Tuesday, March 27, 2012

Shri Krishnana Nooraru Geethegalu - 217

ನಿನ್ನ ಶ್ರೀಚರಣದೊಳು

ನಿನ್ನ ಶ್ರೀಚರಣದೊಳು ನಿಂತಿಹೆನು ಶ್ರೀಹರಿಯೆ
ಮಾತು ಮರೆತವೊ ದೇವ ಬೇಡಲೇನ

ತೀಡುವ ತಂಗಾಳಿ ತಿಳಿಯ ಹೇಳಿತೊ ಹರಿಯೆ
ಜೀವ ಜೀವದ ಉಸಿರು ನೀನೆ ಎಂದು
ತಿಳಿಹರಿವ ಜಲರಾಶಿ ನಕ್ಕು ನುಡಿಯಿತೊ ತಾನು
ಹರಿಯ ಶ್ರೀಪಾದವನು ತೊಳೆವೆನೆಂದು (೧)

ಮಲ್ಲಿಗೆಯು ಜಾಜಿ ಶ್ರೀತುಳಸಿದಳಮಾಲೆ
ಕಾದಿಹವೊ ನೀ ಧರಿಸಿ ನಲಿಯಲೆಂದು
ನಿತ್ಯ ಸತ್ಯದ ಸ್ಮರಣೆ ಜಯಮಂತ್ರಘೋಷಗಳು
ಶ್ರೀಹರಿಯು ಈ ಧರೆಯ ಸಲಹಲೆಂದು (೨)

ನಾನೆಂಬೊ ನಾನಲ್ಲ ನೀನೆ ಎಲ್ಲವು ಹರಿಯೆ
ಆ ನಾನು ನೀನಾಗೆ ದಣಿಯಲೆಂದು
ಜನನ ಮರಣದ ನಡುವೆ ಮೂಚಣದ ಜೀವನದಿ
ಶ್ರೀನಿವಾಸ ವಿಠಲ ನೀ ಒಲಿಯಲೆಂದು

ನಿನ್ನ ಶ್ರೀಚರಣದೊಳು ನಿಂತಿಹೆನು ಶ್ರೀಹರಿಯೆ
ಮಾತು ಮರೆತವೊ ದೇವ ಬೇಡಲೇನ


        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೩.೨೦೧೨

No comments:

Post a Comment