Friday, October 27, 2017

Shri Krishnana Nooraru Geethegalu - 363

ತೋರಯ್ಯ ಹನುಮ

ತೋರಯ್ಯ ಹನುಮ ನಿನ್ನೊಡೆಯ ರಾಮನ
ಪಾದಸೇವೆಗೆ ಒಲಿದು ಬಿಡದೆ ಸಲಹಿದನ

ಮನುವ ಉದ್ಧರಿಸೆ ಮತ್ಸ್ಯ ತಾನಾದವನ
ಅಮೃತದ ಉದ್ಭವಕೆ ಆಧಾರ ದೇವನ
ಅಸುರನ ದುರುಮುರಿದು ಅವನಿಯನೆ ಎತ್ತಿದನ
ಕಂದನ ಕರೆ ಕೇಳಿ ಕಂಭ ಸೀಳಿದನ (೧)

ಅಂಗೈಯ ದಾನಕ್ಕೆ ಅಗಾಧನಾದವನ
ಕೆಡುಕಿಗೆ ಪರುಶೆಂದು ಮೆರೆದ ಬ್ರಾಹ್ಮಣನ
ಧರ್ಮದ ಕೋದಂಡ ಹಿಡಿದ ಶ್ರೀರಾಮನ
ಕೊಳಲಲ್ಲಿ ಜಗವನೇ ಆಡಿಸಿದ ಕೃಷ್ಣನ (೨)

ಶ್ಯಾಮನ ಸೋದರನ ಧೀರ ಬಲರಾಮನ
ಹಲವು ಅವತಾರದಿ ಸುಜನರ ಪೊರೆದನ
ಕಲಿಯೊಳಗೆ ಎನ್ನ ದೇವ ಶ್ರೀನಿವಾಸ ವಿಠಲ
ರಾಯರಾಯರು ನಂಬಿ ಬಿಡದೆ ಪೂಜಿಪನ (೩)

ತೋರಯ್ಯ ಹನುಮ ನಿನ್ನೊಡೆಯ ರಾಮನ
ಪಾದಸೇವೆಗೆ ಒಲಿದು ಬಿಡದೆ ಸಲಹಿದನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೦.೨೦೧೭

Sunday, October 8, 2017

Shri Krishnana Nooraru Geethegalu - 362

ಹೇಳಯ್ಯ ಹನುಮ ಶ್ರೀರಾಮನಲ್ಲಿ

ಹೇಳಯ್ಯ ಹನುಮ ಶ್ರೀರಾಮನಲ್ಲಿ
ಎನ್ನ ದುರಿತವನಳಿದು ಸಲಹೆಂದು ಕಲಿಯಲ್ಲಿ

ಅಣುರೇಣುತೃಣದಲ್ಲಿ ನಿನ್ನ ರಾಮನಿಹನಂತೆ
ಮೂಡಣದ ಬೆಳಗದುವು ಅವನ ನಗೆಯಂತೆ
ಹರಿಯುವ ನದಿಯಂತೆ ಶುದ್ಧಾತ್ಮ ಅವನಂತೆ
ನೀನು ಭಜಿಸುವ ರಾಮ ಪರಮಾತ್ಮನಂತೆ (೧)

ಕೌಸಲ್ಯೆ ಸುತನಂತೆ ಲವಕುಶರ ಪಿತನಂತೆ
ಜಗನ್ಮಾತೆ ಜಾನಕಿಯ ಪ್ರಾಣಪ್ರಿಯನಂತೆ
ಪಿತವಾಕ್ಯ ಪರಿಪಾಲ ಪುರುಷೋತ್ತಮನಂತೆ
ನೀನು ಭಜಿಸುವ ರಾಮ ಗುಣಧಾಮನಂತೆ (೨)

ನೀ ರಾಮಪ್ರಿಯನಂತೆ ನೀ ಅವಗೆ ಸಖನಂತೆ
ಪೊರೆಯಲು ಹೇಳಯ್ಯ ಮರೆಯದಂತೆ
ಧರೆಯೊಳಗೆ ಶ್ರೀನಿವಾಸ ವಿಠಲನೆ ಅವನಂತೆ
ನೀನು ಭಜಿಸುವ ರಾಮ ಕರುಣನಂತೆ (೩)

ಹೇಳಯ್ಯ ಹನುಮ ಶ್ರೀರಾಮನಲ್ಲಿ
ಎನ್ನ ದುರಿತವನಳಿದು ಸಲಹೆಂದು ಕಲಿಯಲ್ಲಿ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೧೦.೨೦೧೭