Friday, December 30, 2011

Shri Krishnana Nooraru Geethegalu - 196

ಜೀವ ಓಂಕಾರ

ವೇಂಕಟೇಶ್ವರ ಜಗದೋದ್ಧಾರ
ಧೀರ ಗಂಭೀರ ಜೀವ ಓಂಕಾರ

ವೇದ ಸಂವೇದ ಶ್ರೀಕಲಿಯವರದ
ಶ್ರೀದೇವಿಗೊಲಿದ ವೈಕುಂಠಪುರದ (೧)

ಪ್ರೇಮ ಪರಿಪಾಲ ರಾಧೆಗೋಪಾಲ
ಸಿರಿಲಕುಮಿಲೋಲ ಶ್ರೀನಿವಾಸ ವಿಠಲ (೨)

ವೇಂಕಟೇಶ್ವರ ಜಗದೋದ್ಧಾರ
ಧೀರ ಗಂಭೀರ ಜೀವ ಓಂಕಾರ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೧೨.೨೦೧೧

Wednesday, December 28, 2011

Shri Krishnana Nooraru Geethegalu - 195

ಜಯಜಯ ಗೋವಿಂದ

ಜಯ ಗೋವಿಂದ ಜಯಜಯ ಗೋವಿಂದ
ಕಾಯೆಮ್ಮ ಕರುಣದಿ ಜಗದಾನಂದ

ನಂಬಿ ಬಂದೆವೊ ನಿನ್ನ ರಾಘವ ಗೋವಿಂದ
ನೆಚ್ಚಿ ಬಂದೆವೊ ನಿನ್ನ ಜಾನಕಿ ಗೋವಿಂದ
ಶಬರಿ ಅಹಲ್ಯೆಯ ಸಲಹಿದ ಗೋವಿಂದ
ಸಂಜೀವರಾಯರ ಶ್ರೀಪಾದ ಗೋವಿಂದ(೧)

ಬೇಡಿ ಬಂದೆವೊ ನಿನ್ನ ಗೋಕುಲ ಗೋವಿಂದ
ನೋಡಿ ಬಂದೆವೊ ನಿನ್ನ ಗೋಪಾಲ ಗೋವಿಂದ
ಮಥುರಾ ಸುಜನರ ಸಲಹಿದ ಗೋವಿಂದ
ಪಾಂಡವರೈವರ ಸಿರಿಪುಣ್ಯ ಗೋವಿಂದ (೨)

ಕಲಿಯೊಳು ನಿನ್ನನ್ನೇ ಮರೆತೆವೊ ಗೋವಿಂದ
ಮರೆತರೆ ದುರಿತವು ಅರಿತೆವೊ ಗೋವಿಂದ
ಶ್ರೀನಿವಾಸ ವಿಠಲನೆ ಕ್ಷಮಿಸೆಮ್ಮ ಗೋವಿಂದ
ಆದಿನಾರಾಯಣ ಸಿರಿಲಕುಮಿ ಗೋವಿಂದ (೩)

ಜಯ ಗೋವಿಂದ ಜಯಜಯ ಗೋವಿಂದ
ಕಾಯೆಮ್ಮ ಕರುಣದಿ ಜಗದಾನಂದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೨.೨೦೧೧

Shri Krishnana Nooraru Geethegalu - 194

ಜಯ ಗೋವಿಂದ

ಜಯ ಗೋವಿಂದ ಜಯಜಯ ಗೋವಿಂದ
ಪೊರೆಯೆಮ್ಮ ಕರುಣದಿ ಜಗದಾನಂದ

ಜಯ ಗೋವಿಂದ ರಾಘವ ಗೋವಿಂದ
ಕೌಸಲ್ಯೆ ಆನಂದ ಜಾನಕಿ ಗೋವಿಂದ
ಸಂಜೀವರಾಯರ ಶ್ರೀಪಾದ ಗೋವಿಂದ
ಶಬರಿಯ ಶ್ರೀದೇವ ಸುಗುಣೇಂದ್ರ ಗೋವಿಂದ (೧)

ಜಯ ಗೋವಿಂದ ದಶದಯ್ಯ ಗೋವಿಂದ
ಮತ್ಸ್ಯ ವರಾಹ ನರಸಿಂಹ ಗೋವಿಂದ
ಶ್ರೀರಾಮ ಜಯಶ್ಯಾಮ ಜಗಕ್ಷೇಮ ಗೋವಿಂದ
ಪರಶುರಾಮ ಶ್ರೀವಾಮನ ಗೋವಿಂದ (೨)

ಜಯ ಗೋವಿಂದ ಗೋಕುಲ ಗೋವಿಂದ
ಸುಜನ ಸುಪಾಲಕ ಶ್ರೀಕೃಷ್ಣ ಗೋವಿಂದ
ಶ್ರೀನಿವಾಸ ವಿಠಲನೆ ತಿರುಮಲ ಗೋವಿಂದ
ನಮ್ಮಮ್ಮ ಸಿರಿಲಕುಮಿ ಗಂಡನೆ ಗೋವಿಂದ (೩)

ಜಯ ಗೋವಿಂದ ಜಯಜಯ ಗೋವಿಂದ
ಪೊರೆಯೆಮ್ಮ ಕರುಣದಿ ಜಗದಾನಂದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೨.೨೦೧೧

Friday, December 23, 2011

Shri Krishnana Nooraru Geethegalu - 193

ದಿವ್ಯಪಾದ

ಪರಮಪಾದ ಪಾವನ ಪುಣ್ಯಪಾದ
ದಶರೂಪದಿ ಧರೆಯ ಪೊರೆವ ದಿವ್ಯಪಾದ

ಆದಿ ಪಾದ ಅನಾದಿ ಪಾದ
ಶುಭವರದ ಅನಂತನ ದಿಗಂತಪಾದ

ರಾಮಪಾದ ಮೇಘಶ್ಯಾಮಪಾದ
ವಾಯುಭೀಮದೇವಗೊಲಿದ ಕ್ಷೇಮಪಾದ

ಪುಟ್ಟಪಾದ ವಿರಾಟ್ ಬೆಟ್ಟಪಾದ
ದಿಟ್ಟ ತಾನು ಚೊಟ್ಟನವನ ಮೆಟ್ಟಿಪಾದ

ಅಂದ ಪಾದ ಬಲುಚೆಂದ ಪಾದ
ನಂದಗೋಪಿ ಕಂದನೆಮ್ಮ ಗೋವಿಂದಪಾದ

ನವ್ಯ ಪಾದ ನವಕಾವ್ಯ ಪಾದ
ನವನವೀನ ನಾದಗಂಗೆ ಸುಶ್ರಾವ್ಯಪಾದ

ಅಚಲಪಾದ ಶುದ್ಧಸುಚಲಪಾದ
ಶ್ರೀನಿವಾಸ ವಿಠಲದೇವನ ಸಿರಿಯಪಾದ

ಪರಮಪಾದ ಪಾವನ ಪುಣ್ಯಪಾದ
ದಶರೂಪದಿ ಧರೆಯ ಪೊರೆವ ದಿವ್ಯಪಾದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೧೨.೨೦೧೧

Thursday, December 22, 2011

Shri Krishnana Nooraru Geethegalu - 192

ಧೀರ ಸವಾರ

ಗುರಿಯಿರದೆನ್ನ ಮನವೆಂಬೊ ಹಯವು
ಶ್ರೀಹರಿ ನಿನ್ನ ಚಿತ್ತದಂತಿರಲೊ

ಕೆನೆತ ಹಯದ ಧರ್ಮ ಅಂಕೆಯೊಳಿರಲಯ್ಯ
ಕರಪುಟ ನಡಿಗೆಯು ನಿನ್ನ ಸಂಖ್ಯೆಯೊಳು
ಹಸಿವಾದೊಡೆ ನಿನ್ನ ನಾಮಾಮೃತ ಗರಿಕೆ
ಮೆದ್ದು ತಾ ತ್ಯಜಿಸಲೊ ಕೆಡುಕೆಂಬೊ ಮಲವ (೧)

ಜಯವನೆ ಜಯಿಸಲಿ ವಿಜಯಂಗಯ್ಯಲಿ
ಜಾತಿ ಅನೀತಿಯ ಮಡಿ ಗಡಿ ದಾಟಿ
ಜೀವನ ಜೀನವ ಜತನದಿ ಬಿಗಿದೆನ್ನ
ಸರಿದಾರಿ ಸರದಾರ ಬೀಸಯ್ಯ ಚಾಟಿ (೨)

ಧರ್ಮದಿ ಬೆಳೆಸಯ್ಯ ಧರ್ಮವ ಉಣಿಸಯ್ಯ
ದುರಿತದ ಕೊಳೆಯದ ಕಳೆವುದ ಕಲಿಸಯ್ಯ
ಧೀರ ಸವಾರ ಶ್ರೀ ಶ್ರೀನಿವಾಸ ವಿಠಲಯ್ಯ
ನಿನ್ನ ಶ್ರೀಪಾದದ ಪದದೊಳಗಿರಿಸಯ್ಯ (೩)

ಗುರಿಯಿರದೆನ್ನ ಮನವೆಂಬೊ ಹಯವು
ಶ್ರೀಹರಿ ನಿನ್ನ ಚಿತ್ತದಂತಿರಲೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೨.೨೦೧೧

Thursday, December 15, 2011

Shri Krishnana Nooraru Geethegalu - 191


ನಿನ್ನಂತೆಯೆ ಹನುಮ

ಇರುವುದಾದರೆ ಇರಿಸೊ ನಿನ್ನಂತೆಯೆ ಹನುಮ
ಅನುಕ್ಷಣವು ಹರಿಪಾದ ಮರೆಯದಂತೆ
ಮನದ ತಾಮಸ ಹರಿಸೊ ಶುದ್ಧಕರುಣದಿ ಹರಸೊ
ಎನ್ನೊಳಗೆ ಶ್ರೀರಾಮ ನೆಲೆಸುವಂತೆ

ಜೀವದೀ ಕಣಕಣವು ನಿನ್ನಂತೆಯೆ ಹನುಮ
ಶ್ರೀರಾಮನಾಮವದ ನುಡಿಯುವಂತೆ
ನಾಲಗೆಯು ನೇತ್ರವವು ನಿನ್ನಂತೆಯೆ ಹನುಮ
ರಾಮನಾಮದ ಸಿಹಿಯ ಸವಿಯುವಂತೆ (೧)

ಎನ್ನ ಕರ್ಮದ ಕರವು ನಿನ್ನಂತೆಯೆ ಹನುಮ
ಶ್ರೀರಾಮಸೇವೆಯೊಳು ದಣಿಯದಂತೆ
ನೀನಿತ್ತ ಹೃದಯವದು ನಿನ್ನಂತೆಯೆ ಹನುಮ
ರಾಮರಾಮಯೆನುತ ತಣಿಯುವಂತೆ (೨)

ಸೇವೆಯೆಂಬೀ ಬಕುತಿ ನಿನ್ನಂತೆಯೆ ಹನುಮ
ಎದೆಯೊಳಗೆ ಶ್ರೀರಾಮನುಳಿಯುವಂತೆ
ಜನ್ಮಜನ್ಮಾಂತರದಿ ನಿನ್ನಂತೆಯೆ ಹನುಮ
ಶ್ರೀನಿವಾಸ ವಿಠಲನ್ನ ನೆನೆಯುವಂತೆ (೩)

ಇರುವುದಾದರೆ ಇರಿಸೊ ನಿನ್ನಂತೆಯೆ ಹನುಮ
ಅನುಕ್ಷಣವು ಹರಿಪಾದ ಮರೆಯದಂತೆ
ಮನದ ತಾಮಸ ಹರಿಸೊ ಶುದ್ಧಕರುಣದಿ ಹರಸೊ
ಎನ್ನೊಳಗೆ ಶ್ರೀರಾಮ ನೆಲೆಸುವಂತೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೧೨.೨೦೧೧

Saturday, December 10, 2011

Shri Krishnana Nooraru Geethegalu - 190

ನಿಗಮಗೋಚರ ಕೃಷ್ಣ

ನಿಗಮಗೋಚರ ಕೃಷ್ಣ ಧರಣಿ ಪಾಲ
ಸುಖದಿ ಸಲಹೊ ಎಮ್ಮ ರಾಧೆಲೋಲ

ನಿಜರೂಪ ನಿಷ್ಕಾಮ ನಿಯತಿ ಸೂತ್ರಕ ಕೃಷ್ಣ
ನಿನ್ನೊಡಲ ನೆಪಜೀವದಣುವು ನಾವಯ್ಯ
ಬುವಿ ಬಸಿರು ಹಸಿರುಸಿರ ಹನಿಯು ಅನ್ನವದಾಗಿ
ಎಮ್ಮೊಡಲ ಕಣಕಣದಿ ನೀನೆ ನೆಲೆಸಯ್ಯ (೧)

ಗುಣವಂತ ನಯವಂತ ಛಲವಂತನೆ ಕೃಷ್ಣ
ನಿನ್ನ ನೆರಳಿನಾ ನೆರಳ ಆಶ್ರಿತರು ನಾವಯ್ಯ
ಶಿಕ್ಷಿಸೆಮ್ಮಯ ದುರಿತ ಕುರುಜನರ ತರಿದಂತೆ
ಹಗಲೆಡೆಗೆ ಅಂಧರಥ ನೀನೆ ನಡೆಸಯ್ಯ (೨)

ಆದಿದೇವನು ನೀನು ಅಣುರೇಣುತೃಣ ಕೃಷ್ಣ
ನಿನ್ನ ಉಸಿರಿಗೆ ಕಾದ ಮುರಳಿ ನಾವಯ್ಯ
ಯಮುನೆತೀರದ ಚೆಲುವ ಶ್ರೀನಿವಾಸ ವಿಠಲಯ್ಯ
ಮನಶುದ್ಧಬುದ್ಧಿಯೊಳು ಎಮ್ಮ ಸಲಹಯ್ಯ (೩)

ನಿಗಮಗೋಚರ ಕೃಷ್ಣ ಧರಣಿ ಪಾಲ
ಸುಖದಿ ಸಲಹೊ ಎಮ್ಮ ರಾಧೆಲೋಲ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೨.೨೦೧೧

Tuesday, December 6, 2011

Shri Krishnana Nooraru Geethegalu - 189


ಮೂನಾಮ


ಮನಶುದ್ಧವಿರದಿರೆ ಮೂನಾಮನೊಲಿಯನೊ
ಶುದ್ಧಾತ್ಮರಂಗದೊಳು ಭಜಿಸವನ ಮನುಜ

ಎಂಜಲ ಫಲದವಳ ಬಿನ್ನಹಕ್ಕೊಲಿದವನೊ
ಮುನಿ ಶಾಪಾಂಧಳ ಶಿಲೆಗೊಲಿದವನೊ
ವಿಷಮೊಲೆಯಸುರೆಯ ಮಾತೆ ನೀನೆಂದವನೊ
ಶ್ರೀಪಾದಸೇವಕನ ಸಿರಿಯೆದೆಯಾಶ್ರಿತನೊ (೧)

ಬಹುಕುರು ಕುಲತೊರೆದು ಐವರಿಗೊಲಿದನೊ
ಜಲದೊಳಗಡಗಿದನ ದುರುತೊಡೆ ಮುರಿದನೊ
ಧರ್ಮಾದಿ ದಶದೇವ ಶ್ರೀನಿವಾಸ ವಿಠಲ ತಾ
ಎಂಟು ವಕ್ರದ ಹೆಣ್ಣ ನೆಂಟನಾದವನೊ (೨)

ಮನಶುದ್ಧವಿರದಿರೆ ಮೂನಾಮನೊಲಿಯನೊ
ಶುದ್ಧಾತ್ಮರಂಗದೊಳು ಭಜಿಸವನ ಮನುಜ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೧೨.೨೦೧೧