Thursday, February 23, 2012

Shri Krishnana Nooraru Geethegalu - 207

ನಾನು ನಾನೆನದಿರೊ

ನಾನು ನಾನೆನದಿರೊ ನರಮನುಜ ನೀನು
ನಾನೆಂದ ಕೆಡುಕುಲದ ಕುರುಹಿಲ್ಲ ಕಾಣ

ಹಲಶಿರದಸುರ ತಾ ಅವನಿಸುತೆಯನು ಬಯಸೆ
ಪಟ್ಟವದು ಚಟ್ಟವಾಯ್ತು ಬಲ್ಲೆಯೆನೊ
ನೀನಯ್ಯ ರಾಮಯ್ಯ ನೀಯೆನ್ನ ಗತಿಯೆನಲು
ಎದೆಯೊಳು ಪುಟ್ಟಿದನ ಬಲ್ಲೆಯೆನೊ (೧)

ನಾನೆ ಈಶ್ವರನೆಂದ ನಶ್ವರನ ಕೇಕೆಯದ
ಮಥುರೆಯೊಳು ಮಡುಹಿದನ ಬಲ್ಲೆಯೆನೊ
ಶ್ರೀಹರಿಯೆ ಶರಣೆನಲು ಕುಂತಿಸುತರೈವರನು
ದ್ವಾಪರದಿ ಸಲಹಿದನ ಬಲ್ಲೆಯೆನೊ (೨)

ನಾನು ನಾನಲ್ಲವೊ ನೀನು ನೀನಲ್ಲವೊ
ನಾ-ನೀನು ಅವನೊಳಗೆ ಬಲ್ಲೆಯೆನೊ
ನಾನೆನದೆ ನೀನೆ ಎಲ್ಲವೆನುವರ ಕಾವ
ಶ್ರೀನಿವಾಸ ವಿಠಲ ತಾ ಬಲ್ಲೆಯೆನೊ (೩)

ನಾನು ನಾನೆನದಿರೊ ನರಮನುಜ ನೀನು
ನಾನೆಂದ ಕೆಡುಕುಲದ ಕುರುಹಿಲ್ಲ ಕಾಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೨.೨೦೧೨

No comments:

Post a Comment