Wednesday, August 29, 2012

Shri Krishnana Nooraru Geethegalu - 280

ಯಾವುದೀ ಹೊಸರಾಗ

ಯಾವುದೀ ಹೊಸರಾಗ ಸೆಳೆಯುತಿದೆ ಹೀಗೆನ್ನ
ಬೃಂದಾವನದೆದೆಗೆ ಹೇಳೆ ಗೆಳತಿ

ಎನ್ನ ವಿರಹದ ಎದೆಯ ಕದವ ಮೆಲ್ಲನೆ ತೆರೆದು
ಬಯಕೆ ಗಾನದ ಪದವ ಬರೆಯುತಿಹುದು
ಎನ್ನಾಸೆ ಹಸಿರಿನೊಳು ಕನಸ ಮಲ್ಲಿಗೆ ಹರಡಿ
ಒಲುಮೆ ಘಮಘಮವನ್ನು ಚೆಲ್ಲುತಿಹುದು (೧)

ನಿಲ್ಲಗೊಡದೆ ಗೆಳತಿ ಕೂರಬಿಡದೇ ಎನ್ನ
ಮೈಮನವ ತನ್ನೆಡೆಗೆ ಸೆಳೆಯುತಿಹುದು
ಎನಿತೆನಿತೊ ಜನುಮಗಳ ಪ್ರೇಮವೆಮ್ಮದು ಎನುತ
ಮಧುರ ನೆನಪಿನ ಪುಟವ ತೆರೆಯುತಿಹುದು (೨)

ಎನ್ನೊಲವಿನರಮನೆಯ ಮಾತಿನರಗಿಳಿಯು
ಮುದ್ದುಕೃಷ್ಣನ ಕಥೆಯ ಪೇಳುತಿಹುದು
ಶ್ರೀನಿವಾಸ ವಿಠಲನೆ ಆ ನಿನ್ನ ಪ್ರಾಣಸಖ
ಕೊಳಲನೂದುವ ಚೆಲುವನೆನುತಲಿಹುದು (೩)

ಯಾವುದೀ ಹೊಸರಾಗ ಸೆಳೆಯುತಿದೆ ಹೀಗೆನ್ನ
ಬೃಂದಾವನದೆದೆಗೆ ಹೇಳೆ ಗೆಳತಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೮.೨೦೧೨

Tuesday, August 28, 2012

Shri Krishnana Nooraru Geethegalu - 279

ಅನುಗಾಲ ನಿನ್ನೊಲುಮೆ

ಅನುಗಾಲ ನಿನ್ನೊಲುಮೆ ಎನಗಿರಿಲೊ ಕೃಷ್ಣ
ನಿನ್ನ ಪಾದದ ಧೂಳೊ ಸಲಹೊ ಸುಖದೊಳಗೆನ್ನ

ಅಣುರೇಣು ತೃಣಕಣಕೆ ನೀನಾದಿಯೊ ತಂದೆ
ಅವನಿಯನು ಉದ್ಧರಿಸೆ ದಶದೊಳಗೆ ಬಂದೆ
ಸರಿತಪ್ಪು ನಿನ್ನ ಚಿತ್ತ ನನಗೇನೊ ಗೊತ್ತು
ಅನ್ಯಗಳ ಕರುಣದೊಳು ಮನ್ನಿಸೊ ಕ್ಷಮೆಯಿತ್ತು (೧)

ನೀನಿಲ್ಲದೀ ಜಗದಿ ನಾನು ನಿರ್ಜೀವ
ನೀನೇ ಸಕಲಕು ಕೃಷ್ಣ ಮೂಜಗವ ಕಾವ
ನೀ ಮಾತೆ ನಾ ಕರುವು ಕರೆದೆಡೆಗೆ ಬರುವೆ
ಶ್ರೀನಿವಾಸ ವಿಠಲ ನೀ ಇರಿಸಿದಂದದಿ ಇರುವೆ (೨)

ಅನುಗಾಲ ನಿನ್ನೊಲುಮೆ ಎನಗಿರಿಲೊ ಕೃಷ್ಣ
ನಿನ್ನ ಪಾದದ ಧೂಳೊ ಸಲಹೊ ಸುಖದೊಳಗೆನ್ನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೮.೨೦೧೨

Sunday, August 26, 2012

Shri Krishnana Nooraru Geethegalu - 278

ಓ ಜೀವ ಮನದನ್ನೆ

ಮೌನ ಮುರಿಯೆ ಗೆಳತಿ ಓ ಜೀವ ಮನದನ್ನೆ
ಇರಿದೆನ್ನ ಕೊಲುತಿಹುದೆ ಕಣ್ಣೀರ ಕೆನ್ನೆ

ಸುಡುವ ಬೇಸಿಗೆ ಧಗೆಗೆ ಯುಮುನೆ ಸೊರಗಿದಳೆಂದು
ಕೊರಗುವವೆ ಇಬ್ಬದಿಯ ಅವಳ ತೀರ
ಮುಂಗಾರು ಮಳೆ ಸುರಿದು ಅವಳೊಳ್ಯವ್ವನವರಳೆ
ಸುಖದ ಸಂಭ್ರಮವವಕೆ ಕಳೆದು ಎದೆಭಾರ (೧)

ನಡುಗುವ ಚಳಿಗಾಲ ಎಲೆಯುದುರೆ ಮಾಮರದಿ
ಕೋಗಿಲೆಯು ಮಾಮರವ ಮರೆವುದೇನೆ
ಚೈತ್ರದೊಳು ಚಿಗುರೊಡೆದ ತಳಿರಿಗೆ ತಾಯಾದ
ಮಾಮರವು ಕೋಗಿಲೆಯ ಕರೆಯದೇನೆ (೨)

ತಡವೆಂಬ ಕಾರಣಕೆ ಹುಸಿಗೋಪ ನೀ ತೋರೆ
ಪ್ರಾಣರಾಧೆಯೆ ನಿನ್ನ ಬಿಡುವೆನೇನೆ
ಹುಸಿಮುನಿಸ ಮೌನವದ ಮರೆತು ಮಾತಾಡೆ
ಶ್ರೀನಿವಾಸ ವಿಠಲನ ತೊರೆವೆಯೇನೆ (೩)

ಮೌನ ಮುರಿಯೆ ಗೆಳತಿ ಓ ಜೀವ ಮನದನ್ನೆ
ಇರಿದೆನ್ನ ಕೊಲುತಿಹುದೆ ಕಣ್ಣೀರ ಕೆನ್ನೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೮.೨೦೧೨

Shri Krishnana Nooraru Geethegalu - 277

ಜಯಜಯ ದುರ್ಗೆ

ಜಯಜಯ ದುರ್ಗೆ ಬಕುತಜನ ಸನ್ಮಾರ್ಗೆ
ಕರಮುಗಿವೆನು ಶ್ರೀದೇವಿ ಸಲಹೇ ಮಾತಂಗೆ

ತ್ರಿನೇತ್ರೆ ದಕ್ಷಪುತ್ರೆ ಪವಿತ್ರೆ ದುರ್ಗೆ
ಶೂಲಧಾರಿಣಿ ಮಾತೆ ಜಯತುಜಯ ದುರ್ಗೆ
ಭವಾನಿ ಭವಮೋಚಿನಿ ನಮೋ ಭಾವಪ್ರೀತೆ
ಶರಣೆನುವೆ ಶಾಂಭವಿಯೆ ಹರಸೆಮ್ಮ ದಾತೆ (೧)

ಶ್ರೀಆದ್ಯೆ ಸಿರಿಆರ್ಯೆ ಅಹಂಕಾರಿಣಿ ದುರ್ಗೆ
ಅಭಯೆ ಅನಂತೆ ಜಯತುಜಯ ದುರ್ಗೆ
ಸರ್ವಮಂತ್ರೇ ದೇವಿ ಸತ್ಯಸ್ವರೂಪಿಣಿಯೆ
ಸರ್ವಾಸ್ತ್ರಧಾರಿಣಿಯೆ ಸಲಹೆ ಸುಂದರಿಯೆ (೨)

ನೀ ಭವ್ಯೆ ನೀ ಭಾಗ್ಯೆ ನೀ ಬುದ್ಧಿಸಿದ್ಧಿಯೆ
ನಮೊ ಘೋರೆ ನೀ ರೌದ್ರೆ ಶ್ರೀರುದ್ರದೂತೆಯೆ
ಶ್ರೀನಿವಾಸ ವಿಠಲಾಂಶೆ ವಿಷ್ಣುಮಯೆ ದೇವಿಯೆ
ಜಯವೆಂಬೆ ಕರುಣದೊಳು ಕಾಯೆಮ್ಮ ವೈಷ್ಣವಿಯೆ (೩)

ಜಯಜಯ ದುರ್ಗೆ ಬಕುತಜನ ಸನ್ಮಾರ್ಗೆ
ಕರಮುಗಿವೆನು ಶ್ರೀದೇವಿ ಸಲಹೇ ಮಾತಂಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೦೮.೨೦೧೨

Friday, August 24, 2012

Shri Krishnana Nooraru Geethegalu - 276

ಗೋವುಗಳೆ ಗೋಕುಲಕೆ

ನಡೆಯಿರಿ ಸಾಕಿನ್ನು ಗೋವುಗಳೆ ಗೋಕುಲಕೆ
ಎನ್ನ ಜೀವದ ಒಡತಿ ಕಾಯುತಿಹಳು

ಚೆಲುವಿನ ಖನಿಯವಳು ರತಿಯನೇ ಮೀರುವಳು
ಮೈಮನವು ಚಿಗರೆಯ ಜೀವಸುಧೆಯು
ವಿರಹದೊಳು ಬೇಯುವಳು ಯಮುನೆಯ ತೀರದೊಳು
ತಡವಾಗೆ ನೋಯುವಳು ಆ ರಾಧೆಯು (೧)

ನೊರೆಹಾಲ ಸಿಹಿಯವಳು ಕೆನೆಮೊಸರಿನಂಥವಳು
ನವನೀತದೊಲುಮೆಯನು ಉಣಿಸುವವಳು
ಮಿಲನದೊಳು ದಣಿಯುವಳು ಕೊಳಲುಲಿಗೆ ತಣಿಯುವಳು
ಎನ್ನ ಜೀವದ ಗೆಳತಿ ರಾಧೆಯವಳು (೨)

ಹಾರುತಿಹ ಹಕ್ಕಿಗಳೆ ಬೀಸಿ ಬಹ ತಂಗಾಳಿ
ಸುದ್ದಿ ತಿಳಿಸಿರೆ ಕೃಷ್ಣ ಬರುತಿಹನು ಎಂದು
ನಾನವಳ ಪ್ರಾಣಸಖ ಶ್ರೀನಿವಾಸ ವಿಠಲನೆ
ಎನ್ನೊಲುಮೆ ರಾಧೆಯನು ಮರೆಯೆನೆಂದು (೩)

ನಡೆಯಿರಿ ಸಾಕಿನ್ನು ಗೋವುಗಳೆ ಗೋಕುಲಕೆ
ಎನ್ನ ಜೀವದ ಒಡತಿ ಕಾಯುತಿಹಳು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೮.೨೦೧೨

Thursday, August 23, 2012

Shri Krishnana Nooraru Geethegalu - 275

ಸಗ್ಗದ ಸಡಗರ

ಸಗ್ಗದ ಸಡಗರ ಸುಂದರಿ ರಾಧೆಗೆ
ಚೆಲುವೆಗೆ ಚೆಲುವದೇ ನಾಚುತಿದೆ

ನಯನದಂಗಳದಿ ನಲಿವಾಸೆಯ ಭೃಂಗ
ಹರಸಿದೆ ಅಧರವು ಅವನೆದೆ ಹೂ ಸಿಹಿ
ಕರ್ಣವು ತಣಿಯಲು ಮೋಹನ ಸವಿನಾದ
ಹೃದಯದ ಕಣಕಣ ಒಲುಮೆ ವಿನೋದ (೧)

ಇರುಳಿನ ಬಾನೊಳು ನಗುತಿಹ ಚಂದಿರ
ಚೆಲ್ಲಿದ ಬೆಳಕಿನ ಚಿತ್ರವೇ ಸುಂದರ
ಮುಡಿಯೊಳು ನಲಿದಿಹ ಮೊಲ್ಲೆಯ ತಿಂಗಳು
ಕೊಳಲನು ಹರಸಿವೆ ವೀಣೆಯ ಕಂಗಳು (೨)

ಚಿತ್ರದ ಬಟ್ಟಲ ಒಲುಮೆಯ ಹಾಲನು
ಪ್ರಾಣಕೃಷ್ಣಗೆ ಕೊಡಲು ಕಾದಿಹಳು
ಎನ್ನ ಜೀವದ ಜೀವ ಶ್ರೀನಿವಾಸ ವಿಠಲನೆ
ಬಾರೊ ವೃಂದಾವನಕೆ ಎನುತಿಹಳು (೩)

ಸಗ್ಗದ ಸಡಗರ ಸುಂದರಿ ರಾಧೆಗೆ
ಚೆಲುವೆಗೆ ಚೆಲುವದೇ ನಾಚುತಿದೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೩.೦೮.೨೦೧೨

Wednesday, August 22, 2012

Shri Krishnana Nooraru Geethegalu - 274

ಮಳೆಯಾಗಿ ಬಾರೊ ಎನ್ನ

ಮಳೆಯಾಗಿ ಬಾರೊ ಎನ್ನ ಸುಡುವ ವಿರಹದೆದೆಗೆ
ಕಾಯುತಿಹೆನು ಕಡಲಿನಂದದಿ ನಿನ್ನೊಲವಿನ ಸುಧೆಗೆ

ಎದೆಹೊಲವಿದು ಬಾಯಾರಿದೆ ಮೋಹ ನಿನ್ನೊಳು ಎನುತಿದೆ
ವರ್ಷದೊಳಗಿನ ಹರ್ಷರೂಪನೆ ಬಾರೊ ಕೃಷ್ಣನೆ ಕರೆದಿದೆ
ಎನ್ನ ನಯನದ ಕನಸ ಬಿಲ್ಲಿಗೆ ಸಪ್ತವರ್ಣವ ಬಳಿವನೆ
ಜೀವಬುವಿಯೊಳ ಮೊಗ್ಗನರಳಿಸೊ ನಲುಮೆಚಿತ್ರವ ಬರೆವನೆ (೧)

ನಿನ್ನ ಮುರಳಿಯ ರಾಗದೊಳು ಯಮುನೆಯಂದದಿ ವೇಗದೊಳು
ಗೋಪಮಿತ್ರರ ಕಣ್ಣ ಮರೆಸಿ ಬೃಂದಾವನದ ಹಾದಿಯೊಳು
ಸುರಿದುಬಾರೊ ಮೊರೆದುಬಾರೊ ಶ್ರೀನಿವಾಸ ವಿಠಲ ಬಾರೊ
ಕೊನೆಯಿರದ ಒಲುಮೆಮೋಡವ ಎನ್ನೊಡಲಿಗೆ ಹೊತ್ತು ತಾರೊ (೨)

ಮಳೆಯಾಗಿ ಬಾರೊ ಎನ್ನ ಸುಡುವ ವಿರಹದೆದೆಗೆ
ಕಾಯುತಿಹೆನು ಕಡಲಿನಂದದಿ ನಿನ್ನೊಲವಿನ ಸುಧೆಗೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೮.೨೦೧೨