Friday, June 15, 2012

Shri Krishnana Nooraru Geethegalu - 239

ನಾಚುತಿಹಳು ರಾಧೆ

ನಾಚುತಿಹಳೊ ಎಮ್ಮ ರಾಧೆ ಮೌನದೊಡವೆ ಧರಿಸಿ
ಸಂಜೆಯಾಯ್ತು ಬರುವನೆಂದು ಕೃಷ್ಣನವಳ ಅರಸಿ

ಹೊಳೆವ ತಂಬಿಗೆಯೊಳಗೆ ನಗುವ ಯುಮುನೆಗೆಂಥ ಪುಳಕ
ಬರುವ ಹರಿಯ ಪಾದ ತೊಳೆಯಲವಳ ಬದುಕೇ ಸಾರ್ಥಕ (೧)

ಹಕ್ಕಿಕೊರಳೊಳು ರಾಗಬಂಧಿಯು ಶೃಂಗಾರ ಸಂಭ್ರಮ ನರ್ತನ
ರಾಧೆಯೊಡಲಿನ ವಿರಹಿ ವೀಣೆಯು ಕಾತರಿಸಿದೆ ಮದನನ (೨)

ಚಿಗುರು ತುಳಸಿಯ ಮಾಲೆ ದಳದೊಳು ತೀರದಾವುದೊ ತವಕ
ಮುದ್ದುಕೃಷ್ಣನ ಕೊರಳ ಸಿರಿಯನು ತಬ್ಬಿಕೊಳ್ಳುವ ತನಕ (೩)

ಹಸಿರು ತೋರಣ ಚುಕ್ಕಿ ಚಿತ್ರಣ ನಳನಳಿಸಿದೆ ಬೃಂದಾವನ
ಶ್ರೀನಿವಾಸ ವಿಠಲ ರಾಧೆಗೆ ಚಂದ್ರ ಸಾಕ್ಷಿಯು ಮಿಲನ (೪)

ನಾಚುತಿಹಳೊ ಎಮ್ಮ ರಾಧೆ ಮೌನದೊಡವೆ ಧರಿಸಿ
ಸಂಜೆಯಾಯ್ತು ಬರುವನೆಂದು ಕೃಷ್ಣನವಳ ಅರಸಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೬.೨೦೧೨

No comments:

Post a Comment