Wednesday, January 2, 2013

Shri Krishnana Nooraru Geethegalu - 327

ಎನ್ನ ಕೃಷ್ಣ

ಮೂಡಣದಿ ಮೂಡಿಬಹ ರವಿಯಾತ್ಮದೊಳಗಿನ ಪ್ರಭೆಯ ಕಿರಣವು ನೀನು ಎನ್ನ ಕೃಷ್ಣ
ಜಗವ ಮಸುಕಿದಾ ಗಾಢಾಂಧ ನಿಶೆಯದನು ತೊಳೆವ ಬೆಳಕಿನ ಜಲವು ಎನ್ನ ಕೃಷ್ಣ

ಚಿಗುರಿದ ಗಿಡಮರದ ಕೊಂಬೆರೆಂಬೆಗಳಲ್ಲಿ ನಗುವ ಹೂವಿನ ಕೊಡೆಯು ಎನ್ನ ಕೃಷ್ಣ
ಮರಿಗೆ ಗುಟುಕೀಯುತಿಹ ತಾಯಿಹಕ್ಕಿಯ ಕೊರಳ ತೃಪ್ತಿಗಾನವು ನೀನು ಎನ್ನ ಕೃಷ್ಣ

ಹರಿವ ಜುಳುಜುಳು ನದಿಯ ಮಡಿಲಿನೊಳಗಾಡುವ ಪುಟ್ಟಮೀನಿನ ಹೆಜ್ಜೆ ಎನ್ನ ಕೃಷ್ಣ
ಕಂದ ನೀ ಬಾಯೆನುತ ನದಿಯ ಅಪ್ಪುವ ಕಡಲ ಮಾತೆಮಮತೆಯು ನೀನು ಎನ್ನ ಕೃಷ್ಣ

ಸಂಜೆ ಮನೆಯೊಸ್ತಿಲಲಿ ನಗುವ ಮಾವಿನ ತಳಿರು ಚೆಂದದ ರಂಗೋಲಿ ಎನ್ನ ಕೃಷ್ಣ
ಚಿತ್ರದ ಗಡಿಗೆಯೊಳು ನೊರೆಹಾಲ ಮಳೆಗರೆದ ಗೋವಿನ ಧನ್ಯತೆಯು ಎನ್ನ ಕೃಷ್ಣ

ಶೃಂಗಾರಕೋಣೆಯಲಿ ನಗುವ ಪ್ರಣತಿಯ ದಿವ್ಯ ಒಲುಮೆಯ ದೀಪ್ತಿಯು ಎನ್ನ ಕೃಷ್ಣ
ತೂಗುಮಂಚದಿ ತಾನು ಒಂಟಿಯೆಂಬ್ಬೇಸರದಿ ಕಾವ ವೀಣೆಯ ವಿರಹ ಎನ್ನ ಕೃಷ್ಣ

ಗೋಧೂಳಿ ಕಾಲದಲಿ ಗೋಕುಲದ ಹಾದಿಯಲಿ ಮೂಡುವ ಶ್ರೀಹೆಜ್ಜೆ ಎನ್ನ ಕೃಷ್ಣ
ಬರುವನೊ ಬಾರನೊ ಎನುತ ಯಮುನೆಯ ದಡದಿ ನಡೆವವಳ ಕಾಲ್ಗೆಜ್ಜೆ ಎನ್ನ ಕೃಷ್ಣ

ರಚನೆ: ಎನ್ಕೆ, ಭದ್ರಾವತಿ / ೦೨.೦೧.೨೦೧೩

No comments:

Post a Comment