Tuesday, June 28, 2016

Shri Krishnana Nooraru Geethegalu - 358

ಕರುಣಿಸಿ ಕಾವುದು

ಕರೆತಂದನೆ ಹರಿಯೆ ಕರುಣಿಸಿ ಕಾವುದು
ಪಾಮರನೆನಗೆ ಪಾದಸೇವೆಯನಿತ್ತು

ಅಜಮಿಳನವನು ನಾರಾಯಣ ಎನಲು
ಕಂಭವ ಮುರಿದೆ ಕಂದ ತಾ ಕರೆಯಲು
ಶಿಲೆಗೊದಗಿದನೆ ಶ್ರೀರಾಮಯ್ಯ
ಜಗದೋದ್ಧಾರಕ ಜಾನಕೀರಮಣ (೧)

ಅರಿವಿತ್ತವ ನೀನೆ ಮರೆವಿತ್ತವ ನೀನೆ
ಮದ ಮೋಹ ಮತ್ಸರ ಮಾಯೆಯಿತ್ತವ ನೀನೆ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲನೆ
ತಪ್ಪುಗಳ ಮನ್ನಿಸಿ ನರನೆನ್ನ ಕಾಯೋ (೨)

ಕರೆತಂದನೆ ಹರಿಯೆ ಕರುಣಿಸಿ ಕಾವುದು
ಪಾಮರನೆನಗೆ ಪಾದಸೇವೆಯನಿತ್ತು

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೭.೨೦೧೬

Shri Krishnana Nooraru Geethegalu - 358

ಕಂಡೆನಾ ಕೃಷ್ಣನ

ಕಂಡೆನಾ ಕೃಷ್ಣನ ಕಂಡೆ ಗೋವಿಂದನ
ಕಂಡೆ ನಂದನ ಕಂದನ ಕಂಡೆ ಅರವಿಂದನ

ರಘುವಂಶಜ ದಶರಥನ ಪ್ರಿಯಸುತನ ಕಂಡೆನಾ
ಸುಚರಿತ ಸುಗುಣಗುಣ ಅಮಿತನ ಕಂಡೆನಾ
ಧರ್ಮ ಕೋದಂಡಧಾರಿ ದುರುಳಸಂಹಾರನ
ಗತಿ ನೀನೆಯೆನಲು ಕಾವ ತಂದೆ ಶ್ರೀರಾಮನ (೧)

ಹಣೆಗೆ ಗಂಧ ತಿಲಕ ಬಳಿದು ನಗುವ ಚೋರನ
ಹೆಡೆಯ ಮೆಟ್ಟಿ ಗಿರಿಯನೆತ್ತಿ ಮೆರೆದ ಧೀರನ
ಕೋಟೆಬೆಟ್ಟದೊಡೆಯನೆಮ್ಮ ಶ್ರೀನಿವಾಸ ವಿಠಲನ
ಮತ್ಸ್ಯ ಕೂರ್ಮ ಸಿಂಹ ದಶದಿ ಧರೆಯ ಪೊರೆದ ದೇವನ (೨)

ಕಂಡೆನಾ ಕೃಷ್ಣನ ಕಂಡೆ ಗೋವಿಂದನ
ಕಂಡೆ ನಂದನ ಕಂದನ ಕಂಡೆ ಅರವಿಂದನ


ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ