Sunday, January 6, 2013

Shri Krishnana Nooraru Geethegalu - 329

ಸಾರ್ಥಕ

ಬೃಂದಾವನದೊಳು ಚೆಂದದ ಹೂವ್ವನಾಯ್ದು ಅಂದದ ಮಾಲೆ ಕಟ್ಟೆ ಪ್ರಾಣಸಖಿ
ಮಿಲನಕೆ ಬರುವನೆ ಮಾಧವ ಸಂಜೆಗೆ ಅರ್ಪಿಸಿ ನಲಿಯುವೆ ಇಂದುಮುಖಿ

ಮಲ್ಲಿಗೆ ಹೂವದು ಮೆಲ್ಲನೆ ನಗುತಿದೆ ಜಾಜಿಯು ತಬ್ಬಿದೆ ಚಪ್ಪರವ
ಸೇವಂತಿಗೆ ತಾ ಸಡಗರ ಪಡುತಿದೆ ಸಂಪಿಗೆ ಕಾದಿದೆ ಕೊಳಲಿಂಪಿಗೆ (೧)

ಎನ್ನೆದೆ ಬನದಲಿ ವಿರಹದ ಮೊಗ್ಗದು ಅರಳಿ ತಾ ಚೆಲ್ಲಿದೆ ಆಸೆಗಂಧವ
ಕೇದಗೆ ತಾನು ಕೆರಳಿಸಿ ಬಯಕೆಯ ಸೇರು ನೀ ಎನ್ನುತ ಪುಣ್ಯಗಂಧನ (೨)

ಕೃಷ್ಣನ ತೋಟದ ಹೂಗಳೆ ನಾವೆಲ್ಲ ಅವನೊಲುಮೆಯೊಳರಳಿ ನಿಂತಿಹೆವು
ಶ್ರೀನಿವಾಸ ವಿಠಲನ ಸನಿಹವ ಸೇರಲು ಎಮ್ಮಯ ಜೀವನ ಸಾರ್ಥಕವು (೩)

ಬೃಂದಾವನದೊಳು ಚೆಂದದ ಹೂವ್ವನಾಯ್ದು ಅಂದದ ಮಾಲೆ ಕಟ್ಟೆ ಪ್ರಾಣಸಖಿ
ಮಿಲನಕೆ ಬರುವನೆ ಮಾಧವ ಸಂಜೆಗೆ ಅರ್ಪಿಸಿ ನಲಿಯುವೆ ಇಂದುಮುಖಿ

ರಚನೆ: ಎನ್ಕೆ, ಭದ್ರಾವತಿ / ೦೬.೦೧.೨೦೧೩

No comments:

Post a Comment