Friday, November 27, 2015

Shri Krishnana Nooraru Geethegalu - 357

ಇರಬೇಕು ಬಕುತಿ

ಹೂವ್ವಿನೊಳಗಣ ಗಂಧದಂತೆ ಇರಬೇಕು ಬಕುತಿ
ಸೋತು ಸೋತು ಶ್ರೀಪಾದಕೆ ಗೆಲುವುದೇ ಮುಕುತಿ

ಚುಕ್ಕೆಯೊಳಗಣ ಹೊಳಪಿನಂತೆ ಇರಬೇಕು ಬಕುತಿ
ಚಕ್ಕೆಯೊಳಗಣ ಘಮಲಿನಂತೆ ಇರಬೇಕು ಬಕುತಿ
ನೀರಿನೊಳಗಣ ನಾದದಂತೆ ಮೌನದೊಳಗಣ ಮಾತಿನಂತೆ
ಇಲ್ಲದಂತೆಯೇ ಇರಬೇಕು ಅವ ಮೆಚ್ಚುವ ಬಕುತಿ (೧)

ಅನೇಕದೊಳಗಣ ಏಕದಂತೆ ಇರಬೇಕು ಬಕುತಿ
ಅವನೇ ಇವನೇ ಎನ್ನದಂತೆ ಇರಬೇಕು ಬಕುತಿ
ತ್ರೇತೆಯೊಳಗೆ ಶ್ರೀರಾಮ ದ್ವಾಪರದೆ ಕೃಷ್ಣನಾಮ
ಕಲಿಯೊಳಗೆ ಶ್ರೀನಿವಾಸ ವಿಠಲ ಮೆಚ್ಚುವ ಬಕುತಿ (೨)

ಹೂವ್ವಿನೊಳಗಣ ಗಂಧದಂತೆ ಇರಬೇಕು ಬಕುತಿ
ಸೋತು ಸೋತು ಶ್ರೀಪಾದಕೆ ಗೆಲುವುದೇ ಮುಕುತಿ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೧.೨೦೧೫

Saturday, September 5, 2015

Shri Krishnana Nooraru Gethegalu - 356

ಕೃಷ್ಣನು ಇವನಮ್ಮ

ತುಂಟಕಣ್ಣಿನ ನೆಂಟನಿವನು ಗೋಕುಲದವನಮ್ಮ
ನಂದಗೋಪನ ಮುದ್ದುಕಂದ ಕೃಷ್ಣನು ಇವನಮ್ಮ

ಕಣ್ಣಿಗೆ ಕಾಡಿಗೆ ಹಣೆಗೆ ತಿಲಕ ಬರೆದ ಮಾರನಮ್ಮ
ಬೆಣ್ಣೆಯ ಮೆಲ್ಲುತ ಮುಗುದೆಯ ಮನವ ಕದಿವ ಚೋರನಮ್ಮ
ಕಟ್ಟಿದ ಮುಡಿಗೆ ಗರಿಯನು ಮುಡಿದ ಶ್ರೀಹರಿ ಇವನಮ್ಮ
ಕೊಳಲನೂದುತ ಜಗವನೆ ಕುಣಿಸಿದ ಮುರಳಿಯು ಅಮ್ಮಮ್ಮಾ (೧)

ಅಸುರ ಶಕಟನ ವಿಕಟವ ಮುರಿದ ಮುಕುಟನು ಇವನಮ್ಮ
ವಿಷದ ಉರುಗನ ಶಿರವನು ಮೆಟ್ಟಿದ ಧೀರನು ಇವನಮ್ಮ
ಸಜ್ಜನ ಪಾಂಡವರೈವರ ಪೊರೆದ ಶ್ಯಾಮನು ಇವನಮ್ಮ
ಶ್ರೀನಿವಾಸ ವಿಠಲ ನಾಮದ ರಾಮನು ಅಮ್ಮಮ್ಮಾ (೨)

ತುಂಟಕಣ್ಣಿನ ನೆಂಟನಿವನು ಗೋಕುಲದವನಮ್ಮ
ನಂದಗೋಪನ ಮುದ್ದುಕಂದ ಕೃಷ್ಣನು ಇವನಮ್ಮ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೯.೨೦೧೫