Wednesday, December 10, 2014

Shri Krishnana Nooraru Geethegalu - 358

ಹರಿಯ ನೆನೆಯದೆ

ನೂರು ಕಾಲ ಬಾಳಲೇನು ಹರಿಯ ನೆನೆಯದೆ
ನೂರು ಜನುಮ ಬದುಕಲೇಕೆ ಹರಿಯ ನೆನೆಯದೆ


ಶುದ್ಧಚರಿತನಾದ ಎಮ್ಮ ಹರಿಯ ನೆನೆಯದೆ
ಸದ್ವಿಚಾರಭರಿತ ಎಮ್ಮ ಹರಿಯ ನೆನೆಯದೆ
ಬಕುತಸಂಗ ನಿರತನೆಮ್ಮ ಹರಿಯ ನೆನೆಯದೆ
ದಶದಿ ರೂಪಧರಿತ ಎಮ್ಮ ಹರಿಯ ನೆನೆಯದೆ (೧)

ಪುರುಷೋತ್ತಮ ರಾಮನೆಂಬೊ ಹರಿಯ ನೆನೆಯದೆ
ಶ್ಯಾಮ ಜಗದ ಕ್ಷೇಮವೆಂಬೊ ಹರಿಯ ನೆನೆಯದೆ
ಶ್ರೀನಿವಾಸ ವಿಠಲ ನಾಮದ ಹರಿಯ ನೆನೆಯದೆ
ಮುಕುತಿಪದವು ಸಿಗದು ಮನುಜ ಹರಿಯ ನೆನೆಯದೆ (೨)

ನೂರು ಕಾಲ ಬಾಳಲೇನು ಹರಿಯ ನೆನೆಯದೆ
ನೂರು ಜನುಮ ಬದುಕಲೇಕೆ ಹರಿಯ ನೆನೆಯದೆ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೨.೨೦೧೪

Friday, September 12, 2014

Shri Krishnana Nooraru Geethegalu - 357

ಕೃಷ್ಣ ಶ್ರೀಕೃಷ್ಣನೆನಿರೊ

ಕೃಷ್ಣ ಶ್ರೀಕೃಷ್ಣನೆನಿರೊ ಕ್ಷಣವು ನೆನೆಯಿರೊ
ಕೃಷ್ಣ ಶ್ರೀಕೃಷ್ಣ ಎನುತ ಭವವ ಮರೆಯಿರೊ

ವಸುದೇವನ ಸುತನವನ ಗೋಪಿ ಕಂದನ
ಯದುವಂಶಜ ಶ್ರೀತಿಲಕ ಅರವಿಂದನ
ಮಥುರೆಯೊಳು ಮದದೊಳುರಿದ ಮಾವಕಂಸನ
ಗರ್ವಮುರಿದು ಸುಜನರಿರ್ದ ಧರೆಯ ಕಾಯ್ದನ (೧)

ಪೂತನೆಯ ವಿಷಮೊಲೆಯ ಉಂಡು ಜಯಿಸಿದ
ಕಾಲಿಂದಿಯ ಹೆಡೆಮೆಟ್ಟಿ ಕ್ಷಣದಿ ಮಣಿಸಿದ
ಕಿರುಬೆರಳೊಳು ಗಿರಿಯ ತಾನು ಎತ್ತಿ ನಿಲಿಸಿದ
ಬ್ರಹ್ಮಾದಿ ಇಂದ್ರನಹಂ ನಯದಿ ಅಳಿಸಿದ (೨)

ತ್ರೇತೆಯೊಳು ರಾಮನಿವನೊ ಧರ್ಮ ಪೊರೆದವ
ದ್ವಾಪರದಿ ನಿಜ ಗೆಲಿಸಿದ ರಾಧೆಮಾಧವ
ಕಲಿಯೊಳಗೆ ಭಜಿಪ ನರಗೆ ಸುಖವನೀಯುವ
ಕಿಂಡುಡುಪಿಯ ಶ್ರೀನಿವಾಸ ವಿಠಲನೇ ಇವ (೩)

ಕೃಷ್ಣ ಶ್ರೀಕೃಷ್ಣನೆನಿರೊ ಕ್ಷಣವು ನೆನೆಯಿರೊ
ಕೃಷ್ಣ ಶ್ರೀಕೃಷ್ಣ ಎನುತ ಭವವ ಮರೆಯಿರೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೯.೨೦೧೪

Thursday, July 24, 2014

Shri Krishnana Nooraru Geethegalu - 356

ಹರಿಯೆನ್ನಿರೊ ನರರು

ಭಜನೆಯೊಳು ಸುಜನಂಗೆ ಹರಿ ಕಾಣುವ
ಹರಿಯೆನ್ನಿರೊ ನರರು ಹರಿಯೆನ್ನಿರೊ

ಗಿರಿಯ ನೀ ಏರದಿರು ಗುಹೆಯಂಧ ಸೇರದಿರು
ಜಟೆಯೆತ್ತಿ ಮುಡಿಕಟ್ಟಿ ಭೈರಾಗಿಯಾಗದಿರು
ಸತಿಸುತರ ಸುಖ ನಡುವೆ ಬಿಡುವಿನೊಂದರೆಕ್ಷಣದಿ
ಹರಿಯೆನ್ನೊ ಅಜಮಿಳನ ಪೊರೆದಂತೆ ಕಾವ (೧)

ಕಣ್ಣ ದಿಟ್ಟಿಯು ಹರಿಯು ಕರ್ಣಗಳ ದನಿ ಹರಿಯು
ಜೀವಜೀವದ ಮಿಡಿತ ತುಡಿತ ಹರಿಯು
ಆರರಾಟಕೆ ಕುಣಿವ ಸೂತ್ರವರಿದಿಹ ಮನುಜ
ನಾರಾಯಣನೆನ್ನೊ ನಿಲದೆ ತಾ ಬರುವ (೨)

ಹರಿಯೆನ್ನೊ ಹರಿಯೆನ್ನೊ ಹರಿಯೆ ನೀ ಸರಿಯೆನ್ನೊ
ಹರಿಯೆನ್ನೊ ಹರಿಯೆನ್ನೊ ನೀ ಮುಕುತಿಗುರಿಯೆನ್ನೊ
ಮೇಲುಕೋಟೆಯ ವಾಸ ಶ್ರೀನಿವಾಸ ವಿಠಲನ್ನ
ಬಿಡದೆ ಭಜಸಲು ನೀನು ಸಕಲ ಸಂಪದವೀವ (೩)

ಭಜನೆಯೊಳು ಸುಜನಂಗೆ ಹರಿ ಕಾಣುವ
ಹರಿಯೆನ್ನಿರೊ ನರರು ಹರಿಯೆನ್ನಿರೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೭.೨೦೧೪

Friday, February 28, 2014

Shri Krishnana Nooraru Geethegalu - 355

ಶಿವನೆನ್ನಿರೋ

ಶಿವನೆನ್ನಿರೋ ಇಹದೊಳು ನೀವು
ಶಿವಶಿವಶಿವನೆನಲು ಭವದ ಮೋಹವ ಕಳೆವ

ಪಾರ್ವತಿಪ್ರಿಯನೆನ್ನಿ ಗೌರಿಹೃದಯನೆ ಎನ್ನಿ
ಗಂಗೆಯ ಜಟೆಯೊಳು ಧರಿಸಿದನೆ ಎನ್ನಿ
ಆದಿಪೂಜಿತನ ಶ್ರೀಸುಬ್ರಹ್ಮಣ್ಯನ
ಪ್ರಿಯಪಿತನೆಮ್ಮ ನಿಟಿಲಾಕ್ಷನೆ ಎನ್ನಿ (೧)

ಮೈಯ್ಯ ಶುದ್ಧಿಯನೊಲ್ಲ ಮನದಶುದ್ಧಿಯ ಬಲ್ಲ
ಶಿವನೆಂಬೊ ಸುಜನಂಗೆ ಇವನೇ ಎಲ್ಲ
ಕಲಿಯೊಳು ಧರೆಕಾವ ಶ್ರೀನಿವಾಸ ವಿಠಲ
ಪ್ರಿಯದೇವ ಲಯದೇವ ಶ್ರೀಹರನೆನ್ನಿ (೨)

ಶಿವನೆನ್ನಿರೋ ಇಹದೊಳು ನೀವು
ಶಿವಶಿವಶಿವನೆನಲು ಭವದ ಮೋಹವ ಕಳೆವ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೨.೨೦೧೪

Wednesday, January 29, 2014

Shri Krishnana Nooraru Geethegalu - 354

ಹರಿ ಧ್ಯಾನ ಮಾನ

ಹರಿ ಧ್ಯಾನ ಮಾನ ಶ್ರೀಹರಿ ಧ್ಯಾನ ಮಾನ
ಇಹದ ಗದ್ದಲದಿ ಪರ ಮರೆತ ನರಮನುಜ

ಪರಸತಿಯ ಕಾಮಿಸಲು ಅಸುರನವ ತ್ರೇತೆಯೊಳು
ಶಿರವರಿದ ಶ್ರೀಹರಿಯ ಧ್ಯಾನವದು ಮಾನ
ಚರಣಸೇವಕನವನ ಎದೆಯೊಳಗೆ ತಾ ನಿಂತು
ಧರ್ಮವದ ಗೆಲ್ಲಿಸಿದ ಶ್ರೀಹರಿಯ ಧ್ಯಾನ (೧)

ಪರರವನಿ ಐಸಿರಿಗೆ ಕುರುಳಿಡಿದ ಕೌರವನ
ತೊಡೆಮುರಿದ ಶ್ರೀಹರಿಯ ಧ್ಯಾನವದು ಮಾನ
ಮಾನದೈವರ ಬಿಡದೆ ಮಡಿಲಕುಡಿಯಂದದೊಳು
ದ್ವಾಪರದೆ ಸಲುಹಿದ ಶ್ರೀಹರಿಯ ಧ್ಯಾನ (೨)

ಮೀನಾಗಿ ಆದಿಯೊಳು ದಶದಿ ನಾರಾಯಣನು
ದುರುಹರಿದ ಶ್ರೀಹರಿಯ ಧ್ಯಾನವದು ಮಾನ
ಕಲಿಯೊಳಗೆ ತೃಣನರನ ಕೋಟಿಕರ್ಮವ ಕಳೆವ
ಶ್ರೀರಾಯ ಶ್ರೀನಿವಾಸ ವಿಠಲನ ಧ್ಯಾನ (೩)

ಹರಿ ಧ್ಯಾನ ಮಾನ ಶ್ರೀಹರಿ ಧ್ಯಾನ ಮಾನ
ಇಹದ ಗದ್ದಲದಿ ಪರ ಮರೆತ ನರಮನುಜ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೧.೨೦೧೩