Saturday, November 19, 2011

Shri Krishnana Nooraru Geethegalu - 185


ಶ್ರೀಗೊಲ್ಲ

ಹರಿಹರಿಹರಿಯೆಂದು ಗಿರಗಿರ ಗಿರಿಗಳ
ಅಲೆವುದನು ನಿಲಿಸೊ
ಅಖಿಲಾಂಡನೊ ಹರಿ ಆಕಾರರಹಿತನ
ಆತ್ಮದೊಳು ಭಜಿಸೊ

ಕಟ್ಟೆಯ ಕೆರೆಯೊಳು ಗಳಗಳ ಮುಳುಗಲು
ಒಲಿಯನೊ ಜಲರೂಪಿ
ನಾಸಿಕ ನೇತ್ರವ ಬಂಧಿಸಿ ಉಣದಿರಲು
ನಗುವನೊ ಜಗವ್ಯಾಪಿ (೧)

ಗೀಟಿನ ನಾಮದ ಗರಿಜರಿ ಕುಣಿತವ
ಒಲ್ಲನೊ ಬಹುರೂಪಿ
ಸೊಟ್ಟನೆ ಮನವದು ಇಟ್ಟ ನೈವೇದ್ಯವ
ಒಪ್ಪನೊ ಕುರುಕೋಪಿ (೨)

ದೊಂಬರವಿಲ್ಲದ ದುಂಬಿಯ ಬಕುತಿಗೂ
ನಲಿವನೊ ಶ್ರೀಗೊಲ್ಲ
ಶ್ರೀನಿವಾಸ ವಿಠಲನ ಅರಿಯದ ಹುಂಬಗೆ
ಎಂದಿಗೂ ಮಣಿಯೊಲ್ಲ (೩)

ಹರಿಹರಿಹರಿಯೆಂದು ಗಿರಗಿರ ಗಿರಿಗಳ
ಅಲೆವುದನು ನಿಲಿಸೊ
ಅಖಿಲಾಂಡನೊ ಹರಿ ಆಕಾರರಹಿತನ
ಆತ್ಮದೊಳು ಭಜಿಸೊ

   ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೧೧.೨೦೧೧

No comments:

Post a Comment