Saturday, July 20, 2013

Shri Krishnana Nooraru Geethegalu - 344

ದಾಸರ ಕೂಸಿದು

ದಾಸರ ಕೂಸಿದು ಹಸಿವೆಂದಳುತಿದೆ ಹರಿ ನಿನ್ನ ತೋಳೊಳು ಮುದ್ದಾಡಿಸೊ
ಮಾತೆ ಮಾಲಕುಮಿಯ ಮಡಿಲ ತೊಟ್ಟಿಲೊಳು ನಿನ್ನ ನಾಮಾಮೃತದ ಸುಧೆಯುಣಿಸೊ

ಲೆಕ್ಕವಿಟ್ಟವರಾರೊ ಅಣುರೇಣುತೃಣದೇವ ನೀನಿತ್ತ ಅಗುಳಗುಳಿನಮೃತವನು
ಎನಿತು ಜನುಮಗಳಲ್ಲಿ ಅದೆನಿತು ಸುಜನಂಗೆ ನೀನಿತ್ತ ಸಿರಿಚರಣ ಮುಕುತಿಯದನು (೧)

ಕಂಭದೊಳು ಮೂಡಿದನೆ ಕಶ್ಯಪನ ಸೀಳಿದನೆ ಕಂದನನು ಕರುಣೆಯೊಲು ಪೊರೆದವನೆ
ಗಿರಿಯ ಶಿರದೊಳು ನೀನೆ ಕಡಲತಳದೊಳು ನೀನೆ ಅಣುಜೀವಕಾಶ್ರಯವ ಬರೆದವನೆ (೨)

ಎನ್ನಾತ್ಮ ವಾಮನನೊ ಒಳಬಕುತಿ ವಿಕ್ರಮನೊ ದುರುಬಲಿ ತುಳಿದು ನೀ ಆವರಿಸೊ
ಉದರದಸಿವದು ಕೊಳೆಯೊ ಆತ್ಮದಸಿವನು ಕಳೆಯೊ ಶ್ರೀನಿವಾಸ ವಿಠಲ ನೀ ಕನಿಕರಿಸೊ (೩)

ದಾಸರ ಕೂಸಿದು ಹಸಿವೆಂದಳುತಿದೆ ಹರಿ ನಿನ್ನ ತೋಳೊಳು ಮುದ್ದಾಡಿಸೊ
ಮಾತೆ ಮಾಲಕುಮಿಯ ಮಡಿಲ ತೊಟ್ಟಿಲೊಳು ನಿನ್ನ ನಾಮಾಮೃತದ ಸುಧೆಯುಣಿಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೧.೦೭.೨೦೧೩

1 comment:

  1. ಆಧುನಿಕ ದಾಸೋತ್ತಮ ವಿವೇದನೆಯಂತೆ ಬರೆದುಕೊಟ್ಟ ಈ ದಾಸರ ಪದಕ್ಕೆ ಶ್ರೀನಿವಾಸ ವಿಠಲನು ಕೊಟ್ಟ ಅಂಕಗಳು 200ಕ್ಕೆ 300ಊ...

    ReplyDelete