Wednesday, February 1, 2012

Shri Krishnana Nooraru Geethegalu - 202

ಚೆಲುವ ಬೃಂದಾವನದಿ

ಚೆಲುವ ಬೃಂದಾವನದಿ ಒಲವ ರಾಧೆಕೃಷ್ಣ
ನಾಚಿ ಸರಿಯುತಲಿಹಳು ದೂರ ಯಮುನೆ

ಮೇವ ಮರೆತವು ಗೋವು ಕೆಚ್ಚಲನು ಕರುವು
ಕೊರಳ ಕಿರುಗಂಟೆಯೊಳು ದಿವ್ಯಮೌನ
ಗಾನದೊಳು ಲೀನವಿಹ ಗೋಕುಲದ ತಂಗಾಳಿ
ಚಿಗುರುಹೂಗರಿಕೆಗೂ ನವಯೌವ್ವನ (೧)

ರಾಗ ಮರೆತಿದೆ ಮುರಳಿ ಪ್ರೇಮ ನೈದಿಲೆಯರಳಿ
ಒಂಟಿಯಾಗಿದೆ ವೀಣೆ ತೂಗುಮಂಚ
ನಯನ ನಯನವು ಬೆರೆತ ಒಲವ ಹೃದಯದ ಬೆಸೆತ
ಮುಗುದೆ-ಮಾಧವರೊಳಗೆ ಪ್ರೇಮಕ್ರೌಂಚ (೨)

ರಾಧೆ ವಿರಹದ ಕರೆಗೆ ಕೃಷ್ಣ ಮೊರೆಯುತಲಿರಲಿ
ಚೆಲುವ ಬೃಂದಾವನದಿ ಒಲವ ಮಿಲನ
ಅಷ್ಟಮಹಿಷಿರೊಡೆಯ ಶ್ರೀನಿವಾಸ ವಿಠಲಯ್ಯ
ಇರುವಡೆಯೆ ಸುಖಸರಸ ಪ್ರೀತಿಚಲನ (೩)

ಚೆಲುವ ಬೃಂದಾವನದಿ ಒಲವ ರಾಧೆಕೃಷ್ಣ
ನಾಚಿ ಸರಿಯುತಲಿಹಳು ದೂರ ಯಮುನೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೧.೨೦೧೨

No comments:

Post a Comment