Thursday, November 29, 2012

Shri Krishnana Nooraru Geethegalu - 316

ರಂಗನ ತೋರೆನಗೆ

ರಂಗನ ತೋರೆನಗೆ ಮುದ್ದುರಂಗನ ತೋರೆನಗೆ
ಮಧುಬನದೊಳು ಎಮ್ಮ ರಾಧೆಸಂಗದೊಳಾಡ್ವ

ಗರಿಮುಡಿ ಕೇಶವನ ನೊಸಲ ಶ್ರೀತಿಲಕನ
ಮದನನು ವಿಹರಿಸೊ ಮೋಹಕ ನಯನನ
ಕಿರುನಗೆಯಧರದೆ ಹೆಣ್ಮನ ಪುಳಕಿಸುವ
ಕಿರುಗೆಜ್ಜೆ ಕಾಲ್ಗಳ ಕೊಳಲಿನ ಪೋರನ (೧)

ಗೋಪಾಲ ಮಾಧವನ ಗಿರಿಯೆತ್ತಿ ಕಾಯ್ದವನ
ಕಾಳಿಂಗಶಿರಮೆಟ್ಟಿ ಬಲಿಯಹಂ ಕುಟ್ಟಿದನ
ಜಾನಕೀ ಹೃದಯನ ಭಾಮೆಗೂ ಒಲಿದವನ
ಕಲಿಯೊಳು ಧರೆಸಲಹೊ ಶ್ರೀನಿವಾಸ ವಿಠಲನ (೨)

ರಂಗನ ತೋರೆನಗೆ ಮುದ್ದುರಂಗನ ತೋರೆನಗೆ
ಮಧುಬನದೊಳು ಎಮ್ಮ ರಾಧೆಸಂಗದೊಳಾಡ್ವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೧೧.೨೦೧೨

Sunday, November 25, 2012

Shri Krishnana Nooraru Geethegalu - 315

ಮಧುವನದೊಳು

ಮಧುವನದೊಳು ನಾನೊಬ್ಬಳೇ ಶ್ರೀಹರಿ
ಮರೆಯಿತೇ ಕೃಷ್ಣ ಎನ್ನ ದಾರಿ

ನಿನ್ನೆಯ ನೆನಪಿನ ಖುಷಿಯಿದೆ ಎದೆಯೊಳು
ನಾಳೆಯ ನಂಬುಗೆ ಕನಸುಗಳು
ವರ್ತಮಾನಕೆ ಅರ್ಥವೇ ನೀನಿರದೆ
ಹುಣ್ಣಿಮೆ ಅಂದವೇ ಶಶಿಯಿರದೆ (೧)

ವಡಲಿನ ಗಡಿಗೆಯೊಳು ನಿನ್ನೆಡೆ ಒಲುಮೆ
ಹೆಪ್ಪಾಗಿಹುದು ಸಿಹಿಮೊಸರು
ಕಡೆಯುವೆ ಉಣಿಸುವೆ ಶ್ರೀನಿವಾಸ ವಿಠಲನೆ
ನಲುಮೆಯ ನವನೀತ ದಯೆತೋರು (೨)

ಮಧುವನದೊಳು ನಾನೊಬ್ಬಳೇ ಶ್ರೀಹರಿ
ಮರೆಯಿತೇ ಕೃಷ್ಣ ಎನ್ನ ದಾರಿ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೧.೨೦೧೨

Friday, November 16, 2012

Shri Krishnana Nooraru Geethegalu - 314

ಪ್ರಣವರೂಪ

ಪಾಲಿಪುದು ಪಾವನನೆ ಪಾಪನಾಶನ ಕೃಷ್ಣ
ಪುರುಷೋತ್ತಮ ವಂದೆ ಪ್ರಣವರೂಪ

ಜಗದಾದಿ ಜಂತುಜನ ಕಲುಷವನು ನಿಮಿಷದೊಳು
ಕಳೆದು ಕಾವನೆ ದೇವ ಪರಮ ಪರುಷ
ಸಕಲ ಸುರಗಣ ವಂದ್ಯ ಮುನಿಜನಾತ್ಮನೆ ಕೃಷ್ಣ
ಸ್ಮರಣೆ ಮಾತ್ರದೆ ನಿನ್ನ ಮೂಜಗದೆ ಹರುಷ (೧)

ಮೂಸೃಷ್ಟಿಯ ಪ್ರಭುವೆ ನೀ ನಾಕುನುಡಿರೂಪ
ಹಲವು ನಿಜದೊಳು ನೀನೆ ಏಕಸ್ವರೂಪ
ಬಿಡದೆನ್ನ ಮಸುಕಿದೀ ಮೌಢ್ಯತೆಯ ತಿಮಿರವನು
ಬಿಡಿಸೆನ್ನ ಸಲಹೊ ನೀ ಶ್ರೀನಿವಾಸ ವಿಠಲ (೨)

ಪಾಲಿಪುದು ಪಾವನನೆ ಪಾಪನಾಶನ ಕೃಷ್ಣ
ಪುರುಷೋತ್ತಮ ವಂದೆ ಪ್ರಣವರೂಪ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೧೧.೨೦೧೨

Friday, November 9, 2012

Shri Krishnana Nooraru Geethegalu - 313

ಪುಳಕಗೊಳುತಿದೆ ಸಂಜೆ

ತೀಡಿಬಹ ತಂಗಾಳಿ ಪೇಳುತಿದೆ ಬಳಿಸಾರಿ ಶ್ಯಾಮ ಬರುವನೆ ರಾಧೆ ಕ್ಷಣದೊಳೆಂದು
ಬೇಸರವ ಕಳೆದಿನ್ನು ಸಿಂಗಾರವಾಗೆಂದು ಆಸೆ ಶರಗಳ ಹೂಡಿ ಎನ್ನೆದೆಗೆ ಇಂದು

ಬೃಂದಾವನದೊಳಗೆ ಚೆಲುವದುವು ನಾಚುತಿದೆ ಚಿಗುರು ಚೈತ್ರದ ನಡುವೆ ಚಿಟ್ಟೆ ಆಡಿ
ಕೋಕಿಲನೆ ಗಾಯಕನು ಚಿಲಿಪಿಲಿಯ ವೈಣಿಕನು ಪುಳಕಗೊಳುತಿದೆ ಸಂಜೆ ಪ್ರೀತಿ ಮೋಡಿ

ಪಡುವಣದ ಕಡಲಿನಲಿ ನಾಚಿ ನೇಸರ ಕೆನ್ನೆ ಓಡಿದನು ಎನ್ನ ಶ್ಯಾಮ ಬರುವನೆಂದು
ಕಾಯುತಿವೆ ಆಗಸದಿ ಚುಕ್ಕಿ ಪ್ರಣತಿಯ ಸಾಲು ರಾಧೆ ಗಲ್ಲಕೆ ಅಧರ ಇಡುವನೆಂದು

ನೊರೆಹಾಲು ಗಡಿಗೆಯದು ಉಣಿಸುವುದು ಶ್ಯಾಮನಿಗೆ ಮೈಮನವ ತಣಿಸೆ ತಾ ಇಹಳು ರಾಧೆ
ರಾಧೆ ಹೃದಯನು ಕೃಷ್ಣ ಶ್ರೀನಿವಾಸ ವಿಠಲಯ್ಯ ಒಲುಮೆವರ್ಷದಿ ಕಳೆವ ಅವಳ ಭಾದೆ

ತೀಡಿಬಹ ತಂಗಾಳಿ ಪೇಳುತಿದೆ ಬಳಿಸಾರಿ ಶ್ಯಾಮ ಬರುವನೆ ರಾಧೆ ಕ್ಷಣದೊಳೆಂದು
ಬೇಸರವ ಕಳೆದಿನ್ನು ಸಿಂಗಾರವಾಗೆಂದು ಆಸೆ ಶರಗಳ ಹೂಡಿ ಎನ್ನೆದೆಗೆ ಇಂದು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೧.೨೦೧೨