Wednesday, January 9, 2013

Shri Krishnana Nooraru Geethegalu - 331

ನೀನಿರದೆ ನಾನೇನೊ

ನೀನಿರದೆ ನಾನೇನೊ ಒಲವಿನೊಡಯನೆ ಕೃಷ್ಣ
ನೀನಿರದೆ ಈ ಹೃದಯ ಬರಿದು ಬರಿದೊ

ಕಂಗಳಲಿ ಕಾತರದ ಚಿಗರೆಗಳು ಓಡುತಿವೆ
ಎನ್ನೆದೆಯ ಬನದೊಳಗೆ ಅತ್ತಿತ್ತ ಸುತ್ತ
ಒಳಗೊಳಗೆ ನೋಯುತಿವೆ ಬರುವನಿರೆ ಎನುತಲಿವೆ
ಕಾಯಿಸದಿರೊ ದೊರೆಯೆ ನಿನ್ನೊಳಗೆ ಚಿತ್ತ (೧)

ನಾನು ಬಿದರಿನ ಕೊಳಲೊ ನೀನೆನ್ನ ಒಳಉಸಿರು
ಕೊರಡೆನ್ನ ಕೊನರಿಸೊ ಹೇ ಜೀವರಾಗ
ಒಲುಮೆ ಸರಿಗಮ ನುಡಿಸೊ ಶ್ರೀನಿವಾಸ ವಿಠಲನೆ
ಒಂಟಿತನ ಸುಡುತಲಿದೆ ಬಾರೊ ನೀ ಬೇಗ (೨)

ನೀನಿರದೆ ನಾನೇನೊ ಒಲವಿನೊಡಯನೆ ಕೃಷ್ಣ
ನೀನಿರದೆ ಈ ಹೃದಯ ಬರಿದು ಬರಿದೊ

ರಚನೆ: ಎನ್ಕೆ, ಭದ್ರಾವತಿ / ೧೦.೦೧.೨೦೧೩

1 comment:

  1. ನೀನಿರದೆ ಎನ್ನುವಲ್ಲಿಯ ಅನನ್ಯ ಅರ್ಪಣಾ ಭಾವ ಸೆಳೆಯಿತು.

    "ಕೊರಡೆನ್ನ ಕೊನರಿಸೊ ಹೇ ಜೀವರಾಗ" ವ್ಹಾವ್

    ReplyDelete