Tuesday, February 19, 2013

Shri Krishnana Nooraru Geethegalu - 336

ಮಧುರ ನುಡಿಸೊ ಮನದ ಮುರಳಿ

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ಬದುಕೆಂಬೀ ಮಾಯಾಮೃಗವ ಕಣ್ಣಮುಂದೆಯೆ ಬಿಟ್ಟಿಹೆ
ಬೇಟೆಯಾಡೆ ಆರು ಬಣ್ಣದ ವಿಷಬಾಣವ ಕೊಟ್ಟಿಹೆ
ಮಣ್ಣುಹೊನ್ನು ಎಮ್ಮದಲ್ಲವೊ ಎಮ್ಮದೆನ್ನುವ ಮಾಯೆಯ
ಎಮ್ಮೊಳಿಟ್ಟು ಆಟಕಟ್ಟಿದ ಕೃಷ್ಣ ಎಮ್ಮನು ಕಾಯ್ವೆಯಾ (೧)

ಮಾತೆಯೆಂದಾ ಪೂತನೆಯೊಳು ವಿಷಪಾನವನಿಟ್ಟನೆ
ದಾನಪದದಾ ಸೂರ್ಯಪುತ್ರನ ಕೈಯ್ಯ ಕಟ್ಟಿಬಿಟ್ಟನೆ
ಧರ್ಮಾಧರ್ಮದ ಅಂಬುಧಿಯೊಳು ನಿಜದ ಸತ್ಯಸುಧೆಯನು
ಮಥಿಸಿ ಸುಜನಗೆ ಸವಿಯೆ ನೀಡುವ ಶ್ರೀನಿವಾಸ ವಿಠಲನೆ (೨)

ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೨.೨೦೧೩

1 comment:

  1. ಕವಿಯು ಬದುಕಿನ ತೊಡಕುಗಳನ್ನು ಪಟ್ಟಿ ಮಾಡುತ್ತಲೇ, ಭಗವಂತನ ಕೃಪೆಯಿಂದ ಅವುಗಳಿಂದ ಪಾರಾಗುತ್ತ, ಮತ್ತೆ ಅವನಲ್ಲೇ ಸೇರುವ ಉಪಾಯ ಹೇಳಿದ್ದಾರೆ.

    "ಮಧುರ ನುಡಿಸೊ ಮನದ ಮುರಳಿ ಎನ್ನ ಮೋಹನ
    ಕ್ಲೇಶ ಕಳೆದು ವಿಶೇಷವಾಗಿಸೀ ನರನ ಜೀವನ"

    ಪದೇ ಪದೇ ಹಾಡಿಕೊಳ್ಳಬಲ್ಲ ಸಾಲುಗಳು.

    ReplyDelete