ ಕೋಲನ್ನಾಡು ಬಾರೊ

ಸುಂದರ ಸಗ್ಗದ ಬೃಂದಾವನದಿ
ಯುಗದ ಜಗದ ಸಖನೆ ಮುದದಿ
ಗೋಕುಲ ಚೆಲ್ವೇರ ಚಂದುಳ್ಳಿ ಸಂಗದಿ
ನಂದಗೋಪಿಯ ಆನಂದ ಕಂದ (೧)

ರಾಧೆಯ ನಯನದೆ ನಯನವನಿರಿಸಿ
ಹೃದಯದ ವಿರಹವ ಚುಂಬಿಸಿ ರಮಿಸಿ
ಗೆಜ್ಜೆಯ ಹೆಜ್ಜೆಯ ಸಮದೊಳಗಿರಿಸಿ
ಮೋಹನ ಮಾಧವ ಶ್ರೀಕೃಷ್ಣ ಸರಸಿ (೨)

ದಶವರ್ಣದ ಕೋಲ ದಶರೂಪದೊಳಗೆ
ಧರ್ಮದೊಳಾಡುತ ಧರೆಯ ಕಾದವನೆ
ಶ್ರೀರಾಯರಾಯನೆ ಶ್ರೀನಿವಾಸ ವಿಠಲನೆ
ನರಕುಲ ಸಂಜೀವ ಶ್ರೀಮಧ್ವರೊಡೆಯನೆ (೩)

ಕೋಲನ್ನಾಡು ಬಾರೊ ರಂಗ ಕೋಲನ್ನಾಡು ಬಾರೊ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೧೦.೨೦೧೧

Sunday, October 16, 2011

Shri Krishnana Nooraru Geethegalu - 174

ಸುಗುಣೋದ್ಧಾಮ

ಜಯ ಜಯ ರಾಮ ಜಯ ಶ್ರೀರಾಮ
ಶುಭಮಂಗಳಕರ ರಘುಕುಲಸೋಮ

ಉತ್ತಮ ರಾಮ ಪುರುಷೋತ್ತಮ ರಾಮ
ಅಕ್ಷಯವರದ ಸುಗುಣೋದ್ಧಾಮ
ಶಿಕ್ಷಕ ರಾಮ ಪರೀಕ್ಷಕ ರಾಮ
ನೆಚ್ಚಿದ ಸುಜನ ಸುರಕ್ಷಕ ರಾಮ (೧)

ಮಾನ್ಯನೊ ರಾಮ ಸನ್ಮಾನ್ಯನೊ ರಾಮ
ಜನಕಸುತೆ ಮಾತೆ ಜಾನಕಿ ಪ್ರೇಮ
ಶ್ಯಾಮನೊ ರಾಮ ಅಕ್ಷಾಮನೊ ರಾಮ
ಶ್ರೀನಿವಾಸ ವಿಠಲನ ಶ್ರೀಆದಿನಾಮ (೨)

ಜಯ ಜಯ ರಾಮ ಜಯ ಶ್ರೀರಾಮ
ಶುಭಮಂಗಳಕರ ರಘುಕುಲಸೋಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೧೦.೨೦೧೧

Saturday, October 15, 2011

Shri Krishnana Nooraru Geethegalu - 173

ಶ್ರೀಹರಿಯೆ ಕೃಷ್ಣ

ನೀನಿರದೆ ನಾನ್ಯಾರೊ ನಿನ್ನದೀ ಅವನಿಯೊಳು
ನಿನ್ನಿಂದಲೆನ್ನಿರುವೊ ಶ್ರೀಹರಿಯೆ ಕೃಷ್ಣ

ಈ ಬುವಿಯು ನಿನ್ನದೊ ಭಾನು ರವಿ ಸೋಮ
ಜಲವಾಯು ಚರಾಚರಕೆ ನೀ ಜೀವಕಾಮ
ಅಖಿಲಾಂಡನು ನೀನೊ ಅಣುವಿನೊಳ ಅಣುವು ನಾ
ಕರುಣದೊಳು ಕಾಯೆಮ್ಮ ಗೋವಿಂದ ಕೃಷ್ಣ (೧)

ಮತ್ಸ್ಯರೂಪನೊ ನೀನು ವರಾಹಾದಿಕೂರ್ಮನೊ
ಪರಶುಧರ ನರಸಿಂಹ ನಾರಾಯಣ
ಹಲವು ರೂಪದೊಳುದಿಸಿ ಸುಜನ ಶಾಪವನಳಿಸಿ
ನರಕುಲವನುಳಿಸಿದನೆ ದಶದೇವ ಕೃಷ್ಣ (೨)

ತ್ರೇತೆಯೊಳ ಮೂಲರಾಮ ದ್ವಾಪರದೆ ಮೇಘಶ್ಯಾಮ
ಮುಖ್ಯಪ್ರಾಣ ಮಧ್ವಾದಿ ರಾಯರಾಯ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲಯ್ಯ
ಸಕಲರೊಳು ಸಲಹೆನ್ನ ಸುಖದೊಳಗೆ ಕೃಷ್ಣ (೩)

ನೀನಿರದೆ ನಾನ್ಯಾರೊ ನಿನ್ನದೀ ಅವನಿಯೊಳು
ನಿನ್ನಿಂದಲೆನ್ನಿರುವೊ ಶ್ರೀಹರಿಯೆ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೦.೨೦೧೧

Friday, October 14, 2011

Shri Krishnana Nooraru Geethegalu - 172


ಬೃಂದಾವನ ದೊರೆಯೆ


ಕಲಿಯುಗದೆ ಕಾಮಧೇನು ಕಲ್ಪವೃಕ್ಷ ಶ್ರೀಗುರುವೆ
ಮೊರೆಬಂದೆ ನಿನ್ನ ಪಾದ ಬೃಂದಾವನ ದೊರೆಯೆ

ಕಾರ್ಯಕಾರಣ ನೀನೊ ನಾನಿಲ್ಲಿ ಬರೀ ಶೂನ್ಯ
ಸಕಲ ಪಾಲಕ ಗುರುವೆ ನೀನೇ ಜಗಮಾನ್ಯ
ಬಕುತಜನ ಭವಹರನೆ ಭುವನಗಿರಿ ಗುರುರಾಯ
ಬೇಡುವೆನು ಕರುಣದೊಳು ಕಾಯೊ ಮಹನೀಯ (೧)

ಧರ್ಮ ಕಾವನು ನೀನೊ ಧರೆಯ ಸಲಹುವ ದೇವ
ಶ್ರೀರಾಮ ಗುಣಧಾಮ ಶ್ರೀರಾಘವೇಂದ್ರ
ಅಸುರಹಾರಕ ಗುರುವೆ ಶುಭವರವ ಕರುಣಿಸೊ
ಶ್ರೀಮಧ್ವಮತ ಸೋಮ ಕಾಯೊ ಯೋಗೇಂದ್ರ (೨)

ಸುಮತೀಂದ್ರ ಯತಿ ನೀನೊ ಮತಿಯಿರದಿ ಮೂಢಂಗೆ
ಎನ್ನನ್ಯವನು ಕ್ಷಮಿಸೊ ಭುವನವಂದ್ಯ
ಶ್ರೀನಿವಾಸ ವಿಠಲನ ಪದಪದ್ಮ ಶ್ರೀಗುರುವೆ
ನರಕದೊಳು ನಾಕವಿಡೊ ಬದುಕಸಂಧ್ಯಾ (೩)

ಕಲಿಯುಗದೆ ಕಾಮಧೇನು ಕಲ್ಪವೃಕ್ಷ ಶ್ರೀಗುರುವೆ
ಮೊರೆಬಂದೆ ನಿನ್ನ ಪಾದ ಬೃಂದಾವನ ದೊರೆಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೧೦.೨೦೧೧

Thursday, October 13, 2011

Shri Krishnana Nooraru Geethegalu - 171

ಶಿಷ್ಟ ಸುರಕ್ಷ

ಮಾತೆ ಗೋಪಿಯ ಮಮತೆ ತೋಳೊಳು ನಲಿವನೆ ಶ್ರೀಕೃಷ್ಣ
ಅಮ್ಮ ಲಕುಮಿಯ ಸರಸಾಂಗ ರಂಗನೆ ಕಾಯೊ ಶಿಷ್ಟ ಸುರಕ್ಷ

ನಲುಮೆ ಗೆಲುಮೆಯ ಚಿಲುಮೆ ನೀನೊ ಮಾತೆಯೊಲವದ ಧರಿಸೊ
ಸಕಲ ಸುಜನ ಸುಪಾಲ ಕೃಷ್ಣನೆ ನಿನ್ನೊಲುಮೆಯ ಅನುಗ್ರಹಿಸೊ (೧)

ತ್ರೇತೆಯೊಳು ಮುಖ್ಯಪ್ರಾಣಗೆ ಶಬರಿಗೊಲಿದ ಒಲುಮೆಯ
ದ್ವಾಪರದೊಳು ಧರ್ಮದೈವಗೆ ನೀ ಹರಸಿದ ಗೆಲುಮೆಯ (೨)

ಧರೆಯೊಳಗೆ ಕಲಿಯೊಡೆಯನೆ ಶ್ರೀನಿವಾಸ ವಿಠಲ ರಾಯ
ನೆಚ್ಚಿಬಂದ ನರರೊ ನಾವು ಮೆಚ್ಚಿ ಎಮ್ಮ ಸಲಹೆಯಾ? (೩)

ಮಾತೆ ಗೋಪಿಯ ಮಮತೆ ತೋಳೊಳು ನಲಿವನೆ ಶ್ರೀಕೃಷ್ಣ
ಅಮ್ಮ ಲಕುಮಿಯ ಸರಸಾಂಗ ರಂಗನೆ ಕಾಯೊ ಶಿಷ್ಟ ಸುರಕ್ಷ

            ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೧೦.೨೦೧೧

Tuesday, October 11, 2011

Shri Krishnana Nooraru Geethegalu - 170

ನರಿಯು ಮಜ್ಜನ ಮಾಡಿತೊ

ನರಿಯು ಮಜ್ಜನ ಮಾಡಿತೊ ನರಿಹರಿ
ನರಿಯು ಮಜ್ಜನ ಮಾಡಿತೊ

ಕೇಡ ಬಗೆಯೇನೆಂದು ಊರ ಹೊಳೆಗೆ ಬಂದು
ಗಂಧ ಸುಗಂಧದ ಮಾರ್ಜಕ ತಂದು
ಒಳಶುದ್ಧಿ ಅರಿಯದೆ ಬರಿ ತೊಗಲನೆ ತೊಳೆದು
ಶುದ್ಧಾತಿ ಪರಿಶುದ್ಧ ತಾನೆಂದು ಪಾಡುತ (೧)

ಪಟ್ಟೆಬಟ್ಟೆಯನುಟ್ಟು ಗೋಟುನಾಮವನಿಟ್ಟು
ಉಗ್ರುಪವಾಸದ ಪಣವನು ತೊಟ್ಟು
ವಣಮಂತ್ರ ವಟಗುಡುತ ಒಳಹಲ್ಲ ಮಸೆಯುತ
ಧನ್ಯಾತಿ ಧನ್ಯನು ತಾನೆಂದು ತೋರುತ (೨)

ಆರೆಂಬೊ ಅಸುರರು ಆಸೆಮಾಂಸವ ಸುಟ್ಟು
ಬಡಿಯೆ ನಾಸಿಕಕೆ ನರಿಯದು ದಿಕ್ಕೆಟ್ಟು
ಠುಸ್ಸಾಯ್ತೊ ಠಕ್ಕನ ಪಾರಮಾರ್ಥದ ಗುಟ್ಟು
ಓಡಿತೊ ಶ್ರೀನಿವಾಸ ವಿಠಲನ್ನೇ ಬಿಟ್ಟು (೩)

ನರಿಯು ಮಜ್ಜನ ಮಾಡಿತೊ ನರಿಹರಿ
ನರಿಯು ಮಜ್ಜನ ಮಾಡಿತೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೧

Saturday, October 8, 2011

Shri Krishnana Nooraru Geethegalu - 169

ವೈಣಿಕ ನೀ ನುಡಿಸೊ

ಹರಿಹರಿ ಹರಿಯೆನ್ನ ನರಹರಿಯೆ ಕೃಷ್ಣ
ಎನ್ನೊಳು ನೀ ನೆಲೆಸೊ
ಜೀವವು ನಿನ್ನದೊ ಜೀವನರಾಗವೂ
ಹರಿಯೆನುವುದ ಕಲಿಸೊ

ಹೃದಯವೆನ್ನಯ ಗುಡಿಯು ನಿನ್ನದೈ ಕೃಷ್ಣ
ದೇವನೆ ನೀ ನೆಲೆಸೊ
ಅಣುದೇಹದೀ ಪ್ರಾಣ ವೀಣೆ ನಿನ್ನದೋ ಕೃಷ್ಣ
ವೈಣಿಕ ನೀ ನುಡಿಸೊ (೧)

ನಿನ್ನ ಕೈಯೊಳ ಬೊಂಬೆಯೊ ನಾ ಕೃಷ್ಣ
ಬಲ್ಲಿದ ನೀ ಕುಣಿಸೊ
ಶ್ರೀನಿವಾಸ ವಿಠಲನೆ ಗೋಕುಲ ಕೃಷ್ಣಯ್ಯ
ಶ್ರೀಪಾದವ ತೋರಿಸೊ (೨)

ಹರಿಹರಿ ಹರಿಯೆನ್ನ ನರಹರಿಯೆ ಕೃಷ್ಣ
ಎನ್ನೊಳು ನೀ ನೆಲೆಸೊ
ಜೀವವು ನಿನ್ನದೊ ಜೀವನರಾಗವೂ
ಹರಿಯೆನುವುದ ಕಲಿಸೊ


ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೧೦.೨೦೧೧

Thursday, October 6, 2011

Shri Krishnana Nooraru Geethegalu - 168

ಅವನೀಶ ಹೃದಯೆ

ಕ್ಷೀರಾಬ್ಧಿಸುತೆಯೆ ಶ್ರೀಸರ್ವಮಂಗಳೆ ಲಕುಮಿ
ಅಣುರೇಣುತೃಣ ಕಾವ ಅವನೀಶ ಹೃದಯೆ

ಪದ್ಮೋದ್ಭವೆ ದೇವಿ ಪದ್ಮಸುಂದರಿಯೆ
ಪದ್ಮನಯನೆ ವರದೆ ಪುಣ್ಯಗಂಧಿನಿಯೆ
ವಿಮಲೆ ವಿಶ್ವಜನನಿ ವಿಷ್ಣುವಲ್ಲಭೆಯೆ
ಪಾಲಿಸೆಮ್ಮನು ತಾಯೆ ಸರ್ವಶುಭೆಯೆ (೧)

ಸಕಲಸಂಪದೆ ದೇವಿ ಸುರವಂದ್ಯೆ ಸಂಪ್ರೀತೆ
ಶಕ್ತಿದಾಯಿನಿ ಕರುಣಿ ಸಿರಿಜ್ಞಾನದಾತೆ
ಭಕ್ತವತ್ಸಲ ಹರಿಯ ನಿತ್ಯ ಸೇವಿಪ ಮಾತೆ
ಪಾಲಿಸೆಮ್ಮನು ತಾಯೆ ಮೂಲೋಕಪೂಜಿತೆ (೨)

ತ್ರೇತೆಯೊಳು ಶ್ರೀರಾಮ ಹೃದಯ ಜಾನಕಿಯೆ
ದ್ವಾಪರದೆ ಕೃಷ್ಣಯ್ಯನೊಲಿದ ರುಕ್ಮಿಣಿಯೆ
ಶ್ರೀನಿವಾಸ ವಿಠಲನ ಸರಸಾಂಗಿ ಸುಖಸತಿಯೆ
ಪಾಲಿಸೆಮ್ಮನು ತಾಯೆ ಜಗದೊಡತಿಯೆ (೩)

ಕ್ಷೀರಾಬ್ಧಿಸುತೆಯೆ ಶ್ರೀಸರ್ವಮಂಗಳೆ ಲಕುಮಿ
ಅಣುರೇಣುತೃಣ ಕಾವ ಅವನೀಶ ಹೃದಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೧೦.೨೦೧೧

Tuesday, October 4, 2011

Shri Krishnana Nooraru Geethegalu - 167

ಮನವ ನಿನ್ನೊಳು ನಿಲಿಸೊ

ಮನವ ನಿನ್ನೊಳು ನಿಲಿಸೊ ಮಾಧವ ಎನ್ನ
ಮನದ ತಮವ ಹರಿಸೊ

ಮೃಗಶಿರವೆನ್ನ ಚಿತ್ತ ನಿಲ್ಲದೊ ಒಂದತ್ತ
ಸಂಚಿನೊಳಾರೆಂಬೊ ಪಾಶ-ಮೋಹದ ಹುತ್ತ
ಹರಿ ನಿನ್ನ ಇರುವನೆ ಅರಿಯದೆ ಅತ್ತಿತ್ತ
ಚಂಚಲ ಕಾಲಿಂದಿ ಎನ್ನೊಳು ಬುಸುಗುಡುತ (೧)

ತ್ರೇತೆಯೊಳು ರಾವಣಗೆ ಕಾಮವಾಗೆರಗಿತ್ತೊ
ಜಾನಕಿಗೆ ಜಗನಿಂದೆ ಮಾಯೆಯಾಗಿತ್ತೊ
ಧರ್ಮದಂಬಿಗೆ ಬೆದರಿ ದೂರ ಓಡಿತ್ತೊ
ಶ್ರೀರಾಮ ಪಾದದೊಳು ಶರಣಾಗಿತ್ತೊ (೨)

ಕುರುಕುಲನ ದುರಿತದಾ ತೊಡೆಯೊಳಗಡಗಿತ್ತೊ
ದ್ರೌಪದಿಯ ಮಾನಕ್ಕೆ ಕೈಯ್ಯ ಚಾಚಿತ್ತೊ
ಹದಿನೆಂಟೆ ದಿನಗಳಲಿ ಅಂಕೆಯೊಳ ಬಂತೊ
ಶ್ರೀನಿವಾಸ ವಿಠಲಂಗೆ ಶಿರಬಾಗಿ ನಿಂತೊ (೩)

ಮನವ ನಿನ್ನೊಳು ನಿಲಿಸೊ ಮಾಧವ ಎನ್ನ
ಮನದ ತಮವ ಹರಿಸೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೧೦.೨೦೧೧

Saturday, October 1, 2011

Shri Krishnana Nooraru Geethegalu - 166

ಜಯಜಯ ದುರ್ಗೆ

ಜಯಜಯ ದುರ್ಗೆ ಜಯ ಸನ್ಮಾರ್ಗೆ
ಮಂಗಳೆ ಮಾಂಗಲ್ಯೆ ಸುಜನ ಸುಸ್ವರ್ಗೆ

ಶಕ್ತಿಸ್ವರೂಪಿಣಿ ಭವಭಯಹಾರಿಣಿ
ಜಗದೋದ್ಧಾರಿ ಶ್ರೀರುದ್ರನರಾಣಿ
ಶಂಖಗದಾಶೂಲ ಸುಚಕ್ರಧಾರಿಣಿ
ಜಗಕಾರಣಿ ಕರುಣಿ ಕಾತ್ಯಾಯನಿ (೧)

ರುದ್ರೆ ಭಯಂಕರಿ ಭಾಸ್ಕರಿ ಶಂಕರಿ
ದುರುಳಾಸುರ ಮಹಿಷ ಸಂಹಾರಿ
ಕುಂಡಲಕರ್ಣೆ ಶ್ರೀನವರತ್ನಹಾರೆ
ನರಕುಲಪೋಷಿತೆ ಸುಖಸಿದ್ಧಿಧಾರೆ (೨)

ಶ್ರೀಲಕುಮಿಯೆ ವಂದೇ ವಾಗ್ದೇವಿಯೆ ವಂದೇ
ಮೂಜಗ ಕಾವ ಶ್ರೀದೇವಿಯೆ ವಂದೇ
ಶ್ರೀನಿವಾಸ ವಿಠಲನ ಅನುಜೆಯೆ ವಂದೇ
ಕರುಣದಿ ಸಲಹೆಮ್ಮ ಧರೆಯೊಳು ಮುಂದೆ (೩)

ಜಯಜಯ ದುರ್ಗೆ ಜಯ ಸನ್ಮಾರ್ಗೆ
ಮಂಗಳೆ ಮಾಂಗಲ್ಯೆ ಸುಜನ ಸುಸ್ವರ್ಗೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೧೦.೨೦೧೧