Thursday, June 28, 2012

Shri Krishnana Nooraru Geethegalu - 242

ಏನೊ ತಳಮಳ ಇವಳಿಗೆ

ಏನೊ ತಳಮಳ ಇವಳಿಗೆ ಗೋಕುಲದ ಸಿರಿ ಚೆಲುವೆಗೆ
ನಯನದಂಚೊಳು ಬಯಕೆ ನವಿಲು ಕಾಯುತಿಹಳಾ ಚೆಲುವಗೆ

ಬೃಂದಾವನಕವ ಬರುವನೊ ಒಲುಮೆ ಹೂಮಳೆಗರೆವನೊ
ಬಳ್ಳಿ ತೆರದೊಳು ಬಳಸಿ ನಡುವನು ನಲುಮೆಚಿತ್ರ ಬರೆವನೊ (೧)

ನಯನ ನಯನವ ಸೆಳೆವನೊ ಅಧರಕಧರವ ಬೆಸೆವನೊ
ವಿರಹದೊಡಲ ವೀಣೆ ಮೀಟಿ ಕಡಲಿನಂದದಿ ಮೊರೆವನೊ (೨)

ಚೆಲುವರೊಳಗೆ ಚೆಲುವನೊ ಜಗದ ಪ್ರೀತಿಗೆ ಮಿಡಿವನೊ
ಶ್ರೀನಿವಾಸ ವಿಠಲ ಕೃಷ್ಣ ಅದಾರ ಮಿಲನದೊಳಿರುವನೊ (೩)

ಏನೊ ತಳಮಳ ಇವಳಿಗೆ ಗೋಕುಲದ ಸಿರಿ ಚೆಲುವೆಗೆ
ನಯನದಂಚೊಳು ಬಯಕೆ ನವಿಲು ಕಾಯುತಿಹಳಾ ಚೆಲುವಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೬.೨೦೧೨

Wednesday, June 27, 2012

Shri Krishnana Nooraru Geethegalu - 241

ತುಂಗಾತೀರನಿವಾಸ

ತುಂಗಾತೀರ ನಿವಾಸ ಶ್ರೀಗುರು ರಾಯವಿಶೇಷ
ಮುದ್ದು ಗೋವಿಂದನ ಶ್ರೀಪಾದ ದಾಸ

ನೀ ಇರುವೆಡೆಯೊಳೆ ಎನ್ನಿರುವೊ ತಂದೆ
ಗತಿ ಎನಗಾರೊ ಓಡೋಡಿ ಬಂದೆ
ನರಬೊಂಬೆಯೊ ನಾನು ಅನ್ಯಗಳಾಗರ
ಸೂತ್ರಕ ನೀನೊ ಶುದ್ಧದಿ ಸಲಯೆನ್ನ (೧)

ಬಲ್ಲೆನೊ ಕೃತದಿಂದ ನೀನೆನ್ನ ಪೊರೆದವನು
ಕಲಿಯುಗ ವರದನು ಅಕ್ಷಯ ಕಾಮಧೇನು
ಶ್ರೀನಿವಾಸ ವಿಠಲನೆ ಒಲಿದೆಮ್ಮ ಕಲ್ಪವೃಕ್ಷ
ವಾಯು ಬಲದೇವ ಮಧ್ವಶ್ರೀ ಜಗರಕ್ಷ (೨)

ತುಂಗಾತೀರ ನಿವಾಸ ಶ್ರೀಗುರು ರಾಯವಿಶೇಷ
ಮುದ್ದು ಗೋವಿಂದನ ಶ್ರೀಪಾದ ದಾಸ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೬.೨೦೧೨

Tuesday, June 26, 2012

Shri Krishnana Nooraru Geethegalu - 240

ನಿನ್ನ ಕರದೊಳ ವೇಣು

ನಿನ್ನ ಕರದೊಳ ವೇಣು ನುಡಿಯಲೊ ನವರಾಗ
ಜಗದಾದಿ ಜೀವಗಳು ಕೇಳಿ ನಲಿಯೆ ಕೃಷ್ಣ

ನಾದತರಂಗವದು ನೂರ್ಕಾಲ ನೂರ್ಮಡಿಸಿ
ಎಮ್ಮ ಚೇತನದೊಳು ರಿಂಗಣಿಸಲೊ ಸದಾ

ಶುದ್ಧವಾಗಿಸೆ ಆತ್ಮ ಅಸುರರಾರ್ವರ ಮಡುಹೆ
ನಾದಾಂಬುಧಿಯದು ಅಬ್ಬರಿಪಲೊ ಕೃಷ್ಣ

ಜನುಮಜನುಮಗಳಲ್ಲಿ ನಿನ್ನಿರುವ ದಿಟವದನು
ಸುಜನರೊಳು ಸಾರಲೈ ಶ್ರೀನಿವಾಸ ವಿಠಲ

ನಿನ್ನ ಕರದೊಳ ವೇಣು ನುಡಿಯಲೊ ನವರಾಗ
ಜಗದಾದಿ ಜೀವಗಳು ಕೇಳಿ ನಲಿಯೆ ಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೬.೨೦೧೨

Friday, June 15, 2012

Shri Krishnana Nooraru Geethegalu - 239

ನಾಚುತಿಹಳು ರಾಧೆ

ನಾಚುತಿಹಳೊ ಎಮ್ಮ ರಾಧೆ ಮೌನದೊಡವೆ ಧರಿಸಿ
ಸಂಜೆಯಾಯ್ತು ಬರುವನೆಂದು ಕೃಷ್ಣನವಳ ಅರಸಿ

ಹೊಳೆವ ತಂಬಿಗೆಯೊಳಗೆ ನಗುವ ಯುಮುನೆಗೆಂಥ ಪುಳಕ
ಬರುವ ಹರಿಯ ಪಾದ ತೊಳೆಯಲವಳ ಬದುಕೇ ಸಾರ್ಥಕ (೧)

ಹಕ್ಕಿಕೊರಳೊಳು ರಾಗಬಂಧಿಯು ಶೃಂಗಾರ ಸಂಭ್ರಮ ನರ್ತನ
ರಾಧೆಯೊಡಲಿನ ವಿರಹಿ ವೀಣೆಯು ಕಾತರಿಸಿದೆ ಮದನನ (೨)

ಚಿಗುರು ತುಳಸಿಯ ಮಾಲೆ ದಳದೊಳು ತೀರದಾವುದೊ ತವಕ
ಮುದ್ದುಕೃಷ್ಣನ ಕೊರಳ ಸಿರಿಯನು ತಬ್ಬಿಕೊಳ್ಳುವ ತನಕ (೩)

ಹಸಿರು ತೋರಣ ಚುಕ್ಕಿ ಚಿತ್ರಣ ನಳನಳಿಸಿದೆ ಬೃಂದಾವನ
ಶ್ರೀನಿವಾಸ ವಿಠಲ ರಾಧೆಗೆ ಚಂದ್ರ ಸಾಕ್ಷಿಯು ಮಿಲನ (೪)

ನಾಚುತಿಹಳೊ ಎಮ್ಮ ರಾಧೆ ಮೌನದೊಡವೆ ಧರಿಸಿ
ಸಂಜೆಯಾಯ್ತು ಬರುವನೆಂದು ಕೃಷ್ಣನವಳ ಅರಸಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೬.೨೦೧೨

Sunday, June 10, 2012

Shri Krishnana Nooraru Geethegalu - 238

ನೀನೆ ಕರುಣಾಕರನೊ

ನೀನೆ ಕರುಣಾಕರನೊ ಕೃಷ್ಣ ಕೃಷ್ಣ
ನೀನೆ ಸಲಹುವುದೆನ್ನ ಕೃಷ್ಣ ಶ್ರೀಕೃಷ್ಣ

ನೀನೆ ಕೃತದೊಳು ನಿಜವು ಮತ್ಸ್ಯಾದಿ ಸೋಜಿಗವು
ನೀನಯ್ಯ ಮೂಜಗವು ಸುಜನ ಸುಖವು
ನೀನೆ ನರಕೇಸರಿಯು ಬಲಿಯ ಮೆಟ್ಟಿದ ಹರಿಯು
ನೀನಯ್ಯ ಧರೆ ದುರಿತವಳಿದ ದೊರೆಯು (೧)

ನೀನೆ ಗೋಕುಲ ಗೊಲ್ಲ ಮುದ್ದುರಾಧೆಯ ನಲ್ಲ
ನರನೆಂಬಿ ಗೋವುಗಳ ಕಾವ ಗೋಪಾಲ
ಕರವ ಮುಗಿವೆನೊ ತಂದೆ ನಾಮ ನಂಬಿಹೆ ಮುಂದೆ
ಕಾಯೆಮ್ಮ ಅನವರತ ಶ್ರೀನಿವಾಸ ವಿಠಲ (೨)

ನೀನೆ ಕರುಣಾಕರನೊ ಕೃಷ್ಣ ಕೃಷ್ಣ
ನೀನೆ ಸಲಹುವುದೆನ್ನ ಕೃಷ್ಣ ಶ್ರೀಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೬.೨೦೧೨