Friday, October 27, 2017

Shri Krishnana Nooraru Geethegalu - 363

ತೋರಯ್ಯ ಹನುಮ

ತೋರಯ್ಯ ಹನುಮ ನಿನ್ನೊಡೆಯ ರಾಮನ
ಪಾದಸೇವೆಗೆ ಒಲಿದು ಬಿಡದೆ ಸಲಹಿದನ

ಮನುವ ಉದ್ಧರಿಸೆ ಮತ್ಸ್ಯ ತಾನಾದವನ
ಅಮೃತದ ಉದ್ಭವಕೆ ಆಧಾರ ದೇವನ
ಅಸುರನ ದುರುಮುರಿದು ಅವನಿಯನೆ ಎತ್ತಿದನ
ಕಂದನ ಕರೆ ಕೇಳಿ ಕಂಭ ಸೀಳಿದನ (೧)

ಅಂಗೈಯ ದಾನಕ್ಕೆ ಅಗಾಧನಾದವನ
ಕೆಡುಕಿಗೆ ಪರುಶೆಂದು ಮೆರೆದ ಬ್ರಾಹ್ಮಣನ
ಧರ್ಮದ ಕೋದಂಡ ಹಿಡಿದ ಶ್ರೀರಾಮನ
ಕೊಳಲಲ್ಲಿ ಜಗವನೇ ಆಡಿಸಿದ ಕೃಷ್ಣನ (೨)

ಶ್ಯಾಮನ ಸೋದರನ ಧೀರ ಬಲರಾಮನ
ಹಲವು ಅವತಾರದಿ ಸುಜನರ ಪೊರೆದನ
ಕಲಿಯೊಳಗೆ ಎನ್ನ ದೇವ ಶ್ರೀನಿವಾಸ ವಿಠಲ
ರಾಯರಾಯರು ನಂಬಿ ಬಿಡದೆ ಪೂಜಿಪನ (೩)

ತೋರಯ್ಯ ಹನುಮ ನಿನ್ನೊಡೆಯ ರಾಮನ
ಪಾದಸೇವೆಗೆ ಒಲಿದು ಬಿಡದೆ ಸಲಹಿದನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೦.೨೦೧೭

Sunday, October 8, 2017

Shri Krishnana Nooraru Geethegalu - 362

ಹೇಳಯ್ಯ ಹನುಮ ಶ್ರೀರಾಮನಲ್ಲಿ

ಹೇಳಯ್ಯ ಹನುಮ ಶ್ರೀರಾಮನಲ್ಲಿ
ಎನ್ನ ದುರಿತವನಳಿದು ಸಲಹೆಂದು ಕಲಿಯಲ್ಲಿ

ಅಣುರೇಣುತೃಣದಲ್ಲಿ ನಿನ್ನ ರಾಮನಿಹನಂತೆ
ಮೂಡಣದ ಬೆಳಗದುವು ಅವನ ನಗೆಯಂತೆ
ಹರಿಯುವ ನದಿಯಂತೆ ಶುದ್ಧಾತ್ಮ ಅವನಂತೆ
ನೀನು ಭಜಿಸುವ ರಾಮ ಪರಮಾತ್ಮನಂತೆ (೧)

ಕೌಸಲ್ಯೆ ಸುತನಂತೆ ಲವಕುಶರ ಪಿತನಂತೆ
ಜಗನ್ಮಾತೆ ಜಾನಕಿಯ ಪ್ರಾಣಪ್ರಿಯನಂತೆ
ಪಿತವಾಕ್ಯ ಪರಿಪಾಲ ಪುರುಷೋತ್ತಮನಂತೆ
ನೀನು ಭಜಿಸುವ ರಾಮ ಗುಣಧಾಮನಂತೆ (೨)

ನೀ ರಾಮಪ್ರಿಯನಂತೆ ನೀ ಅವಗೆ ಸಖನಂತೆ
ಪೊರೆಯಲು ಹೇಳಯ್ಯ ಮರೆಯದಂತೆ
ಧರೆಯೊಳಗೆ ಶ್ರೀನಿವಾಸ ವಿಠಲನೆ ಅವನಂತೆ
ನೀನು ಭಜಿಸುವ ರಾಮ ಕರುಣನಂತೆ (೩)

ಹೇಳಯ್ಯ ಹನುಮ ಶ್ರೀರಾಮನಲ್ಲಿ
ಎನ್ನ ದುರಿತವನಳಿದು ಸಲಹೆಂದು ಕಲಿಯಲ್ಲಿ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೧೦.೨೦೧೭

Thursday, September 14, 2017

Shri Krishnana Nooraru Geethegalu - 361

ಹರಿನಾಮ ಸ್ಮರಣೆ

ಮಾಡೆಲೊ ನರಮನುಜ ಹರಿನಾಮ ಸ್ಮರಣೆ
ದೊರೆವುದೊ ಇಹದೊಳೆ ಶ್ರೀಪಾದ ಕರುಣೆ

ಆದಿಯೊ ಈ ನಾಮ ಅನಂತ ಹರಿನಾಮ
ಅಂತ್ಯರಹಿತವೊ ಶ್ರೀಹರಿನಾಮ
ದಿವ್ಯವೊ ಈ ನಾಮ ಭವ್ಯವೊ ಹರಿನಾಮ
ನುಡಿಯಲು ಸುಶ್ರಾವ್ಯ ಶ್ರೀಹರಿನಾಮ (೧)

ಶಬರಿಯ ಈ ನಾಮ ಅಹಲ್ಯೆ ಹರಿನಾಮ
ಹನುಮನಿಗೊಲಿದ ಶ್ರೀಹರಿನಾಮ
ಐವರಿಗೀ ನಾಮ ವಿಜಯವೊ ಹರಿನಾಮ
ಸುಧಾಮ ಸ್ನೇಹದ ಶ್ರೀಹರಿನಾಮ (೨)

ಮತ್ಸ್ಯವೊ ಈ ನಾಮ ಕೂರ್ಮವೊ ಹರಿನಾಮ
ವರಾಹ ನರಸಿಂಹ ಶ್ರೀಹರಿನಾಮ
ಶ್ರೀನಿವಾಸ ವಿಠಲನೆಂಬೊ ಎನ್ನ ದೇವನ ನಾಮ
ಯತಿಮುನಿರಾಯರ ಶ್ರೀಹರಿನಾಮ (೩)

ಮಾಡೆಲೊ ನರಮನುಜ ಹರಿನಾಮ ಸ್ಮರಣೆ
ದೊರೆವುದೊ ಇಹದೊಳೆ ಶ್ರೀಪಾದ ಕರುಣೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೯.೨೦೧೭

Tuesday, August 15, 2017

Shri Krishnana Nooraru Geethegalu - 360

ಮಾರ ಸುಂದರ ಧೀರ ಗಂಭೀರ

ನಂದಕಿಶೋರ ಜಗದೋದ್ಧಾರ
ಮಾರ ಸುಂದರ ಧೀರ ಗಂಭೀರ

ನೊಸಲೊಳು ಚಂದನ ತಿಲಕದಲಂಕಾರ
ಮುಡಿಯೊಳು ಮಯೂರ ಗರಿ ಸಿಂಗಾರ
ನಯನದಿ ನಸುನಗೆ ಮೋಹಕ ಸಂಚಾರ
ಘಲುಘಲು ಘಲುಘಲು ಕಾಲೊಳು ಝೇಂಕಾರ (೧)

ರುಕ್ಮಿಣಿ ಸರದಾರ ರಾಧೆಯ ಮನಸೂರ
ಪಾರಿಜಾತ ಪ್ರಿಯ ಭಾಮೆಗೂ ಚಂದಿರ
ನವನೀತ ಚೋರ ವನಮಾಲಾಧರ
ವೇಣುಗೋಪಾಲ ಒಲವಿನ ಸಾಗರ (೨)

ಪೂತನೆಗೂ ಕುವರ ಶಕಟ ಸಂಹಾರ
ಕಳಿಂಗ ಮರ್ದನ ದೇವಕಿಯುದರ
ಶ್ರೀನಿವಾಸ ವಿಠಲನ ಶ್ರೀಕೃಷ್ಣನವತಾರ
ಯತಿಮಧ್ವರಾಯರು ಪೂಜಿಪ ದೇವರ (೩)

ನಂದಕಿಶೋರ ಜಗದೋದ್ಧಾರ
ಮಾರ ಸುಂದರ ಧೀರ ಗಂಭೀರ

Thursday, July 13, 2017

Shri Krishnana Nooraru Geethegalu - 359

ಗೋವಿಂದ ಬಾರೊ

ಗೋವಿಂದ ಬಾರೊ ಎನ್ನಾನಂದ ಬಾರೊ
ಗೋಕುಲವೆಂಬೊ ಜಗದಿ ನರರೆಂಬೊ ಗೋವ ಕಾಯ್ವ

ಗರಿಯ ಕಿರೀಟ ನೊಸಲಲಿ ಗಂಧಗೀಟ
ಗಲ್ಲದಿ ಸಂಜೆಯ ಸೂರ್ಯನೋಕುಳಿ ಆಟ
ತುಟಿಯಲಿ ಮಂದಹಾಸ ಸೂಸುವ ತುಂಟಾಟ
ಕರ್ಣದಿ ಮುತ್ತಿನೋಲೆ ಬೆಳಕಿನ ನೋಟ (೧)

ರಾಧೆಭಾಮೆಯ ಸಂಗಿ ರುಕ್ಮಿಣಿ ಸಂಸಾರಿ
ಸುಂದರ ಮಾರಪಿತ ನವನೀತ ಚೋರಿ
ವಸುದೇವ ವಂಶಜ ಮೂಲೋಕ ಸಂಚಾರಿ
ಗತಿ ನೀನೆನುವ ಸುಜನರ ರಹದಾರಿ (೨)

ಶಕಟನ ಸಂಹರಿಸಿ ಪೂತನೆಯ ಉಂಡವನೆ
ಎದ್ದ ಕಾಳಿಂಗನ ಹೆಡೆ ಮೆಟ್ಟಿ ನಿಂದವನೆ
ಕೆಡುಕ ಕಂಸನ ಕೊಂದ ಶ್ರೀನಿವಾಸ ವಿಠಲನೆ
ಐವರ ಸಲುಹಿದಿ ಜಗದ ದೇವರ ದೇವ (೩)

ಗೋವಿಂದ ಬಾರೊ ಎನ್ನಾನಂದ ಬಾರೊ
ಗೋಕುಲವೆಂಬೊ ಜಗದಿ ನರರೆಂಬೊ ಗೋವ ಕಾಯ್ವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೭.೨೦೧೭

Tuesday, June 28, 2016

Shri Krishnana Nooraru Geethegalu - 358

ಕರುಣಿಸಿ ಕಾವುದು

ಕರೆತಂದನೆ ಹರಿಯೆ ಕರುಣಿಸಿ ಕಾವುದು
ಪಾಮರನೆನಗೆ ಪಾದಸೇವೆಯನಿತ್ತು

ಅಜಮಿಳನವನು ನಾರಾಯಣ ಎನಲು
ಕಂಭವ ಮುರಿದೆ ಕಂದ ತಾ ಕರೆಯಲು
ಶಿಲೆಗೊದಗಿದನೆ ಶ್ರೀರಾಮಯ್ಯ
ಜಗದೋದ್ಧಾರಕ ಜಾನಕೀರಮಣ (೧)

ಅರಿವಿತ್ತವ ನೀನೆ ಮರೆವಿತ್ತವ ನೀನೆ
ಮದ ಮೋಹ ಮತ್ಸರ ಮಾಯೆಯಿತ್ತವ ನೀನೆ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲನೆ
ತಪ್ಪುಗಳ ಮನ್ನಿಸಿ ನರನೆನ್ನ ಕಾಯೋ (೨)

ಕರೆತಂದನೆ ಹರಿಯೆ ಕರುಣಿಸಿ ಕಾವುದು
ಪಾಮರನೆನಗೆ ಪಾದಸೇವೆಯನಿತ್ತು

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೭.೨೦೧೬

Shri Krishnana Nooraru Geethegalu - 358

ಕಂಡೆನಾ ಕೃಷ್ಣನ

ಕಂಡೆನಾ ಕೃಷ್ಣನ ಕಂಡೆ ಗೋವಿಂದನ
ಕಂಡೆ ನಂದನ ಕಂದನ ಕಂಡೆ ಅರವಿಂದನ

ರಘುವಂಶಜ ದಶರಥನ ಪ್ರಿಯಸುತನ ಕಂಡೆನಾ
ಸುಚರಿತ ಸುಗುಣಗುಣ ಅಮಿತನ ಕಂಡೆನಾ
ಧರ್ಮ ಕೋದಂಡಧಾರಿ ದುರುಳಸಂಹಾರನ
ಗತಿ ನೀನೆಯೆನಲು ಕಾವ ತಂದೆ ಶ್ರೀರಾಮನ (೧)

ಹಣೆಗೆ ಗಂಧ ತಿಲಕ ಬಳಿದು ನಗುವ ಚೋರನ
ಹೆಡೆಯ ಮೆಟ್ಟಿ ಗಿರಿಯನೆತ್ತಿ ಮೆರೆದ ಧೀರನ
ಕೋಟೆಬೆಟ್ಟದೊಡೆಯನೆಮ್ಮ ಶ್ರೀನಿವಾಸ ವಿಠಲನ
ಮತ್ಸ್ಯ ಕೂರ್ಮ ಸಿಂಹ ದಶದಿ ಧರೆಯ ಪೊರೆದ ದೇವನ (೨)

ಕಂಡೆನಾ ಕೃಷ್ಣನ ಕಂಡೆ ಗೋವಿಂದನ
ಕಂಡೆ ನಂದನ ಕಂದನ ಕಂಡೆ ಅರವಿಂದನ


ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ