Friday, November 9, 2012

Shri Krishnana Nooraru Geethegalu - 313

ಪುಳಕಗೊಳುತಿದೆ ಸಂಜೆ

ತೀಡಿಬಹ ತಂಗಾಳಿ ಪೇಳುತಿದೆ ಬಳಿಸಾರಿ ಶ್ಯಾಮ ಬರುವನೆ ರಾಧೆ ಕ್ಷಣದೊಳೆಂದು
ಬೇಸರವ ಕಳೆದಿನ್ನು ಸಿಂಗಾರವಾಗೆಂದು ಆಸೆ ಶರಗಳ ಹೂಡಿ ಎನ್ನೆದೆಗೆ ಇಂದು

ಬೃಂದಾವನದೊಳಗೆ ಚೆಲುವದುವು ನಾಚುತಿದೆ ಚಿಗುರು ಚೈತ್ರದ ನಡುವೆ ಚಿಟ್ಟೆ ಆಡಿ
ಕೋಕಿಲನೆ ಗಾಯಕನು ಚಿಲಿಪಿಲಿಯ ವೈಣಿಕನು ಪುಳಕಗೊಳುತಿದೆ ಸಂಜೆ ಪ್ರೀತಿ ಮೋಡಿ

ಪಡುವಣದ ಕಡಲಿನಲಿ ನಾಚಿ ನೇಸರ ಕೆನ್ನೆ ಓಡಿದನು ಎನ್ನ ಶ್ಯಾಮ ಬರುವನೆಂದು
ಕಾಯುತಿವೆ ಆಗಸದಿ ಚುಕ್ಕಿ ಪ್ರಣತಿಯ ಸಾಲು ರಾಧೆ ಗಲ್ಲಕೆ ಅಧರ ಇಡುವನೆಂದು

ನೊರೆಹಾಲು ಗಡಿಗೆಯದು ಉಣಿಸುವುದು ಶ್ಯಾಮನಿಗೆ ಮೈಮನವ ತಣಿಸೆ ತಾ ಇಹಳು ರಾಧೆ
ರಾಧೆ ಹೃದಯನು ಕೃಷ್ಣ ಶ್ರೀನಿವಾಸ ವಿಠಲಯ್ಯ ಒಲುಮೆವರ್ಷದಿ ಕಳೆವ ಅವಳ ಭಾದೆ

ತೀಡಿಬಹ ತಂಗಾಳಿ ಪೇಳುತಿದೆ ಬಳಿಸಾರಿ ಶ್ಯಾಮ ಬರುವನೆ ರಾಧೆ ಕ್ಷಣದೊಳೆಂದು
ಬೇಸರವ ಕಳೆದಿನ್ನು ಸಿಂಗಾರವಾಗೆಂದು ಆಸೆ ಶರಗಳ ಹೂಡಿ ಎನ್ನೆದೆಗೆ ಇಂದು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೧.೨೦೧೨

3 comments:

  1. ರಾಧಾ ಶ್ಯಾಮರ ಶೃಂಗಾರ ಹೆಣೆಯುತ್ತ ಪ್ರಕೃತಿಯನ್ನು ಕಟ್ಟಿಕೊಟ್ಟ ಪರಿಯೇ ಸೊಬಗು.

    ReplyDelete
  2. ಬಹಳ ಸುಂದರವಾದ ರಚನೆ.

    ReplyDelete