Tuesday, July 30, 2013

Shri Krishnana Nooraru Geethegalu - 345

ವಂದೇ ಸರಸ್ವತಿ

ಜ್ಞಾನದಾಯಿನಿ ವಂದೇ ಸರಸ್ವತಿ
ಶಂಕರರ ಶ್ರೀಮಾತೆ ಬೊಮ್ಮನೊಡತಿ

ಕೂಡಲಿ ತೀರತಟೇ ಮೂಲವಾಸಿನಿ ಮಾತೆ
ಸಸ್ಯಶ್ಯಾಮಲೆ ಶುದ್ಧೆ ಸಕಲಶುಭದಾತೆ
ಶ್ವೇತಪದ್ಮಾಸ್ಥಿತೆಯೆ ಶ್ರೀಚಕ್ರಧಾರಿಣಿ
ಪಾವನಿಯೆ ಶಾರದೆಯೆ ತ್ರೈಲೋಕಕರುಣಿ (೧)

ಶಿವನನುಜೆಯು ನೀನು ಸ್ಥಿರಮಾಂಗಲ್ಯೆ ನೀ
ಮೂಢಮತಿ ನಾ ನಿನ್ನ ಒಡಲ ಕುಡಿ ತಾಯೆ
ಶ್ರೀನಿವಾಸ ವಿಠಲನ ಚರಣದೀ ದಾಸನ
ಅಕ್ಕರದ ಅಕ್ಕರೆಯ ನೀನಿತ್ತು ಕಾಯೆ (೨)

ಜ್ಞಾನದಾಯಿನಿ ವಂದೇ ಸರಸ್ವತಿ
ಶಂಕರರ ಶ್ರೀಮಾತೆ ಬೊಮ್ಮನೊಡತಿ

(ಕೂಡಲಿಯ ಶ್ರೀಶಾರದಾ ಮಾತೆಯ ದಿವ್ಯದರ್ಶನವನ್ನು ಇಂದು ದೂರದರ್ಶನದಲ್ಲಿ ಪಡೆದು)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೭.೨೦೧೩

Saturday, July 20, 2013

Shri Krishnana Nooraru Geethegalu - 344

ದಾಸರ ಕೂಸಿದು

ದಾಸರ ಕೂಸಿದು ಹಸಿವೆಂದಳುತಿದೆ ಹರಿ ನಿನ್ನ ತೋಳೊಳು ಮುದ್ದಾಡಿಸೊ
ಮಾತೆ ಮಾಲಕುಮಿಯ ಮಡಿಲ ತೊಟ್ಟಿಲೊಳು ನಿನ್ನ ನಾಮಾಮೃತದ ಸುಧೆಯುಣಿಸೊ

ಲೆಕ್ಕವಿಟ್ಟವರಾರೊ ಅಣುರೇಣುತೃಣದೇವ ನೀನಿತ್ತ ಅಗುಳಗುಳಿನಮೃತವನು
ಎನಿತು ಜನುಮಗಳಲ್ಲಿ ಅದೆನಿತು ಸುಜನಂಗೆ ನೀನಿತ್ತ ಸಿರಿಚರಣ ಮುಕುತಿಯದನು (೧)

ಕಂಭದೊಳು ಮೂಡಿದನೆ ಕಶ್ಯಪನ ಸೀಳಿದನೆ ಕಂದನನು ಕರುಣೆಯೊಲು ಪೊರೆದವನೆ
ಗಿರಿಯ ಶಿರದೊಳು ನೀನೆ ಕಡಲತಳದೊಳು ನೀನೆ ಅಣುಜೀವಕಾಶ್ರಯವ ಬರೆದವನೆ (೨)

ಎನ್ನಾತ್ಮ ವಾಮನನೊ ಒಳಬಕುತಿ ವಿಕ್ರಮನೊ ದುರುಬಲಿ ತುಳಿದು ನೀ ಆವರಿಸೊ
ಉದರದಸಿವದು ಕೊಳೆಯೊ ಆತ್ಮದಸಿವನು ಕಳೆಯೊ ಶ್ರೀನಿವಾಸ ವಿಠಲ ನೀ ಕನಿಕರಿಸೊ (೩)

ದಾಸರ ಕೂಸಿದು ಹಸಿವೆಂದಳುತಿದೆ ಹರಿ ನಿನ್ನ ತೋಳೊಳು ಮುದ್ದಾಡಿಸೊ
ಮಾತೆ ಮಾಲಕುಮಿಯ ಮಡಿಲ ತೊಟ್ಟಿಲೊಳು ನಿನ್ನ ನಾಮಾಮೃತದ ಸುಧೆಯುಣಿಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೧.೦೭.೨೦೧೩

Tuesday, July 9, 2013

Shri Krishnana Nooraru Geethegalu - 343

ಎಂದಿಗಾದರೂ ಒಲಿಯೊ

ಎಂದಿಗಾದರೂ ಒಲಿಯೊ ಇಂದಿರೆ ರಮಣ ನೀ
ಇಂದು ಮುಂದೆಂದೆಂದು ನಂಬಿಹೆನೊ ನಾ ನಿನ್ನ

ಕ್ಷಣದ ಜೀವವೊ ನಾನು ಅಣುಕ್ಷಣವು ಹರಿಯೆನುವೆ
ಅಣುರೇಣುತೃಣ ಕಾವ ದೇವ ದೇವ
ಎನಿತು ಜನುಮದಿ ಕರೆಯೊ ನಿನ್ನೊಡನೆ ನಾ ಬರುವೆ
ದಿವ್ಯಚರಣವ ಸ್ಮರಿಸೆ ಜಗವ ಕಾವ (೧)

ಅಜಮಿಳನು ಹರಿಯೆನಲು ಆ ಕ್ಷಣದಿ ಕಂಡವನೆ
ಪಾಮರನ ದೀನನುಡಿ ನೀ ಕೇಳೆಯಾ
ರಾಮರಾಮಾ ಎನಲು ಆ ಶಬರಿಗೊಲಿದವನೆ
ನಾ ಕರೆಯೆ ಶ್ರೀಹರಿಯೆ ಬರದಿರುವೆಯಾ (೨)

ಕಲಿಯೊಳಗೆ ಜಪಮರೆತು ಭವದ ತಪನೆಯೊಳಿರುವೆ
ಕರೆತಂದವ ನೀನು ಕ್ಷಮಿಸು ಹರಿಯೆ
ಜಗದ ಸೂತ್ರಕ ನೀನೊ ಶ್ರೀನಿವಾಸ ವಿಠಲಯ್ಯ
ಎನ್ನ ತೊರೆದಿರುವುದು ನಿನಗೆ ಸರಿಯೆ (೩)

ಎಂದಿಗಾದರೂ ಒಲಿಯೊ ಇಂದಿರೆ ರಮಣ ನೀ
ಇಂದು ಮುಂದೆಂದೆಂದು ನಂಬಿಹೆನೊ ನಾ ನಿನ್ನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೭.೨೦೧೩