Tuesday, May 21, 2013

ನವಿಲುಗರಿ

ಸುಳ್ಳು ಮೊರೆ

’ಎಮ್ಮ ವಸ್ತ್ರಗಳ ಕೊಡೊ ಕೃಷ್ಣ’
ಚೋರ ಗೊಲ್ಲಗೆ ಕೊಳದೊಳಗವಿತ
ಬೆತ್ತಲೆಗೋಪಿಕೆಯರ ಸುಳ್ಳು ಮೊರೆ

’ಕೊಡದಿರೊ, ಹೀಗೇ ಸನಿಹದೊಳಿರೊ’
ಎಮ್ಮ ಹೃದಯದ ದೊರೆ
ಎನುವುದವರ ಮನದಾಳದ ಕರೆ

ನವಿಲುಗರಿ

ಹುಸಿಯನಾಡದಿರೆ ರಾಧೆ
ರಾತ್ರಿಯೆಲ್ಲ ಅವ ಕನಸಿನಲಿ
ಕಾಡಿದನೆಂದು
ಕಾರಣ
ನಿದಿರೆಯಿರದೆ ನಯನ
ಮತ್ತು ಗಲ್ಲ ಕೆಂಪುಕೆಂಪೆಂದು

ಉಯ್ಯಾಲೆಯೊಳಗವ
ಮರೆತುಹೋದ ನವಿಲುಗರಿ
ಖಾಲಿ ಮೊಸರಗಡಿಗೆ
ನಸುನಗುತಿವೆ...

ಸಂಭ್ರಮ

ಸಂಜೆಯಲೇ ನಿನ್ನ ಕಂಗಳು
ಚಂದ್ರ ತಾರೆಯರ ಹುಡುಕು
ವಾಗಲೆ ಅಂದುಕೊಂಡೆ
ಇಂದು ವೃಂದಾವನದಲಿ
ವೇಣು-ವೀಣೆ ಜುಗಲ್ಬಂಧಿ
ಅವನ ತೋಳೊಳು ನೀನು
ನಿನ್ನೊಳು ಅವನು

ನಾಚಿದಳು

ಹರಿವ ಯಮುನೆ
ಯ ಕೇಳಿದೆ
ಏನಿಂದು ಇನಿತು ಸಡಗರ
ನಾಚಿದಳು ಮತ್ತು
ಉತ್ತರವೇಳದೆ
ದುಡುದುಡನೆ ಓಡಿದಳು
ವೃಂದಾವನದೊಳು
ಸಂಜೆಯಾಗುತ್ತಿತ್ತು

ಪಾಂಚಾಲಿ ಸ್ವಗತ

ಒಪ್ಪುತ್ತೇನೆ ಧರ್ಮಜ
ಇದ್ದಿರಬಹುದು ನಂಬುಗೆ ನಿನಗೆ
ಕೃಷ್ಣ ಕಾವನೆಂಬ ಸ್ಥೈರ್ಯ
ಪಾರ್ಥನ ಗುರಿ ತಪ್ಪದಮೋಘ ಬಿಲ್ಲು
ಭೀಮನ ತೋಳ್ತೊಡೆ ಬಲ
ಹಣಿದು ಕೌರವ ಕುಲ ಕೇಕೆ
ಪಗಡೆಯಾಟ ಗೆಲುವೆನೆಂಬ

ಹೇಳು, ಅದಾವ ಮಾಯೆಯ ಮಂಕು
ಗಂಡೆಂಬ ವಿಷದಹಂ ತುಂಬಿತ್ತು
ಜೂಜಿಗೊಪ್ಪುವ ಮುನ್ನ
’ಹೆಣ್ಣೇ ಪಣವಾಗುವೆಯಾ?’
ಮಾತಿಗಾದರೂ ಕೇಳಬಹುದಿತ್ತು

No comments:

Post a Comment