Tuesday, May 21, 2013

ಚಿಗುರು ತಾಯಿ ಹಣ್ಣೆಲೆ ಮತ್ತೆ ಮತ್ತೆ

ಆಲಿಸು ಕಿವಿಯಿಟ್ಟು ಬುವಿಯೆದೆಗೆ
ಸವರಿ ಮೃದುವಾಗಿ ಮೊದಲ ಬಸಿರ
ಒಳ ಮಿಡುಕುತಿಹ ಬೀಜ ಭ್ರೂಣ
ದೊಳ ಜೀವ ಕಣ್ಣ
ರೆಪ್ಪೆ ತೆರೆಯುತಿಹ ಸದ್ದು

ಕೈಯೆತ್ತಿ ಪ್ರಾರ್ಥಿಸುತಿದೆ ತಾಯಿಮರ
ನೋವಿರದ ಹೆರಿಗೆಗೆ
ತನ್ನೊಡಲಿಂದುದುರಿ ತಾಯಾದ
ಬೀಜದ

ಬುಡದಲಿ ಗೊಬ್ಬರವಾಗುತಿಹ ಹಣ್ಣೆಲೆ
ಗೆ ವಂಶವುದ್ಧಾರದ ಆಸೆ ಅಸಂಖ್ಯ
ಎದೆಬಯಕೆ ಕಣ್ಮುಚ್ಚುವ ಮೊದಲು
ಕಾಣಲು ಅಂಗಳದೊಳಾಡುವ ಚಿಗುರ
ಸಂಭ್ರಮ

ಮರುಕವಿರದ ಜೀವನಚಕ್ರದುರುಳಿನ ನಿಯತಿ
ಚಿಗುರಿನ ಸಡಗರವ ಕರುಣಿಸಿದೆ ಹಣ್ಣೆಲೆಗೆ
ಎಂಥಾ ಅದ್ಭುತದಚ್ಚರಿ ಸೃಷ್ಟಿ
ಚಿಗುರು ತಾಯಿ ಹಣ್ಣೆಲೆ ಮತ್ತೆ ಮತ್ತೆ

1 comment:

  1. ಮಾತೃತ್ವವೇ ಜಗದ ಪರಮೋಚ್ಛ ಸ್ಥಾನ. ಅದರ ಮಹತ್ವದ ಕಿರು ಚಿತ್ರಣ ಈ ಕವನ.

    ReplyDelete