ನಿನ್ನಂತೆಯೆ ಹನುಮ
ಇರುವುದಾದರೆ ಇರಿಸೊ ನಿನ್ನಂತೆಯೆ ಹನುಮ
ಅನುಕ್ಷಣವು ಹರಿಪಾದ ಮರೆಯದಂತೆ
ಮನದ ತಾಮಸ ಹರಿಸೊ ಶುದ್ಧಕರುಣದಿ ಹರಸೊ
ಎನ್ನೊಳಗೆ ಶ್ರೀರಾಮ ನೆಲೆಸುವಂತೆ
ಜೀವದೀ ಕಣಕಣವು ನಿನ್ನಂತೆಯೆ ಹನುಮ
ಶ್ರೀರಾಮನಾಮವದ ನುಡಿಯುವಂತೆ
ನಾಲಗೆಯು ನೇತ್ರವವು ನಿನ್ನಂತೆಯೆ ಹನುಮ
ರಾಮನಾಮದ ಸಿಹಿಯ ಸವಿಯುವಂತೆ (೧)
ಎನ್ನ ಕರ್ಮದ ಕರವು ನಿನ್ನಂತೆಯೆ ಹನುಮ
ಶ್ರೀರಾಮಸೇವೆಯೊಳು ದಣಿಯದಂತೆ
ನೀನಿತ್ತ ಹೃದಯವದು ನಿನ್ನಂತೆಯೆ ಹನುಮ
ರಾಮರಾಮಯೆನುತ ತಣಿಯುವಂತೆ (೨)
ಸೇವೆಯೆಂಬೀ ಬಕುತಿ ನಿನ್ನಂತೆಯೆ ಹನುಮ
ಎದೆಯೊಳಗೆ ಶ್ರೀರಾಮನುಳಿಯುವಂತೆ
ಜನ್ಮಜನ್ಮಾಂತರದಿ ನಿನ್ನಂತೆಯೆ ಹನುಮ
ಶ್ರೀನಿವಾಸ ವಿಠಲನ್ನ ನೆನೆಯುವಂತೆ (೩)
ಇರುವುದಾದರೆ ಇರಿಸೊ ನಿನ್ನಂತೆಯೆ ಹನುಮ
ಅನುಕ್ಷಣವು ಹರಿಪಾದ ಮರೆಯದಂತೆ
ಮನದ ತಾಮಸ ಹರಿಸೊ ಶುದ್ಧಕರುಣದಿ ಹರಸೊ
ಎನ್ನೊಳಗೆ ಶ್ರೀರಾಮ ನೆಲೆಸುವಂತೆ
ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೧೨.೨೦೧೧
No comments:
Post a Comment