Thursday, June 30, 2011

Shri Krishnana Nooraru Geethegalu - 131

ಶ್ರೀಹರಿಯೆ ಅಂಬುಜಾಕ್ಷ

ಶ್ರೀಹರಿಯೆ ಅಂಬುಜಾಕ್ಷ ಅವನೀಶನೆ ನಳಿನಾಕ್ಷ
ಪೊರೆಯುವುದೊ ಪಾಮರನ ಪರಮೇಶ್ವರ... ಕೃಷ್ಣ

ಬೇಡುವೆನೊ ಬಕುತಿಯೊಳು ಭವತುಂಬಿದಂಧದೊಳು
ಕೈಯಿಡಿದು ನಡೆಸೆನ್ನ ಜಗದೀಶ್ವರ...ಕೃಷ್ಣ (೧)

ಇನಿತೆನ್ನ ಜನುಮಗಳ ನಿನ್ನನಿತು ರೂಪದೊಳು
ಆದರದಿ ಸಲಹಿದನೆ ಸರ್ವೇಶ್ವರ...ಕೃಷ್ಣ (೨)

ಶ್ರೀಪಾದ ಸೇವಿಸುವೆ ಉಸಿರದುವೆಯಿರುವನಕ
ಶ್ರೀನಿವಾಸ ವಿಠಲನೆ ಸುಖಸಾಗರ...ಕೃಷ್ಣ (೩)

ಶ್ರೀಹರಿಯೆ ಅಂಬುಜಾಕ್ಷ ಅವನೀಶನೆ ನಳಿನಾಕ್ಷ
ಪೊರೆಯುವುದೊ ಪಾಮರನ ಪರಮೇಶ್ವರ... ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೬.೨೦೧೧

Sunday, June 26, 2011

Shri Krishnana Nooraru Geethegalu - 130

ಕರಮುಗಿವೆನೊ ದೇವ

ಕರಮುಗಿವೆನೊ ದೇವ ನಾರಾಯಣ
ಶ್ರೀಕರ ಶುಭಕರ ಶ್ರೀಶೇಷಶಯನ

ಸಿರಿಲಕುಮೀರಮಣ ಮೂಜಗಕಾರಣ
ಪಂಕಜನಯನ ಶ್ರೀ ನರಕುಲಕಲ್ಯಾಣ
ಭಕ್ತವತ್ಸಲ ದೇವ ಭವಭಯಹರಣ
ಮುನಿಜನಕರುಣ ಶ್ರೀವೇಂಕಟರಮಣ (೧)

ದ್ವಾರಕಾವಾಸಶ್ರೀ ಗೋಕುಲಪಾಲನೆ
ಗೋಪಪ್ರಿಯಾಶ್ರಿತ ಗೋವರ್ಧನನೆ
ಪಾಂಡವಪರಪಕ್ಷ ರಾಧಾಮಾಧವನೆ
ಮದನಮೋಹನಕೃಷ್ಣ ಮುರಳೀಧರನೆ (೨)

ಆದಿನಾರಾಯಣ ಪುರುಷೋತ್ತಮನೆ
ಸೀತಾಹೃದಯ ಶ್ರೀಕೌಸಲ್ಯಾಸುತನೆ
ಬಿಡದೆ ಭಜಿಪೆನೊ ನಿನ್ನ ಮಾರುತಿ ದೇವನೆ
ಸಕಲರ ಸಲಹಯ್ಯ ಶ್ರೀನಿವಾಸ ವಿಠಲನೆ (೩)

ಕರಮುಗಿವೆನೊ ದೇವ ನಾರಾಯಣ
ಶ್ರೀಕರ ಶುಭಕರ ಶ್ರೀಶೇಷಶಯನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೬.೨೦೧೧

Monday, June 20, 2011

Shri Krishnana Nooraru Geethegalu - 129

ಕರೆತಂದವ ನೀನು

ಕರೆತಂದವ ನೀನೊ ಇಲ್ಲವೆನದಿರು ರಂಗ
ಕಾಯುವುದು ನಿನ್ನ ಧರ್ಮ ಕಾಯಕವೊ ಗೋವಿಂದ

ನೀನೆತ್ತ ಪೋಗುವೆಯೊ ಕರೆದೋಗು ಎಂದೆ ನಾ
ನಿನ್ನ ಶ್ರೀಪಾದದೊಳು ಎನ್ನಿರುವು ಎಂದೆ ನಾ
ಆವುದೋ ಯೋನಿಯಲಿ ಜೀವವಾಗಿಸಿ ಎನ್ನ
ಕರೆತಂದ ಕರುಣಾಳೆ ಕಾಪಾಡೊ ಗೋವಿಂದ (೧)

ಹಸಿವನಿಟ್ಟವ ನೀನು ಅನ್ನವನು ಇಕ್ಕುವುದು
ಹರಸಿ ಆಶೀರ್ವದಿಸಿ ಆಶ್ರಯದೊಳು
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲನೆ
ಸರ್ವಮಂಗಳ ಸುಖದಿ ಸಲಹಯ್ಯ ಎನ್ನ (೨)

ಕರೆತಂದವ ನೀನೊ ಇಲ್ಲವೆನದಿರು ರಂಗ
ಕಾಯುವುದು ನಿನ್ನ ಧರ್ಮ ಕಾಯಕವೊ ಗೋವಿಂದ

(ದಿನಾಂಕ ೨೦.೦೬.೨೦೧೧ರಂದು ತಿರುಮಲ ಶ್ರೀನಿವಾಸ ಸನ್ನಿಧಿಯಲ್ಲಿ ರಚಿಸಿದ್ದು.)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೬.೨೦೧೧

Saturday, June 18, 2011

Shri Krishnana Nooraru Geethegalu - 128

ಆದಿನಾಥ ಶ್ರೀನಾಥ

ಸನಾತನ ಸಲಹೀ ಅನಾಥನ ದೀನ
ನಾಥನಾಮದಾದಿನಾಥ ಶ್ರೀನಾಥ

ನೀನಿತ್ತ ತನುಮನವೊ ಬಹುಶುದ್ಧದೊಳು ಹರಿಯೆ
ಪಂಚಾಬ್ಧಿಯೊಳರಂಗ ಸರಿಶುದ್ಧವೊ
ನಡೆ ನೇರ ನುಡಿ ನೇರ ನಿಯತಿ ನಿನ್ನೊಳು ಹರಿಯೆ
ವೈಕುಂಠಪತಿ ಪೊರೆಯೊ ನಾರಾಯಣ (೧)

ಆದಿಯೊಳು ಅಜಮಿಳನ ಹರಿಯೆಂದಸುರಸುತನ
ಧರ್ಮವ ಗೆಲಿಸೆಂದು ಮೊರೆಬಂದ ಪಾಂಡವನ
ನೇಮದೊಳು ನಡೆಸಿದೆಯೊ ಶ್ರೀನಿವಾಸ ವಿಠಲಯ್ಯ
ಸುಖದೊಳಗೆ ನಡೆಸಿನ್ನು ಈ ದೀನನ (೨)

ಸನಾತನ ಸಲಹೀ ಅನಾಥನ ದೀನ
ನಾಥನಾಮದಾದಿನಾಥ ಶ್ರೀನಾಥ

(ದಿನಾಂಕ ೨೦.೦೬.೨೦೧೧ರಂದು ತಿರುಮಲ ಶ್ರೀನಿವಾಸ ಸನ್ನಿಧಿಯಲ್ಲಿ ಪರಿಷ್ಕರಿಸಿ ಬರೆದದ್ದು.)

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೬.೨೦೧೧

Saturday, June 11, 2011

Shri Krishnana Nooraru Geethegalu - 127

ಸ್ಮರಣೆಯೆ ಪುಣ್ಯವೊ

ಸ್ಮರಣೆಯೆ ಪುಣ್ಯವೊ ಹರಿನಾಮ..ನಾಮ
ಇಹಗತಿ ಮುಕುತಿಗೆ ಸುಖಧಾಮ..ರಾಮ

ಬ್ರಹ್ಮಮಾನಸಸುತ ತಂಬೂರನಾರದರು
ನಾದದೊಳ್ಹಾಡಿದ ಹರಿನಾಮ
ದ್ವೈಪಾಯನ ಶ್ರೀಮುನಿವೇದವ್ಯಾಸರು
ವೇದದೊಳೋದಿದ ಹರಿನಾಮ (೧)

ಮಧ್ಯಮಪಾಂಡವ ವೀರಾರ್ಜುನ ಧರ್ಮ
ವಿಜಯಕೆ ನೆಚ್ಚಿದ ಹರಿನಾಮ
ಕೇಸರಿಸುತ ಶ್ರೀಹನುಮಂತದೇವನು ಬಕುತಿ
ಯೊಳೊಪ್ಪಿದ ಹರಿನಾಮ (೨)

ದಾಸಾದಿದಾಸ ಶ್ರೀಪುರಂದರದಾಸರು ಕಲಿ
ಯೊಳು ಜಪಿಸಿದ ಹರಿನಾಮ
ಶ್ರೀನಿವಾಸ ವಿಠಲನೆ ನೀನೆಮ್ಮ ಗತಿಯೆನಲು
ಕರುಣಿಸಿ ಕಾಯುವ ಹರಿನಾಮ (೩)

ಸ್ಮರಣೆಯೆ ಪುಣ್ಯವೊ ಹರಿನಾಮ..ನಾಮ
ಇಹಗತಿ ಮುಕುತಿಗೆ ಸುಖಧಾಮ..ರಾಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೬.೨೦೧೧

Thursday, June 9, 2011

Shri Krishnana Nooraru Geethegalu - 126


ದೇವಂ ಅಕ್ಷಯನಿಧೇ


ದೇವಂ ಅಕ್ಷಯನಿಧೇ ಶ್ರೀಹರಿ
ಶ್ರೀನಿಧೇ ಸುನಿಧೇ ಕರುಣಾನಿಧೇ

ಸೃಷ್ಟಿದಾಯಕಂ ಶ್ರೀಹರಿ ತ್ರಿಜಗಪಾಲಕಂ
ಅಣುರೇಣು ಸಕಲಸುಜನ ಸುಖದಾಯಕಂ

ಶುಭದಾಯಕಂ ಶ್ರೀಹರಿ ಸುಫಲಪೂರಿತಂ
ಸತ್ಸಂಗ ಮಂಗಳಾಂಗ ಮಹಾಮೂರುತೀಂ

ಶಕ್ತಿದಾಯಕಂ ಶ್ರೀಹರಿ ಯುಕುತಿಧಾರಿತಂ
ಧರಣೀಶಂ ದುರಿತಹರಂ ಧರ್ಮಪಾಲಕಂ

ಪುಣ್ಯಪೋಷಿತಂ ಶ್ರೀಹರಿ ಪಾಪನಾಶಿತಂ
ಶ್ರೀನಿವಾಸ ವಿಠಲದೇವಂ ಸರ್ವರಕ್ಷಿತಂ

ದೇವಂ ಅಕ್ಷಯನಿಧೇ ಶ್ರೀಹರಿ
ಶ್ರೀನಿಧೇ ಸುನಿಧೇ ಕರುಣಾನಿಧೇ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೬.೨೦೧೧

Monday, June 6, 2011

Shri Krishnana Nooraru Geethegalu - 125

ನಾರಾಯಣಂ ವಂದೇ

ನಾರಾಯಣಂ ವಂದೇ ಆದಿರೂಪಂ
ನಾರಾಯಣಂ ವಂದೇ ದೇವದೇವಂ

ನಾರಾಯಣಂ ವಂದೇ ತ್ರೇತಾರಾಮಂ
ನಾರಾಯಣಂ ವಂದೇ ತ್ರಿಜಗಕ್ಷೇಮಂ

ನಾರಾಯಣಂ ವಂದೇ ವಾಸುದೇವಂ
ನಾರಾಯಣಂ ವಂದೇ ಶ್ರೀಮಾಧವಂ

ನಾರಾಯಣಂ ವಂದೇ ಪಾಪಹಾರಂ
ನಾರಾಯಣಂ ವಂದೇ ಪುಣ್ಯದಾಯಂ

ನಾರಾಯಣಂ ವಂದೇ ಶ್ರೀಗಂಧತಿಲಕಂ
ನಾರಾಯಣಂ ವಂದೇ ಸುಜನಪುಳಕಂ

ನಾರಾಯಣಂ ವಂದೇ ತ್ರಿಜಗಪಾಲಂ
ದಶರೂಪಂ ವಂದೇ ಶ್ರೀನಿವಾಸ ವಿಠಲಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೬.೨೦೧೧

Shri Krishnana Nooraru Geethegalu - 124

ನಾಮಸ್ಮರಣೆಯ ಮಾಡೊ

ನಾಮಸ್ಮರಣೆಯ ಮಾಡೊ ಶ್ರೀಕೃಷ್ಣನ
ಇಂದಿರಾರಮಣ ಶ್ರೀಗೋವಿಂದನ

ಇನಿತು ಜನುಮಗಳಲ್ಲಿ ನೀಗೈದ ದುರಿತಗಳ
ಕಳೆದು ಕರುಣಿಸಿ ಕಾಯೊ ವಸುದೇವಕಂದನ
ಮುನ್ನಾರು ಜನುಮದೊಳು ಕಾಡುವ ಕರ್ಮಗಳ
ಮೆಟ್ಟಿ ಹರಸುವಯೆಮ್ಮ ರುಕ್ಮಿಣಿಯೊಡೆಯನ (೧)

ತ್ರೇತೆರಾಮನೊ ಇವನು ಪಿತವಾಕ್ಯ ಪಾಲಕನು
ಧರೆಯ ಧರ್ಮವ ಕಾಯ್ದ ಪುರುಷೋತ್ತಮ
ಸತ್ಯವಚನನೊ ರಾಮ ಸುಖದಿ ಸುಜನರ ಕಾವ
ಹನುಮ ಭೀಮರ ದೇವ ಸುಗುಣಧಾಮ (೨)

ಮದನನಯ್ಯನೊ ಇವನು ಕಂಸಕೇಡನು ಕೆಡುವಿ
ಮಾನಜನರನು ಕಾಯ್ದ ಮೇಘಶ್ಯಾಮ
ಶ್ರೀನಿವಾಸ ವಿಠಲಯ್ಯ ಗತಿ ನೀನೆ ಸಲಹೆನಲು
ಬಿಡದೆ ಕಲಿಯೊಳು ಕಾವ ಜೀವಕಾಮ (೩)

ನಾಮಸ್ಮರಣೆಯ ಮಾಡೊ ಶ್ರೀಕೃಷ್ಣನ
ಇಂದಿರಾರಮಣ ಶ್ರೀಗೋವಿಂದನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೬.೨೦೧೧

Sunday, June 5, 2011

Shri Krishnana Nooraru Geethegalu - 123

ತಿರುಮಲೆ ಪುಣ್ಯನೆಲೆ

ಧನ್ಯ ಧನ್ಯವೀ ತಿರುಮಲೆ
ಜಗದಾದಿವಂದಿತನ ಪುಣ್ಯನೆಲೆ

ಅಣುರೇಣುತೃಣರನು ಅನುಗಾಲವು ಕಾವ
ದಶರೂಪದೇವ ಶ್ರೀ ವೇಂಕಟರಾಯರು
ಶ್ರೀಆದಿಶೇಷನ ಸಪ್ತಾದ್ರಿ ನಿಲಯದೊಳು
ಸುಖದೊಳು ನೆಲೆಸಿಹ ನಿಜನೆಲೆ (೧)

ಪುಣ್ಯದಾಯಿನಿ ಧರಣಿ ಪಾಪಹಾರಿಣಿ ಕರುಣಿ
ಮುಕ್ಕೋಟಿ ದೇವಗಣ ಆಶ್ರಿತೆ ಪಾವನಿ
ಶ್ರೀನಿವಾಸ ವಿಠಲನ ಸಿರಿಲಕುಮಿ ಆದಿಯೊಳು
ಶ್ರೀಪಾದ ಸೇವಿಪ ಸಿರಿನೆಲೆ (೨)

ಧನ್ಯ ಧನ್ಯವೀ ತಿರುಮಲೆ
ಜಗದಾದಿವಂದಿತನ ಪುಣ್ಯನೆಲೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೬.೨೦೧೧

Wednesday, June 1, 2011

Shri Krishnana Nooraru Geethegalu - 122

ನಿನ್ನ ಗೂಡಿನಾಶ್ರಯದೊಳು

ಜಗದ್ಹಗಲವೊಡಲೊಳುದಿಸುವಾದಿತ್ಯನಾದಿ
ಕಿರಣಾಂತರಂಗದೊಳು ನೀನಿರುವೆ ಹರಿಯೆ

ಬುವಿಬಸುರಿನಾಳವ್ಹರಿದು ಕಣ್ತೆರೆವ ಜೀವ
ಬೀಜದಾಶಯದೊಳು ನೀನಿರುವೆ ಹರಿಯೆ

ಚಿಗುರಿದಾ ಚಿಗುರೆಯ್ಹಸಿರುಗಿಡಮರದ್ಯೌವ್ವನದ
ಮೈಮನಪುಳಕಿತದಂದದಿ ನೀನಿರುವೆ ಹರಿಯೆ

ಮೈದುಂಬಿದಾವೃಕ್ಷದ್ಹೂಯೀಚುಕಾಯಣ್ಣ ಸವಿದ
ಕೋಕಿಲಶಾರೀರದೊಳು ನೀನಿರುವೆ ಹರಿಯೆ

ಇಂತಿರ್ಪ ಶ್ರೀನಿವಾಸ ವಿಠಲನೆಂಬೀ ಕಲ್ಪವೃಕ್ಷದಾ
ಕೊನೆಗೂಡಿನಾಶ್ರಯದೊಳು ನಾನಿರುವೆ ಹರಿಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೬.೨೦೧೧