Wednesday, February 29, 2012

Shri Krishnana Nooraru Geethegalu - 209

ಎನಗಿರಲೊ ರಂಗ

ನಿನ್ನ ಕರುಣೆಯ ಸಿರಿಯು ಎನಗಿರಲೊ ರಂಗ
ಅನವರತ ಶ್ರೀಹರಿಯೆ ನಿನ್ನ ಪಾದ ಸಂಗ

ತ್ರೇತೆ ರಾಮನ ಅರಿಯೆ ದ್ವಾಪರದ ಕೃಷ್ಣನನು
ದಶರೂಪದೊಳು ದುರಿತವಳಿದ ನಿನ್ನ
ನರ ನಾನೊ ಕಲಿಯೊಳಗೆ ಅನ್ಯಗಳ ಮನ್ನಿಪುದು
ಶ್ರೀನಿವಾಸ ವಿಠಲನೆ ನಂಬಿದೆನೊ ನಿನ್ನ

ನಿನ್ನ ಕರುಣೆಯ ಸಿರಿಯು ಎನಗಿರಲೊ ರಂಗ
ಅನವರತ ಶ್ರೀಹರಿಯೆ ನಿನ್ನ ಪಾದ ಸಂಗ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೨.೨೦೧೨

Monday, February 27, 2012

Shri Krishnana Nooraru Geethegalu - 208

ರಘುಕುಲಸೋಮ

ರಘುಕುಲಸೋಮ ಶ್ರೀರಾಮ ಶ್ರೀರಾಮ
ಸಕಲ ಸುಗುಣಧಾಮ ಶ್ರೀರಾಮ

ಕೌಸಲ್ಯೆ ತನಯ ದಶರಥ ನುಡಿಯ
ಪಾಲಿಸೆ ತೊರೆದನೊ ಅಯೋಧ್ಯೆಯ
ದುರಿತವ ಸಂಹರಿಸಿ ಸುಜನರ ಹರಸಿ
ಪೊರೆದನೊ ಧರೆ-ಧರ್ಮವ (೧)

ಅಂಜನಾತನಯ ಬೇಡಲೀ ದೊರೆಯ
ನೆಲೆಸಿದನೆದೆಯೊಳು ನಗುನಗುತ
ಶ್ರೀರಾಮ ಜಯರಾಮ ನೀನೆನ್ನ ಗತಿಯೆನಲು
ಪಾದಸೇವೆಯನಿತ್ತ ಅನವರತ (೨)

ಆದಿ-ಅನಂತ-ಅಖಿಲಾಂಡನಿವನೊ
ಶಬರಿಯ ಸಲಹಿದ ಸಿರಿವಂತ
ರಾಮನೊ ಶ್ಯಾಮನೊ ಶ್ರೀನಿವಾಸ ವಿಠಲನೊ
ರಾಯರಿಗೊಲಿದ ಭಗವಂತ (೩)

ರಘುಕುಲಸೋಮ ಶ್ರೀರಾಮ ಶ್ರೀರಾಮ
ಸಕಲ ಸುಗುಣಧಾಮ ಶ್ರೀರಾಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೨.೨೦೧೨

Thursday, February 23, 2012

Shri Krishnana Nooraru Geethegalu - 207

ನಾನು ನಾನೆನದಿರೊ

ನಾನು ನಾನೆನದಿರೊ ನರಮನುಜ ನೀನು
ನಾನೆಂದ ಕೆಡುಕುಲದ ಕುರುಹಿಲ್ಲ ಕಾಣ

ಹಲಶಿರದಸುರ ತಾ ಅವನಿಸುತೆಯನು ಬಯಸೆ
ಪಟ್ಟವದು ಚಟ್ಟವಾಯ್ತು ಬಲ್ಲೆಯೆನೊ
ನೀನಯ್ಯ ರಾಮಯ್ಯ ನೀಯೆನ್ನ ಗತಿಯೆನಲು
ಎದೆಯೊಳು ಪುಟ್ಟಿದನ ಬಲ್ಲೆಯೆನೊ (೧)

ನಾನೆ ಈಶ್ವರನೆಂದ ನಶ್ವರನ ಕೇಕೆಯದ
ಮಥುರೆಯೊಳು ಮಡುಹಿದನ ಬಲ್ಲೆಯೆನೊ
ಶ್ರೀಹರಿಯೆ ಶರಣೆನಲು ಕುಂತಿಸುತರೈವರನು
ದ್ವಾಪರದಿ ಸಲಹಿದನ ಬಲ್ಲೆಯೆನೊ (೨)

ನಾನು ನಾನಲ್ಲವೊ ನೀನು ನೀನಲ್ಲವೊ
ನಾ-ನೀನು ಅವನೊಳಗೆ ಬಲ್ಲೆಯೆನೊ
ನಾನೆನದೆ ನೀನೆ ಎಲ್ಲವೆನುವರ ಕಾವ
ಶ್ರೀನಿವಾಸ ವಿಠಲ ತಾ ಬಲ್ಲೆಯೆನೊ (೩)

ನಾನು ನಾನೆನದಿರೊ ನರಮನುಜ ನೀನು
ನಾನೆಂದ ಕೆಡುಕುಲದ ಕುರುಹಿಲ್ಲ ಕಾಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೨.೨೦೧೨

Wednesday, February 15, 2012

Shri Krishnana Nooraru Geethegalu - 206

ಹೇಳಿ ಪೋಗೆಲೊ

ಹೇಳಿ ಪೋಗೆಲೊ ಮುದ್ದುರಂಗ
ಪೋಗುವೆ ಎಲ್ಲಿಗೆ ಅದಾರ ಸಂಗ

ಪೇಳಲಾರೆನೊ ರಂಗ ತಾಳಲಾರೆನೊ ಕೃಷ್ಣ
ಗೋಕುಲ ನೆರೆಯಾಡೊ ಗುಸುಗುಸು ಪಿಸುಮಾತ

ಮಾಯಾವಿ ನೀನಂತೆ ಮಾವನ ಕೊಂದೆಯಂತೆ
ಮಥುರೆಯ ಸೆರೆಯೊಳು ಜನಿಸಿದೆಯಂತೆ
ಮೊಲೆಯೊಳೆ ಹೈನವ ಹೀರುವ ಚೋರನಂತೆ
ಮುಗುದೆಯ ಮನಕದಿವ ಮಾರನಂತೆ (೧)

ಪಾಂಡವ ಪ್ರಿಯನಂತೆ ಪಾದ ಪದುಮನಂತೆ
ರವಿಶಶಿ ನೇತ್ರನು ನೀನಂತೆ
ಮಾತೆಗೆ ಮೂಜಗವ ಬಾಯೊಳು ತೋರಿದ
ಅಖಿಲಾಂಡ ಅದ್ಭುತ ನೀನಂತೆ (೨)

ರಾಮನಾಗಿದ್ದೆಯಂತೆ ರಘುಕುಲಸೋಮನಂತೆ
ದ್ವಾರಕೆಯೊಳು ಧರ್ಮ ದೇವನಂತೆ
ದಶದೊಳು ಧರೆಕಾವ ಶ್ರೀನಿವಾಸ ವಿಠಲನಂತೆ
ಶರಣಾಗತ ಜನರ ಕಾವೆಯಂತೆ (೩)

ಹೇಳಿ ಪೋಗೆಲೊ ಮುದ್ದುರಂಗ
ಪೋಗುವೆ ಎಲ್ಲಿಗೆ ಅದಾರ ಸಂಗ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೨.೨೦೧೨

Saturday, February 4, 2012

Shri Krishnana Nooraru Geethegalu - 205

ಶ್ರೀಚರಣ ಸೇವೆ

ಹರಿ ನಿನ್ನ ಸಕಲವನು ಚರಾಚರಗಳಿಗಿರಿಸೊ
ಶ್ರೀಚರಣ ಸೇವೆಯದ ಎನಗೊದಗಿಸೊ

ಬೇಡುವೆನು ಕಾಮನೆಯು ನೆರವೇರಿಸೈ ಹರಿಯೆ
ನಾಮಸ್ಮರಣೆಯ ಸಿರಿಯ ಎನ್ನೊಳುಳಿಸೊ (೧)

ಖಡ್ಗ ಕಾಂಚಾಣಗಳ ಅವರಿವರಿಗಿಟ್ಟುಬಿಡೊ
ಶ್ರೀಪಾದದರಮನೆಯ ಎನಗೆ ಹರಸೊ (೨)

ಎನ್ನಾರು ಅಸುರರನು ತೊಲಗಿಸೊ ಶ್ರೀಹರಿಯೆ
ಶುದ್ಧಾತ್ಮದಿ ಕರೆವೆ ಬಂದು ನೆಲೆಸೊ (೩)

ಕಾವೇರಿಪಟ್ಟಣದ ಶ್ರೀನಿವಾಸ ವಿಠಲಯ್ಯ
ಹನುಮನ ಪೊರೆದಂತೆ ಧರೆಯ ಸಲಹೊ (೪)

ಹರಿ ನಿನ್ನ ಸಕಲವನು ಚರಾಚರಗಳಿಗಿರಿಸೊ
ಶ್ರೀಚರಣ ಸೇವೆಯದ ಎನಗೊದಗಿಸೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೨.೨೦೧೨

Wednesday, February 1, 2012

Shri Krishnana Nooraru Geethegalu - 204

ಕೃಷ್ಣ ಹೃದಯೆ

ಏನೊ ಸಡಗರ ಇವಳಿಗೆ ಚೆಲುವೆ ಕೃಷ್ಣ ಹೃದಯೆಗೆ
ಮುದ್ದು ಶ್ಯಾಮನ ತೋಳ ಬಳಸಿ ನಾಚಿ ನಿಂತಿಹ ರಾಧೆಗೆ

ಚಿಗರೆ ಚಿತ್ತವು ನಯನದಂಗಳ ನಡುಗುವಧರವು ವದನ ಸುಂದರ
ಹೊಳೆವ ನತ್ತೊಳು ನಗುವ ಚಂದಿರ ರಂಗುಗಲ್ಲದಿ ಸುರಿದು ತಿಂಗಳ (೧)

ಎದೆಯ ಗುಡಿಯೊಳು ಬಯಕೆ ಢವಢವ ವಿರಹ ಯಮುನೆಯ ಮೊರೆತವು
ತೂಗುಮಂಚದಿ ಶೃಂಗಾರ ವೀಣೆಗೆ ಮುರಳಿ ಗಾನದ ಸೆಳೆತವು (೨)

ಎಲ್ಲೋ ಇರಲು ಇವಳ ಮೋಹನ ಎಲ್ಲ ಹೇಳುವ ಕಾತುರ
ಸನಿಹ ಬರಲು ಮೌನ ಕಣಿವೆಯು ಒಲವ ಮಿಲನದ ಆತುರ (೩)

ಎಲ್ಲ ಬಲ್ಲನು ಜಗದ ನಲ್ಲನು ಬರಿದೇ ನಗುವನು ಕೃಷ್ಣನು
ಶ್ರೀನಿವಾಸ ವಿಠಲ ಗೊಲ್ಲನು ರಾಧೆ ಪ್ರಣಯಕೆ ಒಲಿವನು (೪)

ಏನೊ ಸಡಗರ ಇವಳಿಗೆ ಚೆಲುವೆ ಕೃಷ್ಣ ಹೃದಯೆಗೆ
ಮುದ್ದು ಶ್ಯಾಮನ ತೋಳ ಬಳಸಿ ನಾಚಿ ನಿಂತಿಹ ರಾಧೆಗೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೧.೨೦೧೨


Shri Krishnana Nooraru Geethegalu - 203

ಪುಣ್ಯಪಾದ ಕೃಷ್ಣ

ಕೃಷ್ಣ ಮುರಳಿ ಮೋಹನ
ಪಾಲಿಸೆಮ್ಮ ಪಾವನ
ಅಣುರೇಣುತೃಣಮೂಲನೆ
ಸುಖದೊಳಿರಿಸೊ ಜೀವನ

ದುರಿತಗಳನು ಅಳಿಸೊ ಎಮ್ಮ
ಸುಪಥದೊಳು ನಡೆಸೊ
ಸುಕೃತಗಳನು ಹರಸಿ ಕೃಷ್ಣ
ಅಂತರಂಗದಿ ನೆಲೆಸೊ (೧)

ಆದಿ ಯುಗಗಳಿಂದ ಜಗವ
ಪೊರೆದ ಪುಣ್ಯ ಪಾದ ಕೃಷ್ಣ
ಬೇಡುವೆನೊ ಬಿನ್ನಹವು ಎನ್ನದು
ಶ್ರೀನಿವಾಸ ವಿಠಲ ಕಾಯೊ (೨)

ಕೃಷ್ಣ ಮುರಳಿ ಮೋಹನ
ಪಾಲಿಸೆಮ್ಮ ಪಾವನ
ಅಣುರೇಣುತೃಣ ಮೂಲನೆ
ಸುಖದೊಳಿರಿಸೊ ಜೀವನ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೧.೨೦೧೨

Shri Krishnana Nooraru Geethegalu - 202

ಚೆಲುವ ಬೃಂದಾವನದಿ

ಚೆಲುವ ಬೃಂದಾವನದಿ ಒಲವ ರಾಧೆಕೃಷ್ಣ
ನಾಚಿ ಸರಿಯುತಲಿಹಳು ದೂರ ಯಮುನೆ

ಮೇವ ಮರೆತವು ಗೋವು ಕೆಚ್ಚಲನು ಕರುವು
ಕೊರಳ ಕಿರುಗಂಟೆಯೊಳು ದಿವ್ಯಮೌನ
ಗಾನದೊಳು ಲೀನವಿಹ ಗೋಕುಲದ ತಂಗಾಳಿ
ಚಿಗುರುಹೂಗರಿಕೆಗೂ ನವಯೌವ್ವನ (೧)

ರಾಗ ಮರೆತಿದೆ ಮುರಳಿ ಪ್ರೇಮ ನೈದಿಲೆಯರಳಿ
ಒಂಟಿಯಾಗಿದೆ ವೀಣೆ ತೂಗುಮಂಚ
ನಯನ ನಯನವು ಬೆರೆತ ಒಲವ ಹೃದಯದ ಬೆಸೆತ
ಮುಗುದೆ-ಮಾಧವರೊಳಗೆ ಪ್ರೇಮಕ್ರೌಂಚ (೨)

ರಾಧೆ ವಿರಹದ ಕರೆಗೆ ಕೃಷ್ಣ ಮೊರೆಯುತಲಿರಲಿ
ಚೆಲುವ ಬೃಂದಾವನದಿ ಒಲವ ಮಿಲನ
ಅಷ್ಟಮಹಿಷಿರೊಡೆಯ ಶ್ರೀನಿವಾಸ ವಿಠಲಯ್ಯ
ಇರುವಡೆಯೆ ಸುಖಸರಸ ಪ್ರೀತಿಚಲನ (೩)

ಚೆಲುವ ಬೃಂದಾವನದಿ ಒಲವ ರಾಧೆಕೃಷ್ಣ
ನಾಚಿ ಸರಿಯುತಲಿಹಳು ದೂರ ಯಮುನೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೧.೨೦೧೨