Thursday, December 22, 2011

Shri Krishnana Nooraru Geethegalu - 192

ಧೀರ ಸವಾರ

ಗುರಿಯಿರದೆನ್ನ ಮನವೆಂಬೊ ಹಯವು
ಶ್ರೀಹರಿ ನಿನ್ನ ಚಿತ್ತದಂತಿರಲೊ

ಕೆನೆತ ಹಯದ ಧರ್ಮ ಅಂಕೆಯೊಳಿರಲಯ್ಯ
ಕರಪುಟ ನಡಿಗೆಯು ನಿನ್ನ ಸಂಖ್ಯೆಯೊಳು
ಹಸಿವಾದೊಡೆ ನಿನ್ನ ನಾಮಾಮೃತ ಗರಿಕೆ
ಮೆದ್ದು ತಾ ತ್ಯಜಿಸಲೊ ಕೆಡುಕೆಂಬೊ ಮಲವ (೧)

ಜಯವನೆ ಜಯಿಸಲಿ ವಿಜಯಂಗಯ್ಯಲಿ
ಜಾತಿ ಅನೀತಿಯ ಮಡಿ ಗಡಿ ದಾಟಿ
ಜೀವನ ಜೀನವ ಜತನದಿ ಬಿಗಿದೆನ್ನ
ಸರಿದಾರಿ ಸರದಾರ ಬೀಸಯ್ಯ ಚಾಟಿ (೨)

ಧರ್ಮದಿ ಬೆಳೆಸಯ್ಯ ಧರ್ಮವ ಉಣಿಸಯ್ಯ
ದುರಿತದ ಕೊಳೆಯದ ಕಳೆವುದ ಕಲಿಸಯ್ಯ
ಧೀರ ಸವಾರ ಶ್ರೀ ಶ್ರೀನಿವಾಸ ವಿಠಲಯ್ಯ
ನಿನ್ನ ಶ್ರೀಪಾದದ ಪದದೊಳಗಿರಿಸಯ್ಯ (೩)

ಗುರಿಯಿರದೆನ್ನ ಮನವೆಂಬೊ ಹಯವು
ಶ್ರೀಹರಿ ನಿನ್ನ ಚಿತ್ತದಂತಿರಲೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೨.೨೦೧೧

No comments:

Post a Comment