Sunday, June 30, 2013

Shri Krishnana Nooraru Geethegalu - 342

ತಪ್ಪುಗಳೆಣಿಸದಿರೊ

ತಪ್ಪುಗಳೆಣಿಸದಿರೊ ಹರಿ ಎನ್ನ ತಪ್ಪುಗಳೆಣಿಸದಿರೊ
ತಪ್ಪುಗಳೆಲ್ಲವ ಮನ್ನಿಸೊ ನಾ ನಿನ್ನ ದಾಸರ ಚರಣದ ಕೂಸು ಕಂಡಯ್ಯಾ

ಅಸುರನು ಅಂಬುಧಿಯೊಳ್ ಅವನಿಯ ಅಡಗಿಸೆ
ತರಿದು ತಕ್ಷಣದಿ ಅವಳ ರಕ್ಷಿಸಿದ
ವೈಶಂಪಾಯನದಿ ಕುರುಜನು ಅವಿತಿರಲು
ಧರ್ಮದ ಗದೆಯಾಗಿ ತೊಡೆಯ ಮುರಿದವನೆ (೧)

ಮಿಥ್ಯದ ಬಿಂಬದೊಳ ಸತ್ಯದ ಇಂಬು ನೀನೊ
ಜಗಮಿಥ್ಯವನಳಿದು ಸತ್ಯವ ಎಮಗಿರಿಸೊ
ಕೋಟೆಬೆಟ್ಟದ ವಾಸ ಶ್ರೀನಿವಾಸ ವಿಠಲಯ್ಯ
ಕಲಿಯೊಳು ಸುಜನನ ನಿಜದೊಳು ಗೆಲಿಸೊ (೨)

ತಪ್ಪುಗಳೆಣಿಸದಿರೊ ಹರಿ ಎನ್ನ ತಪ್ಪುಗಳೆಣಿಸದಿರೊ
ತಪ್ಪುಗಳೆಲ್ಲವ ಮನ್ನಿಸೊ ನಾ ನಿನ್ನ ದಾಸರ ಚರಣದ ಕೂಸು ಕಂಡಯ್ಯಾ

(ಕೋಟೆಬೆಟ್ಟ: ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಕೋಟೆಬೆಟ್ಟದ ಕಂಭದ ನರಸಿಂಹಸ್ವಾಮಿ, ನನ್ನ ಪೂರ್ವಜರ ಕಾಲದಿಂದಲೂ ನಾವು ಪೂಜಿಸುತ್ತಿರುವ ದೈವ)

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೬.೨೦೧೩

Saturday, June 15, 2013

Shri Krishnana Nooraru Geethegalu - 341

ಮತಿಯಿರಿಸೊ

ಮತಿಯಿರಿಸೊ ಎಮ್ಮ ಯತಿಗಳು ಪೂಜಿಪ
ಶ್ರೀಪತಿ ಹರಿಯೊಳು ನರಮನುಜ

ನಂಬಲು ಶ್ರೀಚರಣ ನಿಜವಯ್ಯ ದುರ್ಹರಣ
ಇಹಪರದೊಳು ಅವನೆ ಸುಖಕಾರಣ
ಬಿಂದುವು ಅವ ನಮಿಸೊ ಸಿಂಧುವು ಅವ ನಮಿಸೊ
ಎಲ್ಲವೂ ಹರಿಯೆಂದು ಪರಿಭಾವಿಸೊ (೧)

ಶ್ರೀಹರಿ ಧ್ಯಾನವೆ ಜೀವಸಾಧನೆ ಕಾಣೊ
ಜನ್ಮಜನ್ಮಗಳಲ್ಲಿ ಅರಿ ಮನುಜ
ಶ್ರೀನಿವಾಸ ವಿಠಲನ್ನ ಬಿಡದೆ ನೀ ಸ್ಮರಿಸಲು
ಇಹದೊಳೆ ಮುಕುತಿಯ ಸಿರಿಕಣಜ (೨)

ಮತಿಯಿರಿಸೊ ಎಮ್ಮ ಯತಿಗಳು ಪೂಜಿಪ
ಶ್ರೀಪತಿ ಹರಿಯೊಳು ನರಮನುಜ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೬.೨೦೧೩

Monday, June 10, 2013

Shri Krishnana Nooraru Geethegalu - 340

ರಾಮನೆನೆ ಸುಖವು

ರಾಮನೆನೆ ಸುಖವು ಶ್ರೀರಾಮನೆನೆ ಸುಖವು
ರಾಮ ಶ್ರೀರಾಮನೆನೆ ಸುಖದ ಸುಖವು

ರಘುವಂಶ ಕುಲತಿಲಕ ರಾಮನೆನೆ ಸುಖವು
ಕೌಸಲ್ಯೆ ದಶರಥಸುತನೆನೆ ಸುಖವು
ಭರತ ಶತ್ರುಘ್ನಂಗೆ ಸೋದರನೆನೆ ಸುಖವು
ಅಯೋಧ್ಯೆ ದೇವನೆನೆ ಸುಖದ ಸುಖವು (೧)

ಅಕ್ಷಯ ಗುಣಧಾಮ ರಾಮನೆನೆ ಸುಖವು
ಜಗಪ್ರೇಮ ಕ್ಷೇಮ ಶ್ರೀರಾಮನೆನೆ ಸುಖವು
ಧರೆಯ ದುರಿತವನಳಿವ ಶ್ರೀನಿವಾಸ ವಿಠಲನ್ನ
ಮಾತೆಸೀತೆ ರಾಮನೆನೆ ಸುಖದ ಸುಖವು (೨)

ರಾಮನೆನೆ ಸುಖವು ಶ್ರೀರಾಮನೆನೆ ಸುಖವು
ರಾಮ ಶ್ರೀರಾಮನೆನೆ ಸುಖದ ಸುಖವು

Tuesday, June 4, 2013

ಇವಳ ಎರಡು ಹನಿಗಳು

ಅವಳ ಹನಿಪ್ರೀತಿಗೆ ಬೊಗಸೆಯೊಡ್ಡಿದೆ
ಸುರಿದು ಜೇನಮಳೆಯಾದಳು

ಗೊತ್ತಿತ್ತು, ಅವಳು ನಿಲ್ಲುವಳಲ್ಲವೆಂದು
ನದಿಯಾಗಿ ಸರಿದು ಕಡಲ ಸೇರಿದಳು

ಕಾಯುತ್ತಿದ್ದೇನೆ ಬೇಗೆಯೆದೆಯ ತೆರೆದಿಟ್ಟು

ಮತ್ತವಳು ಮೋಡವಾಗುವವರೆಗೆ
ಮೋಡ ಮಳೆಯಾಗುವ ಮಾಯೆಗೆ

***

ಹೆಬ್ಬಂಡೆಯಂಥ ಇವಳು
ಪ್ರೀತಿಗೆ ಕರಗಲೊಲ್ಲಳು
ನದಿಯಾಗಿ ನಾನಿವಳ ನಡು ಬಳಸಿ
ಹರಿಯುತ್ತಲೇ ಇದ್ದೇನೆ
ಕಲ್ಲು ಮೆದುವಾದೀತೆಂಬ ಆಸೆಯಲಿ

Monday, June 3, 2013

ನನ್ನವಳು

ಹನಿಯುತ್ತಾಳೆ ನೆನಪುಗಳ ಮಳೆಯಾಗಿ
ದೂರವಿದ್ದರೂ ನನ್ನವಳು

ಚಳಿಗಾಲದಲಿ ಅಗ್ನಿ ಅಗ್ಗಷ್ಠಿಕೆ
ಅಪ್ಪಿಕೊಂಡರೆ ಶೃಂಗಾರ ಬೆಚ್ಚಗೆ

ವಸಂತದಲಿ ತುಂಬು ಹಸಿರು ಮರ
ದಂಥವಳ ಮಡಿಲಲಿ ನಗುವ ಹೂ
ನನ್ನದೇ ಪ್ರತಿಬಿಂಬ

ಒಂದು ಮಳೆಗಾಲದ ರಾತ್ರಿ

ಎದೆ ನಡುಗಿಸಿದ ಗುಡುಗಿ
ಗೆ ಅಪ್ಪಿಕೊಂಡೆ ಪಕ್ಕ
ಮಲಗಿದ್ದ ನನ್ನವನ

ಬಿಸಿ ಸ್ಪರ್ಶಕ್ಕೆ ಎಚ್ಚರ
ಗೊಂಡವನ ಕಂಗಳಲಿ
ಪಳಕ್ಕನೆ ಆಸೆ ಮಿಂಚು

ನಾ ನಡುರಾತ್ರಿಯ ಬೇಸಿಗೆ
ಅವನು ಕೆನೆಗಟ್ಟಿದ ಮುಗಿಲು

ನಡುವೆ ಪ್ರೀತಿ ತಂಗಾಳಿ
ಮಳೆಯಾದ ನಾ ಇಳೆಯಾದೆ

ಭೋರ್ಗರೆದ ಇಳಿದು ಜಾರಿನಲಿ
ಏರಿ ಎದೆಶಿಖರಗಳಲಿ

ಅವನೊಳು ನಾನೋ
ನನ್ನೊಳು ಅವನೋ

ಅವನ ಹರಿತಕೆ ತೊಡೆ ನಡು
ವ ಕತ್ತಲಲಿ ಚಂದ್ರೋದಯ
ದನಾವರಣ

ಇದು
ಒಂದು ಮಳೆಯ ರಾತ್ರಿಯಲಿ
ನನ್ನೆದೆ ಹಾಳೆಯಲಿ ಅವ
ಬರೆದ ಜೀವ ಕವನ