Friday, August 30, 2013

Shri Krishnana Nooraru Geethegalu - 350

ಹೇ ಮುದ್ದುರಂಗ

ಇರಲೆನಗೆ ಅನುದಿನವು ಹರಿ ನಿನ್ನ ಸಂಗ
ಭವದ ಬಂಧವ ಕಳೆಯೊ ಹೇ ಮುದ್ದುರಂಗ

ಮಾನದೊಳು ಬಹುಮಾನ ಮೇಘಶ್ಯಾಮನ ಧ್ಯಾನ
ಮಾಳ್ಪರಿಗೆ ಧರಣಿಯೊಳು ಸಕಲ ಸಮ್ಮಾನ
ಕಲಿನರನ ನಾಲಗೆಯ ನುಡಿನುಡಿಯು ಹರಿಯೆನಲು
ಇಹದೆ ದುರ್ಗತಿಯಳಿದು ಮುಕುತಿ ಸೋಪಾನ (೧)

ತ್ರೇತೆಯೊಳು ಪವಮಾನ ದ್ವಾಪರದಿ ಬಲವಾನ
ನಂಬಿ ನೆಚ್ಚಲು ಶಬರಿ ಪಡೆದ ಮಾನ
ನಾನೆಂಬೊ ನಶ್ವರದಿ ಶ್ರೀಹರಿಯೆ ಗತಿಯೆನಲು
ಕಾಯುವುದು ಶ್ರೀನಿವಾಸ ವಿಠಲ ಚರಣ (೨)

ಇರಲೆನಗೆ ಅನುದಿನವು ಹರಿ ನಿನ್ನ ಸಂಗ
ಭವದ ಬಂಧವ ಕಳೆಯೊ ಹೇ ಮುದ್ದುರಂಗ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೮.೨೦೧೩

Shri Krishnana Nooraru Geethegalu - 349

ಬಂದ ಗೋವಿಂದ

ಬಂದ ಗೋವಿಂದ ಜಗದಾನಂದ
ಗೋಕುಲದ ಎಮ್ಮ ನಂದ-ಗೋಪಿಯ ಮನೆಗೆ

ಪುಟಪುಟ ಪುಟ್ಟಪುಟ್ಟ ಹೆಜ್ಜೆಯನಿಟ್ಟು
ಘಲುಘಲು ಘಲುಘಲು ಕಿರುಗೆಜ್ಜೆ ತೊಟ್ಟು
ಪಟ್ಟೆ ಪೀತಾಂಬರ ನವರತ್ನವನುಟ್ಟು
ನೊಸಲೊಳು ಚಂದನ ತಿಲಕವನಿಟ್ಟು (೧)

ಕಾಡಿಗೆ ತೀಡಿದ ಕಂಗಳ ಮಿಟುಕಿಸುತ
ಕೆಂಪನೆ ಅಧರದಿ ಹೂನಗೆ ಅರಳಿಸುತ
ಚಿನ್ನದ ಕೊಳಲೊಳು ಗಾನವನುಲಿಯುತ
ಶ್ರೀನಿವಾಸ ವಿಠಲ ತಾ ಮೂಜಗ ಹರಸುತ (೨)

ಬಂದ ಗೋವಿಂದ ಜಗದಾನಂದ
ಗೋಕುಲದ ಎಮ್ಮ ನಂದ-ಗೋಪಿಯ ಮನೆಗೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೮.೨೦೧೩

Wednesday, August 21, 2013

Shri Krishnana Nooraru Geethegalu - 348

ಭಜಿಸಿರೊ ಎಮ್ಮ ರಾಯರ

ಭಜಿಸಿರೊ ಎಮ್ಮ ರಾಯರ ಪೂಜಿಸಿ ಗುರುರಾಯರ
ತುಂಗಾತೀರದ ಮಂತ್ರಾಲಯದಿ ನಿಂತು ಸುಜನರ ಕಾಯ್ವರ

ಭುವನಗಿರಿಯ ರವಿಯೊ ಇವರು ಭವದ ಕತ್ತಲ ಕಳೆವರು
ಕಲಿಯೊಳ್ ನರರ ಕೋಟಿಜನುಮದ ಪಾಪಕರ್ಮವ ತೊಳೆವರು
ಕಶ್ಯಪನ ಕಂದನವನ ಪುಣ್ಯರೂಪರೊ ರಾಯರು
ನಂಬಿ ಗುರುವೇ ನೀವೇ ಎನಲು ಸಕಲಮಂಗಳ ತರುವರು (೧)

ಯತಿಗಳಲಿ ಸುಯತಿಯಿವರು ಸನ್ಮತಿಯನು ಈವರು
ಗತಿಹೀನಗೆ ಸುಗತಿಯಿವರು ಕಲಿಯುಗದ ದೇವರು
ಶ್ರೀನಿವಾಸ ವಿಠಲನೊಲಿದ ರಾಘವೇಂದ್ರರಾಯರು
ಕರುಣಾನಿಧಿಯೆ ಕಾಯೋ ಎನಲು ಬಂದು ಎಮ್ಮೊಳು ನಿಲ್ವರು (೨)

ಭಜಿಸಿರೊ ಎಮ್ಮ ರಾಯರ ಪೂಜಿಸಿ ಗುರುರಾಯರ
ತುಂಗಾತೀರದ ಮಂತ್ರಾಲಯದಿ ನಿಂತು ಸುಜನರ ಕಾಯ್ವರ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೯೯೦೧೯ ೧೮೬೬೬ / ೨೨.೦೮.೨೦೧೩

Thursday, August 15, 2013

Sri Krishnana Nooraru Geethegalu - 347

ಕಾಯೆ ಜಗದಂಬೆ

ಶುಭವರದೆ ಶಾರದೆ ವಂದೆ
ಬೇಡುವೆನು ತಾಯೆ ಸಲಹೆನ್ನ ಮುಂದೆ

ಮಂಗಳವದನೆ ಹಂಸಗಮನೆ
ಸ್ಥಿರಮಾಂಗಲ್ಯೆ ನೀ ಕುಂಕುಮಚಂದನೆ
ಕೂಡಲಿ ನಿಲುವಾಂಬೆ ಈ ದೀನನ ಅಂಬೆ
ಕಲಿಯೊಳು ಸುಜನರ ಬಿಡದೇ ಕಾಯೆಂಬೆ (೧)

ಭವದಂಧವ ಕಳೆಯೆ ಸುರವಂದಿತೆ ಪೊರೆಯೆ
ಬ್ರಹ್ಮನ ಸತಿ ವಾಣಿ ಜಯೆವಿಜಯೆ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲ
ಚರಣದೀ ದಾಸನ ಕಾಯೆ ನೀ ಮಾಯೆ (೨)

ಶುಭವರದೆ ಶಾರದೆ ವಂದೆ
ಬೇಡುವೆನು ತಾಯೆ ಸಲಹೆನ್ನ ಮುಂದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೩

Wednesday, August 7, 2013

Shri Krishnana Nooraru Geethegalu - 346

ಕಂಡೆನಾ ಕೃಷ್ಣನ

ಕಂಡೆನಾ ಕೃಷ್ಣನ ಕಂಡೆನಾ ಕೃಷ್ಣನ (ಪ)

ಕಂಡೆನಾ ಕೃಷ್ಣನ ದೇವಕಿಯ ಕಂದನ
ಜಗದೋದ್ಧಾರ ಶ್ರೀ ತಂದೆ ಗೋವಿಂದನ (ಅ ಪ)

ಜಗದಾದಿ ವಂದ್ಯನ ದೇವ ವಾಸುದೇವನ
ಯದುಕುಲೋತ್ತಮನೆಮ್ಮ ನಂದನಾನಂದನ (೧)

ಮಾವಕಂಸನ ಕೊಂದನ ಉರಗವೇರಿ ನಿಂದನ
ಭವದ ಭಯವ ಕಳೆವಯೆಮ್ಮ ಬಾಲಗೋಪಾಲನ (೨)

ತ್ರೇತೆಯಾ ರಾಮನ ಗೋಕುಲದ ಶ್ಯಾಮನ
ಧರೆಯೊಳಗೆ ಸುಜನಗೊಲಿದ ಶ್ರೀನಿವಾಸ ವಿಠಲನ (೩)

ಕಂಡೆನಾ ಕೃಷ್ಣನ ಕಂಡೆನಾ ಕೃಷ್ಣನ (ಪ)

ಕಂಡೆನಾ ಕೃಷ್ಣನ ದೇವಕಿಯ ಕಂದನ
ಜಗದೋದ್ಧಾರ ಶ್ರೀ ತಂದೆ ಗೋವಿಂದನ (ಅ ಪ)

(ಇಂದು ಕನಕಪುರ ರಸ್ತೆಯಲ್ಲಿನ ಹಾಗೂ ರಾಜಾಜಿನಗರದ ಇಸ್ಕಾನಿನಲ್ಲಿ ಶ್ರೀಕೃಷ್ಣ ದರ್ಶನದ ನಂತರ ಮೂಡಿದ್ದು)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೮.೨೦೧೩