Thursday, May 23, 2013

Shri Krishnana Nooraru Geethegalu - 339

ಶ್ರೀನಿವಾಸ ಸುಖ

ವಸುಧೆಯೊಳಾ ವಾಸುದೇವನ ಭಜಿಪ
ನರನಿಗೆ ಇಹದೊಳೆ ಸಕಲ ಸುಖ

ಗೋವಿಂದ ಹರಿ ಗೋವಿಂದ ರಘುಕುಲತಿಲಕ ಶ್ರೀಗೋವಿಂದ
ಗೋವಿಂದ ಹರಿ ಗೋವಿಂದ ಶ್ರೀರಾಮಚಂದ್ರ ಶ್ರೀಗೋವಿಂದ

ಪಂಚಭೂತದಿ ರಚಿಸಿ ಉಸಿರ ಒಳಗಿಟ್ಟಾ
ದೇವನ ಸ್ಮರಣೆಯೇ ಸರ್ವ ಸುಖ

ಗೋವಿಂದ ಹರಿ ಗೋವಿಂದ ಗೋಕುಲವಾಸ ಶ್ರೀಗೋವಿಂದ
ಗೋವಿಂದ ಹರಿ ಗೋವಿಂದ ಕೇಶವ ಕೃಷ್ಣ ಶ್ರೀಗೋವಿಂದ

ಅವನೆಂಬೊ ಕಡಲೊಳು ನೀನೆಂಬೊ ಗುರಿಹುಡುಕೊ
ಶ್ರೀನಿವಾಸ ವಿಠಲನೆ ಜಗದ ಸುಖ

ಗೋವಿಂದ ಹರಿ ಗೋವಿಂದ ತಿರುಮಲವಾಸ ಗೋವಿಂದ
ಗೋವಿಂದ ಹರಿ ಗೋವಿಂದ ಶ್ರೀಶ್ರೀನಿವಾಸ ಗೋವಿಂದ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೫.೨೦೧೩

Tuesday, May 21, 2013

ಜೀವ್ನಾ ಅಂದ್ರೆ

ಜೀವ್ನಾ ಅಂದ್ರೆ ಗೊತ್ತಿಲ್ದಿದ್ರೆ
ತುಂಬ್ತುಂಬಾನೆ ರಿಸ್ಕಿ

ಸೋಡಾ ನೀರು ಹದ್ವಾಗಿದ್ರೆ
ರುಚಿಯಾಗಿರುತ್ತೆ ವಿಸ್ಕಿ

ನಂ ಕಾಲ್ಮೇಲೆ ನಾವಿದ್ರೂನು
ತಗೋಳಿ ಕಂಡೋರ್ ಟಿಪ್ಸು

ಉಪ್ಪಿನ್ಕಾಯಿ ನಾಲ್ಗೆಗ್ರುಚಿ
ಇದ್ರೂ ಗೋಡಂಬಿ ಚಿಪ್ಸು

ಅಚ್ಚರಿ ಅಲ್ವೆ ವಟ್ಟೇಗ್
ಕುಡುದ್ರೆ ತಲೆ ತಿರ್ಗುತ್ತೆ ಗಿರಿಗಿರ

ಮೆದ್ಳು ಮೆದುವು ನಾಲ್ಗೆ ಹಗುರ
ಏನ್ ಮಾಯೆನೊ ಹರಿ ಹರ

ಹೆಂಡ್ತಿಮಕ್ಳು ಮನೆಮಠ
ಮರ್ತೋಯ್ತದೆ ಒಂದ್ ಕ್ಷಣ

ಇಳ್ದ ಮ್ಯಾಲೆ ಕುಡೀದೆ ಇದ್ರೆ
ರಾಮುನ್ ಮೈಯ್ಯಾಗ್ ರಾವ್ಣ..!

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೯.೨೦೧೨.

ಚಿಗುರು ತಾಯಿ ಹಣ್ಣೆಲೆ ಮತ್ತೆ ಮತ್ತೆ

ಆಲಿಸು ಕಿವಿಯಿಟ್ಟು ಬುವಿಯೆದೆಗೆ
ಸವರಿ ಮೃದುವಾಗಿ ಮೊದಲ ಬಸಿರ
ಒಳ ಮಿಡುಕುತಿಹ ಬೀಜ ಭ್ರೂಣ
ದೊಳ ಜೀವ ಕಣ್ಣ
ರೆಪ್ಪೆ ತೆರೆಯುತಿಹ ಸದ್ದು

ಕೈಯೆತ್ತಿ ಪ್ರಾರ್ಥಿಸುತಿದೆ ತಾಯಿಮರ
ನೋವಿರದ ಹೆರಿಗೆಗೆ
ತನ್ನೊಡಲಿಂದುದುರಿ ತಾಯಾದ
ಬೀಜದ

ಬುಡದಲಿ ಗೊಬ್ಬರವಾಗುತಿಹ ಹಣ್ಣೆಲೆ
ಗೆ ವಂಶವುದ್ಧಾರದ ಆಸೆ ಅಸಂಖ್ಯ
ಎದೆಬಯಕೆ ಕಣ್ಮುಚ್ಚುವ ಮೊದಲು
ಕಾಣಲು ಅಂಗಳದೊಳಾಡುವ ಚಿಗುರ
ಸಂಭ್ರಮ

ಮರುಕವಿರದ ಜೀವನಚಕ್ರದುರುಳಿನ ನಿಯತಿ
ಚಿಗುರಿನ ಸಡಗರವ ಕರುಣಿಸಿದೆ ಹಣ್ಣೆಲೆಗೆ
ಎಂಥಾ ಅದ್ಭುತದಚ್ಚರಿ ಸೃಷ್ಟಿ
ಚಿಗುರು ತಾಯಿ ಹಣ್ಣೆಲೆ ಮತ್ತೆ ಮತ್ತೆ

ಪಾರಿಜಾತದ ಹೂ

ತಡವಾಯಿತೇಕೊ ಎನ್ನ
ಚೆಲುವ ಗೊಲ್ಲ
ರಾಧೆ ಮಾತಿಗೆ ಕೃಷ್ಣನವನು
ಬರಿದೇ ನಗುವ ನಲ್ಲ

ಸನಿಹವಿದ್ದರೂ ರಾಧೆಯ
ವಳಿಗೆ ತೀರದಾವುದೊ ನೋವು
ಗಂಧವಾಡಿದೆ ಅವನ ಮೈಯ್ಯೊಳು
ಪಾರಿಜಾತದ ಹೂವು

ಒಂದು ಹನಿ

ಒಂದು ಹನಿ

ಅವಳ ನೆನಪೆಂದರೆ ನನಗೆ
ಖಾಲಿ ಹೃದಯ
ಮತ್ತು
ಒಂದೆರಡು ಕಣ್ಣ ಹನಿ...!

ನೀನಿರದ ಪ್ರೀತಿಯದು

ಶ್ರಾವಣದ ಸಂಜೆಯೊಳು
ನಿನ್ನ ನೆನಪಿನ ಮಳೆಯು
ಧೋ ಎಂದು ಎನ್ನೆದೆಗೆ
ಸುರಿಯುತಿಹುದು...

ನೀನಿರದ ಪ್ರೀತಿಯದು
ನೋವಿನರಮನೆ ಗೆಳತಿ
ಕಣ್ಣೀರು ಮಧುಪಾತ್ರೆ
ಸೇರುತಿಹುದು...!

ಒಂದು ಹನಿ

ಈಚೀಚೆಗೆ ಈ
ಶ್ರಾವಣದ ಮಳೆಯೇ ಹೀಗೆ

ಶಾಲಾ ಶುಲ್ಕದ ಎರಡನೆ ಕಂತು
ಕಟ್ಟಲು ಸಮಯಕ್ಕೆ ಬಾರದ
ವೇತನ ಹೆಚ್ಚಳದ ಬಾಕಿಯ ಹಾಗೆ...!!

ಒಂದು ಹನಿ

ಅಧರದೊಳಗೆ ಅಧರ
ಬೆಸೆದಿರೆ ರಾಧೆ-ಮಾಧವ
ವೃಂದಾವನದೊಳು ಮೌನ

ಮಧುರಕ್ಷಣವನು ಕಂಡು ಕೋಗಿಲೆ
ಹಾಡ ಮರೆತಿದೆ ಗಾನ..!

ಒಂದು ಹನಿ

ದಾಹ ರಾಧೆ ಎಂದ ಕೃಷ್ಣ
ಸಿಹಿಮಜ್ಜಿಗೆ ಬಟ್ಟಲ ತಂದಿಟ್ಟಳು

ನಗುವ ಕೃಷ್ಣನ ತುಟಿಗಳಲ್ಲಿನ
ಪ್ರೇಮದಾಹವ ಮರೆತಳು...!

ಒಂದು ಹನಿ

ಕೃಷ್ಣನಿಗೆ ರಾಧೆಯೊಬ್ಬಳೇ
ವೃಂದಾವನದೊಳು

ಚಂದ್ರನಿಗೋ ಒಳಗೊಳಗೆ ಖುಷಿ
ತನ್ನ ಸುತ್ತ ಎಷ್ಟೊಂದು ತಾರೆಯರು...!

ಒಂದು ಹನಿ

ನಿನಗೆ ಕೈಕೊಟ್ಟವಳ ಕಥೆ ಹೇಳಯ್ಯ
ಎಂದೆ
ಸೂರ್ಯ ಧಗಧಗಿಸಿದ...
ಬಾನೇ ಕಣ್ಣೀರಾಗಿ
ಬುವಿಗೆ ಸುರಿದ...!

ಒಂದು ಹನಿ

ಭಗ್ನಪ್ರೇಮಿಯೊಬ್ಬನ ಹೃದಯ
ಇಣುಕಿ ನೋಡಿದೆ
ಕೈಕೊಟ್ಟ ಹುಡುಗಿ ಇನ್ನೊಬ್ಬನ
ಜೊತೆ ಸಲ್ಲಾಪದಲ್ಲಿದ್ದಳು...!

ಒಂದು ಹನಿ

ಅವಳು ನಕ್ಕಳು
ನಾನು ನಕ್ಕೆ

ನಮ್ಮ ಮದುವೆಯಾಯ್ತು

ಅವಳು ಈಗಲೂ ನಗುತ್ತಲೇ ಇದ್ದಾಳೆ
ನಾನು ಮತ್ತೊಮ್ಮೆ ನಗಬಾರದೆಂದು ನಿರ್ಧರಿಸಿದ್ದೇನೆ...!

ಒಂದು ಹನಿ

ಒಂದು ಹನಿ

ಪ್ರೇಮಕವಿ ಹೇಳಿದ:
ಹರೆಯದುಡುಗಿಯರೆ ಹುಡುಗರ
ಪ್ರೇಮಾಪಘಾತಕ್ಕೆ ಕಾರಣ..

ಅದಕ್ಕೇ ಇರಬಹುದು
ಒಮ್ಮೊಮ್ಮೆ ತುಂಬಿಹೋಗಿರುತ್ತೆ
ಗಡ್ಡದುಡುಗರ ವಿರಹಗೀತೆಗಳಿಂದ
’ಕನ್ನಡ ಬ್ಲಾಗ್’ ನ ಆವರಣ.

ಖಾಲಿ ಮಧುಪ್ರಾತ್ರೆ

ಗೊತ್ತು ಗೆಳತಿ,
ಈಗ ನಡುರಾತ್ರಿ ಸರಹೊತ್ತು
ಚಂದ್ರ ತಾರೆಯರಿಗೂ ಜೊಂಪು ತೂಕಡಿಕೆ
ನಿನ್ನರಮನೆಯ ಅಂತಪುರದೊಳೀಗ
ರಂಗೇರುತಿದೆ ಮತ್ತು ಮಿಥುನ ಮದನಕೇಕೆ...

ನಾನಿಲ್ಲಿ ನಿನ್ನರಮನೆಯ ಸನಿಹದ
ಪಾಳುಗೋಡೆಗೊರಗಿದ ಚಿತ್ರ
ಖಾಲಿ ಮಧುಪಾತ್ರೆಯೊಡನೆ...

ನಿದಿರೆಯೊಡನೆ ಯುದ್ಧ ಹೂಡಿ
ನಿನ್ನ ಕಣ್ಣಂಚಿನ ಒಂದೇ ಕೊನೆನೋಟ
ದ ನಿರೀಕ್ಷೆಯಲ್ಲಿದ್ದೇನೆ...

ನಕ್ಷತ್ರದ ಹುಡುಗಿ

ಕನಸು ಕಂಗಳ ಹುಡುಗಿ ನೀನು
ಆಸೆ ಆಗಸ ವಿಸ್ತಾರಿ...

ಚಂದ್ರನೊಡನೆ ನಿನ್ನ ಪ್ರೇಮವಿದೆ
ಎಂದಿದ್ದೇನೊ ಸರಿ
ಎನ್ನನಗಲಿ ಅವನ ಸನಿಹ ನಕ್ಷತ್ರ
ವಾಗಿ ಬಿಡುವುದೇ ಈ ಪರಿ...!!

ನಿರೀಕ್ಷೆ

ನಗುವ ಚಂದ್ರನ ಸನಿಹ ನಕ್ಷತ್ರವಾದವಳೆ
ಎನ್ನೆದೆಯ ಕಡಲ ಮೊರೆತ ಕೇಳದೇನೆ..?

ಕೈಲಿಡಿದ ಮಧುಪಾತ್ರೆಯೊಳು ನಿನ್ನ ನೆನಪಿನ ಬಿಂಬ
ಬರುವೆಯೆಂಬುದೇ ನಿರೀಕ್ಷೆ ಎನ್ನ ಕಣ್ಣೀರಿನ ತುಂಬ...

ಹರಿದೆಸೆದ ಸಂಜೆಚಿತ್ರ

ವ್ಯಾಪಾರ ಮುಗಿದ ಸಂತೆ
ಈ ಖಾಲಿ ಸಂಜೆ

ಪಡುವಣದಲಿ ಸೂರ್ಯನ ಹೆಣ
ಕೊಲೆಯೆಂಬ ಗುಸುಗುಸು

ಹಕ್ಕಿಪಕ್ಕಿಗೂ ಗಡಿಬಿಡಿ
ಗೂಡು ಸೇರುತ್ತಿವೆ
ಮರಿಮಕ್ಕಳ ಆತಂಕ

ಪುಕ್ಕಲು ಚಂದ್ರನೂ ಇತ್ತ ಸುಳಿದಿಲ್ಲ
ತಾರೆಗಳು ಕೂಡಾ

ಯಮುನೆಗೋ ಗಾಬರಿ
ಸುದ್ದಿ ಮುಟ್ಟಿಸೆ ದೌಡು
ಯಾರಿಗೋ ಗೊತ್ತಿಲ್ಲ

ಯಾವುದೀ ಕಾವ್ಯಸೂತ್ರ
ಬರೆದು ಹರಿದೆಸೆದ ಸಂಜೆಚಿತ್ರ

ನವಿಲುಗರಿ

ಸುಳ್ಳು ಮೊರೆ

’ಎಮ್ಮ ವಸ್ತ್ರಗಳ ಕೊಡೊ ಕೃಷ್ಣ’
ಚೋರ ಗೊಲ್ಲಗೆ ಕೊಳದೊಳಗವಿತ
ಬೆತ್ತಲೆಗೋಪಿಕೆಯರ ಸುಳ್ಳು ಮೊರೆ

’ಕೊಡದಿರೊ, ಹೀಗೇ ಸನಿಹದೊಳಿರೊ’
ಎಮ್ಮ ಹೃದಯದ ದೊರೆ
ಎನುವುದವರ ಮನದಾಳದ ಕರೆ

ನವಿಲುಗರಿ

ಹುಸಿಯನಾಡದಿರೆ ರಾಧೆ
ರಾತ್ರಿಯೆಲ್ಲ ಅವ ಕನಸಿನಲಿ
ಕಾಡಿದನೆಂದು
ಕಾರಣ
ನಿದಿರೆಯಿರದೆ ನಯನ
ಮತ್ತು ಗಲ್ಲ ಕೆಂಪುಕೆಂಪೆಂದು

ಉಯ್ಯಾಲೆಯೊಳಗವ
ಮರೆತುಹೋದ ನವಿಲುಗರಿ
ಖಾಲಿ ಮೊಸರಗಡಿಗೆ
ನಸುನಗುತಿವೆ...

ಸಂಭ್ರಮ

ಸಂಜೆಯಲೇ ನಿನ್ನ ಕಂಗಳು
ಚಂದ್ರ ತಾರೆಯರ ಹುಡುಕು
ವಾಗಲೆ ಅಂದುಕೊಂಡೆ
ಇಂದು ವೃಂದಾವನದಲಿ
ವೇಣು-ವೀಣೆ ಜುಗಲ್ಬಂಧಿ
ಅವನ ತೋಳೊಳು ನೀನು
ನಿನ್ನೊಳು ಅವನು

ನಾಚಿದಳು

ಹರಿವ ಯಮುನೆ
ಯ ಕೇಳಿದೆ
ಏನಿಂದು ಇನಿತು ಸಡಗರ
ನಾಚಿದಳು ಮತ್ತು
ಉತ್ತರವೇಳದೆ
ದುಡುದುಡನೆ ಓಡಿದಳು
ವೃಂದಾವನದೊಳು
ಸಂಜೆಯಾಗುತ್ತಿತ್ತು

ಪಾಂಚಾಲಿ ಸ್ವಗತ

ಒಪ್ಪುತ್ತೇನೆ ಧರ್ಮಜ
ಇದ್ದಿರಬಹುದು ನಂಬುಗೆ ನಿನಗೆ
ಕೃಷ್ಣ ಕಾವನೆಂಬ ಸ್ಥೈರ್ಯ
ಪಾರ್ಥನ ಗುರಿ ತಪ್ಪದಮೋಘ ಬಿಲ್ಲು
ಭೀಮನ ತೋಳ್ತೊಡೆ ಬಲ
ಹಣಿದು ಕೌರವ ಕುಲ ಕೇಕೆ
ಪಗಡೆಯಾಟ ಗೆಲುವೆನೆಂಬ

ಹೇಳು, ಅದಾವ ಮಾಯೆಯ ಮಂಕು
ಗಂಡೆಂಬ ವಿಷದಹಂ ತುಂಬಿತ್ತು
ಜೂಜಿಗೊಪ್ಪುವ ಮುನ್ನ
’ಹೆಣ್ಣೇ ಪಣವಾಗುವೆಯಾ?’
ಮಾತಿಗಾದರೂ ಕೇಳಬಹುದಿತ್ತು

ಹನಿಗಳು

ಹನಿಗಳು
ತಲೆಬಾಗಿಲೊಳು
ತೋರಣ
ಹೋಳಿಗೆಯೊಳು
ಸಿಹಿ ಹೂರಣ
ಗೌರಿಗೆ ಮಗಳು
ಮನೆಗೆ ಬರುವ
ಕಾರಣ

-೨-

ಗಣಪತಿ
ಬರುವ ಹಾದಿಯಲಿ
ನಾರದರು ಸಿಕ್ಕಿದ್ದರು
ಬೆಂಗಳೂರ ಕಡೆ
ಕುಡಿವ ನೀರಿನ ಸಮಸ್ಯೆ
ಒಂದೆರಡು ಬಾಟಲ್
ಗಂಗಾಜಲ ಕ್ಯಾರಿ
ಮಾಡು ಅಂದರು

-೩-

ಚೌತಿಚಂದ್ರನ ಎದ್ಯಾಗೊಂದೆ ಕೊರ್ಗು
ಬೆಳದಿಂಗ್ಳ ಪೆನ್ನಾಗ್ ಕವಿತೆ ಬರ್ಯೊ
ಕವ್ಗೋಳು ಕೂಡಾ
ನೋಡ್ತಾಯಿಲ್ಲಾಂತ ತನ್ಕಡೆ ತಿರ್ಗು

-೪-

ಗಂಡಸಿಗ್ಯಾಕ್ರಪ್ಪ
ಗೌರಿ ದು:ಖ
ನಾಳೆ ಹೋದ್ರೆ
ಅತ್ತೆ ಮನೇಲಿ
ಭೂರಿ ಭೋಜನ
ಗಣೇಶ ಸುಖ

ಕಿರುತೊರೆ

ಮೂಲವೆಂಬೊ ತಾಯಮಡಿಲ ಜಿಗಿದು
ಅಂಬೆಗಾಲಲ್ಲರಿದು ಜುಳುಜುಳು ಕವಿತೆ
ಅಣುಅಣು ನೀರಾಗುವ ಮಾಯೆ
ಕಿರುತೊರೆಯ ಜೀವದೊರತೆ

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ನಡೆಯಲೇ ಬೇಕು ಇನ್ನು ತೊರೆ
ತೊರೆದಾಗಿದೆ ತಾಯತೊಡೆ
ಆವುದೋ ಊರ ತಿರುವಲಿ ಸೊಂಟ ಬಳುಕಿ
ಬೃಹತ್ ಬಂಡೆಯ ತಲೆಯಿಂದ ಧುಮುಕಿ
ಹರಿದರಿದು ತಿಳಿಯಾಗಿ ನದಿಯಾಗಿ
ಬಣ್ಣದ ಮೀನು, ಸೀಗಡಿ ಮತ್ತು ಕಲ್ಲುಏಡಿಗೂ ತಾಯಾಗಿ
ಜೀವಜೀವದ ದಾಹವಾರಿಸೊ ಗಂಗೆ
ಕೆಲವೊಮ್ಮೆ ಪ್ರೇಮಿಗಳ ಪಾದಕೆ ತಂಪು
ಅವಕಾಶವಿದ್ದಂತೆ ಆಕಾರ ಅದಲುಬದಲು
ತೆಳ್ಳನೆಯ ಸ್ಫಟಿಕದಂತೆ ಒಮ್ಮೆಮ್ಮೆ
ವಜ್ರದಂತೆ ಗಡಸು
ಮರದ ನೆರಳಿದ್ದರೂ ದಂಡೆಯಲಿ
ವಿಶ್ರಮಿಸದಂತೆ
ಕೃಶವಾಗಿ ಸುಡುಬೇಸಿಗೆಗೆ ಮತ್ತೆ
ಮುಖವೊಡ್ಡಿ ಮಳೆಗೆ ಖುಷಿಯಾಗಿ

ನಾನೆಂಬೊ ಪದಕಳೆದು
ಕಡಲ ಗರ್ಭದೊಳ ನಡೆದು
ತೊರೆಯೀಗ ಪರಿಪೂರ್ಣ ಮತ್ತು
ಸ್ಪಷ್ಟ ಹರಿವುದರ ಕಾರಣ

(ಶ್ರೀಪುರುಷೋತ್ತಮ ಬಿಳಿಮಲೆಯವರ ’ಬಂಟಮಲೆಯ ಕಿರುತೊರೆ’ ಓದಿ...)

ಒಂಟಿಮರ..ಬುದ್ಧ ಮತ್ತು ನಾವು

ವಿಶಾಲದೊಳಗೊಂದು ಒಂಟಿ ಮರ
ಬಯಲು ಆಲಯವೆರಡು ತನ್ನೊಳಗೆ ಎನುವಂತೆ

ಹಠಯೋಗಿ ಅನ್ನಿಸೊಲ್ಲ ಕಾರಣ ಮರ
ಮಧ್ಯಾಹ್ನದ ಬಿಡುವಿನಲ್ಲಿ ಧ್ಯಾನಿಸುತ್ತೆ
ಸಂಭ್ರಮಿಸುತ್ತೆ ಕೊಳಲ ಹುಡುಗನ ತುಂಟಾಟಕೆ
ಮತ್ತು ಮಿಡಿಯುತ್ತೆ ಋತುಚಕ್ರದಾಟಕ್ಕೂ...

ಮತ್ತದರಡಿಯಲ್ಲಿ ಆರೋ ನಡೆದುಹೋದ ಪಾದದೆಳೆ
ಶುದ್ಧನಾದ ಬುದ್ಧನವೇ.. ಮರ ಮೌನ ಮತ್ತು ನೆರಳು
ದೂರದಲ್ಲಿ ಕಿತ್ತ ಸಂಕೋಲೆಗೆ ಯಶೋಧರೆಯ ಅಳು

ಸಂಜೆ ಮರದೆದೆಗೆ ಹಿಂತಿರುಗೆ ಹಕ್ಕಿ-ಪಕ್ಕಿ ಮಿಲನ
ಮಾತುಕತೆ ಮಿಥುನ ಮರಿ ಚಿಗುರಿ ಯಾ ಗರಿಯುದುರಿ

ಧ್ಯಾನದಿಂದೆದ್ದು ಮರ ಕಣ್ಣರಳಿಸುತ್ತೆ
ಸಂಜೆ ಸೂರ್ಯನ ಬಣ್ಣಕ್ಕೆ ಮೈಮರೆಯುತ್ತೆ
ಎದೆಗೂಡಿನೊಳಗೆ ಎಷ್ಟೊಂದು ಜೀವಕ್ಕೆ ತಾಯಿಯಾಗುತ್ತೆ
ತನ್ನೊಳಗೆ ತಾನೇ ಅಚ್ಚರಿಯಂಬಂತೆ...

ಮರಕ್ಕೀಗ ಜ್ಞಾನೋದಯ

ಯಾರೋ ಅದರೆಡೆಗೆ ಬರುತ್ತಿರುವಂತೆ
ಬುದ್ಧನೇ...ಇರಬಹುದು ಮರ ಜೀವನ್ಮುಖಿ
ಯಶೋಧರೆ ಶಾಪವಳಿದು ಸುಖಿ...!

Shri Krishna Vachangalu

ನಾಲಗೆಯೊಳನ್ಯವದು ಕುಣಿದಾಡೆ ಕರ್ಣವವು ಕೃಷ್ಣನಿಗೆ ಕಿವುಡಾಗೆ
ನಾಸಿಕವು ಪುಣ್ಯಗಂಧನ ಸೇವಿಸದೆ ಪೋಗೆ ಕಂಗಳವು ಕಣಕಣದೊಳವನ
ಕಾಣದೆ ಕುರುಡಾಗೆ ದೇಹವದು ಆತ್ಮವಿಲ್ಲದ ಗುಡಿಯಾಗೆ ಅಂದಿಗಲ್ಲಿ
ಧರ್ಮವದಳಿದಧರ್ಮದ ರವರವ ಪ್ರಳಯ ನೋಡೆಂದ ಶ್ರೀನಿವಾಸ ವಿಠಲ (021)

ಚಿತ್ತ ಅವನೊಳಗಿಟ್ಟು ಬಿತ್ತು ಬಕುತಿಯ ಬೀಜ
ಬಾಳ ಬೇವಕಹಿಯನು ಕಳೆದು ಮಾವಸಿಹಿಯದನೀವ
ಎನ್ನಾಣೆ ಎನ್ನ ಹರಿದಾಸರಾಣೆ ಶ್ರೀನಿವಾಸ ವಿಠಲ (022)

ಹಸಿವೆಂದು ಬಂದವಗೆ ಅಗುಳ ಮುರಿದುಣಿಸು
ಬಾಯಾರಿದವನ ಬೊಗಸೆ ನೀರಲಿ ತಣಿಸು
ನೋವುಂಡ ನರನವನ ಕಣ್ಣೀರನಳಿಸು
ಜಗಕೆ ನೀನಿಕ್ಕಿದೊಡೆ ನಿನ್ಹನ್ನೆರಡು
ತಲೆಮಾರ ಜಗಕಾವುದು ಶ್ರೀನಿವಾಸ ವಿಠಲ (023)

ಜಗವುಣ್ಣುವನ್ನವನು ಕುಡಿಕೆಯೊಳಡಗಿಸುವನ
ನಡುರಾತ್ರಿಯೊಳೆದ್ದು ಧನವದನು ಎಣಿಸುವನ
ಕುಡಿನೀರಬಾವಿಗೆ ಬೇಲಿಯನು ಕಟ್ಟುವನ
ಹರಿಪಾದವದೂ ಕಾಯದೆಂದ ಶ್ರೀನಿವಾಸ ವಿಠಲ (024)

ಆತ್ಮದೊಳು ನೀನಿರದವನ ಮನೆಯ ಅನ್ನವದು ವಿಷವಯ್ಯ
ನಿನ್ನಿರುವ ಅರಿಯದಂತಾಡುವನ ಮನವೇ ವಿಷವಯ್ಯ
ನೀ ಕೊಡುವ ಮುಕುತಿಯಲ್ಲದೆ ಭವವೇ ಭವಿತವ್ಯ
ವೆನುವನ ನೀನಲ್ಲದೆ ಮತ್ಯಾರು ಕಾವರೊ ಶ್ರೀನಿವಾಸ ವಿಠಲ (025)

ಜಾನಕಿಯ ರೂಪದೊಳು ರಾವಣನ ಕೇಡ ಕಂಡೆಯಾ
ಪಾಂಚಾಲಿ ಕುರುಳಿನೊಳು ಕುರುಜರ ಕೇಡ ಕಂಡೆಯಾ
ಕೃಷ್ಣನ ಕೊಲುವೆನೆಂದ ಕಂಸನ ಕೇಡ ಕಂಡೆಯಾ
ಆರನು ಗೆದ್ದು ಹರಿ ನೀನೇ ಎನುವನ ಅನುಗಾಲ
ಕಾವನೆಮ್ಮ ಶ್ರೀನಿವಾಸ ವಿಠಲ (026)

Shri Krishna Vachanagalu

ತೆಂಗಿನ ತಲೆಯೊಡೆದು ಬಾಳೆತುದಿಯನು ಚಿವುಟಿ ಕಪ್ಪುರ
ಗಿರಿಯುರಿದು ಧಗಧಗ ಧೂಪಹೊಗೆ ಮನವದು ಮುಗಿಯ
ದಿದ್ದೊಡೆ ಹರಿಗೆ ಫಲವೇನೆಂದ ಶ್ರೀನಿವಾಸ ವಿಠಲ (011)

ಮತಿಯ ಮಸುಕಿದೀ ನಿಶೆಯ ಬಡಿದಟ್ಟು ದಿಸೆದಿಸೆಯೊಳು
ಹೊಸ ಅರಿವಿನುಶೆ ಹರಿಬಿಟ್ಟು ಸಹಜದೀ ಕತ್ತಲಮಾಯೆ
ಗೆ ನಂಬುಗೆಯ ಹಣತೆ ಹಚ್ಚಿಟ್ಟೆಂದನೆಮ್ಮ ಶ್ರೀನಿವಾಸ ವಿಠಲ (012)

ಸಂಭವವು ಅಸುರನಬ್ಬರವವನಿಯೊಳು ಸುರತನವದು
ಸುಮ್ಮನಿರೆ ಮತ್ತಾರರಾರ್ಭಟದಾ ಬಲಿಕೇಕೆ ನಿನ್ನೊಳು
ನಂಬಿದೊಡೆ ಕಾವನವ ದಶದೊಳೆಂದ ಶ್ರೀನಿವಾಸ ವಿಠಲ (013)

ಪಕಳೆಗಳರಳಿಸುವವು ಮೊಗ್ಗು ಹಾಡುವವು ಹಕ್ಕಿ ಕೊರಳ
ಕೊಳಲುಲಿದು ತಮ್ಮಾತ್ಮದಾನಂದಕೆ ನೋಡ್ವರ ಕೇಳ್ವರ
ಮನೋಲ್ಲಾಸಪಡುವಚ್ಚರಿಗೆ ಬೆರಗಾದ ಶ್ರೀನಿವಾಸ ವಿಠಲ (014)

ಕೂಸ ಬಸಿರಿನೊಳಗೊಂದು ಕೂಸುದುಸುವಚ್ಚರಿ
ಆಡದ ಬಾಯೊಳಗದುವು ಅಬ್ಬರಿಸಿದಾಕ್ಷಣದಿ
ಕೂಸದರಕೂಸಿನವಸಾನವೆಂದ ಶ್ರೀನಿವಾಸ ವಿಠಲ (015)

ಇಳಿ ಮೊದಲು ನಿನ್ನಾಳಕೆ ಅದರಾಳಕೆ ಅತಳ ಸುತಳ ಪಾತಳಕೆ
ಕದಡು ಹಾಲಾಹಲ ಮುರಿದದರೊಳಗಾರರಸುರರ ಕೋಲಾಹಲ
ನಿಶ್ಚಯವು ಜಯವೆಂದು ನಿನಗಮೃತಬಿಂದು ಶ್ರೀನಿವಾಸ ವಿಠಲ (016)

ಬೇವಸವೇಕೆ ಅಸುವಿಗೆ ವ್ಯಸನವೇಕೆ ವಸುವಿಗೆ ಮಣ್ಣಾಗುವ ಕಸು
ವಿಗೆ ಶತಕೋಟಿಶಿರಗಳಾಳ್ದ ಅವನಿಗೆ ಉತ್ತಮರುಸಿರದಳಿದರೂ
ಯುಗಯುಗದಲಿ ಪುಣ್ಯದೆಸರುಳಿವುದೆಂದ ಶ್ರೀನಿವಾಸ ವಿಠಲ (017)

ಅಷ್ಟದಿಕ್ಕುಗಳಿರ್ಪ ಅವನಿಯನೊಲ್ಲೆನು ಐರಾವತ ಕುಮುದಾಂಜನಾದಿ ಅಷ್ಟದಿಗ್ಗಜಗಳ
ಅಷ್ಟಭೋಗಗಳೆಂಬೊ ನಿಧಿ ನಿಕ್ಷೇಪ ಮತ್ತಲವನು ಒಲ್ಲೆನಯ್ಯ ಅಷ್ಟೈಶ್ವರ್ಯ ಮಂಗಲವ
ಎನ್ನೊಳಡಗಿದ ಅಷ್ಟಮದಗಳ ನೀ ಮುರಿದೊಡೆ ಮತ್ತೆಲ್ಲವುಗಳ ದೊರೆ ನಾನು ಶ್ರೀನಿವಾಸ ವಿಠಲ (018)

ಛಲದೊಳು ಕುರುಜನಾಗು ಬಲದೊಳು ಮಧ್ವ ಪೂರ್ವಾವತಾರಿ
ನಯದೊಳು ದ್ವಾರಕಾಧೀಶನಾಗು ಎಲ್ಲಕು ಮೊದಲು ಕೊಡು
ವಿಕೆಯಲಿ ಕುಂತಿಯ ಹಿರಿಬಸಿರು ನೀನಾಗೆಂದ ಶ್ರೀನಿವಾಸ ವಿಠಲ (019)

ರುಚಿಬಾಳೆ ಉಂಡಂತಿರಲಿ ನೀ ಬರೆದಿದ್ದೊದುಗನಿಗೆ ಕುಡಿದಂತೆ
ಸವಿಕಾವೇರಿಯನು ಅಲ್ಲದ ಬರಹವದು ತೊಳೆಬಿಡಿಸದ್ಹಲಸ
ನೆಂಟರ ಗಂಟಲೊಳಿಸಿದಂತೆಂದನೆಮ್ಮ ಶ್ರೀನಿವಾಸ ವಿಠಲ (020)

Shri Krishna Vachanagalu

ತಿರಿದುಂಬುವುದಕ್ಕಿಂತ ಹಂಗಿರದ ಹಸಿವೇ ಲೇಸು
ಇಕ್ಕುವನ ಮನಹಸ್ತವವು ಅಶುದ್ಧವೆನುವೊಡೆ
ಅಮೃತವು ಪಾಷಾಣವೆಂದನೆಮ್ಮ ಶ್ರೀನಿವಾಸ ವಿಠಲ (001)

ಮತಿಯದು ಮೌನಕೆ ಶರಣಾದೊಡೆ ಅರೆಮತಿಯ
ದಬ್ಬರಿಸುವುದನರ್ಥಕೆ ಮೊದಲಕ್ಷರನೆ ನೀಡು ಆ
ಮೂಢಮತಿಗೆ ಸುಮತಿಯನೆಂದ ಶ್ರೀನಿವಾಸ ವಿಠಲ (002)


ಕಿವುಡಾಗಿ ಕರತಾಡನಕೆ ಕಾಯದೆ ಬೆನ್ನತಟ್ಟಲವರಿವರ
ರವಿಶಶಿಯಂದದೊಳು ದಣಿವರಿಯದೆ ದುಡಿವನ ಮಾನ
ಸಮ್ಮಾನಗಳು ಬೆನ್ನಟ್ಟಿ ಬಹವೆಂದ ಶ್ರೀನಿವಾಸ ವಿಠಲ (003)


ಹರಿವುದು ನದಿ ಕಡಲೆಡೆಗೆ ಅರಿತೂ ತನ್ನಂತ್ಯವದೆಂದು
ನಡುವೆ ನೀಗಿಸಿಯೆಷ್ಟೊ ಜೀವದಾಹ ಮನೆ ಮಣ್ಣು ಮೋಹ
ದ ಮನುಜ ನೀನೊಂದು ಕ್ಷಣ ನದಿಯಾಗೆಂದ ಶ್ರೀನಿವಾಸ ವಿಠಲ (004)

ತಾಳಿ ಬಾಳಲು ಬೇಕು ತಾಳಿಗೆ ತಲೆ ಬಾಗಿದೋಳು
ಬಲಗಾಲಿಟ್ಟಲ್ಲಿ ಸೊಸೆ ತಾ ಮಗಳಾಗಿ ಆ ತವರ
ಮರೆವಂತೆ ಇದೇ ಅದೆನುವಂತೆ ಶ್ರೀನಿವಾಸ ವಿಠಲ (005)

ಸಹನೆಯವಶ್ಯವು ಬದುಕ ಬೇಸಿಗೆಯಲಿ ನೆರಳೂ ವಿರಳ
ಬಯಲಹಾದಿಯಲಿ ಹೆಜ್ಜೆಯಾದೊಡೆ ತಾಳ್ಮೆ ನದಿತೊಡೆ
ಯ ಹಸಿರಿನೆದೆಯಲಿ ಹಕ್ಕಿಹಾಡೆಂದ ಶ್ರೀನಿವಾಸ ವಿಠಲ (006)

ನಿದ್ದೆಗೊಡದು ಕುಡಿಕೆಯೊಳಿಟ್ಟ ಹೊನ್ನು ಗುಡ್ಡೆಗಟ್ಟಿ
ದ ಧಾನ್ಯ ಹುಳುಹುಪ್ಪಟೆಯುದರಕೆ ದುರಾಸೆ ದೂರ
ದೊಳಿಟ್ಟು ದಾನಕ್ಕೆ ಕೈಯಾಗೆಂದ ಶ್ರೀನಿವಾಸ ವಿಠಲ (007)


ತೂಕವಿರದ ಮಾತು ತುಪ್ಪದ ಕುಡಿಕೆಯ ತೂತು ಕೇಳ್ವ
ಮಾನವಂತರಿಗದುವೆ ಹಗುರ ಅಪಹಾಸ್ಯ ಪದಾರ್ಥ
ನುಡಿನುಡಿ ಬಿಡಿಬಿಡಿ ಹಾಡಿನಂತಿರಲೆಂದ ಶ್ರೀನಿವಾಸ ವಿಠಲ (008)


ನೊಸಲಪಟ್ಟೆಯ ಮೆಚ್ಚ ಉಟ್ಟ ದಟ್ಟಿಯ ಮೆಚ್ಚ
ಒಳಸ್ವಚ್ಛವಿರದಶುದ್ಧನ ಅವ ಶತಸಿದ್ಧ ಮೆಚ್ಚ
ಅಂಗ ಮೀರಿ ಆತ್ಮಸಂಗದಿ ತೋರ್ವ ಶ್ರೀನಿವಾಸ ವಿಠಲ (009)

ಕಣ್ಣು ಕಂಡುದ್ದಕ್ಕೆಲ್ಲ ಮನವ ಜಾರಿಸಬೇಡ
ಮೈಯ್ಯ ಜೊಲ್ಲಿಗೆ ಮಾನ ಮರೆಯಲು ಬೇಡ
ಕುರುಳು ಕುರುಜನುರುಳಾಯ್ತೆಂದ ಶ್ರೀನಿವಾಸ ವಿಠಲ (010)