Thursday, July 24, 2014

Shri Krishnana Nooraru Geethegalu - 356

ಹರಿಯೆನ್ನಿರೊ ನರರು

ಭಜನೆಯೊಳು ಸುಜನಂಗೆ ಹರಿ ಕಾಣುವ
ಹರಿಯೆನ್ನಿರೊ ನರರು ಹರಿಯೆನ್ನಿರೊ

ಗಿರಿಯ ನೀ ಏರದಿರು ಗುಹೆಯಂಧ ಸೇರದಿರು
ಜಟೆಯೆತ್ತಿ ಮುಡಿಕಟ್ಟಿ ಭೈರಾಗಿಯಾಗದಿರು
ಸತಿಸುತರ ಸುಖ ನಡುವೆ ಬಿಡುವಿನೊಂದರೆಕ್ಷಣದಿ
ಹರಿಯೆನ್ನೊ ಅಜಮಿಳನ ಪೊರೆದಂತೆ ಕಾವ (೧)

ಕಣ್ಣ ದಿಟ್ಟಿಯು ಹರಿಯು ಕರ್ಣಗಳ ದನಿ ಹರಿಯು
ಜೀವಜೀವದ ಮಿಡಿತ ತುಡಿತ ಹರಿಯು
ಆರರಾಟಕೆ ಕುಣಿವ ಸೂತ್ರವರಿದಿಹ ಮನುಜ
ನಾರಾಯಣನೆನ್ನೊ ನಿಲದೆ ತಾ ಬರುವ (೨)

ಹರಿಯೆನ್ನೊ ಹರಿಯೆನ್ನೊ ಹರಿಯೆ ನೀ ಸರಿಯೆನ್ನೊ
ಹರಿಯೆನ್ನೊ ಹರಿಯೆನ್ನೊ ನೀ ಮುಕುತಿಗುರಿಯೆನ್ನೊ
ಮೇಲುಕೋಟೆಯ ವಾಸ ಶ್ರೀನಿವಾಸ ವಿಠಲನ್ನ
ಬಿಡದೆ ಭಜಸಲು ನೀನು ಸಕಲ ಸಂಪದವೀವ (೩)

ಭಜನೆಯೊಳು ಸುಜನಂಗೆ ಹರಿ ಕಾಣುವ
ಹರಿಯೆನ್ನಿರೊ ನರರು ಹರಿಯೆನ್ನಿರೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೭.೨೦೧೪