Thursday, March 15, 2012

Shri Krishnana Nooraru Geethegalu - 215

ಏನೊ ದುಗುಡವು

ಏನೊ ದುಗುಡವು ಮನಕೆ ನೀನಿರದೆ ಮಾಧವ
ನೀರ ತೊರೆದಿಹ ಮೀನೊ ಸನಿಹವಿರದಿರೆ ನೀನು

ಇಳಿಸಂಜೆಯೊಡಲಿನೊಳು ಯಮುನೆ ಜುಳುಜುಳು ಹರಿದು
ಗೋಕುಲದ ಹಾದಿಯೊಳು ಗೋವು ಕೆಂಧೂಳಿ
ಕರುಗಳ ಕೊರಳುಲಿವ ಕಿರುಗೆಜ್ಜೆ ಗಾನದೊಡ
ತೇಲಿ ಬರಲಿಹ ನಿನ್ನ ಮುರಳಿನಾದವದಿರದೆ (೧)

ಒಲವ ಬೃಂದಾವನದಿ ಚೆಲುವ ಚಂದಿರರಾಯ
ಸುರಿದು ಬೆಳದಿಂಗಳಿನ ಸುಮಗಳರಳಿ
ಎನ್ನೆದೆಯ ಬನದೊಳಗೆ ನಿನ್ನ ಬಯಕೆಯ ಜಾತ್ರೆ
ಬರುವೆನೆಂದವ ಬರದೆ ನಾನು ಒಂಟಿ (೨)

ತುಳಸಿದಳಮಾಲೆಯನು ಪಿಡಿದು ಕಾದಿಹೆ ಕೃಷ್ಣ
ನಿನ್ನ ಪ್ರೇಮದ ಪಾದ ಸೇವೆಯರಸಿ
ನೊರೆಹಾಲು ನವನೀತ ನವಬಗೆಯ ಸಿಹಿ ಕೊಡುವೆ
ಶ್ರೀನಿವಾಸ ವಿಠಲ ನೀ ದಯಮಾಡಿಸೊ (೩)

ಏನೊ ದುಗುಡವು ಮನಕೆ ನೀನಿರದೆ ಮಾಧವ
ನೀರ ತೊರೆದಿಹ ಮೀನೊ ಸನಿಹವಿರದಿರೆ ನೀನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೩.೨೦೧೨

No comments:

Post a Comment